7
ನೀರಿನ ವಿಷಯದಲ್ಲಿ ಬಾದರ್ಲಿ–ನಾಡಗೌಡ ರಾಜಕೀಯ: ಶೇಷಗಿರಿರಾವ್

ರೈತರ ಬೆಳೆ ಹಾನಿಗೆ ಶಾಸಕರೆ ಕಾರಣ

Published:
Updated:
ರೈತರ ಬೆಳೆ ಹಾನಿಗೆ ಶಾಸಕರೆ ಕಾರಣ

ಸಿಂಧನೂರು: ಐಸಿಸಿ ಸಭೆ ನಿರ್ಣಯದಂತೆ ನಿಗದಿತ ಪ್ರಮಾಣದ ನೀರು ಹರಿಸುವಲ್ಲಿ ಸಂಪೂರ್ಣ ವಿಫಲರಾದ ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಬೆಳೆ ಹಾನಿಗೆ ನೇರ ಹೊಣೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್ ಶುಕ್ರವಾರ ಆರೋಪಿಸಿದ್ದಾರೆ.

ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು ಪರಸ್ಪರ ಆರೋಪ-–ಪ್ರತ್ಯಾರೋಪ ಮಾಡುವ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ನೀರಿನ ವಿಷಯದಲ್ಲಿ ರಾಜಕೀಯ ಮಾಡಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದ್ದಾರೆ. ಶಾಸಕರು ನಿಯೋಗ ಕರೆದೊಯ್ದು ತೆಲಂಗಾಣ ಪಾಲಿನ ನೀರು ತರುತ್ತೇವೆಂದು ಹೇಳಿ ರೈತರಲ್ಲಿ ಆಸೆ ಮೂಡಿಸಿದ್ದರು. ಆದರೆ ಇಲ್ಲಿಯವರೆಗೂ ನೀರು ಬಿಡುವ ಬಗ್ಗೆ ಸ್ಪಷ್ಟತೆಯಿಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರಿದ್ದು, ಮಳೆಯಾಗಿ ಒಂದು ಬೆಳೆ ಸಂಪೂರ್ಣವಾಗಿ ಬರದೆ ಇರುವುದು ಜಲಾಶಯದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ತುಂಗಭದ್ರಾ ಎಡದಂಡೆ ಕಾಲುವೆಯ ಗೇಟುಗಳನ್ನು ಸಂಪೂರ್ಣವಾಗಿ ತೆರೆಯಿಸಿ ನೀರು ಎಲ್ಲಿವರೆಗೆ ಬರುತ್ತದೇ ಅಲ್ಲಿಯವರೆಗೆ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸುವ ಮೂಲಕ ಅವರಿಗೆ ನೆರವಾಗಬೇಕು. ನೀರಿನ ಅಭಾವದಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಲ್ಲಿ ಸರ್ವೆ ನಡೆಸಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು. ಅಲ್ಲದೆ ಈಗಾಗಲೇ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳ, ಕೆರೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ ಹಾಗೂ ಜಾನುವಾರುಗಳು ಪರದಾಡುತ್ತಿದ್ದಾರೆ. ಈ ಬಗ್ಗೆಯೂ ಸೂಕ್ತ ಕ್ರಮಕೈಗೊಂಡು ಬೇಸಿಗೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಶಾಸಕರಾಗಿದ್ದಾಗ ನಾಲೆಗೆ ಸಮರ್ಪಕವಾಗಿ ನೀರು ಹರಿಸಿದ್ದೆ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡರು ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಲೆಗೆ ನೀರು ಹರಿಸಿ ರೈತರ ನೋವಿಗೆ ಸ್ಪಂದಿಸಿದ್ದರು. ಇದನ್ನು ನಾಡಗೌಡರು ಅರಿವಿನಲ್ಲಿಟ್ಟುಕೊಂಡು ಮಾತನಾಡಲಿ ಎಂದು ಕೊಲ್ಲಾ ಶೇಷಗಿರಿರಾವ್‌ ತಿಳಿಸಿದ್ದಾರೆ.

***

ರೈತರ ನೋವಿಗೆ ಸ್ಪಂದಿಸದೆ ರಾಜಕೀಯ ಮಾಡುತ್ತಿರುವ ಹಂಪನಗೌಡರಿಗೆ ಹಾಗೂ ನಾಡಗೌಡರಿಗೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ

ಕೊಲ್ಲಾ ಶೇಷಗಿರಿರಾವ್ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry