ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಯಲ್ಲಿ ಗರಿಷ್ಠ; ರಾಮನಗರದಲ್ಲಿ ಕನಿಷ್ಠ

ಜಿಲ್ಲೆಯಲ್ಲಿ ಮಹಿಳೆಯರದ್ದೇ ಹೆಚ್ಚಿನ ಬಲ; ಯುವ ಮತದಾರರ ಸೇರ್ಪಡೆ
Last Updated 3 ಮಾರ್ಚ್ 2018, 9:18 IST
ಅಕ್ಷರ ಗಾತ್ರ

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಎಂದಿನಂತೆ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತ ಫೆಬ್ರುವರಿ 28ಕ್ಕೆ ಈ ಪಟ್ಟಿ ನೀಡಿದೆ. ಡಿಸೆಂಬರ್‌ನಿಂದ ಫೆಬ್ರುವರಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ 15,567 ಹೆಚ್ಚುವರಿ ಮತದಾರರು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟಾರೆ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಮತದಾರರ ವಿಷಯಕ್ಕೆ ಬಂದಲ್ಲಿ ಸ್ತ್ರೀಯರ ಬಲ ಹೆಚ್ಚಿದ್ದು, ಗಂಡಸರಿಗಿಂತ 3,655 ಮಹಿಳಾ ಮತದಾರರು ಹೆಚ್ಚಿದ್ದಾರೆ.

ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 7035 ಮತದಾರರು ಹೆಚ್ಚಿಗೆ ಸೇರಿದ್ದಾರೆ. ಚನ್ನಪಟ್ಟಣದಲ್ಲಿ ಈ ಪ್ರಮಾಣ ಕಡಿಮೆ ಇದ್ದು, ಇಲ್ಲಿಈ ಅವಧಿಯಲ್ಲಿ ಪಟ್ಟಿಗೆ 2307 ಮಂದಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ.

ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ: ಮತದಾರರ ಸಂಖ್ಯೆ ಗಣನೆಗೆ ತೆಗೆದುಕೊಂಡರೆ ಮಾಗಡಿ ವಿಧಾನಸಭಾ ಕ್ಷೇತ್ರ ಅತಿದೊಡ್ಡ ಕ್ಷೇತ್ರವಾಗಿದೆ. ಇಲ್ಲಿ 2.23 ಲಕ್ಷದಷ್ಟು ಮಂದಿ ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ರಾಮನಗರ ತಾಲ್ಲೂಕಿನ ಬಿಡದಿ,
ಕೂಟಗಲ್ ಹಾಗೂ ಮಾಗಡಿ ತಾಲ್ಲೂಕಿನ ಮಾಗಡಿ ಪಟ್ಟಣ, ಕಸಬಾ, ಕುದೂರು,ಮಾಡಬಾಳ್‌, ತಿಪ್ಪಸಂದ್ರ ಹೋಬಳಿಗಳನ್ನು ಈ ಕ್ಷೇತ್ರವು ಹೊಂದಿದೆ. ಈ ಕ್ಷೇತ್ರದಲ್ಲಿ ಪುರುಷರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಕನಕಪುರ: ಈ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲಿ ಎರಡನೇ ದೊಡ್ಡ ಕ್ಷೇತ್ರ ಎನಿಸಿದೆ. ಇಲ್ಲಿ ಈ ಬಾರಿ 2.20 ಲಕ್ಷ ಮಂದಿ ಮತ ಚಲಾವಣೆ ಮಾಡಲಿದ್ದಾರೆ. ಕನಕಪುರ ತಾಲ್ಲೂಕಿನ ಸಾತನೂರು, ಉಯ್ಯಂಬಳ್ಳಿ, ಕೋಡಿಹಳ್ಳಿ, ಕನಕಪುರ ನಗರ ಹಾಗೂ ಕಸಬಾ ಹೋಬಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ.

ಚನ್ನಪಟ್ಟಣ: ಇಡೀ ತಾಲ್ಲೂಕು ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಚನ್ನಪಟ್ಟಣ ನಗರದ ಜೊತೆಗೆ ಕಸಬಾ, ಮಳೂರು ಹಾಗೂ ವಿರೂಪಾಕ್ಷಿಪುರ ಹೋಬಳಿಗಳಿವೆ. ಇಲ್ಲಿನ 2,16 ಲಕ್ಷ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಇಲ್ಲಿ ಪುರುಷರಿಗಿಂತ 4 ಸಾವಿರದಷ್ಟು ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

ರಾಮನಗರ: ನಗರ ಪ್ರದೇಶದ ಜೊತೆಗೆ ಕಸಬಾ, ಕೈಲಾಂಚ ಹಾಗೂ ಕನಕಪುರ ತಾಲ್ಲೂಕಿನ ಹಾರೋಹಳ್ಳಿ, ಮರಳವಾಡಿ ಹೋಬಳಿಗಳನ್ನು ಈ ಕ್ಷೇತ್ರವು ಒಳಗೊಂಡಿದೆ. ಇಲ್ಲಿ ಈ ಬಾರಿ 2.05 ಲಕ್ಷ ಜನರು ಮತದಾನ ಮಾಡುವ ಅವಕಾಶ ಪಡೆಯಲಿದ್ದಾರೆ.

ವಿಶೇಷ ಅಭಿಯಾನ: ಜಿಲ್ಲಾಡಳಿತ ಕಳೆದ ವರ್ಷ ಡಿಸೆಂಬರ್‌ನಿಂದ ಈ ವರ್ಷದ ಫೆಬ್ರುವರಿವರೆಗೆ ಮತದಾರರ ಪಟ್ಟಿ ಸೇರ್ಪಡೆ ಹಾಗೂ ಪರಿಷ್ಕರಣೆಯ ವಿಶೇಷ ಅಭಿಯಾನವನ್ನು ನಡೆಸಿತ್ತು.

ಈ ಅವಧಿಯಲ್ಲಿ ಹೊಸತಾಗಿ ಹೆಸರು ಸೇರ್ಪಡೆ ಮಾಡುವಂತೆ 24,783 ಮಂದಿ ಫಾರ್ಮ್‌–6 ಸಲ್ಲಿಸಿದ್ದರು. ಇದರಲ್ಲಿ 22,967 ಅರ್ಜಿಗಳು ಸ್ವೀಕೃತವಾಗಿವೆ. ನಿಧನರಾದವರು, ಬೇರೆ ಕ್ಷೇತ್ರಗಳಿಗೆ ವಲಸೆ ಹೋದ 11,629 ಜನರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಈ ಅವಧಿಯಲ್ಲಿ 6090 ಮಂದಿ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರನ್ನು ತಿದ್ದುಪಡಿ ಮಾಡಿಸಿಕೊಂಡಿದ್ದಾರೆ. 795ಮಂದಿ ಮತಗಟ್ಟೆಗಳನ್ನು ಬದಲಾಯಿಸಿ ಕೊಂಡಿದ್ದಾರೆ.

ಯುವ ಮತದಾರರ ಸೇರ್ಪಡೆ: 18 ವರ್ಷ ಮೇಲ್ಪಟ್ಟ ಯುವ ಜನರು ಮೊದಲ ಬಾರಿಗೆ ಮತದಾನ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಳ್ಳುವಲ್ಲಿ ಉತ್ಸಾಹ ತೋರಿದ್ದಾರೆ. ಜಿಲ್ಲೆಯಲ್ಲಿನ 18–19 ವಯಸ್ಸಿನ 3585 ಯುವಕರು ಹಾಗೂ 2723 ಯುವತಿಯರು ಈ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT