ಶಾಸಕನಾಗಿ ಸೋತ ಮೇಲೆ ಜೀವನ ಬಲು ಕಷ್ಟ...

7
ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ ಮನದಾಳದ ಮಾತು

ಶಾಸಕನಾಗಿ ಸೋತ ಮೇಲೆ ಜೀವನ ಬಲು ಕಷ್ಟ...

Published:
Updated:
ಶಾಸಕನಾಗಿ ಸೋತ ಮೇಲೆ ಜೀವನ ಬಲು ಕಷ್ಟ...

ಶಿರಸಿ: ‘ಒಮ್ಮೆ ಶಾಸಕನಾಗಿ ಸೋತ ಮೇಲೆ ಜೀವನ ಬಲು ಕಷ್ಟ. ಜನರಲ್ಲಿ ರಾಜಕಾರಣಿಗಳ ಮೇಲೆ ಅನುಮಾನ ಹೆಚ್ಚಾಗಿದೆ. ರಾಜಕಾರಣಿಗಳು ಅಂದರೆ ದುಡ್ಡಿದ್ದವರು ಎಂಬ ದೃಷ್ಟಿಯಲ್ಲಿಯೇ ನೋಡುತ್ತಾರೆ...’

2008ರ ಚುನಾವಣೆಯಲ್ಲಿ ಗೆದ್ದು, ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮುಂಡಗೋಡಿನ ವಿ.ಎಸ್.ಪಾಟೀಲ ಅವರು ಮಾಜಿ ಶಾಸಕರು ಸಮಾಜದಲ್ಲಿ ಎದುರಿಸುವ ಸಮಸ್ಯೆಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಶಾಸಕರಾದವರಿಗೆ ದುಡ್ಡಿನ ಕೊರತೆಯಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಶಾಸಕರಾದವರು, ಇವರಿಗೇನು ಕಡಿಮೆ ಎಂಬ ದೃಷ್ಟಿಯಲ್ಲಿ ನೋಡುವವರೇ ಹೆಚ್ಚು. ಕ್ಷೇತ್ರದ ಬಗೆಗಿನ ಕಾಳಜಿಯಿಂದ ಯಾವುದಾದರೂ ಕಾಮಗಾರಿ ತಂದರೆ, ಇವರಿಗೆ ಇದರಲ್ಲಿ ಎಷ್ಟು ಪರ್ಸೆಂಟೇಜ್ ಸಿಗಬಹುದು ಎಂದು ಯೋಚಿಸುವವರು ಇನ್ನು ಕೆಲವರು. ತಟಸ್ಥರಾಗಿದ್ದರೆ ಇವರು ಉಪಯೋಗವೇ ಇಲ್ಲವೆಂದು ಹಳಿಯುವವರು ಮತ್ತಷ್ಟು ಜನರು. ಒಟ್ಟಾರೆ, ರಾಜಕೀಯದಲ್ಲಿ ಕೆಲಸ ಮಾಡುವುದೇ ಕಷ್ಟವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನನ್ನ ತಂದೆ ಎಸ್‌.ಆರ್.ಪಾಟೀಲ ಅವರು ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ, ಸ್ಥಳೀಯ ಪಿಎಲ್‌ಡಿ ಬ್ಯಾಂಕ್ ಸಂಸ್ಥಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಅವರ ನೆರಳಿನಲ್ಲಿ ಬೆಳೆದು 1984ರಲ್ಲಿ ಸಹಕಾರಿ ರಂಗ ಪ್ರವೇಶಿಸಿದೆ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷನಾಗಿ, ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ ಅನುಭವವೇ ಶಾಸಕನಾಗಿ, ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಕಾರಿಯಾಯಿತು. ಸಹಕಾರಿ ಕ್ಷೇತ್ರದ ತಳಹದಿಯಿದ್ದರೆ ಜನಪ್ರತಿನಿಧಿಯಾಗಿ ಉತ್ತಮ ಕಾರ್ಯ ಮಾಡಲು ಸಾಧ್ಯವಾಗುತ್ತದೆ’ ಎಂಬುದು ಅವರ ಅಭಿಪ್ರಾಯ.

‘2004ರಲ್ಲಿ ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತೆ. ಆದರೆ 2008ರ ಚುನಾವಣೆ ಕೈ ಹಿಡಿಯಿತು. ಚುನಾವಣೆಯಿಂದ ಚುನಾವಣೆಗೆ ವೆಚ್ಚದಲ್ಲಿ ಭಾರಿ ವ್ಯತ್ಯಾಸ ಕಾಣುತ್ತದೆ. ಆದರೂ ಈ ವೆಚ್ಚ ನಿರ್ಧಾರವಾಗುವುದು ಕಣಕ್ಕಿಳಿದಿರುವ ಅಭ್ಯರ್ಥಿಯ ಮೇಲೆ ನಿರ್ಧರಿತವಾಗುತ್ತದೆ. ಅಲ್ಲದೇ ರಾಜಕೀಯ ಎಂಬುದು ಈಗ ಉದ್ಯಮವಾಗಿ ಬಿಟ್ಟಿದೆ. ದುಡ್ಡಿರುವ ಉದ್ಯಮಿಗಳು ಹೊರ ಪ್ರದೇಶಗಳಿಂದ ಬಂದು ಸ್ಪರ್ಧಿಸುತ್ತಾರೆ. ಅವರಿಗೆ ಹಣ ಖರ್ಚು ಮಾಡಲು ಒಂದು ಕ್ಷೇತ್ರ ಬೇಕು ಅಷ್ಟೆ. ಆದರೆ ಸ್ಥಳೀಯವಾಗಿ ಅದು ಪಲ್ಲಟವನ್ನೇ ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ ದುಡ್ಡಿದ್ದವರಿಗೆ ಮಾತ್ರ ರಾಜಕೀಯ ಎಂಬ ಭಾವನೆ ಸಮಾಜದಲ್ಲಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ರಾಜಕೀಯ ಅಂದರೆ ಖರ್ಚು ಇರುವುದೇ ಬಿಡಿ. ಆದರೂ ಹಿಂದಿನ ಚುನಾವಣೆ ಈಗಿನಷ್ಟು ಕಠಿಣವಾಗಿರಲಿಲ್ಲ. ಸಾಮಾಜಿಕ ಕೆಲಸ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಪ್ರಾಮಾಣಿಕ ಭಾವನೆ ಜನರಲ್ಲಿ ಇತ್ತು. ಇಂದಿನ ಪರಿಸ್ಥಿತಿ ಬದಲಾಗಿದೆ. ನಾನು ಒಬ್ಬ ಶಾಸಕನಾಗಬಹುದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ದೇವರು, ಜನರ ಕೃಪೆಯಿಂದ ಶಾಸಕನಾಗಿ, ಕ್ಷೇತ್ರದ ಪ್ರತಿ ಹಳ್ಳಿಗೆ ಅನುಕೂಲವಾಗುವಂತೆ ಕೆಲಸ ಮಾಡಿದ್ದೇನೆ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾದರೂ, ಕೆಲಸ ತರಲು ನನಗೆ ಕಷ್ಟವಾಗಲಿಲ್ಲ. ಅಭಿವೃದ್ಧಿ ಮಾಡಿದರೆ ಜನರು ಮತ ಹಾಕುತ್ತಾರೆ ಎಂದು ತಿಳಿದು ಎರಡನೇ ಚುನಾವಣೆ ಎದುರಿಸಿದೆ. ಆದರೆ ಜನ ಚುನಾವಣೆಯ ವೇಳೆಗೆ ಬದಲಾಗುತ್ತಾರೆ ಎಂಬ ಪಾಠ ಕಲಿತೆ. ನಾನು ಸ್ಪರ್ಧಿಸಿದ್ದ ಕ್ಷೇತ್ರದ ಶಾಸಕರು ರಾಜ್ಯದಲ್ಲಿ ಸಚಿವರಾಗಿದ್ದರು. ಆದರೂ ಅವರ ಬಳಿ ತರಲಾಗದ, ಸಿಡ್ಲಗುಂಡಿ ಸೇತುವೆ ಕಾಮಗಾರಿಯನ್ನು ನಾನು ತಂದಿರುವ ಸಮಾಧಾನವಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

***

ನಾನು ಪ್ರಥಮನಾಗಿದ್ದೆ

‘ನಾನು ಶಾಸಕನಾಗಿದ್ದ ಅವಧಿಯಲ್ಲಿ, ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಕರ್ನಾಟಕದ ಶಾಸಕರಿಗೆ 9 ಪ್ರಶ್ನೆಗಳನ್ನು ಕೇಳಿದ್ದರು. ಈ ಸ್ಪರ್ಧೆಯಲ್ಲಿ ನಾನು ಪ್ರಥಮ ಸ್ಥಾನ ಪಡೆದಿದ್ದೆ. ಇದು ನನ್ನ ಬದುಕಿನ ಸ್ಮರಣೀಯ ಸಂದರ್ಭ’ ಎಂದು ವಿ.ಎಸ್.ಪಾಟೀಲ ಸಂಭ್ರಮದಿಂದ ಹೇಳಿಕೊಂಡರು.

***

ಈಗಲೂ ಮತದಾರರು, ಅಧಿಕಾರಿಗಳು ದಾರಿಯಲ್ಲಿ ಸಿಕ್ಕಾಗ ವಿಶ್ವಾಸದಿಂದ ಮಾತನಾಡುತ್ತಾರೆ. ಮನಸ್ಸಿಗೆ ಒಂದು ರೀತಿ ಖುಷಿಯಾಗುತ್ತದೆ.

– ವಿ.ಎಸ್.ಪಾಟೀಲ, ಮಾಜಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry