ಸತ್ತೆ– ಸಿದ್ಧಾಂತ ಪ್ರಶ್ನಿಸುವ ಹೊಸ ಅಲೆ

ಗುರುವಾರ , ಮಾರ್ಚ್ 21, 2019
30 °C

ಸತ್ತೆ– ಸಿದ್ಧಾಂತ ಪ್ರಶ್ನಿಸುವ ಹೊಸ ಅಲೆ

Published:
Updated:
ಸತ್ತೆ– ಸಿದ್ಧಾಂತ ಪ್ರಶ್ನಿಸುವ ಹೊಸ ಅಲೆ

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಔಚಿತ್ಯ ಏನೆಂದರೆ ಎರಡು ರೀತಿಯ ಉಪಯೋಗ. ಆಯಾ ದೇಶಗಳಲ್ಲಿ ಯಾವ ಸಮಸ್ಯೆಗಳು ಉದ್ಭವಿಸುತ್ತವೆ, ಸೂಕ್ಷ್ಮ, ಸೃಜನಾತ್ಮಕ ಮನಸುಗಳು ಯಾವ ರೀತಿ ರಿಯಾಕ್ಟ್‌ ಮಾಡುತ್ತವೆ ಅಂತ ತಿಳಿಯುತ್ತದೆ. ನಾವು ಕುಂಟುನೆಪ ಕೊಟ್ಟುಕೊಂಡು ಇರುತ್ತೀವಿ. ಸೆನ್ಸಾರ್‌ ಇದೆ, ಬ್ಯೂರೊಕ್ರಸಿ ಇದೆ, ದುಡ್ಡು ಸಿಕ್ಕೋದಿಲ್ಲ, ಪ್ರೇಕ್ಷಕರು ಇಲ್ಲ, ಬಜೆಟ್‌ ಇಲ್ಲ ಅದು ಇದು ಅಂತ.

ಒಬ್ಬ ಒಳ್ಳೆ ಕ್ರಿಯೇಟಿವ್‌ ಮನಸು ಇದ್ರೆ ಹ್ಯಾಗೂ ನಿಭಾಯಿಸಬಹುದು. ಉಸಿರುಗಟ್ಟೊವಂಥ ವಾತಾವರಣ, ಸೆನ್ಸಾರ್‌ಶಿಪ್‌ ಇದ್ದಂತಹ ರಷ್ಯಾ ಮತ್ತು ಇರಾನ್‌ ದೇಶಗಳಲ್ಲೇ ಬಹಳ ಒಳ್ಳೆಯ ಸಿನಿಮಾಗಳು ಬರುತ್ತವೆ. ಅಂತಹ ವಾತಾವರಣದಲ್ಲೂ ಯಾವ್ಯಾವ ರೀತೀಲಿ ಅವರು ಅದನ್ನು ಟ್ಯಾಕಲ್‌ ಮಾಡ್ತ ಇದ್ದಾರೆ ಹೇಗೆ ಸಿನಿಮಾ ನಿರ್ಮಾಣವನ್ನು ನಿಭಾಯಿಸುತ್ತಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು. ಸ್ವಿಜರ್ಲೆಂಡಿನಲ್ಲಿ ಇತ್ತೀಚೆಗೆ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದೆ. ನಾವೇ ಪರವಾಗಿಲ್ಲ. ಆದರೆ, ಕೂಪಮಂಡೂಕಗಳಂತೆ ಇದ್ದುಬಿಟ್ಟಿರುತ್ತೇವೆ. ಯಾವ ದೇಶಗಳಲ್ಲಿ ಯಾವ ರೀತಿಯ ಸನ್ನಿವೇಶಗಳು ಉದ್ಭವಿಸ್ತಾ ಇದಾವೆ ಅದಕ್ಕೆ ಅಂತರರಾಷ್ಟ್ರೀಯ ಸಂಬಂಧ ಇದೆಯಾ ಅಂತೆಲ್ಲ ಯೋಚಿಸಬೇಕು. ಇಂಥದೆಲ್ಲ ಓದಲೂ ದೊರೆತಿರುತ್ತದೆ ಆದರೆ, ನೋಡಲು ಸಿಕ್ಕಾಗ ಸ್ಪಷ್ಟತೆ ಸಿಗುತ್ತದೆ.

ಸಿನಿಮಾ ಒಂದು ಭಾಷೆಯಾಗಿ ಬೆಳೆದಿದೆ. ಕಾಲದಿಂದ ಕಾಲಕ್ಕೆ ಅದರ ವ್ಯಾಕರಣ, ಆಕಾಂಕ್ಷೆಗಳು, ರಾಜಕೀಯ, ಫಿಲಾಸಫಿ ಎಲ್ಲ ಬದಲಾಗುತ್ತ ಇರುತ್ತದೆ. ಸಿನಿಮಾಕ್ಕಿರುವ ಒಂದು ವೈಶಿಷ್ಟ್ಯ ಅಂದರೆ ಒಳ್ಳೆಯ ಸಿನಿಮಾವೊಂದು ಇದ್ದಕ್ಕಿದ್ದಂತೆ ಒಂದು ಅಂತರರಾಷ್ಟ್ರೀಯ ಕೃತಿಯಾಗಿಬಿಡುತ್ತದೆ. ಬೇರೆ ಕಲಾಪ್ರಕಾರಗಳಿಗೆ ಸಾಮಾನ್ಯವಾಗಿ ಇಂಥ ಅನುಕೂಲ ಇರುವುದಿಲ್ಲ. ಹಾಗಾಗಿ, ನಾವು ಇಲ್ಲಿ ಸಿನಿಮಾ ಮಾಡುವಾಗಲೂ ಅಂತರರಾಷ್ಟ್ರೀಯ ನೆಲೆಯಲ್ಲಿ ಕೂಡ ಬದಲಾಗುತ್ತಿರುವ ಮೌಲ್ಯಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಿದೆ ಅಂತ ಗಮನಿಸಬೇಕು.

60ರ ದಶಕದಲ್ಲಿ ಇದ್ದಂತಹ ಸಿನಿಮಾದ ಅಪ್ರೋಚ್‌ ಬೇರೆ, 70, 80, 90ರ ದಶಕದಲ್ಲಿ ಬೇರೆಯೇ. ಮತ್ತೆ ಈಗ 2000ದ ಈಚೆಯಂತೂ ಇನ್ನೂ ಬದಲಾಗಿದೆ. ಆದರೆ ವಿಷಾದ ಏನೆಂದರೆ ನಾವು ಭಾರತದಲ್ಲಿ ಏನೂ ಹೊಸತನ್ನು ಕಂಡುಹಿಡಿಯುತ್ತಿಲ್ಲ. ಲೆನ್ಸ್‌, ವಿಶೇಷ ರೀತಿಯ ಇಮೇಜಿಂಗ್‌, ತಂತ್ರಜ್ಞಾನ ಎಲ್ಲ ಆಮದಾಗುತ್ತಿರುತ್ತದೆ. ಅದನ್ನು ಅನಾಮತ್ತಾಗಿ ತಂದು ತಂತ್ರಜ್ಞಾನ ಬಳಸುವುದನ್ನೇ ದೊಡ್ಡ ಸಾಧನೆ ಎನ್ನುವಂತೆ ಮಾಡುತ್ತಿರುತ್ತೇವೆ. ತಂತ್ರಕ್ಕೂ ಒಂದು ಫಿಲಾಸಫಿ ಇದೆ. ಅದನ್ನು ನಾವು ಹುಡುಕಿಕೊಳ್ಳಬೇಕು. ಅದನ್ನು ಯಾವ ರೀತಿ ಬಳಸಬಹುದು, ಬಳಸಲೇಬೇಕೆ ಎನ್ನುವುದನ್ನೂ ಯೋಚನೆ ಮಾಡುವುದಿಲ್ಲ. ಇಲ್ಲಿಗೆ ಒಗ್ಗಿಸಿಕೊಳ್ಳುವಾಗ ನಮ್ಮ ಸಂಸ್ಕೃತಿ, ಸಿನಿಮಾ ಸಂಸ್ಕೃತಿ, ಸಾಹಿತ್ಯ ಏನು ಹೇಳುತ್ತದೆ, ಸಾಮಾಜಿಕ ಚಳವಳಿಗಳು ಈ ವಿಷಯವನ್ನು ಯಾವ ರೀತಿ ನೋಡುತ್ತಾ ಇವೆ ಅಂತನೂ ನೋಡಿಕೊಂಡಾಗ ಮಾತ್ರ ಅದೊಂದು ನುಡಿಗಟ್ಟು ಆಗುತ್ತದೆ. ತಂತ್ರಜ್ಞಾನವನ್ನು ಒಂದು ಈಡಿಯಮ್‌ ಆಗಿಸುವುದು ನಿಜವಾದ ಸವಾಲು. ಹೆಚ್ಚಿನ ಸಿನಿಮಾಗಳಲ್ಲಿ ತಂತ್ರಜ್ಞಾನ ತಂತ್ರಜ್ಞಾನವಾಗಿಯಷ್ಟೇ ಉಳಿದುಬಿಟ್ಟಿರುತ್ತದೆ. ಆಗ ಹಾಲಿವುಡ್‌ನಲ್ಲಿರುವುದೇ ಬಾಲಿವುಡ್‌ನಲ್ಲಿರುತ್ತದೆ. ಮತ್ತೆ ಕನ್ನಡ ಸಿನಿಮಾಗಳಲ್ಲೂ ಅದೇ ಇರುತ್ತದೆ. ಹಾಗಾಗಬಾರದು.

ಎಷ್ಟೋ ಸಲ ನನಗನಿಸುತ್ತದೆ ಒಂದು ಆಫ್ರಿಕನ್‌ ರಾಷ್ಟ್ರ, ಲ್ಯಾಟಿನ್‌ ಅಮೆರಿಕನ್‌, ಯುರೋಪಿಯನ್‌ನ ಛಿದ್ರಗೊಂಡ ಸಣ್ಣ ಭಾಗಗಳ ಬಗ್ಗೆ ತಿಳಿದುಕೊಂಡರೆ, ಒಂದು ಹೊಸ ಅರಿವು ಮೂಡುತ್ತದೆ. ಆಗ ನಾವು ನಮ್ಮದೇ ಹಿತ್ತಲಿನಿಂದ ಹೆಕ್ಕಿ ಏನಾದರೂ ಹುಡುಕಬಹುದು.

ಈ ವರ್ಷ ಚಿತ್ರೋತ್ಸವದಲ್ಲಿ ಒಂದು ದೊಡ್ಡ ಸಂವಾದ ಏರ್ಪಟ್ಟಿದೆ. ಸೌಂಡ್‌ನ ಸಾಧ್ಯತೆ, ದೃಶ್ಯಗಳು, ಸಂಕಲನದ ಸಾಧ್ಯತೆಯನ್ನೆಲ್ಲ ನರೇಶನ್‌ನ ಭಾಗವಾಗೇ ನೋಡುತ್ತಿರುತ್ತೇವೆ. ಅದಕ್ಕೆ ಇರುವ ಪ್ರತ್ಯೇಕ ಐಡೆಂಟಿಟಿಯನ್ನು ನೋಡುವುದಿಲ್ಲ. ಇಡಿಯ ಚಿತ್ರವನ್ನು ಒಂದು ಈಡಿಯಮ್‌ ಆಗಿ ನೋಡುವ ಹಾಗಾಗದಿದ್ದರೆ ಸಿನಿಮಾ ಕಲೆ ಆಗುವುದಿಲ್ಲ. ಸಿನಿಮಾ ಕತೆ ಆಗುತ್ತದೆ. ಎಲ್ಲರೂ ಕತೆ ಹೇಳುವುದು ಅಷ್ಟೇ. ಕತೆ ಹೇಳುವುದು ಸಿನಿಮಾದಲ್ಲಿನ ಒಂದು ಅಂಶ ಅಷ್ಟೆ. ಸಿನಿಮಾ ನಿರ್ಮಾಣದ ದರ್ಶನ, ಒಂದು ವಿಷನ್‌ ಅಂತ ಏನು ಹೇಳ್ತೀವಿ ಅದು ಆಗುವುದಿಲ್ಲ. ಎಲ್ಲ ಅಂಶಗಳ ಆಳವಾದ ಜ್ಞಾನವೇ ಬೇಕು ಅಂತಲ್ಲ, ಆದರೆ ಅವುಗಳನ್ನು ಹೇಗೆ ಬಳಸಬಹುದು ಎಂಬ ಎಚ್ಚರ ಬಹಳ ಮುಖ್ಯ.

ಕಲಾತ್ಮಕ ಚಿತ್ರ ಅಂತ ನಾನು ಕರೆಯುವುದಿಲ್ಲ. ಮುಖ್ಯವಾಹಿನಿಯಿಂದ ಕವಲೊಡೆದ ಸಿನಿಮಾಗಳು ಅನ್ನಬಹುದು. ಅವು ಗಟ್ಟಿಯಾದ ಗ್ರಹಿಕೆಗಳನ್ನೆಲ್ಲ ಪ್ರಶ್ನೆ ಮಾಡುತ್ತವೆ. ವಿರೋಧಿಸುವುದಿಲ್ಲ. ನಾವು ಯಾವುದನ್ನು ಇದೇ ಸತ್ಯ ಅಂತ ತಿಳಿದುಕೊಂಡಿರುತ್ತೇವೊ ಅದು ಹಾಗೆ ಇಲ್ಲದೆ ಇರಬಹುದು ಎಂಬ ಯೋಚನೆ ಮೂಡಿಸುತ್ತವೆ. ಆದರೆ ಜನಪ್ರಿಯ ಸಿನಿಮಾಗಳು ಯಾವತ್ತೂ ನಮ್ಮ ನಂಬಿಕೆಗಳನ್ನು ದೃಢಪಡಿಸುತ್ತವೆ. ಹಾಗಾಗಿ ಆ ಸಿನಿಮಾಗಳ ಯಾವ ವಸ್ತುವಿಷಯವೂ ಪ್ರಶ್ನಿಸುವ ಥೀಮ್‌ ಆಗಿರುವುದಿಲ್ಲ. ಏನೆಂದರೆ ಹೆಚ್ಚಿನ ಮುಖ್ಯವಾಹಿನಿಯ ಸಿನಿಮಾಗಳು ಸತ್ತೆ ಏನು ಹೇಳುತ್ತದೊ ಡಾಮಿನೆಂಟ್‌ ಐಡಿಯಾಲಜಿ ಏನು ಹೇಳುತ್ತದೊ ಅದನ್ನೇ ಹೇಳುತ್ತಿರುತ್ತವೆ.

ಯಾವ ಪಕ್ಷದ ಘೋಷಣೆ ಪ್ರಣಾಳಿಕೆ ಇರುತ್ತದೊ ಅದನ್ನ ನೇರವಾಗಿ ಅಲ್ಲ, ಆದರೆ ಅದಕ್ಕೆ ಪೂರಕವಾಗಿ ಧ್ವನಿಗೂಡಿಸುತ್ತವೆ. ಅದು ಮುಖ್ಯವಾಹಿನಿಯ ಸಿನಿಮಾ ಗುಣ. ಇದಕ್ಕೆ ತದ್ವಿರುದ್ಧವಾಗಿ ಪರ್ಯಾಯ ಸಿನಿಮಾಗಳು ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಹಾಗಾಗೇ ಪರ್ಯಾಯ ಚಿತ್ರಗಳನ್ನು ನಿರ್ಮಿಸುವವರು ಸತ್ತೆಯ ಪರ ಯಾವತ್ತೂ ಇರುವುದಿಲ್ಲ. ವಿರೋಧ ಪಕ್ಷದ ಪರವಾಗೂ ಇರುವುದಿಲ್ಲ. ಎರಡರ ನಡುವೆ ಎಲ್ಲೋ ಒಂದು ಕಡೆ ಸರಿಯಾದುದರ ಹುಡುಕಾಟ ನಡೆಸುತ್ತಿರುತ್ತೇವೆ. ಒಂದು ರೀತಿ ನಿಮ್ಮೊಳಗಿದ್ದೂ ನಿಮ್ಮಂತಾಗದೆ ಉಳಿದುಬಿಡುವವರು. ಹಾಗಾಗಿ ಒಂದು ಒಳ್ಳೆಯ ಸಿನಿಮಾ ಒಳ್ಳೆಯ ಕಲೆ ನಮ್ಮ ಪೂರ್ವ ನಿರ್ಧಾರಿತ ನಂಬಿಕೆಗಳನ್ನು ಇನ್ನೊಮ್ಮೆ ಒರೆಗೆ ಹಚ್ಚುವ ಕೆಲಸ ಮಾಡುತ್ತದೆ. ತಪ್ಪು ಇರಬಹುದು, ಸರಿ ಇರಬಹುದು ಒಟ್ಟಾರೆ ಸ್ಪಷ್ಟತೆ ಕೊಡುತ್ತದೆ. ವಾಸ್ತವದಲ್ಲಿ ಇಂದು ಒಂದು ಘಟನೆ ನಡೆಯುತ್ತದೆ ಅಂತಿಟ್ಟುಕೊಳ್ಳಿ. ಅದಕ್ಕೆ ಪೂರಕವಾಗಿ ತಿಂಗಳ ನಂತರ ಇನ್ನೊಂದು ಘಟನೆ ನಡೆಯುತ್ತದೆ.

ಒಂದೆರಡು ತಿಂಗಳು ಬಿಟ್ಟು ಇನ್ನೂ ಒಂದು ಘಟನೆ ನಡೆಯುತ್ತದೆ. ಆರು ತಿಂಗಳ ನಂತರ ಮತ್ತೇನೊ ನಡೆಯುತ್ತದೆ. ನಾವು ಇವುಗಳ ನಡುವಿನ ಎಳೆಯನ್ನು ಗುರುತಿಸುವ ಆ ದೃಷ್ಟಿಕೋನವನ್ನು ಕಳೆದುಕೊಂಡು ಬಿಟ್ಟಿರುತ್ತೇವೆ. ಆದರೆ, ಎರಡು ಮೂರು ವರ್ಷ ಹೀಗೆ ನಡೆದಿರುವುದನ್ನು ಸಹ ಕಲೆ ಎರಡು ಮೂರು ಗಂಟೆಗಳಲ್ಲೇ ಅದನ್ನು ಹಿಡಿದಿಡುತ್ತದೆ. ನೂರಿಪ್ಪತ್ತು ಪುಟಗಳಲ್ಲೇ ಅದನ್ನು ತೋರಿಸುವ ಮೂಲಕ ಅದರ ನಡುವೆ ಇರುವ ಅಂತರ್‌ಸಂಬಂಧದ ಬಗ್ಗೆ ಸ್ಪಷ್ಟತೆ ಒದಗಿಸುತ್ತದೆ. ಅದಕ್ಕೆ ಉತ್ತರವನ್ನು ನೋಡುಗರು, ಓದುಗರು ಕಂಡುಕೊಳ್ಳಬೇಕು. ಯಾವಾಗ ಆ ಉತ್ತರವನ್ನು ನೇರವಾಗಿ ಹೇಳಲು ಶುರು ಮಾಡುತ್ತೇವೊ ಆಗ ಅದು ಫ್ಯಾಸಿಸ್ಟ್‌ ಆಗುತ್ತದೆ. ನಾನು ಸತ್ಯ ಹೇಳುವಾಗಲೂ ಕೂಡ ಒಂದು ಅನುಮಾನದಲ್ಲೇ ಹೇಳಿರುತ್ತೇನೆ. ಇದು ಇರಬಹುದು ಎನ್ನುವ ಒಂದು ರೀತಿಯ ಸಂವಾದಕ್ಕೆ ಎಳೆಯುತ್ತಿರುತ್ತವೆ ಈ ಸಿನಿಮೋತ್ಸವಗಳು.

ಬಹಳ ಮುಖ್ಯವಾಗಿ ಆಗಬೇಕಿರುವುದು ಏನೆಂದರೆ ನಾವು ಪ್ರಶ್ನೆ ಮಾಡುವ ಮತ್ತು ವಾದ ಮಾಡುವ ವಾತಾವರಣ ಸೃಷ್ಟಿಸಬೇಕಿದೆ. ವಾದಕ್ಕಾಗೇ ವಾದ ಮಾಡುವುದಾದರೂ ಅದು ಒಳ್ಳೆಯದೇ. ಆಗಲೂ ವಿಷಯಗಳು ಹೊರಗೆ ಬರುತ್ತವೆ. ಇಲ್ಲಾ, ಒಪ್ಪಿಯೂ ಒಪ್ಪದೇ ಇರುವ ಹಾಗೆ ಮಾಡುವುದರಲ್ಲೂ ಅರ್ಥವಿರುತ್ತದೆ. ಒಪ್ಪಿದರೂ ಕೂಡ ಪೂರ್ಣವಾಗಿ ಒಪ್ಪದೇ ಅದನ್ನು ಇನ್ನಷ್ಟು ಬೆಳೆಸಿದಾಗ ಅದರಲ್ಲಿ ಮತ್ತಷ್ಟು ಪದರಗಳು ಕಾಣುತ್ತವೆ. ಹಾಗಾಗಿ ಒಪ್ಪಿಯೂ, ಒಪ್ಪದೆಯೂ, ವಿರೋಧಿಸುತ್ತಲೂ ವಾಗ್ವಾದ ಮಾಡುತ್ತಿರುತ್ತೇವೆ. ಅದು ಮುಖ್ಯವಾಗುತ್ತದೆ. ಪರ್ಯಾಯ ಸಿನಿಮಾ ಹೇಳುವುದನ್ನೆಲ್ಲ ಒಪ್ಪಬೇಕೆಂದೇನೂ ಇಲ್ಲ. ಆದರೆ, ಜನಪ್ರಿಯ ಸಿನಿಮಾಗಳಲ್ಲಿ ಕೆಲವೊಮ್ಮೆ ಸುಳ್ಳು ಹೇಳಿಯೂ ರಂಜನೀಯಗೊಳಿಸುತ್ತಾರೆ. ಹಾಡು, ಕುಣಿತ ಸಿನಿಮಾಗಳಲ್ಲಿ ಇದ್ದರೆ ಆಕ್ಷೇಪವೇನೂ ಇಲ್ಲ. ಸಿನಿಮಾದ ಫಾರ್ಮ್ಯಾಟ್‌ ನಮಗೆ ಸಮಸ್ಯೆಯೇ ಅಲ್ಲ. ಎಲ್ಲವನ್ನೂ ಒಂದು ರೀತಿಯಲ್ಲಿ ಮಾದರಿ ಮಾಡುವ ಮೂಲಕ ಸಮಸ್ಯೆಯನ್ನು ಸರಳಗೊಳಿಸ್ತಾರೆ. ಈ ಐಡಿಯಲ್‌ ಮಾಡುವುದೇ ಸಮಸ್ಯೆ. ವಾಸ್ತವ ಮಾಡುವುದೆಂದರೆ ಅದು ಬರಿಯ ಒಂದು ಸಾಧನ (tool) ಅಲ್ಲ. ಬರಿಯ ಮೇಲು ಮೇಲಿನ ಪದರವಲ್ಲ. ಸಿನಿಮಾದ ಆತ್ಮವೇ ಅದು.

ಮದುವೆ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಹೇಳುವ ಸುಲಭವಾದ ನಿರ್ಧಾರಗಳಿವೆಯಲ್ಲ, ಅದು ಸರಿಯಲ್ಲ. ಮದುವೆ ಒಳ್ಳೆಯದು ಅನ್ನುವಾಗಲೂ ಅದರಲ್ಲಿ ಸಮಸ್ಯೆ ಇದೆ, ಕೆಟ್ಟದ್ದು ಅನ್ನುವಾಗಲೂ ಅದರಲ್ಲಿ ಒಳ್ಳೆಯತನ ಇದೆ. ಈ ತರಹದ್ದನ್ನು ನೋಡುವಾಗ ಸಮಸ್ಯೆ ಇದೆ. ಈ ತರಹದ ಗ್ರಹಿಕೆಯನ್ನು ಗಮನಿಸಲು ಸಾಧ್ಯವಾಗದೇ ಹೋದರೆ ನಾವು ಉಪದೇಶಾತ್ಮಕವಾಗಿ ಇದ್ದುಬಿಡುತ್ತೇವೆ. ಸಿನಿಮಾ ಭೋದಪ್ರದವಾಗುವುದನ್ನು ನಾನಂತೂ ಸ್ವೀಕರಿಸುವುದಿಲ್ಲ. ವಿಚಾರಪ್ರದವಾಗಿರಬೇಕು ಸಿನಿಮಾ.

ಖಂಡಿತ ಇಂತಹ ಸಿನಿಮಾಗಳ ಅವಶ್ಯಕತೆ ಸಮಾಜಕ್ಕೆ ಇದೆ. ಆದರೆ, ಯಾವತ್ತೂ ಅದು ಸತ್ತೆಗೆ ಬೇಕಾಗಿಲ್ಲ. ಪರ್ಯಾಯ ಸಿನಿಮಾ ಮಗ್ಗುಲುಮುಳ್ಳು. ಚಿವುಟಲು ಎಂದೂ ಪ್ರಯತ್ನ ನಡೆದಿರುತ್ತದೆ. ತುಂಬ ಡೆಮಾಕ್ರಟಿಕ್‌ ಆಗಿದ್ದಾಗ ಮಾತ್ರ ಟೀಕೆ, ವಿಮರ್ಶೆಯನ್ನೂ ಸ್ವೀಕರಿಸಲು ಸಾಧ್ಯವಾದಾಗ ಮಾತ್ರ ಪರ್ಯಾಯ ಸಿನಿಮಾಗಳ ಮೂಲಕ ಅಭಿವ್ಯಕ್ತಿ ಸಾಧ್ಯವಾಗುತ್ತದೆ.

ಈಗ ಕನ್ನಡದಲ್ಲಿ ಹೊಸ ಅಲೆ ಅಂತ ಏನು ಹೇಳ್ತಾ ಇದ್ದಾರೆ ಅದು ನಿಜವಾಗಿ ಹೊಸ ಅಲೆ ಅಲ್ಲ. ಹೊಸ ಅಲೆಯನ್ನೂ ಒಂದು ಸಿದ್ಧಾಂತಕ್ಕೆ ಒಳಪಡಿಸಲು ನೋಡುತ್ತಾರೆ. ಸಿನಿಮಾ ಕಲೆಯ ಉದ್ದೇಶದ ಅರಿವು ಮತ್ತು ಗ್ರಹಿಕೆ ಬಹಳ ಕಡಿಮೆ ಇರುವ ಕಾರಣ ಒಂದಷ್ಟು ಮೇಲುಮೇಲಿನ ಅಂಶಗಳನ್ನಿಟ್ಟುಕೊಂಡು ಜನರಲೈಸ್‌ ಮಾಡಿಬಿಡುತ್ತಾರೆ. ನಟರನ್ನು ಬಳಸಬಾರದು, ಹಾಡು ಇರಬಾರದು, ಸಂಗೀತ, ಕುಣಿತ ಇರಬಾರದು ಮೌನ ಇರಬೇಕು. ಇದೆಲ್ಲ ಅಲ್ಲ, ಅವೆಲ್ಲ ಹೊರಗಿನ ಅಂಶಗಳು. ಸಮಸ್ಯೆ ಜನಪ್ರಿಯ ಸಿನಿಮಾಗಳಲ್ಲಿ ಅದರ ಫಾರ್ಮ್ಯಾಟ್‌ ಅಲ್ಲ, ಆ ನಟನೆಯನ್ನು ಒಪ್ಪದೇ ಇರಬಹುದು. ಆದರೆ, ಇದೂ ಒಂದು ಪ್ರಕಾರ ಅನ್ನುವುದನ್ನು ಒಪ್ಪುತ್ತೇನೆ. ಸಮಸ್ಯೆ ಇರುವುದು ಅದರ ರಾಜಕೀಯ ಮತ್ತು ಫಿಲಾಸಫಿಯಲ್ಲಿ. ಅದು ಯಾವಾಗಲೂ ಸತ್ತೆ ಹೇಳುವುದನ್ನು ಒಪ್ಪುತ್ತದೆ. ಇಲ್ಲವೇ ಪ್ರಭಾವೀ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತದೆ. ಅದನ್ನು ಪ್ರಶ್ನಿಸಬೇಕು. ಅದು ಹೊಸ ಅಲೆ ಸಿನಿಮಾ. ಆದರೆ ಹೊಸ ಅಲೆ ಇಂತಹ ಸಿನಿಮಾದಿಂದ ಆರಂಭವಾಗಿದೆ ಅಂದರೆ? ಅದರ ಹಿನ್ನೆಲೆಯಲ್ಲಿ ಎಷ್ಟೋ ಸಮಯ ಅದಕ್ಕೆ ನೀರು, ಗೊಬ್ಬರದ ಪೋಷಣೆ ಒದಗಿರುತ್ತದೆ. ನಂತರ ಈ ಹೂ ಅರಳಿರುತ್ತದೆ.

ಕಥೆ ಹೇಳುವುದಲ್ಲ, ತೋರಿಸಬೇಕು. ಕಥೆ ಹೇಳದೇ ತೋರಿಸುವಾಗ ನೋಡುವವರೇ ಆವಿಷ್ಕಾರ ಮಾಡಿಕೊಳ್ಳಲಿ ಎಂಬ ನಿರೀಕ್ಷೆ ಇರುತ್ತದೆ. ಪ್ರೇಕ್ಷಕರೇ ಒಳಹೊಕ್ಕು ನೋಡದಿದ್ದರೆ ಅವರು ಬರೀ ಸ್ವೀಕರಿಸುವ ತುದಿ ಆಗಿಬಿಡುತ್ತಾರೆ. ಸಿನಿಮಾದ ಗತಿ ಮತ್ತು ಸಿನಿಮಾ ಕಟ್ಟುವ ಕ್ರಮ ಅರ್ಥವಾಗಲು ಅದರಲ್ಲಿ ನಾವು ಪ್ರೇಕ್ಷಕರು ಹೇಗೆ ಪಾಲ್ಗೊಳ್ಳುತ್ತೇವೆ ಎಂಬುದು ಮುಖ್ಯ. ಸಿನಿಮಾದಲ್ಲಿ ಕಾಲವನ್ನು ದುಡಿಸಿಕೊಳ್ಳುವ ರೀತಿಯಲ್ಲಿ ಅದರ ಪರಿಣಾಮ ಮೂಡುತ್ತದೆ. ಸಿನಿಮಾ ನಿಧಾನಗತಿಯಲ್ಲಿದೆ ಎಂದರೆ ಪ್ರೇಕ್ಷಕರು ತಾವೇ ಯೋಚಿಸುವಷ್ಟು ವ್ಯವಧಾನಕ್ಕೆ ಅವಕಾಶ ಇರುತ್ತದೆ. ಪ್ರೇಕ್ಷಕ ಭಾವತೀವ್ರತೆಯಲ್ಲಿ ಕೊಚ್ಚಿ ಕೊಂಡು ಹೋಗುವಂತೆ ಮಾಡಬೇಕು ಅಂತ ಜನಪ್ರಿಯ ಸಿನಿಮಾ ಹೇಳುತ್ತದೆ. ಆದರೆ, ಪರ್ಯಾಯ ಸಿನಿಮಾ ಭಾವತೀವ್ರತೆಯಲ್ಲಿ ಕೊಚ್ಚಿಹೋಗದೇ ಹೊರಗೆ ನಿಂತು ವಸ್ತುವನ್ನು ನಿರುಕಿಸಲು ಹೇಳುತ್ತದೆ. ಹತ್ತಾರು ಸಿನಿಮೋತ್ಸವಗಳಲ್ಲಿ ನಿರ್ಣಾಯಕನಾಗಿ ಹೋಗಿದ್ದೇನೆ, ಆದರೆ, ಅಂತರರಾಷ್ಟ್ರೀಯ ಮಟ್ಟದ ಸಿನಿಮಾಗಳಲ್ಲೇ ಗುಣಮಟ್ಟ ಕುಸಿಯುತ್ತಿದೆಯೇನೊ ಎಂಬ ಭಯ

ಆವರಿಸುತ್ತಿದೆ.

ಶಿಸ್ತಿನ ಕಲಿಕೆ ಲಭ್ಯ

ಜನಪ್ರಿಯ ಮತ್ತು ಕಲಾತ್ಮಕ ಸಿನಿಮಾಗಳು ಪರ್ಯಾಯ ಸಿನಿಮಾ ಅನ್ನುವುದಕ್ಕಿಂತ ನಾನು ಒಂದು ಉತ್ತಮ ಸಿನಿಮಾ ಅಂತ ನೋಡುತ್ತೇನೆ. ಯುವಜನರು, ಯುವ ನಿರ್ದೇಶಕರು ಸಿನಿಮಾ ಕ್ಷೇತ್ರಕ್ಕೆ ಬರಲು ಬಯಸುವವರಿಗೆ ಈ ತರಹದ ಸಿನಿಮೋತ್ಸವಗಳು ಬಹಳ ಮುಖ್ಯ. ಇಲ್ಲಿ ಒಂದು ಶಿಸ್ತಿನ ಕಲಿಕೆ ಒದಗುತ್ತದೆ.

ಈಗಿನ ಟ್ರೆಂಡ್‌ ಅರ್ಥವಾಗುತ್ತದೆ. ಸಾಮಾಜಿಕ ಸನ್ನಿವೇಶಗಳಿಗೆ ಸಿನಿಮಾ ಮೂಲಕ ಹೇಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು. ನಿಲುಕಿದಷ್ಟು ಗ್ರಹಿಸಬೇಕು.

ನಾನಂತೂ ಒಟ್ಟಾರೆ ಸಿನಿಮಾದ ಅನುಭವಕ್ಕೆ ಕಾದಿರುತ್ತೇನೆ. ಕ್ಯಾಮೆರಾ ಕೋನ, ಬೆಳಕಿನ ಸಂಯೋಜನೆ ಇತ್ಯಾದಿ ಎಲ್ಲವೂ ಸೇರಿ ಸಿನಿಮಾ ಹೇಗಿದೆ, ಕಥೆಯನ್ನು ಹೇಗೆ ಟ್ರೀಟ್‌ ಮಾಡುತ್ತಾರೆ ಎಂದು ನೋಡುವ ಅನುಭವ ನನ್ನ ಆದ್ಯತೆ.

–ಅನನ್ಯಾ ಕಾಸರವಳ್ಳಿ, ಯುವ ನಿರ್ದೇಶಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry