ಬಗೆಹರಿಯದ ಕಾವೇರಿ ಕೊನೆ ಭಾಗದ ರೈತರ ಸಮಸ್ಯೆ

7
ಶಿಂಷಾ ನದಿ ತಟದಲ್ಲಿರುವ ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ

ಬಗೆಹರಿಯದ ಕಾವೇರಿ ಕೊನೆ ಭಾಗದ ರೈತರ ಸಮಸ್ಯೆ

Published:
Updated:
ಬಗೆಹರಿಯದ ಕಾವೇರಿ ಕೊನೆ ಭಾಗದ ರೈತರ ಸಮಸ್ಯೆ

ಮಂಡ್ಯ: ನೀರಿನ ಹೋರಾಟ ಹುಟ್ಟುವುದೇ ಮದ್ದೂರು ತಾಲ್ಲೂಕಿನಿಂದ. ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗದಲ್ಲಿರುವ ರೈತರು ನೀರಿಗಾಗಿ ಹಾತೊರೆಯುವ ಕಾಲ ಮುಗಿಯಲೇ ಇಲ್ಲ. ನಾಲೆಯ ಮೇಲಿನ ರೈತರು ಬಳಸಿದ ನಂತರ ಕೊನೆಯ ಭಾಗಕ್ಕೆ ಹರಿದು ಬರುವಷ್ಟರಲ್ಲಿ ನೀರು ನಿಂತು ಹೋಗಿರುತ್ತದೆ. ಅಲ್ಲಿಂದ ಪ್ರತಿಭಟನೆಗಳು ಆರಂಭವಾಗುತ್ತವೆ.

ವಿಸಿ ನಾಲೆ ಹನೆಕೆರೆ ನಂತರ 35.5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ದೂರು ತಾಲ್ಲೂಕು ಪ್ರವೇಶ ಮಾಡುತ್ತದೆ. 55.5 ಕಿ.ಮೀ ವ್ಯಾಪ್ತಿಯವರೆಗೆ ಹರಿಯುತ್ತದೆ. ನಾಲೆಯ ಕೊನೆಯ ಭಾಗದ ರೈತರ ಬೆಳೆಗಳಿಗೆ ನೀರು ಸಿಗುವುದು ಕಷ್ಟ. ಎಲ್ಲ ಉಪ ನಾಲೆ, ಪಿಕಪ್‌ಗಳ ಗೇಟು ಮುಚ್ಚಿದ ನಂತರವಷ್ಟೇ ಇಲ್ಲಿಗೆ ನೀರು ಬರುತ್ತದೆ. ಕೆಆರ್‌ಎಸ್‌ ಜಲಾಶಯದಲ್ಲಿ ಗೇಟ್‌ ತೆರೆದ ದಿನದಿಂದ ಕಟ್ಟಕಡೆಯ ರೈತ ನೀರಿಗಾಗಿ ಕಾಯುತ್ತ ಕುಳಿತಿರುತ್ತಾನೆ. ಮೇಲ್ಭಾಗದ ರೈತರು ಬಳಸಿ ಉಳಿದರೆ ಕೆಳಕ್ಕೆ ನೀರು ಬರುತ್ತದೆ, ಇಲ್ಲದಿದ್ದರೆ ಇಲ್ಲ. ಹೀಗಾಗಿ ಕೊನೆಯ ಭಾಗದ ರೈತರು ಸಂಘರ್ಷಕ್ಕೆ ಇಳಿಯುತ್ತಾರೆ.

ಕೊಪ್ಪ ಹೋಬಳಿಯ ಕೊನೆಯ ಭಾಗದ ರೈತರು ರಾತ್ರಿ ವೇಳೆ ನೀರಿಗಾಗಿ ಕಾದು ಕುಳಿತುಕೊಳ್ಳುತ್ತಾರೆ. ಕೀಳಘಟ್ಟ, ಆಣೆದೊಡ್ಡಿ, ಮಾರಸಿಂಗನಹಳ್ಳಿ, ಹೊಸಕೆರೆ, ಕೊತ್ತನಹಳ್ಳಿ ಮುಂತಾದ ಗ್ರಾಮಗಳ ರೈತರು ಕಾವೇರಿ ನೀರಿಗಾಗಿ ಪಡುವ ಪಾಡು ಹೇಳತೀರದು. ಉತ್ತಮ ಮಳೆಯಾಗಿ ಸದಾ ನೀರು ಹರಿಯುತ್ತಿದ್ದರೆ ಸಮಸ್ಯೆ ಇಲ್ಲ. ಆದರೆ ಸಂಕಷ್ಟ ಕಾಲದಲ್ಲಿ ಈ ರೈತರು ಒಂದು ಬೆಳೆ ತೆಗೆಯಲು ಅಪಾರ ಸಂಕಷ್ಟ ಎದುರಿಸುತ್ತಾರೆ.

ಶಿಂಷಾ ತಟದಲ್ಲೇ ಕುಡಿಯುವ ನೀರಿಲ್ಲ: ಮದ್ದೂರು ತಾಲ್ಲೂಕಿನ ಶಿಂಷೆಯ ತಟದಲ್ಲಿದ್ದರೂ ಅಲ್ಲಿಯ ಜನರ ಕುಡಿಯುವ ನೀರಿನ ಬೇಡಿಕೆ ಈಡೇರಿಲ್ಲ. ಕಸಬಾ ಹೋಬಳಿಯ ಚಾಮನಹಳ್ಳಿ, ಕೊತ್ತನಹಳ್ಳಿ, ಮಾರಸಿಂಗನಹಳ್ಳಿ ಸಮೀಪದಲ್ಲೇ ಶಿಂಷಾ ನದಿ ಹರಿಯುತ್ತದೆ. ಜೊತೆಗೆ ವಿ.ಸಿ ನಾಲೆಯೂ ಇದೆ. ಆದರೂ ಈ ಹಳ್ಳಿಗಳ ಜನರು ಕುಡಿಯುವ ನೀರಿಗೆ ನೂರು ಕಷ್ಟ ಅನುಭವಿಸುತ್ತಾರೆ. ಈ ಗ್ರಾಮಗಳಿಗೆ ನೀರಾವರಿ ಕಲ್ಪಸುವ ತಗ್ಗಹಳ್ಳಿ ಅಣೆ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಘಟಕದ ನಿರ್ವಹಣೆಯ ಕೊರತೆಯಿಂದ ಹಳ್ಳಿಯ ಜನರು ನೀರಾವರಿಯಿಂದ ವಂಚಿತರಾಗಿದ್ದಾರೆ.

‘ಶಿಂಷಾ ನದಿ ನೀರನ್ನು ಚನ್ನಪಟ್ಟಣ ತಾಲ್ಲೂಕಿಗೆ ವೈಜ್ಞಾನಿಕವಾಗಿ ಕೊಂಡೊಯ್ಯಲಾಗಿದೆ. ಇಗ್ಗಲೂರು ಬ್ಯಾರೇಜ್‌ ಮೂಲಕ ಚನ್ನಪಟ್ಟಣಕ್ಕೆ ಕುಡಿಯುವ ನೀರು ತುಂಬಿಸಿ, ಕಣ್ವ ನದಿಗೆ ನೀರು ತುಂಬಿಸಲಾಗಿದೆ. ಇದರಿಂದ ಆ ಭಾಗದ ಕೆರೆಗಳು ನೀರಿನಿಂದ ತುಂಬಿವೆ. ಆದರೆ ಮದ್ದೂರು ತಾಲ್ಲೂಕಿನಲ್ಲಿ ಶಿಂಷಾ ನದಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ನಾಲ್ಕು ವರ್ಷಗಳಿಂದ ಶಿಂಷಾ ನದಿ ತುಂಬಲಿಲ್ಲ. ಈ ಭಾಗದ ಪ್ರಮುಖ ಬೆಳೆಯಾಗಿರುವ ತೆಂಗು ನುಸಿ ಪೀಡೆಯಿಂದ ತತ್ತರಿಸಿತು. ಇದರಿಂದ ಜಿಲ್ಲೆಯಲ್ಲಿ ಮದ್ದೂರು ತಾಲ್ಲೂಕಿನ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು’ ಎಂದು ರೈತ ಮುಖಂಡ ನ.ಲಿ.ಕೃಷ್ಣ ಹೇಳಿದರು.

ಎಡದಂಡೆ ನಾಲೆಯ ರೈತರ ಗೋಳು: ಶಿಂಷಾ ನದಿಯ ಎಡದಂಡೆಯಲ್ಲಿ ಬರುವ ಹತ್ತಾರು ಹಳ್ಳಿಗಳು ನೀರಾವರಿಯಿಂದ ವಂಚಿತವಾಗಿವೆ. ಆ ಭಾಗದ ಕೆರೆ ತುಂಬಿಸಲು ಯಾವುದೇ ನೀರಾವರಿ ಯೋಜನೆಗಳು ಇಲ್ಲದೇ ಇರುವುದು ಈ ಭಾಗದ ರೈತರ ದೌರ್ಭಾಗ್ಯವಾಗಿದೆ. ಆತಗೂರು ಹೋಬಳಿ ವ್ಯಾಪ್ತಿಯ ಕದಲೂರು, ಹೆಮ್ಮನಹಳ್ಳಿ, ನಿಡಘಟ್ಟ ಹೂತಗೆರೆ, ಚಿಕ್ಕಅಂಕನಹಳ್ಳಿ, ನವಿಲೆ, ಮಲ್ಲನಾಯಕನಹಳ್ಳಿ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳು ಎಡದಂಡೆಯಲ್ಲಿ ಬರುತ್ತವೆ. ಇಲ್ಲಿ ಬೇಸಿಗೆ ಬಂದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತವೆ.

‘ಶಿಂಷಾ ನದಿ ನೋಡಿಕೊಂಡೇ ಬೆಳೆದಿದ್ದೇವೆ. ಆದರೆ ನಮಗೆ ನೀರಿನ ಭಾಗ್ಯ ಸಿಕ್ಕಲ್ಲ. ಎಡದಂಡೆ ರೈತರಿಗೆ ನೀರು ಒದಗಿಸುತ್ತೇವೆ ಎಂದುಕೊಂಡೇ ಜನಪ್ರತಿನಿಧಿಗಳು ಕಾಲ ದೂಡುತ್ತಿದ್ದಾರೆ. ಆದರೆ ಸಮಸ್ಯೆ ಬಗೆಹರಿದಿಲ್ಲ’ ಎಂದು ರೈತ ಶಿವೇಗೌಡ ಹೇಳಿದರು.

ಶಿಂಷಾ ಎಡದಂಡೆ ವ್ಯಾಪ್ತಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆಯ 18 ಘಟಕಗಳು ಈಗಾಗಲೇ ವಿಫಲಗೊಂಡಿವೆ. ಕಡಿಮೆ ಸಾಮರ್ಥ್ಯದ ಮೋಟರ್‌ ಅಳವಡಿಸುವ ಮೂಲಕ ಅಧಿಕಾರಿಗಳು ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಒಂದೊಂದು ಘಟಕಕ್ಕೂ ₹ 60 ಲಕ್ಷ ಹಣ ವೆಚ್ಚ ಮಾಡಲಾಗಿತ್ತು. ಆದರೆ ಎಲ್ಲವೂ ಕಣ್ಣು ಮುಚ್ಚಿವೆ ಎಂದು ರೈತರು ಆರೋಪಿಸುತ್ತಾರೆ.

***

₹ 5 ಕೋಟಿ ವೆಚ್ಚದಲ್ಲಿ ನಾಲೆ ವಿಸ್ತರಣೆ ಶೀಘ್ರ

‘ಎಡದಂಡೆ ನಾಲೆ ಆಧುನೀಕರಣ ಕಾಮಗಾರಿ 2006–07ರಲ್ಲೇ ಮಾಡಲಾಗಿದೆ. ಉಳಿದ ಕಾಮಗಾರಿಯನ್ನು ₹ 5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಾಲೆಯನ್ನು 6 ಕಿ.ಮೀ.ವರೆಗೆ ವಿಸ್ತರಿಸಲಾಗುವುದು. ಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ₹ 4.5 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

‘ತೊರೆಶೆಟ್ಟಿಹಳ್ಳಿ ಬಳಿ ಬ್ಯಾರೇಜ್‌ ನಿರ್ಮಾಣಕ್ಕೆ ₹ 4.5 ಕೋಟಿ, ಆತಗೂರು ಕೆರೆ ತುಂಬಿಸಲು ₹ 3.5 ಕೋಟಿ, ಕೆಸ್ತೂರು ಕೆರೆ ತುಂಬಿಸಲು ₹ 2.5 ಕೋಟಿ, ಅಂಕನಾಥಪುರ ಕೆರೆ ತುಂಬಿಸಲು ₹ 2.5 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry