₹ 13.51 ಲಕ್ಷ ಉಳಿತಾಯ ಗುರಿ

7
ಗುರುಮಠಕಲ್‌: ಬಜೆಟ್‌ ಮಂಡನಾ ಸಭೆ

₹ 13.51 ಲಕ್ಷ ಉಳಿತಾಯ ಗುರಿ

Published:
Updated:
₹ 13.51 ಲಕ್ಷ ಉಳಿತಾಯ ಗುರಿ

ಗುರುಮಠಕಲ್: ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ಅಧ್ಯಕ್ಷ ಜಿ.ರವೀಂದ್ರರೆಡ್ಡಿ ಪೊಲೀಸ್‌ಪಾಟೀಲ ಅವರ ಅಧ್ಯಕ್ಷತೆಯಲ್ಲಿ 2018-19ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡನಾ ಸಭೆ ನಡೆಯಿತು. ಆದಾಯ ಮತ್ತು ಖರ್ಚುಗಳನ್ನೆಲ್ಲ ಕಳೆದು ₹ 13.51 ಲಕ್ಷ ಉಳಿತಾಯದ ಗುರಿಯನ್ನು ಮುಂಗಡಪತ್ರದಲ್ಲಿ ಘೋಷಿಸಲಾಯಿತು.

ಸದಸ್ಯ ಬಾಲಪ್ಪ ನಿರೇಟಿ ಮಾತನಾಡಿ, ‘ಎಸ್ಎಫ್‌ಸಿ ಅನುದಾನದಲ್ಲಿ ಹಾಸ್ಟೆಲ್‌ಗಳಿಗೆ ಹಾಸಿಗೆ, ಮಂಚ ಹಾಗೂ ಹೊದಿಕೆಗಳ ಹಂಚಿಕೆಯನ್ನು ಹೇಗೆ ಮಾಡಿದ್ದೀರಿ ಎಂಬ ಮಾಹಿತಿಯನ್ನು ಈವರೆಗೂ ಸದಸ್ಯರಿಗೆ ನೀಡಲಾಗಿಲ್ಲ. ಸಾಮಾನ್ಯ ಸಭೆಗಳ ಮಾಹಿತಿ, ಬೀದಿ ಬದಿಯ ವ್ಯಾಪಾರಿಗಳ ಗುರುತಿನ ಚೀಟಿ ವಿತರಣೆ, ಸಹಾಯಧನದ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಹಾಸಿಗೆ, ಹೊದಿಕೆ ಹಾಗೂ ಮಂಚಗಳ ಖರೀದಿ ಟೆಂಡರ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಉಳಿದಂತೆ ಬೀದಿ ಬದಿಯ ವ್ಯಾಪಾರಿಗಳ ಗುರುತಿನ ಚೀಟಿ ಹಾಗೂ ಸಹಾಯ ಧನದ ಕುರಿತು ಯಾವುದೇ ನಿರ್ಣಯ ಪಡೆದಿಲ್ಲ. ಸದಸ್ಯರ ತೀರ್ಮಾನದ ನಂತರವೇ ಅವು ಅನುಷ್ಠಾನವಾಗಲಿವೆ’ ಎಂದರು.

ಮುಖ್ಯಾಧಿಕಾರಿ ಸೈಯದ್ ಅಹ್ಮದ ದಖನಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ‘ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಸರ್ವ ಸದಸ್ಯರ ನಿರ್ಣಯ ಪಡೆದು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಬೇಕು’ ಎಂದರು.

ಸದಸ್ಯರಾದ ಅನ್ನಪೂರ್ಣ ಪ್ಯಾಟಿ, ಲಿಂಗಪ್ಪ ತಾಂಡೂರ್ಕರ್, ಪ್ರಭಾವತಿ ಗೂಡ್ಸೆ ಮಾತನಾಡಿದರು. ‘ವಾಣಿಜ್ಯ ಮಳಿಗೆಗಳ ಮೇಲೆ ಪುರಸಭೆ ಹೊಂದಿರುವ ಅವಧಿ ಮುಗಿದಿದ್ದು, ಈಗಾಗಲೇ ಎರಡು ವರ್ಷಗಳಾಗಿವೆ. ಆದರೆ ಅಂಗಡಿಗಳ ವ್ಯಾಪಾರಿಗಳಿಂದ ತಲಾ ₹ 50 ಸಾವಿರದಂತೆ ಒಟ್ಟು ₹ 12 ಲಕ್ಷ ಪಡೆಯಲಾಗುತ್ತಿದೆ’ ಎಂದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸೈಯದ್‌ ಅಹ್ಮದ್ ದಖನಿಯ, ‘ವಾಣಿಜ್ಯ ಮಳಿಗೆಗಳು ಐಡಿಎಸ್ಎಂಟಿ ಸಮಿತಿ ವ್ಯಾಪ್ತಿಗೆ ಬರುತ್ತವೆ. ಸಮಿತಿಯ ಅಧ್ಯಕ್ಷರು ಜಿಲ್ಲಾಧಿಕಾರಿಯಾಗಿದ್ದು, ಅವರೇ ಈ ಕುರಿತು ನಿರ್ಣಯ ತೆಗೆದುಕೊಳ್ಳುವರು. ನಾವು ಅವರ ಆದೇಶ ಪಾಲಿಸಬೇಕು’ ಎಂದರು.

ಸದಸ್ಯ ಕೆ.ದೇವದಾಸ ಮಾತನಾಡಿ, ‘ಅಂಗವಿಕಲ ಫಲಾನುಭವಿಗಳಿಗೆ ಹಂಚಿಕೆ ಮಾಡಲಾದ ನಿವೇಶನಗಳ ಬಗ್ಗೆ ಅಧಿಕಾರಿಗಳು ಮಾಹಿತಿಯಿಲ್ಲ ಎನ್ನುತ್ತಾರೆ. ಆದರೆ ಅವರಿಗೆ ಹಕ್ಕುಪತ್ರಗಳನ್ನು ಕೊಡಲಾಗಿದ್ದು, ನಿವೇಶನಗಳನ್ನು ಗುರುತಿಸಿ ಕೊಡುವಲ್ಲಿ ವಿಳಂಬ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು. ಪ್ರಕಾಶ ನಿರೇಟಿ ಅವರು ಫಾರ್ಮ್ ನಂ.3 ಖಾತೆಯ ನಕಲು ನೀಡುವಲ್ಲಿ ಸಾರ್ವಜನಿಕರಿಗೆ ಅನವಶ್ಯಕ ವಿಳಂಬ ತೋರಲಾಗುತ್ತಿದೆ. ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿದರು. ವೆಂಕಟಪ್ಪ ಮನ್ನೆಯವರು ಕೂಲಿಕಾರ್ಮಿಕರ ವೇತನ, ನಗರದ ಸ್ವಚ್ಚತೆ ಹಾಗೂ ಸೌಂಧರ್ಯೀಕರಣಕ್ಕೆ ಒತ್ತು ನೀಡಲು ತಿಳಿಸಿದರು.

ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಸಭೆ ತಾರಕಕ್ಕೇರುತ್ತಿದ್ದಂತೆ ಬಹುತೇಕ ಸದಸ್ಯರು ಸಭೆಯಿಂದ ಹೊರನಡೆದರು. ಅವರಲ್ಲಿ ಕೆಲವರು ಪುನಃ ಸಭೆಗೆ ಮರಳಿದರು. ಕೆಲವರು ಹೊರಗಡೆಯೇ ಉಳಿದುಕೊಂಡರು. ಸಭೆಯಲ್ಲಿದ್ದ ಸದಸ್ಯರು ಬಜೆಟ್‌ ಮಂಡನೆ ನೆರವೇರಿತು ಎಂದು ತಿಳಿಸಿದರೆ, ಹೊರಗಡೆ ಉಳಿದಿದ್ದ ಸದಸ್ಯರು ಬಜೆಟ್‌ ಸಂಪೂರ್ಣವಾಗಿ ಮಂಡನೆಯಾಗಿದೆ ಅಥವಾ ಅಥವಾ ಇಲ್ಲವೇ ಎಂಬುದರ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದರು.

ಪುರಸಭೆ ಅಧ್ಯಕ್ಷ ರವೀಂದ್ರರೆಡ್ಡಿ ಪೊಲೀಸ್ ಪಾಟೀಲ ಬಜೆಟ್‌ ಮಂಡಿಸಿದರು. ಲೆಕ್ಕಾಧಿಕಾರಿ ರವಿದಾಸ್ ರಾಠೋಡ್ ವಿವರಿಸಿದರು, ಉಪಾಧ್ಯಕ್ಷೆ ರೇಣುಕಾ ಚಂದಾಪುರ, ಸದಸ್ಯರಾದ ಬಾಲಪ್ಪ ನಿರೇಟಿ, ಮಾಸಿಯೋದ್ಧೀನ್ ಆಸೀಮ್, ಶಾರದಾ ಕಡೇಚೂರ್, ಕೆ.ದೇವದಾಸ್, ಪ್ರಕಾಶ ನಿರೇಟಿ, ಲಿಂಗಪ್ಪ ತಾಂಡೂರಕರ್, ನಫೀಜ ಖಾತುನ್, ಪ್ರಭಾವತಿ ಗುಡಿಸೆ, ವೆಂಕಟಪ್ಪ ಮನ್ನೆ, ಅಕ್ತರ್ ಪ್ಯಾರೆ, ಅನ್ನಪೂರ್ಣ ಪ್ಯಾಟಿ, ನವಿತಾ ಕಂದೂರಗೇರಿ, ರುಕ್ಮಿಣಿ ಪಡಿಗೆ, ಶ್ರೀನಿವಾಸ ಗುಮಡಾಲ್, ಮಾಣಿಕ ಮುಕುಡಿ, ಚಂದ್ರಕಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry