ಗುಂಪು ವಸತಿ ಯೋಜನೆಗೆ ಒತ್ತು

7
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ: ₹ 1.64 ಕೋಟಿ ಉಳಿತಾಯ ಬಜೆಟ್‌

ಗುಂಪು ವಸತಿ ಯೋಜನೆಗೆ ಒತ್ತು

Published:
Updated:
ಗುಂಪು ವಸತಿ ಯೋಜನೆಗೆ ಒತ್ತು

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 2018–19ರ ಸಾಲಿನ ₹ 1.64 ಕೋಟಿ ಉಳಿತಾಯ ಬಜೆಟ್‌ ಅನ್ನು ಆಯುಕ್ತ ಪಿ.ಎಸ್‌.ಕಾಂತರಾಜು ಶುಕ್ರವಾರ ಮಂಡಿಸಿದರು.

ಗುಂಪು ವಸತಿ ಯೋಜನೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ರೈತರ ಸಹಭಾಗಿತ್ವದಲ್ಲಿ 50:50ರ ಅನುಪಾತದಲ್ಲಿ ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಾಧಿಕಾರದ ಆಸ್ತಿಗಳ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ಸ್ಥಾಪಿಸುವ ಘೋಷಣೆ ಮಾಡಲಾಗಿದೆ.

2018–19ರ ಸಾಲಿಗೆ ₹ 323.35 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ₹ 321.70 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.

ಆದಾಯ ಪರಿಷ್ಕರಣೆ: 2017–18ರ ಸಾಲಿನಲ್ಲಿ ₹ 500 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, 2017ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ₹ 283 ಕೋಟಿ ಆದಾಯ ಮಾತ್ರ ಪ್ರಾಧಿಕಾರಕ್ಕೆ ಬಂದಿದೆ. 2018ರ ಜನವರಿಯಿಂದ ಮಾರ್ಚ್‌ವರೆಗೆ ₹ 220 ಕೋಟಿ ಆದಾಯವನ್ನು ನಿರೀಕ್ಷಿಸಿ 2017–18ರ ಸಾಲಿನ ಒಟ್ಟಾರೆ ಆದಾಯವನ್ನು ₹ 504 ಕೋಟಿಗಳಿಗೆ ಪರಿಷ್ಕರಿಸಲಾಗಿದೆ.

ಗುಂಪು ವಸತಿ ಯೋಜನೆ: ಪ್ರಾಧಿಕಾರದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಮಕೃಷ್ಣನಗರ ‘ಇ’ ಮತ್ತು ‘ಎಫ್‌’ ಬ್ಲಾಕ್‌, ಬೋಗಾದಿ, ಗೋಕುಲಂ 3ನೇ ಹಂತ ಮತ್ತು ಹಿನಕಲ್‌ನಲ್ಲಿ ಮನೆಗಳು ನಿರ್ಮಾಣವಾಗಲಿವೆ. ಐಡೆಕ್‌ ಸಂಸ್ಥೆಯನ್ನು ಡಿಪಿಆರ್‌ ತಯಾರಿಸಲು ನೇಮಿಸಲಾಗಿದ್ದು, ₹ 30 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ.

50:50 ಅನುಪಾತದಲ್ಲಿ ವಸತಿ ಬಡಾವಣೆ: ಜಯಪುರ ಹೋಬಳಿ, ಬಲ್ಲಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆ ರಚಿಸಲು ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಸರ್ಕಾರದ ಆದೇಶದ ಅನ್ವಯ ರೈತರ ಸಹಭಾಗಿತ್ವದಲ್ಲಿ 50:50ರ ಅನುಪಾತದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 6,155 ನಿವೇಶನಗಳನ್ನು ರಚಿಸಲು ತೀರ್ಮಾನಿಸಿದ್ದು, ₹ 5 ಕೋಟಿ ಕಾಯ್ದಿರಿಸಲಾಗಿದೆ.

ಕೆಂಚಲಗೂಡು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದೇ ರೀತಿ ಸುಮಾರು 6 ಸಾವಿರ ನಿವೇಶನ ರಚಿಸಲು ಉದ್ದೇಶಿಸಲಾಗಿದ್ದು, ₹ 5 ಕೋಟಿ ಮೀಸಲಿಡಲಾಗಿದೆ.

ವಿಶೇಷ ಕಾರ್ಯಪಡೆ: ಪ್ರಾಧಿಕಾರದ ಆಸ್ತಿಗಳ ರಕ್ಷಣೆಗೆ ಪ್ರಾಧಿಕಾರದಲ್ಲಿಯೇ ವಿಶೇಷ ಕಾರ್ಯಪಡೆ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಕಾರ್ಯಪಡೆಯಲ್ಲಿ ಇಬ್ಬರು ಎಸ್‌ಐ, ಮೂವರು ಎಎಸ್‌ಐ, 4 ಹೆಡ್‌ಕಾನ್‌ಸ್ಟೆಬಲ್‌ ಮತ್ತು 6 ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ₹ 25 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ.

ಸೋಲಾರ್‌ ವಿದ್ಯುತ್‌ ದೀಪ: ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ದಟ್ಟಗಳ್ಳಿ ಬಡಾವಣೆಯ ಮಧುವನ ಉದ್ಯಾನ ಮತ್ತು ವಿಜಯನಗರ ಬಡಾವಣೆಯ ಉದ್ಯಾನಗಳಲ್ಲಿ ಸೌರಶಕ್ತಿಯ ವಿದ್ಯುತ್‌ ದೀಪಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ₹ 1 ಕೋಟಿ ಮೀಸಲಿಡಲಾಗಿದೆ.

ಮಲಿನ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ₹ 25 ಲಕ್ಷ, ಮಂಡಕಳ್ಳಿ ಗ್ರಾಮದಲ್ಲಿ ಆಟೊನಗರ ನಿರ್ಮಾಣ ಯೋಜನೆಗೆ ₹ 1 ಕೋಟಿ, ನೀರು ಸರಬರಾಜು ಯೋಜನೆಗಳಿಗೆ ₹ 5 ಕೋಟಿ, ಸಾಲ ಮರುಪಾವತಿ ಮತ್ತು ಮುಂಗಡಗಳಿಗೆ ₹ 8.30 ಕೋಟಿ ಹಾಗೂ ಆಡಳಿತ, ಸಿಬ್ಬಂದಿ ವೆಚ್ಚಕ್ಕಾಗಿ ₹ 32 ಕೋಟಿ ಕಾಯ್ದಿರಿಸಲಾಗಿದೆ.

 

*********

ಬಜೆಟ್‌ ಪ್ರತಿಕ್ರಿಯೆ...

ಪ್ರಾಧಿಕಾರದ ಎಲ್ಲ ಆಶಯಗಳನ್ನು ಹೊತ್ತಂತಹ ಬಜೆಟ್‌ ಇದು. ಹಳೆಯ ಆಸ್ತಿಗಳನ್ನು ಗುರುತಿಸಿರುವುದು ಮತ್ತು ಅದರಿಂದ ದೊಡ್ಡ ಪ್ರಮಾಣದ ಆದಾಯ ದೊರೆತದ್ದು ಸಂತಸದ ವಿಷಯ. ಆದರೆ, ಹೊಸ ಬಡಾವಣೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿಲ್ಲ. ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ದೂರದೃಷ್ಟಿತ್ವ ಇರಬೇಕಿತ್ತು.

ಶ್ರೀಕಂಠೇಗೌಡ, ವಿಧಾನ ಪರಿಷತ್‌ ಸದಸ್ಯ

***

ಕಳೆದ ಬಜೆಟ್‌ನಲ್ಲಿ ₹ 500 ಕೋಟಿ ಆದಾಯ ನಿರೀಕ್ಷಿಸಲಾಗಿದ್ದರೂ ಕೇವಲ ₹ 283 ಕೋಟಿ ಮಾತ್ರ ಬಂದಿದೆ. ಇಷ್ಟು ಕಡಿಮೆ ಆದಾಯಕ್ಕೆ ಏನು ಕಾರಣ ಎಂಬುದನ್ನು ವಿವರಿಸಬೇಕಿತ್ತು. ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳಿಗೆ ಆಡಳಿತ ತರಬೇತಿಗಾಗಿ ಬಜೆಟ್‌ನಲ್ಲಿ ಪ್ರತಿವರ್ಷ ₹ 1 ಕೋಟಿ ಮೀಸಲಿಡಲಾಗುತ್ತದೆ. ಈ ಮೊತ್ತವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಸಂದೇಶ್‌ ನಾಗರಾಜು, ವಿಧಾನ ಪರಿಷತ್‌ ಸದಸ್ಯ

***

ನಗರದ ಕೆಲವೊಂದು ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಪುಲಕೇಶಿ ರಸ್ತೆ ಅಭಿವೃದ್ಧಿಯಾಗಬೇಕಿದೆ. ಹಳೆ ಉಂಡವಾಡಿ ಕುಡಿಯುವ ನೀರು ಯೋಜನೆಯು ಜಾಗದ ಸಮಸ್ಯೆಯಿಂದ ನನೆಗುದಿಗೆ ಬಿದ್ದಿದೆ. ಜಾಗ ವಶಪಡಿಸಿಕೊಳ್ಳಲು ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು.

ವಾಸು, ಶಾಸಕ

***

ಬಾಡಿಗೆ ಮತ್ತು ಕಂದಾಯ ವಸೂಲಿ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ವಸೂಲಾತಿಗೆ ಸಿಬ್ಬಂದಿಯೇ ಇಲ್ಲ. ಮುಡಾ ಆಸ್ತಿಗಳ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ಕೆಲವೆಡೆ ಸಿಎ ನಿವೇಶನಗಳು ತುಂಬಾ ಚಿಕ್ಕದಿವೆ. ಸಿಎ ನಿವೇಶನಗಳು ದೊಡ್ಡದಿದ್ದರೆ ಸ್ಮಶಾನ ಅಥವಾ ನೀರು ಸಂಗ್ರಹಾಗಾರಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು.

ಎಂ.ಕೆ.ಸೋಮಶೇಖರ್‌, ಶಾಸಕ

***

ಲಲಿತಾದ್ರಿನಗರ, ಆರ್‌.ಟಿ.ನಗರ ನಿವೇಶನಗಳ ಹಂಚಿಕೆ ಮಾಡಿರುವುದು ಪ್ರಾಧಿಕಾರದ ಸಾಧನೆ. ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ವೇಳೆ ಮುಡಾ ವ್ಯಾಪ್ತಿಯ ಬಡಾವಣೆಗಳಿಗೆ ಆದ್ಯತೆ ನೀಡಬೇಕು. ಅಕ್ಕಪಕ್ಕದ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣದ ವೇಳೆ ಒಂದಕ್ಕೊಂದು ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು ಯೋಜನೆಗೆ ಆದ್ಯತೆ ಕಲ್ಪಿಸಬೇಕು.

ಜಿ.ಟಿ.ದೇವೇಗೌಡ, ಶಾಸಕ

***

ಮೈಸೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಮೂಲಸೌಕರ್ಯ ಒದಗಿಸುವುದು ಮುಡಾ ಜವಾಬ್ದಾರಿ. ಈ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ನಗರ ಹಾಗೂ ಹೊರಭಾಗದಲ್ಲಿ ಪ್ರತಿನಿತ್ಯ 1,200 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಕಸ ವಿಲೇವಾರಿಗೆ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರಗಳಿಲ್ಲ.

ಸಂದೇಶ್‌ ಸ್ವಾಮಿ, ಪಾಲಿಕೆ ಸದಸ್ಯ

***

9,508 ನಿವೇಶನ ಹರಾಜು

ಸಿಐಟಿಬಿ ಮತ್ತು ಮುಡಾ ರಚನೆಯಾದ ಬಳಿಕ ಒಟ್ಟು 62 ಬಡಾವಣೆಗಳನ್ನು ರಚಿಸಿದ್ದು, ಈ ಬಡಾವಣೆಗಳಲ್ಲಿ ಹಂಚಿಕೆಯಾಗದೆ ಉಳಿದಿರುವ ಮಧ್ಯಂತರ ಮತ್ತು ಮೂಲೆ ನಿವೇಶನಗಳನ್ನು ವಲಯವಾರು ಪಟ್ಟಿ ಮಾಡಲಾಗಿದೆ. ಇಂತಹ 9,508 ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry