ಚಿತ್ರೋತ್ಸವದ ರುಚಿಯ ಹದ

ಗುರುವಾರ , ಮಾರ್ಚ್ 21, 2019
32 °C

ಚಿತ್ರೋತ್ಸವದ ರುಚಿಯ ಹದ

Published:
Updated:
ಚಿತ್ರೋತ್ಸವದ ರುಚಿಯ ಹದ

ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಬೇರೆ ಬೇರೆ ದೇಶದ ಸಿನಿಮಾಗಳ ಪ್ರದರ್ಶನ ಇರುತ್ತದೆ. ಈ ಚಿತ್ರಗಳು ಅಲ್ಲಿನ ಭಾಷೆ, ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡ ಸಿನಿಮಾಗಳು ಕೂಡ ಇಂತಹ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಳ್ಳುವುದು ಉಂಟು. ಆದರೆ, ಸ್ಥಳೀಯವಾಗಿ ಹಿಟ್‌ ಆದ ಚಿತ್ರಗಳು ಅಲ್ಲಿಗೆ ಹೋಗಿರುವುದಿಲ್ಲ.

ಹಿಟ್‌ ಆಗಬೇಕೆಂದು ಸಿನಿಮಾ ಮಾಡುವುದಕ್ಕೂ ಮತ್ತು ಸಿನಿಮಾ ಮಾಡುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಹಿಟ್‌ ಆಗುವ ಸಿನಿಮಾಗಳಲ್ಲಿ ಜನರಿಗೆ ಇಷ್ಟವಾಗುವ ಅಂಶಗಳಷ್ಟೇ ಮೇಳೈಸಿರುತ್ತವೆ. ಇಂತಹ ಚಿತ್ರಗಳಲ್ಲಿ ಜನರಿಗೆ ಪ್ರಿಯವಾಗುವ ಅಂಶಗಳನ್ನೇ ಪದೇ ‍ಪದೇ ತೋರಿಸುವುದು ಸರ್ವೇಸಾಮಾನ್ಯ. ಇಲ್ಲಿ ಲಾಭದಾಯಕ ಉದ್ದೇಶವಷ್ಟೇ ಇರುತ್ತದೆ.

ಸಿನಿಮಾವನ್ನು ಕಲೆಯಾಗಿ ಯೋಚಿಸಿ ಕಥೆ ಹೇಳುವುದು ಭಿನ್ನ ಮಾರ್ಗ. ಇದನ್ನು ಪ್ರೇಕ್ಷಕರಿಗೆ ತೋರಿಸುವುದು ನಿರ್ದೇಶಕನ ಹೊಣೆ. ಎಲ್ಲ ಭಾಷೆಗಳಲ್ಲೂ ಕಲಾತ್ಮಕ ಚಿತ್ರಗಳ ನಿರ್ಮಾಣ ಮತ್ತು ಪ್ರದರ್ಶನ ನಡೆಯುತ್ತಿರುತ್ತದೆ. ಬೆಂಗಳೂರು ಸಿನಿಮೋತ್ಸವದಲ್ಲಿ ಹಿಬ್ರೂ ಭಾಷೆಯ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿತ್ತು. ಈ ಭಾಷೆಯ ಎಲ್ಲ ಚಿತ್ರಗಳು ಚೆನ್ನಾಗಿರುತ್ತವೆ ಎಂದು ಹೇಳಲಾಗುವುದಿಲ್ಲ.

ಕಲಾತ್ಮಕ ಚಿತ್ರಗಳು ಮತ್ತು ಪ್ರತಿವಾರ ಬಿಡುಗಡೆಯಾಗುವ ಸಿನಿಮಾಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ರೆಗ್ಯುಲರ್‌ ಚಿತ್ರಗಳು ಫಾಸ್ಟ್‌ಫುಡ್‌ ಇದ್ದಂತೆ. ಈ ಪದಾರ್ಥ ತಿಂದಾಗ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ರುಚಿ ಚೆನ್ನಾಗಿದೆ ಅನಿಸುತ್ತದೆ. ಆದರೆ, ಇದು ಪೌಷ್ಟಿಕ ಆಹಾರ ಅನಿಸುವುದಿಲ್ಲ. ಕಮರ್ಷಿಯಲ್‌ ಸಿನಿಮಾಗಳ ದೃಶ್ಯಗಳು ಮನದಲ್ಲಿ ಉಳಿಯುವುದಿಲ್ಲ.

ನಿರ್ದೇಶಕ ಯೋಚನೆ ಮಾಡಿ ಕಲಾತ್ಮಕ ಚಿತ್ರಗಳನ್ನು ನಿರ್ದೇಶನ ಮಾಡಿರುತ್ತಾನೆ. ಪ್ರತಿಯೊಂದು ದೃಶ್ಯವನ್ನು ಮೌಲ್ಯಯುತವಾಗಿ ಚಿತ್ರೀಕರಿಸಿರುತ್ತಾನೆ. ನೋಡಿದ ತಕ್ಷಣ ಆ ದೃಶ್ಯಗಳು ಮನದಲ್ಲಿ ಅಚ್ಚಾಗುತ್ತವೆ. ಇಂತಹ ಚಿತ್ರಗಳು ತುಂಬಾ ನಿಧಾನ ಎನ್ನುವುದು ಬಹಳಷ್ಟು ಪ್ರೇಕ್ಷಕರ ಅನಿಸಿಕೆ. ಚಿತ್ರ  ಬೋರ್‌ ಅನಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಆದರೆ, ಇಂತಹ ಸಿನಿಮಾ ನೋಡಲು ತಾಳ್ಮೆ ಬೇಕು. 

ಸಾಮಾನ್ಯ ನೋಡುಗರಿಗೆ ಕಲಾತ್ಮಕ ಚಿತ್ರಗಳನ್ನು ತಾಳ್ಮೆಯಿಂದ ನೋಡುವ ವ್ಯವಧಾನ ಇರುವುದಿಲ್ಲ. ಈ ಚಿತ್ರಗಳನ್ನು ವರ್ಷಗಟ್ಟಲೆ ಕಲಿತು ನಿರ್ದೇಶಕ ಮಾಡಿರುತ್ತಾನೆ. ಯಾವತ್ತೊ ಒಂದು ದಿನ ಚಿತ್ರಗಳ ದೃಶ್ಯಗಳು ನೆನಪಿಗೆ ಬಂದು ಕಾಡುತ್ತವೆ. ಬೇರೆ ಬೇರೆ ಅನುಭವ ಖುಷಿ ಕೊಡುತ್ತದೆ.

ಕಲಾತ್ಮಕ ಚಿತ್ರ ಮತ್ತು ಸಾಮಾನ್ಯ ಚಿತ್ರಗಳ ನಡುವೆ ಧನಾತ್ಮಕ ಮತ್ತು ನಕಾರಾತ್ಮಕ ಅಂಶಗಳಿವೆ. ಎರಡೂ ವಿಧದ ಸಿನಿಮಾಗಳು ಬೇಕು. ಜನರು ಒತ್ತಡ ಮರೆಯಲು ಮುಖ್ಯವಾಹಿನಿಯ ಸಿನಿಮಾ ನೋಡುವುದು ವಾಡಿಕೆ. ಹಣ ಕೊಟ್ಟು ಎರಡು ಗಂಟೆ ಕಾಲ ಚಿತ್ರ ವೀಕ್ಷಿಸಿ ಖುಷಿ ಪಡುತ್ತಾರೆ.

ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ದಿನಕ್ಕೆ ಐದು ಸಿನಿಮಾ ನೋಡುತ್ತೇವೆ. ವರ್ಷಕ್ಕೊಮ್ಮೆ ನೋಡುವುದು. ವಾರಕ್ಕೊಮ್ಮೆ ನೋಡುವುದು ಬೇರೆ. ನಾವಿಲ್ಲಿ ಮನುಷ್ಯತ್ವ, ಪ್ರೀತಿ, ದುರಂತದ ಅನುಭವವನ್ನು ನೋಡುತ್ತೇವೆ. ಬೇರೆ ಬೇರೆ ದೇಶಗಳಲ್ಲಿನ ಚಿತ್ರಣವೂ ಇದಕ್ಕಿಂತ ಭಿನ್ನವೇನಿಲ್ಲ. ಬೌದ್ಧಿಕ ವಿಕಸನಕ್ಕೆ ಇಂತಹ ಸಿನಿಮಾಗಳನ್ನು ನೋಡಬೇಕು. ಅಲ್ಲಿನ ಸಂಸ್ಕೃತಿ ಕಾಣಿಸಿರುತ್ತದೆ. ವರ್ಷಕ್ಕೊಮ್ಮೆ ಇಂತಹ ಸಿನಿಮಾ ನೋಡಿದರೆ ಅವರ ಯೋಚನಾ ಕ್ರಮವೂ ಬದಲಾಗುತ್ತದೆ.

ಎಲ್ಲರನ್ನೂ ಇಂತಹ ಸಿನಿಮೋತ್ಸದತ್ತ ಸೆಳೆಯುವುದು ತುಸು ಕಷ್ಟ. ಪ್ರತಿವರ್ಷ ಸಿನಿಮೋತ್ಸವ ಸಂಘಟಿಸಿದರೆ ಹೊಸ ಪ್ರೇಕ್ಷಕರು ಸೇರ್ಪಡೆಯಾಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry