ಜಂಜೀರಾ: ಮೋಹಕ ಸಮುದ್ರ ಕೋಟೆ

7

ಜಂಜೀರಾ: ಮೋಹಕ ಸಮುದ್ರ ಕೋಟೆ

Published:
Updated:
ಜಂಜೀರಾ: ಮೋಹಕ ಸಮುದ್ರ ಕೋಟೆ

ಮುಂಬೈನ ಸಮುದ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಮರಾಠರ ಹೃದಯ ಸಾಮ್ರಾಟ ಶಿವಾಜಿ ಪ್ರತಿಮೆ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು ತೀರಾ ಇತ್ತೀಚಿನ ಸುದ್ದಿ.

ಆದರೆ, ಆದಿವಾಸಿ ಸಿದ್ದಿ ಜನಾಂಗದ ಅರಸರು 17ನೇ ಶತಮಾನದಲ್ಲಿಯೇ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುರುಡ್‌ ಎಂಬ ಗ್ರಾಮದ ಬಳಿ ಸಮುದ್ರದಲ್ಲಿ ಕೋಟೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.‌‌

ಇಂದಿಗೂ ಜಂಜೀರಾ ಎಂದು ಕರೆಯಲಾಗುವ ಈ ಕೋಟೆಯ ಬಹುತೇಕ ಭಾಗ ಸುಸ್ಥಿತಿಯಲ್ಲೇ ಇದೆ. ಅತ್ಯಾಧುನಿಕ ತಂತ್ರಜ್ಞಾನ, ಸಂಪನ್ಮೂಲಗಳು ಇರುವ ಈ ದಿನಗಳಲ್ಲೇ ಸಮುದ್ರದಲ್ಲಿ ಕಟ್ಟಡ ನಿರ್ಮಿಸುವುದು ಅಷ್ಟೊಂದು ಸುಲಭವಲ್ಲ. ಆದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಹೇಳಿಕೊಳ್ಳುವಷ್ಟು ಬೆಳೆದಿಲ್ಲದ 17ನೇ ಶತಮಾನದಲ್ಲಿ ಅರಬ್ಬಿ ಸಮುದ್ರದ ತೀರದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಭಾರಿ ಗಾತ್ರದ ಕಲ್ಲುಗಳನ್ನು ಸಾಗಿಸಿ ಸುಮಾರು 22 ಎಕರೆ ವಿಸ್ತಾರದಲ್ಲಿ ಬೃಹತ್‌ ಕೋಟೆಯನ್ನು ಕಟ್ಟಿದ್ದು ಸಾಮಾನ್ಯ ಸಂಗತಿಯಲ್ಲ.

ಅಹ್ಮದ್‌ ನಗರ ನಿಜಾಮರ ಮಂತ್ರಿಯಾಗಿದ್ದ ಮಲಿಕ್‌ ಅಂಬರ್‌ ಎಂಬಾತ ಈ ಕೋಟೆಯನ್ನು ಕಟ್ಟಿಸಿದ ಎನ್ನುತ್ತದೆ ಇತಿಹಾಸ. ಛತ್ರಪತಿ ಶಿವಾಜಿ ಮಹಾರಾಜ ರಾಯಗಡ, ವಿಶಾಲಗಡ ಸೀಮೆಯ ಹಲವಾರು ಕೋಟೆಗಳನ್ನು ಗೆದ್ದುಕೊಂಡ ಮಹಾಶೂರ. ಆತನ ಮಗ ಸಂಭಾಜಿ ಸಹ ಪರಾಕ್ರಮಿ. ನಿರಂತರ ಆಕ್ರಮಣಗಳ ಹೊರತಾಗಿಯೂ ಜಂಜೀರಾ ಕೋಟೆಯನ್ನು ವಶಪಡಿಸಿಕೊಳ್ಳಲು ಶಿವಾಜಿ ಹಾಗೂ ಸಂಭಾಜಿಗೆ ಸಾಧ್ಯವಾಗಲೇ ಇಲ್ಲವಂತೆ. ಇತಿಹಾಸಕಾರರ ಪ್ರಕಾರ ಸುಮಾರು 22 ದಿನಗಳವರೆಗೆ ಶಿವಾಜಿ ಕೋಟೆಯ ಸುತ್ತಲೂ ತನ್ನ ಸೈನ್ಯವನ್ನು ನಿಲ್ಲಿಸಿದ. ಕೋಟೆಗೆ ಆಹಾರ, ಶಸ್ತ್ರಾಸ್ತ್ರ ಪೂರೈಕೆಯಾಗದಂತೆ ನೋಡಿಕೊಂಡ. ನಿರಂತರ ಫಿರಂಗಿ ದಾಳಿಯ ಹೊರತಾಗಿಯೂ ಸಿದ್ದಿಗಳು ಈ ಕೋಟೆಯನ್ನು ಶಿವಾಜಿಯ ವಶಕ್ಕೆ ಒಪ್ಪಿಸಲಿಲ್ಲ. ಈ ಕೋಟೆಯ ಮೇಲೆ ಪೋರ್ಚುಗೀಸರು ಮತ್ತು ಬ್ರಿಟಿಷರೂ ಕಣ್ಣು ಹಾಕಿದ್ದರು. ಹಲವು ಯತ್ನಗಳ ಬಳಿಕವೂ ಕೋಟೆ ಅವರಿಗೂ ದಕ್ಕಲಿಲ್ಲ ಎನ್ನಲಾಗುತ್ತದೆ.

ಮುಂಬೈನಿಂದ 165 ಕಿ.ಮೀ. ದೂರದಲ್ಲಿರುವ ಮುರುಡ್ ಜಂಜೀರಾ ಕೋಟೆ ಪ್ರವಾಸಿಗರ ಮನಸ್ಸು ಗೆಲ್ಲಲು ಇನ್ನೊಂದು ಕಾರಣವೂ ಇದೆ. ಸಮುದ್ರದ ದಂಡೆಯಿಂದ ಕೋಟೆಗೆ ಹೋಗಲು ಸಾಂಪ್ರದಾಯಿಕ ಹಾಯಿದೋಣಿಗಳ ಮೂಲಕವೇ ಹೋಗಬೇಕು. ₹ 10 ಶುಲ್ಕ ಕೊಟ್ಟರೆ ಪ್ರವಾಸಿಗರನ್ನು ಕರೆದುಕೊಂಡು ಕೋಟೆ ಸುತ್ತಿಸಿ ಮತ್ತೆ ವಾಪಸ್‌ ಕರೆತರುತ್ತಾರೆ. ಬರೀ ಗಾಳಿಯ ದಿಕ್ಕನ್ನು ಆಧರಿಸಿ ದೋಣಿ ನಡೆಸುವವರ ಚಾಕಚಕ್ಯತೆ ಮೆಚ್ಚಲೇಬೇಕು.

ಬೇಸಿಗೆಯ ಬಿರುಬಿಸಿಲಿನಲ್ಲಿ ಹಾಯಿದೋಣಿಯಲ್ಲಿ ಮೋಜು ಮಾಡುತ್ತಾ ಹೋದ ಪ್ರವಾಸಿಗರು ಕೋಟೆಯ ಮುಂಭಾಗದಲ್ಲಿ ಕಾಲಿಡುತ್ತಲೇ ತಂಪು ಅನುಭವವಾಗುತ್ತದೆ. ಕೋಟೆಯ ಇತಿಹಾಸವನ್ನು ವಿವರಿಸಲು ಇಲ್ಲಿ ಗೈಡ್‌ಗಳೂ ಇದ್ದಾರೆ. ಅವರ ನೆರವು ಪಡೆದು ಹೋಗಬಹುದು. ಇಲ್ಲವೇ ಅಲ್ಲಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯು ಅಳವಡಿಸಿರುವ ಮಾಹಿತಿ ಫಲಕವನ್ನು ನೋಡಿ ಕೋಟೆಯ ಬಗ್ಗೆ ತಿಳಿದುಕೊಳ್ಳಬಹುದು.

ಮೇಲ ಮೇಲಕ್ಕೆ ಹೋದಂತೆಲ್ಲ ಭಾರಿ ಗಾತ್ರದ ಬಾವಿಯೊಂದು ಕಾಣಿಸುತ್ತದೆ. ಕೋಟೆಯ ಸುತ್ತಲೂ ಸಮುದ್ರದ ಉಪ್ಪು ನೀರಿದ್ದರೂ ಈ ಬಾವಿಯ ನೀರು ಮಾತ್ರ ಸಿಹಿಯೇ. ಇತ್ತೀಚಿನ ವರ್ಷಗಳಲ್ಲಿ ಬಳಕೆಯಾಗದ್ದಕ್ಕೆ ಬಾವಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇಲ್ಲಿಯೇ ದರ್ಗಾವೊಂದನ್ನು ನಿರ್ಮಿಸಲಾಗಿದೆ. ಕೋಟೆಯ ಮೇಲ್ಭಾಗಕ್ಕೆ ಹೋದಂತೆಲ್ಲ ಕೋಟೆಯ ಸುತ್ತಲೂ ಹಲವು ವಿವಿಧ ಗಾತ್ರದ ಫಿರಂಗಿಗಳನ್ನು ಅಳವಡಿಸಲಾಗಿದ್ದು, ಇಂದಿಗೂ ಸುಸ್ಥಿತಿಯಲ್ಲಿವೆ. ಕೋಟೆಯ ಸುತ್ತಲೂ ಬಲಾಢ್ಯ ಸೈನ್ಯದ ಕಾವಲು ಇದ್ದುದರಿಂದಲೇ ಶಿವಾಜಿ, ಸಂಭಾಜಿ, ಪೋರ್ಚುಗೀಸರು ಹಾಗೂ ಬ್ರಿಟಿಷರಿಗೆ ಮುರುದ್‌ ಜಂಜೀರಾ ಕೋಟೆ ಕೈವಶವಾಗಲಿಲ್ಲ.‌‌

ಜಂಜೀರಾ ಮೂಲ ಅರೆಬಿಕ್‌‌

ಜಂಜೀರಾ ಎಂಬುದು ಅರೆಬಿಕ್‌ ಭಾಷೆಯ ಜಝೀರಾ ಎಂಬ ಮೂಲ ಶಬ್ದದ ಅಪಭ್ರಂಶ. ಜಝೀರಾ ಎಂದರೆ ದ್ವೀಪ ಎಂದರ್ಥ. ಸಮುದ್ರದ ಒಳಗೆ ಈ ಕೋಟೆಯನ್ನು ಕಟ್ಟಿದ್ದರಿಂದ ದ್ವೀಪ ಎಂಬರ್ಥದಲ್ಲಿ ಇದನ್ನು ಜಂಜೀರಾ ಎಂದು ಕರೆಲಾಗುತ್ತಿದೆ. ಕೋಟೆಯ ಸುತ್ತಲೂ 26 ದ್ವಾರಗಳನ್ನು ನಿರ್ಮಿಸಲಾಗಿದ್ದು, ಇವುಗಳ ಬಳಿ ಯುರೋಪ್‌ ಹಾಗೂ ಭಾರತದಲ್ಲಿ ತಯಾರಾದ ಫಿರಂಗಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಕೋಟೆಯಲ್ಲಿ 572 ವಿವಿಧ ಬಗೆಯ ಫಿರಂಗಿಗಳನ್ನು ಇರಿಸಲಾಗಿತ್ತು. ಅವುಗಳ ಪೈಕಿ ಕಲಾಲ್‌ಬಂಗ್ಡಿ, ಚಾವ್ರಿ ಮತ್ತು ಲಂಡಾ ಕಸಮ್‌ ಎಂಬುವು ಅತ್ಯಂತ ದೊಡ್ಡ ಫಿರಂಗಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry