ಕಿಡಿಗೇಡಿಗಳ ಮೋಜಿಗೆ ಅರಣ್ಯ ನಾಶ

7
ಕತ್ತಲಾಗುತ್ತಿದ್ದಂತೆ ಗುಡ್ಡದ ತುದಿಗೆ ಬೆಂಕಿ; ಇಡೀ ರಾತ್ರಿ ಹೊತ್ತಿ ಉರಿಯುವ ಸಾಲುಗುಡ್ಡಗಳು

ಕಿಡಿಗೇಡಿಗಳ ಮೋಜಿಗೆ ಅರಣ್ಯ ನಾಶ

Published:
Updated:
ಕಿಡಿಗೇಡಿಗಳ ಮೋಜಿಗೆ ಅರಣ್ಯ ನಾಶ

ಚಿಕ್ಕನಾಯಕನಹಳ್ಳಿ: ಕಿಡಿಗೇಡಿಗಳ ಮೋಜಿಗೆ ತಾಲ್ಲೂಕಿನ ತೀರ್ಥಪುರ ಮೀಸಲು ಅರಣ್ಯ ಪ್ರದೇಶದ ನೂರಾರು ಹೆಕ್ಟೇರ್ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಕಿಡಿಗೇಡಿಗಳು ಕತ್ತಲಾಗುತ್ತಿದ್ದಂತೆ ಗುಡ್ಡದ ತುದಿಗೆ ಹೋಗಿ ಬೆಂಕಿ ಹಾಕುತ್ತಿದ್ದು ಸಾಲು ಗುಡ್ಡಗಳು ಇಡೀ ರಾತ್ರಿ ಹೊತ್ತಿ ಉರಿಯುತ್ತಿವೆ.

ಕುರಿ, ಮೇಕೆ ಮೇಯಿಸಲು ಅರಣ್ಯಕ್ಕೆ ಹೋಗುವ ಹಳ್ಳಿಗರು, ತೋಬರೆ ಎಲೆ (ಬೀಡಿ ಕಟ್ಟುವ ಎಲೆ) ಕುಯ್ಯಲು ಹೋಗುವ ಜನ, ರಾತ್ರಿ ಮೊಲ, ಕಾಡು ಹಂದಿ ಬೇಟೆಗೆ ಹೋಗುವವರು, ಕಾಡಿನಂಚಿನ ತೋಟಗಳ ತ್ಯಾಜ್ಯಕ್ಕೆ ಹಾಕುತ್ತಿರುವ ಬೆಂಕಿಯೂ ಕಾಡಿಗೆ ಹಬ್ಬುತ್ತಿದೆ. ಮೋಜು ಮಸ್ತಿ ಮಾಡಲು ಗುಡ್ಡದ ಸಾಲಿಗೆ ಹೋಗುವ ಯುವಕರೂ ಕಾಡಿಗೆ ಬೆಂಕಿ ಇಟ್ಟು ಬರುತ್ತಿದ್ದಾರೆ.

ಸಂಜೆ ಆದಂತೆ ಬೆಂಕಿ ತನ್ನ ಕೆನ್ನಾಲಗೆ ಚಾಚುತ್ತ ಸಾಲು ಗುಡ್ಡಗಳಿಗೆ ಹಬ್ಬುವುದರಿಂದ ಮದನಿಂಗನ ಕಣಿವೆಯ ಸಾಲುಗುಡ್ಡಗಳು ಹೊತ್ತಿ ಉರಿಯುತ್ತಿವೆ. ಕಾಡು ಪ್ರಾಣಿಗಳು, ಪಕ್ಷಿಗಳ ಚೀರಾಟ ಶುರುವಾಗುತ್ತಿದೆ. ಇಷ್ಟೆಲ್ಲ ಆಗುತ್ತಿದ್ದರೂ ಅರಣ್ಯ ಇಲಾಖೆ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪರಿಸರ ಪ್ರಿಯರ ಆರೋಪ.

ಗುರುವಾರ ರಾತ್ರಿ ನೆರಳು ತಂಡದ ಯುವಕರು ಅಗ್ನಿಶಾಮಕ ದಳದೊಟ್ಟಿಗೆ ಕೈಜೋಡಿಸಿ ತಡರಾತ್ರಿ 2 ಗಂಟೆವರೆಗೂ ಕಾಡಿನ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅಗ್ನಿಶಾಮಕ ವಾಹನ ಗುಡ್ಡದ ಮೇಲೆ ಹೋಗಲು ಸಾಧ್ಯವಾಗದೆ ಇರುವುದು ಹಾಗೂ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅರಣ್ಯಕ್ಕೆ ಬೆಂಕಿ ಹಾಕುವವರನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮಿನಾರಾಯಣ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬೂದಿಯಾಗುತ್ತಿರುವ ಬೀಜದುಂಡೆ (ಸೀಡ್ಬಾಲ್) ಆಂದೋಲನ: ಕಾಡಿನ ಅಂಚಿನ ಹಳ್ಳಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಹಾಗೂ ಕಾಡಿನ ದಟ್ಟಣೆಗೆ ಸಹಕಾರಿ ಆಗಲಿ ಎಂದು ಕಳೆದ ಮಳೆಗಾಲದಲ್ಲಿ ನೆರಳು ತಂಡದ ಸದಸ್ಯರು ಸೀಡ್ಬಾಲ್ ಆಂದೋಲನ ರೂಪಿಸಿದ್ದರು. 50 ಸಾವಿರ ಸೀಡ್ಬಾಲ್ ಬಿತ್ತನೆ ಮಾಡಲಾಗಿತ್ತು. ಹಾಕಿದ್ದ ಸಿಡ್ಬಾಲ್‌ಗಳು ಚಿಗುರಿ ಗಿಡವಾಗುವ ಹಂತದಲ್ಲಿ ಬೆಂಕಿ ಬೀಳುತ್ತಿರುವುದರಿಂದ ಯುವಕರ ಶ್ರಮ ವ್ಯರ್ಥವಾಗುತ್ತಿದೆ.

ಜೀವ ವೈವಿಧ್ಯದ ತಾಣ: ತಾಲ್ಲೂಕಿನ ಕಸಬಾ ಹಾಗೂ ಕಂದಿಕೆರೆ ಹೋಬಳಿ

ಯಲ್ಲಿ ಹರಡಿಕೊಂಡಿರುವ ತೀರ್ಥಪುರ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹಬ್ಬಿರುವ 4000 ಹೆಕ್ಟೇರ್ ಅಪರೂಪದ ಜೀವ ವೈವಿದ್ಯತೆಯ ತಾಣವಾಗಿದೆ. ಜನರ ಮೂಢನಂಬಿಕೆ ಹಾಗೂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಪರೂಪದ ವನಸಿರಿ ಹಾಗೂ ಜೀವವೈವಿದ್ಯ ಬೆಂಕಿಗೆ ಆಹುತಿಯಾಗುತ್ತಿವೆ.

ಗಣಿಗಾರಿಕೆಯಿಂದಲೂ ಕಾಡು ನಾಶ: ಕೇವಲ 15 ವರ್ಷಗಳ ಹಿಂದೆ ಜೀವಂತವಾಗಿದ್ದ ನೂರಾರು ಕಾರಂಜಿಗಳು ಬತ್ತಿ ಹೋಗಿವೆ. ಸಾವಿರಾರು ಅಪರೂಪದ ಮರ, ಔಷಧಿ ಸಸ್ಯಗಳು, ಪಕ್ಷಿಗಳು, ಪ್ರಾಣಿಗಳು, ಸರಿಸೃಪಗಳು, ಚಿಟ್ಟೆಗಳು ಕಣ್ಮರೆಯಾಗಿವೆ. ಈ ಎಲ್ಲ ಅನಾಹುತದ ಹಿಂದೆ ಗಣಿಗಾರಿಕೆ ಹಾಗೂ ಕಾಡಿಗೆ ಬೆಂಕಿ ಹಾಕುವವರ ಪಾಲೂ ಇದೆ ಎಂದು ತಾಲ್ಲೂಕು ವಿಜ್ಞಾನ ಪರಿಷತ್ ಅಧ್ಯಕ್ಷೆ ಸೃಜನಾ ಇಂದಿರಮ್ಮ ಹೇಳುತ್ತಾರೆ.

***

ತಪ್ಪು ಕಲ್ಪನೆಗಳಿಂದಲೂ ಬೆಂಕಿ

ಕಾಡಿಗೆ ಬೆಂಕಿ ಹಾಕಿದರೆ ಹುಲ್ಲು ಚಿಗುರುತ್ತದೆ ಎಂಬ ತಪ್ಪು ಕಲ್ಪನೆ ಕಾಡಿನ ಹಂಚಿನ ಜನಗಳಲ್ಲಿ ಬಲವಾಗಿ ಬೇರೂರಿದೆ. ಗುಡ್ಡದ ತುದಿಯವರೆಗೂ ಹೋಗುವ ಕುರಿ ಹಾಗೂ ದನಗಾಹಿಗಳು ಸಂಜೆ ಗುಡ್ಡ ಇಳಿಯುವಾಗ ಒಣ ಬಾದೆ ಹುಲ್ಲಿಗೆ ಬೆಂಕಿ ಹತ್ತಿಸಿ ಬರುತ್ತಾರೆ.

ಗಾಳಿ ಬೀಸಿದ ಕಡೆ ಬೆಂಕಿ ಪಸರಿಸಿ ಕಾಡನ್ನು ಬಲಿತೆಗೆದುಕೊಳ್ಳುತ್ತಿದೆ. ಇದಲ್ಲದೆ ಮೊಲ, ಕಾಡುಹಂದಿ ಬೇಟೆಗೆ ತೆರಳುವವರು ಬೇಟೆ ಎಬ್ಬಿಸಲು ಕಾಡಿಗೆ ಬೆಂಕಿ ಹಾಕುತ್ತಾರೆ. ಬೆಂಕಿ ಹಾಕಿದರೆ ತೋಬರೆ ಎಲೆ ಆಗೂ ಮುತ್ತುಗದ ಎಲೆಗಳು ಚಿಗುರುತ್ತವೆ ಎಂದು ನಂಬಿ ಗುಡ್ಡಕ್ಕೆ ಎಲೆ ಕೊಯ್ಯಲು ಹೋಗುವ ಮಹಿಳೆಯರೂ ಗುಡ್ಡಕ್ಕೆ ಬೆಂಕಿ ಹಾಕಿ ಬರುತ್ತಿದ್ದಾರೆ. ಈ ತಪ್ಪು ಕಲ್ಪನೆಗಳಿಂದಾಗಿ ಗುಡ್ಡಕ್ಕೆ ಬೆಂಕಿ ಹಾಕುತ್ತಿರುವ ಹಳ್ಳಿಗರಲ್ಲಿ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ವಾಸ್ತವ ಏನು?: ವಸಂತದಲ್ಲಿ ಗಿಡ– ಮರಗಳು ಎಲೆ ಉದುರಿಸಿ ಹೊಸ ಚಿಗುರು ಮುಡಿಯುವುದು ಪ್ರಕೃತಿಯ ನಿಯಮ. ಬೆಂಕಿ ಹಾಕುವುದರಿಂದ ಹುಲ್ಲು, ಎಲೆ ಚಿಗುರುತ್ತವೆ ಎಂಬುದು ಮೂಢನಂಬಿಕೆ. ಬಿದ್ದ ತರಗೆಲೆಗಳು ಮುಚ್ಚುಗೆಯೋಪಾದಿಯಲ್ಲಿ ಕೆಲಸ ನಿರ್ವಸಿ ಕಾಡಿಗೆ ರಕ್ಷಣೆ ನೀಡುತ್ತವೆ. ಮಳೆಗಾಲ ಪ್ರಾರಂಭವಾದಾಗ ಕಳಿತು ಗೊಬ್ಬರವಾಗಿ ಮರ, ಗಿಡಗಳಿಗೆ ಅಗತ್ಯ ಪೋಷಕಾಂಶ ಒದಗಿಸುತ್ತವೆ. ಕಾಡಿನ ವಿಸ್ತರಣೆಗೆ ಸಹಕಾರಿಯಾಗುತ್ತವೆ. ಬೇರಿಗೆ ಬಲ ತುಂಬಿ ಅಂತರ್ಜಲ ವೃದ್ಧಿಯಾಗುತ್ತದೆ. ಬೆಂಕಿ ಹಾಕುವುದರಿಂದ ಈ ಎಲ್ಲ ಸಾಧ್ಯತೆಗಳೂ ಬೂದಿಯಾಗುತ್ತವೆ.

***

ಶಕ್ತಿ ಮೀರಿ ಪ್ರಯತ್ನ

ಕಾಡಿನ ಬೆಂಕಿ ತಪ್ಪಿಸಲು ಗುಡ್ಡದ ತಪ್ಪಲಿನ ಹಳ್ಳಿಗಳಲ್ಲಿ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಅರಣ್ಯ ಇಲಾಖೆ ಶಕ್ತಿ ಮೀರಿ ಬೆಂಕಿ ತಡೆಯಲು ಪ್ರಯತ್ನ ನಡೆಸಿದೆ.

**

ಕಾಡಿಗೆ ಬೆಂಕಿ ಹಾಕುತ್ತಿರುವವರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

–ಮಂಜುನಾಥ್, ಶಿಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry