ಅಕ್ರಮ ಮದ್ಯ ಮಾರಾಟ: ಮುಲಾಜಿಲ್ಲದೆ ಶಿಸ್ತುಕ್ರಮ

7
ಮದ್ಯ ಮಾರಾಟಗಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯವತಿ ಖಡಕ್‌ ಎಚ್ಚರಿಕೆ; ಪ್ರತನಿತ್ಯ ವಹಿವಾಟಿನ ಮಾಹಿತಿ ನೀಡಲು ಸೂಚನೆ

ಅಕ್ರಮ ಮದ್ಯ ಮಾರಾಟ: ಮುಲಾಜಿಲ್ಲದೆ ಶಿಸ್ತುಕ್ರಮ

Published:
Updated:
ಅಕ್ರಮ ಮದ್ಯ ಮಾರಾಟ: ಮುಲಾಜಿಲ್ಲದೆ ಶಿಸ್ತುಕ್ರಮ

ಕೋಲಾರ: ‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ದೃಷ್ಟಿಯಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಖಡಕ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಮದ್ಯ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಹಣ, ಮದ್ಯ ಮತ್ತು ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ನಡೆಸಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಹದ್ದಿನ ಕಣ್ಣಿಡುವಂತೆ ಸೂಚಿಸಿದೆ. ಹೀಗಾಗಿ ಮದ್ಯ ವ್ಯಾಪಾರಿಗಳು ಜಿಲ್ಲಾಡಳಿತಕ್ಕೆ ಪ್ರತಿನಿತ್ಯ ವಹಿವಾಟಿನ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ತಾನೇ ಮೂರ್ನಾಲ್ಕು ಮದ್ಯದ ಅಂಗಡಿಗಳಿಗೆ ದಿಢೀರ್‌ ಭೇಟಿ ಕೊಟ್ಟು ದಾಖಲೆಪತ್ರ ಕೇಳಿದ್ದೇನೆ. ಅಂಗಡಿಗಳ ಸಿಬ್ಬಂದಿ ವಹಿವಾಟಿನ ದಾಖಲೆಪತ್ರ ಇಟ್ಟಿಲ್ಲ ಎನ್ನುತ್ತಾರೆ. ಮತ್ತೊಂದೆಡೆ ಅಂಗಡಿಗಳಲ್ಲಿನ ಸಿ.ಸಿ ಕ್ಯಾಮೆರಾದ ದೃಶ್ಯಾವಳಿ ಕೇಳಿದರೆ ಮೌಸ್ ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ. ಅಧಿಕಾರಿಗಳು ಬಂದಾಗಲೂ ದಾಖಲೆಪತ್ರ ತೋರಿಸದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಚಿತ್ರ ವ್ಯವಸ್ಥೆಯಿದೆ: ಬೇರೆ ಜಿಲ್ಲೆಗಳಲ್ಲಿ ಮದ್ಯದ ವಹಿವಾಟು ಸುಗಮವಾಗಿ ನಡೆಯುತ್ತಿದ್ದು, ಅಲ್ಲಿ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದರೆ, ಕೋಲಾರದಲ್ಲಿ ವಿಚಿತ್ರ ವ್ಯವಸ್ಥೆಯಿದೆ. ಬಾರ್‌ ಮತ್ತು ರೆಸ್ಟೋರೆಂಟ್‌ನವರು ಸಿಎಲ್–9 ಅಥವಾ ಸಿಎಲ್–2 ಮಳಿಗೆಗಳಂತೆ ಮದ್ಯ ಮಾರುವುದು ಸರಿಯಲ್ಲ ಎಂದು ಕೆಂಡಾಮಂಡಲರಾದರು.

ಜಿಲ್ಲೆಯ ಮದ್ಯದ ವ್ಯಾಪಾರಿಗಳು ಮುದ್ರಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತಿದ್ದಾರೆ. ವಹಿವಾಟಿಗೆ ರಸೀದಿ ಸಹ ಕೊಡುತ್ತಿಲ್ಲ. ಮದ್ಯದ ದಾಸ್ತಾನಿನ ಲೆಕ್ಕಪತ್ರ ನಿರ್ವಹಣೆ ಮಾಡುತ್ತಿಲ್ಲ. ಯಾವುದೋ ರದ್ದಿ ಕಾಗದದಲ್ಲಿ ಬರೆದಿಟ್ಟುಕೊಂಡಿರುತ್ತಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.

ವೀಕ್ಷಕರ ಕಣ್ಣು ಬಿದ್ದಿದೆ: ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಪತ್ತೆ ಹಚ್ಚಿ ತಪ್ಪಿತಸ್ಥರ ಶಿಸ್ತು ಕ್ರಮ ಜರುಗಿಸಬೇಕು. ಮದ್ಯದ ವ್ಯಾಪಾರಿಗಳ ಮೇಲೆ ಚುನಾವಣಾ ವೀಕ್ಷಕರ ಕಣ್ಣು ಬಿದ್ದಿದೆ. ಅಂಗಡಿ ಮುಚ್ಚಿ ಎಂದು ಹೇಳುತ್ತಿಲ್ಲ. ವ್ಯಾಪಾರಿಗಳು ನ್ಯಾಯಯುತವಾಗಿ ವಹಿವಾಟು ನಡೆಸಬೇಕು. ವಹಿವಾಟಿನ ಬಗ್ಗೆ ಪ್ರತಿನಿತ್ಯ ಸಮಗ್ರ ಮಾಹಿತಿ ಕೊಡಬೇಕು. ಅಗತ್ಯವಿದ್ದರೆ ತರಬೇತಿ ಕೊಡುತ್ತೇವೆ ಎಂದರು.

ಸಮಸ್ಯೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ಎಚ್ಚರಿಕೆ ನೀಡಿದ ನಂತರವೂ ಕದ್ದುಮುಚ್ಚಿ ವ್ಯವಹಾರ ನಡೆಸಿದರೆ ಪರವಾನಗಿ ರದ್ದಾಗುತ್ತದೆ. ವ್ಯಾಪಾರಿಗಳಿಗೆ ತೊಂದರೆ ಕೊಡಲು ತಮಗೂ ಇಷ್ಟವಿಲ್ಲ. ಚುನಾವಣಾ ಸಮಯದಲ್ಲಿ ತಪ್ಪು ಮಾಡಿ ಯಾವುದೇ ಪ್ರಭಾವಿ ವ್ಯಕ್ತಿಯಿಂದ ಕರೆ ಮಾಡಿಸಿ ಒತ್ತಡ ಹಾಕಿಸಿದರೂ ಪ್ರಯೋಜನ ಆಗುವುದಿಲ್ಲ ಎಂದರು.

ಬೆಂಗಳೂರು ನಗರದಲ್ಲಿ ಇರುವಂತೆ ವಹಿವಾಟಿಗೆ ಸಮಯ ಪಾಲನೆ ಮಾಡಿ. ರಾತ್ರಿ 10 ಗಂಟೆಗೆ ಮುಂದಿನ ಬಾಗಿಲು ಬಂದ್ ಮಾಡಿ ಹಿಂದಿನ ಬಾಗಿಲಲ್ಲಿ ವ್ಯಾಪಾರ ಮಾಡುವುದು ಅಪರಾಧ. ತಪ್ಪು ಮಾಡಿ ಸಿಕ್ಕಿ ಬಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ

ನೀಡಿದರು.

ಕ್ಯಾಮೆರಾ ಕಡ್ಡಾಯ: ‘ಪ್ರತಿ ಮದ್ಯದಂಗಡಿಯಲ್ಲಿ ಕಡ್ಡಾಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಇದರಿಂದ ಮಾಲೀಕರಿಗೂ ಅನುಕೂಲ. ಅಕ್ರಮ ಮದ್ಯ ದಾಸ್ತಾನು ಸಂಬಂಧ ಸುಳ್ಳು ದೂರು ನೀಡಿದರೂ ಸಿ.ಸಿ ಕ್ಯಾಮೆರಾ ಇದ್ದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಕ್ಯಾಮೆರಾದಲ್ಲಿ ಒಂದು ತಿಂಗಳ ಅವಧಿಯ ದೃಶ್ಯಾವಳಿ ಲಭ್ಯವಿರಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಸಲಹೆ

ನೀಡಿದರು.

ಕೆಲ ವ್ಯಕ್ತಿಗಳು ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ಮದ್ಯ ಖರೀದಿಸಿ ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ದೊಡ್ಡ ದಂಧೆಯಾಗಿದೆ. ಸ್ಥಳೀಯವಾಗಿ ಏನಾದರೂ ಸಮಸ್ಯೆ ಇದ್ದರೆ ತಿಳಿಸಿ. ಹಣ ಸಂಪಾದನೆಗಾಗಿ ಅಡ್ಡ ದಾರಿ ಹಿಡಿಯಬೇಡಿ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಕೆಜಿಎಫ್ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್‌ಕುಮಾರ್, ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ.ಸುಮಿತಾ ಭಾಗವಹಿಸಿದ್ದರು.

***

ಅಧಿಕಾರಿಗಳು ಸುಮ್ಮನೆ ದಂಡ ಹಾಕಿ ಹೋಗುವುದಲ್ಲ. ಅಕ್ರಮ ಮದ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದರೆ ತೊಂದರೆ ಎದುರಿಸಬೇಕಾಗುತ್ತದೆ.

–ಜಿ.ಸತ್ಯವತಿ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry