ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲದ ಬಲೆಯೊಳಗೆ ಬೆರಗಿನ ನೆದರ್‌ಲ್ಯಾಂಡ್ಸ್‌

Last Updated 4 ಮಾರ್ಚ್ 2018, 8:42 IST
ಅಕ್ಷರ ಗಾತ್ರ

ಹಾಲೆಂಡ್‌’ ಎಂಬ ಪರ್ಯಾಯ ಹೆಸರಿನಿಂದ ಜಗತ್ತಿನ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಪಶ್ಚಿಮ ಯುರೋಪ್‌ನ ಪುಟ್ಟ ರಾಷ್ಟ್ರ ನೆದರ್‌ಲ್ಯಾಂಡ್ಸ್‌ನ ಒಡಲಲ್ಲಿ ಹಲವು ಕೌತುಕಗಳಿವೆ. 41,528 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ ರಾಷ್ಟ್ರದ ಬಹುತೇಕ ತಾಣಗಳು ಪ್ರವಾಸಿ ಕೇಂದ್ರಗಳೇ! 1.70 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಡಚ್ಚರ ಈ ನಾಡು ಸೃಷ್ಟಿಸುವ ಬೆರಗುಗಳು ಒಂದೆರಡಲ್ಲ; ಅದು ಭೌಗೋಳಿಕ ರಚನೆಯಿಂದಲೇ ಆರಂಭವಾಗುತ್ತದೆ.

“As flat as Pancacke’- ತಮ್ಮ ದೇಶದ ಭೌಗೋಳಿಕ ಗುಣಲಕ್ಷಣವನ್ನು ಡಚ್ಚರು ಒಂದೇ ಸಾಲಿನಲ್ಲಿ ವರ್ಣಿಸುವ ಬಗೆ ಇದು. ‘ಪ್ಯಾನ್‌ಕೇಕ್‌’ ಎಂದರೆ ನಮ್ಮ ದೋಸೆಯನ್ನೇ ಹೋಲುವ, ತೆಳು/ಚಪ್ಪಟೆಯಾದ ತಿನಿಸು. ನೆದರ್‌ಲ್ಯಾಂಡ್ಸ್‌ನ ಭೂಭಾಗವೂ ಅದರಂತೆ ಚಪ್ಪಟೆಯಾಗಿದೆ. ಅದರ, ನೆಲದ ಕಾಲು ಭಾಗ ಅಂದರೆ ಶೇ 27ರಷ್ಟು ಪ್ರದೇಶ ಸಮುದ್ರಮಟ್ಟದಿಂದ ಕೆಳಗೆ ಇದೆ!

ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸಮುದ್ರಮಟ್ಟಕ್ಕಿಂತಲೂ ತಗ್ಗಿನಲ್ಲಿವೆ. ಅಲ್ಲಿನ ಶ್ಕಿಫಾಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸಮುದ್ರ ಮಟ್ಟಕ್ಕಿಂತ 4.5 ಮೀಟರ್‌ ಕೆಳಗಡೆ ಇದೆ. ಆದರೆ, ಅಲ್ಲಿ ಇಳಿದಾಗ ಇದರ ಯಾವ ಕುರುಹೂ ಕಾಣಸಿಗುವುದಿಲ್ಲ. ಸಂಪೂರ್ಣ ಒಣ ಪ್ರದೇಶದಂತೆ ಭಾಸವಾಗುತ್ತದೆ!

ಸ್ವಲ್ಪ ಎತ್ತರದ ಪ್ರದೇಶವೂ ಹಾಲೆಂಡಿಗರಿಗೆ ಬೆಟ್ಟವಾಗುತ್ತದೆ. ನೆದರ್‌ಲ್ಯಾಂಡ್ಸ್‌ನ ಅತ್ಯಂತ ಎತ್ತರದ ಪ್ರದೇಶ ವಾಲ್ಸ್‌ ಎಂಬ ಪಟ್ಟಣದ ಬಳಿಯಲ್ಲಿದೆ. ದೇಶದ ಆಗ್ನೇಯಕ್ಕೆ ಇರುವ ಈ ಜಾಗ, ಸಮುದ್ರ ಮಟ್ಟದಿಂದ 323 ಮೀಟರ್‌ಗಳಷ್ಟು ಎತ್ತರ ಇದೆ. ಡಚ್ಚರು ಇದನ್ನೇ ಪರ್ವತ ಎಂದು ಬಣ್ಣಿಸುತ್ತಾರೆ!

ಜಲವೇ ವರ

ಪ್ರವಾಸಿಗರನ್ನು ಅಚ್ಚರಿಗೆ ಕೆಡಹುವ ಇನ್ನೊಂದು ಸಂಗತಿಯೆಂದರೆ ಅಲ್ಲಿನ ನೀರು. ಕಣ್ಣುಹಾಯಿಸಿದಲ್ಲೆಲ್ಲ ಕಾಣಿಸುವುದು ಸಮುದ್ರ, ನದಿ, ಕೆರೆ ಹಾಗೂ ಕಾಲುವೆಗಳ ರೂಪದಲ್ಲಿ ಮೈದಳೆದಿರುವ ಜಲರಾಶಿ. ಹಾಲೆಂಡ್‌ನ ಒಟ್ಟಾರೆ ಭೂ ಪ್ರದೇಶದಲ್ಲಿ ಶೇ 18.5ರಷ್ಟು ಭಾಗವನ್ನು ನೀರು ಆವರಿಸಿಕೊಂಡಿದೆ.

ಅಲ್ಲಿನ ನೀರು ನಿರ್ವಹಣೆ ವ್ಯವಸ್ಥೆಯೇ ಒಂದು ಸೋಜಿಗ. ಯಾಕೆಂದರೆ, ನೆದರ್‌ಲ್ಯಾಂಡ್ಸ್‌ನ ಶೇ 20ರಷ್ಟು ನೆಲವನ್ನು ನೀರಿನಿಂದ ಪಡೆಯಲಾಗಿದೆ (ಸಮುದ್ರ, ನದಿ, ಕೆರೆಗಳಿಗೆ ಮಣ್ಣು ತುಂಬಿ ಕೃತಕವಾಗಿ ನಿರ್ಮಿಸಲಾಗಿದೆ). ಬಹುತೇಕ ತಗ್ಗು ಪ್ರದೇಶಗಳಲ್ಲೆಲ್ಲ (ಪೋಲ್ಡರ್‌) ಇದೇ ರೀತಿ ಸೃಷ್ಟಿಯಾಗಿದ್ದು. ಪ್ರವಾಹವನ್ನು ತಡೆಯುವ ವ್ಯವಸ್ಥೆಗಳಿಲ್ಲದಿದ್ದರೆ (ಮರಳದಿಬ್ಬ, ಕಂದಕ, ಒಡ್ಡು ಇತ್ಯಾದಿ) ಇಡೀ ದೇಶದ ಮೂರನೇ ಎರಡು ಭಾಗ ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿತ್ತು. ಇದೇ ಕಾರಣಕ್ಕೆ, ನೀರು ನಿರ್ವಹಣೆಯ ವಿಶ್ವ ಚಾಂಪಿಯನ್ನರು ಎಂಬ ಶಹಬ್ಬಾಸ್‌ಗಿರಿ ಡಚ್ಚರ ಮುಕುಟವನ್ನು ಅಲಂಕರಿಸಿದೆ.

ಆದರೆ, ನೀರು ತನಗೆ ಶಾಪ ಎಂದು ನೆದರ್‌ಲ್ಯಾಂಡ್ಸ್‌ ಯಾವತ್ತೂ ಭಾವಿಸಿಲ್ಲ. ಅದನ್ನೇ ವರವಾಗಿಸಿಕೊಂಡಿದೆ. ನೂರಾರು ಕಾಲುವೆಗಳು, ಹಲವು ನದಿ, ಕೆರೆ-ಸರೋವರಗಳು ರಾಷ್ಟ್ರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಕಾಲುವೆಗಳಂತೂ ಮನುಷ್ಯನ ದೇಹದಲ್ಲಿರುವ ನರವ್ಯೂಹದಂತೆ ಇಡೀ ದೇಶದಾದ್ಯಂತ ಹರಡಿಕೊಂಡಿದೆ. ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಮ್‌ ಮತ್ತು ಅದರ ಸುತ್ತಮುತ್ತ 165 ಕಾಲುವೆಗಳಿವೆ! ಅಂಕೆಗಳ ಲೆಕ್ಕಾಚಾರದಲ್ಲಿ ಇದು ದೇಶದಲ್ಲೇ ಅತಿ ಹೆಚ್ಚು. ಇಲ್ಲಿರುವ ವರ್ತುಲ ಕಾಲುವೆ (ಕೆನಾಲ್‌ ರಿಂಗ್‌) ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಾಲುವೆ, ಕೆರೆ, ನದಿಗಳಿಗೆ ಕಟ್ಟಿರುವ ಸೇತುವೆಗಳೂ ಆಕರ್ಷಣೆಯ ಕೇಂದ್ರಬಿಂದುಗಳೇ.

ವಿಲಾಸಿ ಗೃಹಗಳ ನಾಡು

ನದಿ, ಕೆರೆ, ಕಾಲುವೆಗಳಿಗೆ ಹೊಂದಿಕೊಂಡಂತೆ ನಿರ್ಮಿಸ ಲಾಗಿರುವ ಚಿತ್ತಾಕರ್ಷಕ ಕಂಟ್ರಿ ಹೌಸ್‌ಗಳು (ಹಳ್ಳಿ ಮನೆ), ಕ್ಯಾಸಲ್‌ಗಳು (ಶ್ರೀಮಂತಗೃಹ, ಕೋಟೆಮನೆ ಎಂಬ ಅರ್ಥ ಇದೆ)  ಹಾಲೆಂಡ್‌ನ ಸೌಂದರ್ಯಕ್ಕೆ ಕಲಶವಿಟ್ಟಂತೆ ಇವೆ. ಇಡೀ ದೇಶದಲ್ಲಿ ಸುಮಾರು 700 ಕಂಟ್ರಿ ಹೌಸ್‌, ಕ್ಯಾಸಲ್‌ಗಳಿವೆ. ವಾಸ್ತುಶಿಲ್ಪಶಾಸ್ತ್ರದ ಅತ್ಯುತ್ಕೃಷ್ಟ ವೈಭವ ಪ್ರದರ್ಶಿಸುವ ಈ ಐಷಾರಾಮಿ ಗೃಹಗಳೆಲ್ಲ 16,17,18ನೇ ಶತಮಾನದಲ್ಲಿ ನಿರ್ಮಾಣ ಆಗಿರುವಂತಹದ್ದು.

‘ಸುಪ್ಪತ್ತಿಗೆಯ ಈ ಗೃಹಗಳು ಉದ್ಯಮಿಗಳ ಮತ್ತು ಸಿರಿವಂತರ ಬೇಸಿಗೆ ಮನೆಗಳಾಗಿದ್ದವು’ ಎಂದು ಹೇಳುತ್ತಾರೆ ಕ್ಯಾಸಲ್‌, ಕಂಟ್ರಿಹೌಸ್‌ ಮತ್ತು ಗ್ರಾಮೀಣ ಎಸ್ಟೇಟ್‌ಗಳ ನಿರ್ವಹಣೆಯ ಹೊಣೆ ಹೊತ್ತಿರುವ ಸಂಸ್ಥೆಯ (ಎಸ್‌ಕೆಬಿಎಲ್‌) ನಿರ್ದೇಶಕ ರೆನೆ ಡಬ್ಲ್ಯು. ಡೆಸ್ಸಿಂಗ್.

‘ನಮ್ಮಲ್ಲಿ 12 ಪ್ರಾಂತ್ಯಗಳಿವೆ. ಅವುಗಳಲ್ಲಿ 11ರಲ್ಲಿ (ಒಂದು ಪ್ರಾಂತ್ಯ 20ನೇ ಶತಮಾನದಲ್ಲಿ ಸೃಷ್ಟಿಯಾಗಿದ್ದು) ಕ್ಯಾಸಲ್, ಕಂಟ್ರಿಹೌಸ್‌ಗಳಿವೆ. 1770ರ ದಶಕದಲ್ಲಿ ಆ್ಯಮ್‌ಸ್ಟರ್‌ಡ್ಯಾಮ್‌ ನದಿ ದಂಡೆಯಲ್ಲಿ ಸಿರಿವಂತ ವ್ಯಾಪಾರಿಗಳು 400 ಕಂಟ್ರಿ ಹೌಸ್‌ಗಳನ್ನು ನಿರ್ಮಿಸಿದ್ದರು. ನಗರ ಪ್ರದೇಶಗಳಲ್ಲಿ ನೆಲೆಸಿರುವ ಸಿರಿವಂತರು ಬೇಸಿಗೆಯಲ್ಲಿ ಇಲ್ಲಿ ವಾಸಿಸುತ್ತಿದ್ದರು’ ಎಂದು ಅವರು ಹೇಳುತ್ತಾರೆ.

ಎಸ್‌ಕೆಬಿಎಲ್‌, 50 ಕ್ಯಾಸಲ್‌ಗಳನ್ನು ನಿರ್ವಹಿಸುತ್ತಿದೆ. 18ನೇ ಶತಮಾನದಲ್ಲಿ ಹೆಚ್ಚಿನ ಕ್ಯಾಸಲ್‌ಗಳು ಕಂಟ್ರಿ ಹೌಸ್‌ಗಳಾಗಿ ಪರಿವರ್ತನೆಗೊಂಡವು ಎಂದು ವಿವರಿಸುತ್ತಾರೆ ಅವರು.

ಬಹುತೇಕ ಎಲ್ಲ ಕಂಟ್ರಿ ಹೌಸ್‌, ಕ್ಯಾಸಲ್‌ಗಳು ಈಗ ಪಂಚತಾರಾ ಹೋಟೆಲ್‌, ರೆಸ್ಟೊರೆಂಟ್‌, ಮ್ಯೂಸಿಯಂಗಳಾಗಿ ಬದಲಾಗಿವೆ. ಇನ್ನೂ ಕೆಲವನ್ನು ಖಾಸಗಿಯಾಗಿ ನಿರ್ವಹಿಸಲಾಗದೆ ಮೂಲ ಮಾಲೀಕರು ಟ್ರಸ್ಟ್‌, ಫೌಂಡೇಷನ್‌ಗಳಿಗೆ ಮಾರಿದ್ದಾರೆ.

ಉಟ್ರೆಕ್ಟ್‌ ಪ್ರಾಂತ್ಯದಲ್ಲಿರುವ ‘ಡೆ ಹಾರ್‌ ಕ್ಯಾಸಲ್‌’, ನೆದರ್‌ಲ್ಯಾಂಡ್ಸ್‌ನ ಅತ್ಯಂತ ದೊಡ್ಡ ಕ್ಯಾಸಲ್‌. 12–13ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಇದು ಸಂಪೂರ್ಣವಾಗಿ ನವೀಕರಣಗೊಂಡಿದ್ದು 1890ರಲ್ಲಿ. ಬ್ಯಾರೆನ್‌ ಏಯ್ಟೇನ್‌ ಎಂಬಾತ ಇದರ ಪುನರ್‌ ನಿರ್ಮಾತೃ. ಒಳಾಂಗಣದಲ್ಲಿರುವ ಸೀಮೆ ಸುಣ್ಣದ ಕುಸುರಿ ಕೆತ್ತನೆ, ವಿವಿಧ ಕಲಾಕೃತಿಗಳು ಇದರ ವೈಶಿಷ್ಟ್ಯ. ಬೃಹತ್‌ ಕೆರೆಯ ಮಧ್ಯೆ ತಲೆ ಎತ್ತಿರುವ ಈ ಐಷಾರಾಮಿ ಮನೆಯ ಮನಮೋಹಕತೆಯನ್ನು ಅದರ ಸುತ್ತಲಿರುವ ಗುಲಾಬಿ ಹೂಗಳ ಉದ್ಯಾನ ಮತ್ತು ರೋಮನ್‌ ಉದ್ಯಾನ ಹೆಚ್ಚಿಸಿದೆ. ಒಟ್ಟು 135 ಎಕರೆ ಪ್ರದೇಶಗಳಲ್ಲಿ (ಉದ್ಯಾನಗಳೂ ಸೇರಿ) ಹರಡಿಕೊಂಡಿರುವ ‘ಡೆ ಹಾರ್‌ ಕ್ಯಾಸಲ್‌’ ಹಾಲೆಂಡ್‌ನ ಸುವರ್ಣ ಯುಗದ ವೈಭವವನ್ನು ಜಗತ್ತಿಗೆ ಸಾರುತ್ತಿದೆ.

ಗಾಳಿ ಗಿರಣಿಗಳು (ವಿಂಡ್‌ ಮಿಲ್ಸ್‌) ಹಾಲೆಂಡ್‌ನ ಮತ್ತೊಂದು ಸಂಕೇತ. ನೈಸರ್ಗಿಕವಾಗಿ ಲಭ್ಯವಿರುವ ಗಾಳಿಯನ್ನೇ ಬಳಸಿ ಡಚ್ಚರು ಕಟ್ಟಿ ಬೆಳೆಸಿದ ಕೈಗಾರಿಕೆಗಳ ಕುರುಹುಗಳಾಗಿ ಈಗಲೂ ಅಲ್ಲಲ್ಲಿ ಗಾಳಿ ಗಿರಣಿಗಳು ಕಾಣಸಿಗುತ್ತವೆ. ಇವುಗಳು ಕೂಡ ನದಿ, ಕೆರೆ ಕಾಲುವೆಗಳಿಗೆ ಹೊಂದಿಕೊಂಡಂತೆ ಇವೆ. ತನ್ನ ಪುರಾತನ ಜ್ಞಾನವನ್ನು ಜಗತ್ತಿನ ಮುಂದೆ ಪ್ರದರ್ಶಿಸುವುದಕ್ಕಾಗಿ ಈಗಲೂ ಕೆಲವು ಗಿರಣಿಗಳನ್ನು ನೆದರ್‌ಲ್ಯಾಂಡ್ಸ್‌ ಸುಸ್ಥಿತಿಯಲ್ಲಿ ಇಟ್ಟಿದೆ.

ವಿಶ್ವ ವಿಖ್ಯಾತ ಟ್ಯೂಲಿಪ್‌ ಹೊಲಗಳು/ಉದ್ಯಾನಗಳು, ಡೆಲ್ಫ್ಟ್‌ನ ಪಿಂಗಾಣಿ ಉತ್ಪನ್ನಗಳು, ಕಡಲ ಕಿನಾರೆಗಳು, ಮರದ ಶೂಗಳು, ಜಗತ್ಪ್ರಸಿದ್ಧ ಡಚ್‌ ಕಲಾವಿದರ ಕಲಾಕೃತಿಗಳನ್ನೊಳಗೊಂಡ ಮ್ಯೂಸಿಯಂಗಳು, ಟ್ರಾಮ್‌ (ರಸ್ತೆಯಲ್ಲೇ ಹಳಿಗಳ ಮೇಲೆ ಸಂಚರಿಸುವ ಸಂಚರಿಸುವ ರೈಲು) ಸಾರಿಗೆ ವ್ಯವಸ್ಥೆ, ಸುರಂಗ ಮೆಟ್ರೊ... ನೆದರ್‌ಲ್ಯಾಂಡ್ಸ್‌ನಲ್ಲಿ ನೋಡಬೇಕಾದ/ಅನುಭವಿಸಬೇಕಾದ ವಸ್ತುಗಳು ಮತ್ತು ತಾಣಗಳನ್ನು ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು. ವಿದೇಶ ಪ್ರವಾಸಕ್ಕೆ ಹಾತೊರೆಯುವವರು ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡದಿದ್ದರೆ ಅವರ ಪ್ರವಾಸ ಪರಿಪೂರ್ಣವಾಗದು ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು.

ಅಂದ ಹಾಗೆ, ಮಾರ್ಚ್‌ ಮಧ್ಯಭಾಗದಿಂದ ಅಕ್ಟೋಬರ್‌ವರೆಗೆ (ಅಲ್ಲಿನ ಬೇಸಿಗೆ) ಹಾಲೆಂಡ್‌ಗೆ ಭೇಟಿ ನೀಡಲು ಪ್ರಶಸ್ತ ಸಮಯ. ಮಳೆ ಮತ್ತು ಚಳಿಗಾಲದಲ್ಲಿ ವಾತಾವರಣದ ಉಷ್ಣತೆ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇರುತ್ತದೆ. ಎಷ್ಟೋ ಬಾರಿ ತಾಪಮಾನ ಶೂನ್ಯಕ್ಕಿಂತಲೂ ಕೆಳಗೆ ಇಳಿಯುತ್ತದೆ.

ಸೈಕಲ್‌ ಪ್ರೀತಿ

ಡಚ್ಚರು ಸೈಕಲ್‌ ಮೋಹಿಗಳು. ಸೈಕ್ಲಿಂಗ್‌ ಅವರ ಜೀವನದ ಭಾಗ. ದೇಶದ ಜನಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ಸೈಕಲ್‌ಗಳು ಅಲ್ಲಿವೆ. ನೆದರ್‌ಲ್ಯಾಂಡ್ಸ್‌ನ ಶೇ 36ರಷ್ಟು ಮಂದಿ ಸಂಚಾರಕ್ಕೆ ಸೈಕಲ್‌ಗಳನ್ನೇ ಇಷ್ಟಪಡುತ್ತಾರೆ. ಆ್ಯಮ್‌ಸ್ಟರ್‌ಡ್ಯಾಮ್‌ ಒಂದರಲ್ಲೇ 8.81 ಲಕ್ಷ ಸೈಕಲ್‌ಗಳಿವೆ.

ಹಾಲೆಂಡ್‌ ಭೂಭಾಗ ಸಮತಟ್ಟಾಗಿರುವುದು, ತಂಪಾದ ಹವೆ ಹಾಗೂ ಲಭ್ಯವಿರುವ ಮೂಲ ಸೌಕರ್ಯಗಳು ಸೈಕಲ್‌ ಬಳಕೆಯನ್ನು ಜನಪ್ರಿಯಗೊಳಿಸಿವೆ. ಇಲ್ಲಿ ಸೈಕ್ಲಿಂಗ್‌ಗಾಗಿಯೇ ಪ್ರತ್ಯೇಕವಾದ ವ್ಯವಸ್ಥಿತ ಸಂಚಾರ ವ್ಯವಸ್ಥೆ ಇದೆ. ನಗರ,‌ ಪಟ್ಟಣ ಪ್ರದೇಶಗಳು ಸೇರಿದಂತೆ ದೇಶದಾದ್ಯಂತ 32 ಸಾವಿರ ಕಿ.ಮೀಗಳಷ್ಟು ಉದ್ದದ ಸೈಕಲ್‌ ಪಥ ಇದೆ. ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯೂ ಇದೆ.

ಸೈಕಲ್‌ ಪ್ರವಾಸೋದ್ಯಮವೂ ಇಲ್ಲಿ ಪ್ರಸಿದ್ಧ. ಬಹುತೇಕ ಪ್ರವಾಸಿ ತಾಣಗಳನ್ನು ಸೈಕಲ್‌ ಮೂಲಕವೇ ಸುತ್ತಾಡಬಹುದು. ಸೈಕಲ್‌ಗಳನ್ನು ಬಾಡಿಗೆಗೆ ಪಡೆದು ಪ್ರವಾಸ ಹೋಗುವುದಕ್ಕೂ ಅವಕಾಶ ಇದೆ.

ರಾಜಧಾನಿ ಅಡಳಿತ ಕೇಂದ್ರವಲ್ಲ!

ನೆದರ್‌ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌. ಆದರೆ, ಆಡಳಿತದ ಕೇಂದ್ರ ಅದಲ್ಲ. ವಿಶ್ವಸಂಸ್ಥೆಯ ಎರಡನೇ ನಗರ ಎಂದು ಕರೆಯಲಾಗುವ ‘ದಿ ಹೇಗ್‌’ನಿಂದ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಸಂಸತ್ತು, ಪ್ರಧಾನಿ ಕಚೇರಿ ಎಲ್ಲ ಇರುವುದು ಇಲ್ಲಿಯೇ. ರಾಜಾಡಳಿತದ ಸಂವಿಧಾನ ಹೊಂದಿರುವ ಹಾಲೆಂಡ್‌ನಲ್ಲಿ ರಾಜಮನೆತನಕ್ಕೆ ಶಿಷ್ಟಾಚಾರದ ಗೌರವವಿದೆ. ಆದರೆ ಆಡಳಿತ ನಿರ್ವಹಿಸುವುದೆಲ್ಲ ಸರ್ಕಾರವೇ.

ಗಿಣ್ಣು ಪ್ರಿಯರು...

ಇಲ್ಲಿನ ಆಹಾರ ಸಂಸ್ಕೃತಿಯೂ ಜನಪ್ರಿಯ. ಡಚ್ಚರ ಆಹಾರದಲ್ಲಿ ಬೆಣ್ಣೆ/ಗಿಣ್ಣಿನ (ಚೀಸ್‌) ಭಾರಿ ಮಹತ್ವ. ಅದಿಲ್ಲದಿದ್ದರೇ ಅವರ ಊಟ, ತಿಂಡಿ ಪೂರ್ಣಗೊಳ್ಳುವುದಿಲ್ಲ. ಇಲ್ಲಿನ ಗಿಣ್ಣಿನ ಕಾರ್ಖಾನೆಗಳೂ ಪ್ರಸಿದ್ಧ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 15 ಕೆಜಿಗಳಷ್ಟು ಗಿಣ್ಣು ಸೇವಿಸುತ್ತಾನೆ!

ನಮಗೆ ಈಗ ಇನ್ನೂ ಹತ್ತಿರ

ಕರ್ನಾಟಕದವರಿಗೆ ನೆದರ್‌ಲ್ಯಾಂಡ್ಸ್‌ ಈಗ ಇನ್ನಷ್ಟು ಹತ್ತಿರವಾಗಿದೆ. ಕೇವಲ ಹತ್ತೂವರೆಯಿಂದ ಹನ್ನೊಂದು ತಾಸುಗಳಲ್ಲಿ ಅಲ್ಲಿಗೆ ತಲುಪಬಹುದು.

ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯು 2017ರ ಅಕ್ಟೋಬರ್ 29ರಿಂದ ಬೆಂಗಳೂರಿನಿಂದ ಆ್ಯಮ್‌ಸ್ಟರ್‌ಡ್ಯಾಮ್‌ನ ಶ್ಕಿಫಾಲ್‌ ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ನೇರ (ತಡೆ ರಹಿತ) ವಿಮಾನಸೇವೆ ಆರಂಭಿಸಿದೆ. ಇದುವರೆಗೂ ಮುಂಬೈ ಅಥವಾ ದೆಹಲಿಗೆ ಹೋಗಿ ನಂತರ ಅಲ್ಲಿಂದ ಆ್ಯಮ್‌ಸ್ಟರ್‌ಡ್ಯಾಮ್‌ ವಿಮಾನ ಹಿಡಿಯಬೇಕಾಗಿತ್ತು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡ ರಾತ್ರಿ 2.25ಕ್ಕೆ ಹೊರಡುವ ವಿಮಾನ, ಮರುದಿನ ಬೆಳಿಗ್ಗೆ  (ಸ್ಥಳೀಯ ಕಾಲಮಾನ) 8.35ಕ್ಕೆ ಅಲ್ಲಿಗೆ ತಲುಪುತ್ತದೆ. ಅದೇ ರೀತಿ, ಸ್ಥಳೀಯ ಕಾಲಮಾನ ಬೆಳಿಗ್ಗೆ 10.50ಕ್ಕೆ ಆ್ಯಮ್‌ಸ್ಟರ್‌ಡ್ಯಾಮ್‌ನಿಂದ ಹೊರಡುವ ವಿಮಾನ, ಭಾರತೀಯ ಕಾಲಮಾನ ರಾತ್ರಿ 12.50ಕ್ಕೆ ಬೆಂಗಳೂರಿನಲ್ಲಿ ಇಳಿಯುತ್ತದೆ (ಭಾರತದ ಕಾಲಮಾನಕ್ಕೂ ಅಲ್ಲಿಗೂ ನಾಲ್ಕೂವರೆ ಗಂಟೆಗಳ ವ್ಯತ್ಯಾಸವಿದೆ).

ಎಕಾನಮಿ ಶ್ರೇಣಿಯ ಟಿಕೆಟ್‌ಗೆ ₹25 ಸಾವಿರ ಮತ್ತು ಪ್ರೀಮಿಯಂ ಅಥವಾ ಬಿಸಿನೆಸ್‌ ಶ್ರೇಣಿ ಟಿಕೆಟ್‌ಗೆ ₹1.5 ಲಕ್ಷದವರೆಗೆ ದರವಿದೆ. ಜೆಟ್‌ ಏರ್‌ವೇಸ್‌ ಪ್ರಯಾಣಿಕರ ಆರಾಮಕ್ಕೆ ಸಂಸ್ಥೆ ಹೆಚ್ಚು ಮುತುವರ್ಜಿ ತೋರಿದೆ. ಕಾಲಿಡಲು ಸಾಕಷ್ಟು ಸ್ಥಳ ಇರುವ ಸುಖಾಸೀನಗಳು ಇದರ ವೈಶಿಷ್ಟ್ಯ. ಪ್ರೀಮಿಯಂ ಪ್ರಯಾಣಿಕರಿಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಆಸನವನ್ನು 180 ಡಿಗ್ರಿಯಷ್ಟು ಬಗ್ಗಿಸಿ ಹಾಸಿಗೆಯಂತೆ ಬಳಸಬಹುದು. ಮನರಂಜನಾ ವ್ಯವಸ್ಥೆಯೂ ಇದೆ.

ಕ್ರಾಂತಿಕಾರಕ ಸಮಾಜ

ಸಾಮಾಜಿಕವಾಗಿಯೂ ನೆದರ್‌ಲ್ಯಾಂಡ್ಸ್‌ ಹಲವು ವಿಷಯಗಳಿಗೆ ಮುಖ್ಯವಾಗುತ್ತದೆ. ವೇಶ್ಯಾವಟಿಕೆಗೆ ಇಲ್ಲಿ ಕಾನೂನು ಬದ್ಧ ಅವಕಾಶ ಇದೆ. ಗಾಂಜಾದಂತಹ ಸಾಮಾನ್ಯ ಮಾದಕ ದ್ರವ್ಯ ಬಳಕೆಗೂ ಅನುಮತಿ ಇದೆ. ದಯಾಮರಣವೂ ಸಕ್ರಮವೇ. ವಿಶೇಷವಾಗಿ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೂ ಸರ್ಕಾರ ಪ್ರಾಶಸ್ತ್ಯ ನೀಡಿದೆ.

(ನೆದರ್‌ಲ್ಯಾಂಡ್ಸ್‌ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ ಲೇಖಕ ಅಲ್ಲಿಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT