ಕೇಳು ಓ ನನ್ನ ಹುಂಬ ಪ್ರಾಣವೇ...

7

ಕೇಳು ಓ ನನ್ನ ಹುಂಬ ಪ್ರಾಣವೇ...

Published:
Updated:
ಕೇಳು ಓ ನನ್ನ ಹುಂಬ ಪ್ರಾಣವೇ...

ತೊಟ್ಟಿರುವ ಈ ಉಡುಪನ್ನು ನಾನು ಮತ್ತೆ ತೊಡುತ್ತೇನೋ ಇಲ್ಲವೋ? ನಿಮ್ಮ ಕೈಯಲ್ಲಿರುವ ಈ ಕವಿತೆಗಳನ್ನು ನಾನು ಮತ್ತೆ ಬರೆಯುತ್ತೇನೋ ಇಲ್ಲವೋ? ಯಾವುದೋ ಬೃಂದಾವನದ ಮೆತ್ತನೆಯ ತಲ್ಪದಲ್ಲಿ ವಿರಹಿಣಿಯಂತೆ ಸೊಕ್ಕಿ ಮಲಗಿದ್ದವಳನ್ನು ಕಾರ್ಕೋಟವೊಂದು ತಣ್ಣಗೆ ತಿನ್ನುತ್ತಿರುವಂತೆ ಅನಿಸುತ್ತಿದೆ. ಈ ಲೋಕ ನನ್ನನ್ನು ಯಾವ ಈಡಿಗೆ ಒಡ್ಡುತ್ತಿದೆ? ಏನೂ ಆಗಿಲ್ಲವೆಂದು ನಂಬಿಸಿ, ಮತ್ತೆ ನಂಬಿದ್ದೂ ಭ್ರಮೆಯೆಂದು ಕಂಗಾಲು ಮಾಡುತ್ತಿರುವಂತಿದೆಯಲ್ಲಾ! ಯಾರೋ ಕಾಣದವರು ನನ್ನ ಗಲ್ಲ ಹಿಡಿದು ಈ ನಿಜಗಳನ್ನೆಲ್ಲಾ ಅರಹುತ್ತಿದ್ದಾರೆ. ಬದುಕಲು ಬೇಕಾಗಿರುವ ಭ್ರಮೆಗಳೆಲ್ಲಾ ನನ್ನನ್ನು ಸೋಲಿಸಿ ಒಣಗಿಸುತ್ತಿವೆ. ನನ್ನನ್ನು ಕೇಳದೆಯೇ ಒಂದು ದಿನ ಇಲ್ಲಿಂದ ಮೆತ್ತಗೆ ಕಳುಹಿಸುವ ಹುನ್ನಾರದಲ್ಲಿಯೂ ಇರುವಂತಿದೆ.

ನನ್ನ ಎದೆಯಲ್ಲಿ ಎಂದಿನಂತೆಯೇ ಪರಮಾತ್ಮನಂತಹವನು ಚಂದದ ಚೇಳಂತೆ ಪವಡಿಸಿದ್ದಾನೆ. ನಾನೂ ಹೀಗೆಯೇ ಇನ್ನೂ ಏನೇನೋ ಪದ್ಯಗಳನ್ನು ಬೆಳ್ಳನೆಯ ಮೋಡಗಳ ನಡುವೆ ಗುನುಗುನಿಸುತ್ತಾ ಕುಳಿತಿದ್ದೇನೆ. ಇದುವರೆಗೆ ಬರೆದದ್ದೆಲ್ಲವೂ ಬಿಳಿಯ ಹಾಳೆಯಲ್ಲಿ ಎಂದೋ ಉಗುಳಿದ ಪಿಚಕಾರಿಯಂತೆ ಕಾಣಿಸುತ್ತಿದೆಯಲ್ಲಾ! ಯಾವುದು ನಿಜ? ಎಲ್ಲೋ ಬಿದ್ದಿರುವ ನನ್ನ ಮಗಳ ಮುದ್ದು ಗೊಂಬೆಯನ್ನು ಅವಳು ಆಚೆ ಹೋದಾಗ ತಲೆ ಸವರಿ ಪುನಃ ನೆಟ್ಟಗೆ ಹಾಗೇ ಇರಿಸಿ ಅವಳು ಬಂದಾಗ ನಕ್ಕಂತೆ ಇರುವ ನನಗೆ ಯಾವುದು ನಿಜ? ಯಾವುದು ಸುಳ್ಳು? ಯಾರೋ ಗಡುವು ನೀಡುತ್ತಿರುವವರಂತೆ ಎತ್ತರದಲ್ಲಿ ಕುಳಿತಿದ್ದಾರೆ. ನಾನು ತಳದಲ್ಲಿ ನನ್ನಷ್ಟಕ್ಕೆ ಸುಮ್ಮನೆ ವಿಸ್ತರಿಸಿಕೊಳ್ಳುತ್ತಿದ್ದೇನೆ. ಒಂದು ಕಾಲದಲ್ಲಿ ಅಂತಹದ್ದೇನೂ ಬರೆಯದಿದ್ದರೂ ಬರೆದದ್ದು ಸಾಕು ಅನ್ನಿಸುತ್ತಿತ್ತು. ನಾನು ಬರೆಯಲು ಕಲಿಯುವ ಮೊದಲೇ ಇನ್ನೂ ಬರೆಯದ ಕವಿತೆಗಳು ಆಕಾಶದ ವಿಸ್ತಾರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಯಾರೂ ಹೇಳಿಕೊಡದ, ಇರುವುದನ್ನು ಇರುವ ಹಾಗೆ ನನಗೆ ಹೇಳಿಕೊಳ್ಳಲೂ ಆಗದ, ಆದರೆ ಈಗಲೂ ನನ್ನೊಳಗೆ ವಿಸ್ತರಿಸುತ್ತಲೇ ಇರುವ ಈ ಬಣ್ಣದ ರಂಗುಗಳಿಗೆ ಈಗ ಯಾರೋ ಗಡುವು ನೀಡುತ್ತಿದ್ದಾರೆ.

ನನಗಿನ್ನೂ ನೆನಪಿದೆ. ಬಹುಶಃ ಆಗ ನಾನು ತುಂಬಾ ಎಳೆಯ ಹುಡುಗಿ. ಅಮ್ಮ ಆಗ ತಾನೇ ದೀಪವಿಟ್ಟು ಹೋದ ತುಳಸಿಕಟ್ಟೆಯ ಬಳಿ ಕುಳಿತಿದ್ದೆ. ಕತ್ತಲಾಗುತ್ತಿತ್ತು. ತಲೆಕೆಟ್ಟ ಹಾಗೆ ಮೋಡಗಳು ಓಡಾಡುತ್ತ ಆಕಾಶ ಚೆಲ್ಲಾಪಿಲ್ಲಿಯಾಗುತ್ತಿತ್ತು. ಹೊಟ್ಟೆ ಉಮ್ಮಳಿಸಿದಂತಾಗಿ ಪಕ್ಕದಲ್ಲಿ ಕೂತಿದ್ದ ನಾಯಿಮರಿಯ ದೈನ್ಯದ ಕಣ್ಣುಗಳನ್ನು ನೋಡುತ್ತಾ ಅದರ ಮೈದಡವುತ್ತಿದ್ದೆ. ಅದನ್ನು ನೋಡಿ ಉಮ್ಮಳ ಇನ್ನೂ ಹೆಚ್ಚುತ್ತಿತ್ತು. ‘‘ಮಳೆ ಬರುತ್ತದೆ ಬಾ” ಎಂದು ಅಮ್ಮ ಒಳಗೆ ಕರೆಯುತ್ತಿದ್ದಳು. ಒಳಗೆ ಓಡಿ ಹಾಸಿಗೆಯ ಮೇಲೆ ಬೀಳುವಾಗ ನನ್ನೊಳಗೆ ಥೇಟು ಆಕಾಶದಂತೆಯೇ ತಳಮಳವಾಗುತ್ತಿತ್ತು. ಮನೆಯ ಒಳಗೆಲ್ಲಾ ಕತ್ತಲು. ತುಳಸಿಯ ದೀಪ ಆಗಲೇ ಆರಿ ಹೋಗಿರಬೇಕು. ಒಳಗೆ ದೇವರ ಮುಂದೆ ಮಾತ್ರ ಒಂದು ದೀಪ. ದೀಪದ ಮುಂದೆ ಭಜನೆ ಮಾಡುತ್ತಿದ್ದ ಅಮ್ಮ ಮತ್ತು ಬಳಿಯಲ್ಲಿ ನಾನು. ದೀಪದ ಬೆಳಕಲ್ಲಿ ಕಾಣುತ್ತಿದ್ದ ದೇವಿಯ ಮುಖ. ಆ ಕತ್ತಲಲ್ಲಿ ನಿರ್ಮಲ ಆಕಾಶವೊಂದು ನನಗೆ ಕಾಣಿಸಿ ಅದರ ಬೆಳಗಲ್ಲಿ ಬೃಹದಾಕಾರದ ದೈವವೊಂದು ನಗುತ್ತಿತ್ತು. ಎಲ್ಲವೂ ತಿಳಿಯಾಗುತ್ತಿತ್ತು. ‘ಒಂದು ದಿನ ಈ ದೇವರೆಂಬವನು ಯಾವುದೋ ರೂಪದಲ್ಲಿ ಬರುತ್ತಾನೆ. ಆದರೆ ನಿನಗೆ ಅದು ದೇವರೆಂದು ಗೊತ್ತಾಗುವುದಿಲ್ಲ’, ಎಂದು ಅಮ್ಮ ಹೇಳುತ್ತಿದ್ದಳು. ಯಾವುದೋ ರೂಪದಲ್ಲಿ ಅವನು ಬರುವನೆಂದು ನಂಬಿ ನಾನು ಎಷ್ಟೋ ಕಾಲ ಕಾಯುತ್ತಿದ್ದೆ. ಈಗಲೂ ಕಾಯುತ್ತಲೇ ಇರುವೆ ಅನಿಸುತ್ತಿದೆ. ನನಗೆಂದೇ ಇದ್ದ ನನ್ನದೇ ಲೋಕವದು. ಒಳಗಿನ ಮಗುವಿನ ಎಳೆಯ ಎದೆಯೊಳಗೆ ಎಷ್ಟೆಲ್ಲಾ ಲೋಕಗಳು! ಕೆಳಗಿನ ಏಳು ಪಾತಾಳಗಳು, ಮೇಲಿನ ಏಳು ಆಕಾಶಗಳು, ನಡುವಿನ ಮೋಡ ತುಂಬಿರುವ ಮುಗಿಲಿನಲ್ಲಿ ನೋಯುವ ಎದೆಯನ್ನು ಮರೆತು ಬರೆಯುವ ಖುಷಿಯನ್ನು ಅನುಭವಿಸುತ್ತಿರುವೆ. ಯಾಕೋ ಆ ಪುಟ್ಟ ಬಾಲಕಿಯಂತೆ ಮನಸ್ಸು ಮತ್ತೆ ಈಗ ಕುಣಿಯತೊಡಗಿದೆ.

ಅಪ್ಪನ ನೆನಪಾಗುತ್ತಿದೆ. ಪುಟ್ಟ ಹುಡುಗಿಗೆ ಯಕ್ಷಗಾನ ಕುಣಿತ ಕಲಿಸುತ್ತಾ ನನ್ನ ಮಾತುಗಳನ್ನು ತಿದ್ದುತ್ತಾ, ದಿನಕ್ಕೆ ನೂರು ಕಥೆ ಹೇಳಿ ನನ್ನನ್ನು ವಿಸ್ಮಯ ಲೋಕದಲ್ಲಿ ಅದ್ದಿ ಮುಳುಗಿಸುತ್ತಿದ್ದ ಅಪ್ಪನೊಟ್ಟಿಗೆ ಆ ಪುಟ್ಟ ವಯಸ್ಸಿನಲ್ಲಿ ರಂಗಸ್ಥಳವನ್ನೂ ಹತ್ತಿದ್ದೆ. ಆಗ ನನಗೆ ಎಂಟೋ ಹತ್ತೋ ವಯಸ್ಸಿರಬೇಕು. ‘ತುಳುನಾಡ ಸಿರಿ’ ಎಂಬ ಒಂದು ತುಳು ಯಕ್ಷಗಾನ ಪ್ರಸಂಗ. ನನ್ನ ಅಪ್ಪನದು ಸಿರಿಯ ಪಾತ್ರ. ನನ್ನದು ಸಿರಿಯ ಮಗ ಕುಮಾರನ ಪಾತ್ರ. ಸಣ್ಣ ಮಗುವಿಗೆ ಕಥೆಯನ್ನು ವಿವರಿಸಿ ಕುಮಾರನ ಬಾಯಲ್ಲಿ ಬರಲೇ ಬೇಕಾದ ಒಂದು ಉದ್ದದ ದೊಡ್ಡ ಮಾತನ್ನು ಅಪ್ಪ ಉರುಹೊಡೆಸಿದ್ದರು.

ಅಂದು ಎಲ್ಲೂರಿನಲ್ಲಿ ತುಳುನಾಡ ಸಿರಿ ಆಟ. ಸಂಜೆಯ ಹೊತ್ತು ಉಡುಪಿಯಿಂದ ಎಲ್ಲೂರಿಗೆ ಹೋಗುವ ಬಸ್ಸಲ್ಲಿ ನಾವಿಬ್ಬರೂ ಕೂತಿದ್ದೆವು. ಅಪ್ಪ ಹೇಳಿಕೊಟ್ಟಿದ್ದ ಅದೇ ಉದ್ದದ ಮಾತನ್ನು ಎಲ್ಲೂರು ತಲುಪುವ ತನಕ ನಾನು ಹೇಳುತ್ತಲೇ ಇದ್ದೆ. ಆ ಮುಸ್ಸಂಜೆಯ ಹೊತ್ತು ಆ ಚಂದದ ಹಳೆಯ ಬಸ್ಸು, ಬಸ್ಸಲ್ಲಿ ಕೂತು ನನ್ನನ್ನು ನೋಡುತ್ತಿದ್ದ ಜನರು, ಎಲ್ಲವೂ ಸರಿ ಇದೆ ಎಂದು ತಲೆ ಆಡಿಸುತ್ತಿದ್ದ ಅಪ್ಪ... ಅಷ್ಟರಲ್ಲಿ ಎಲ್ಲೂರು ಬಂದಿತ್ತು. ಬಸ್ಸು ಇಳಿಯುತ್ತಿದ್ದಂತೆ ಅಪ್ಪ ನನಗೊಂದು ಬ್ಯಾನರು ತೋರಿಸಿದರು. “ಕುಮಾರಿ ನಾಗಶ್ರೀಯವರಿಂದ ಕುಮಾರನ ಪಾತ್ರವನ್ನು ನೋಡಲು ಮರೆಯದಿರಿ” ಎಂದು ದೊಡ್ಡದಾಗಿ ಬರೆದಿತ್ತು. ಎಂತಹ ಪುಳಕವದು!

ಸಂಜೆ, ಎಲ್ಲೂರು ದೇವಸ್ಥಾನದ ವಿಶ್ವನಾಥನಿಗೆ ಅರ್ಧ ಸುತ್ತು ಹೊಡೆದು ತಿರುಗಿ ಪೂರ್ಣಗೊಳಿಸುವ ಮೊದಲು ತೆಂಗಿನಕಾಯಿ ಎಳನೀರು ಬಿದ್ದ ನೀರಲ್ಲಿ ಜಾರಿ ನಾನು ಏಟು ಮಾಡಿಕೊಂಡಿದ್ದೆ. ‘ದೇವರಿಗೊಂದು ಉದ್ದಂಡ ನಮಸ್ಕಾರವಾಯಿತು ಬಿಡು’, ಎಂದು ನಕ್ಕ ಅಪ್ಪ, ಕುಮಾರನ ವೇಷ ಹಾಕಲು ಕರೆದುಕೊಂಡು ಹೋದರು. ನೀಲಿ ಬಣ್ಣದ ಜರಿಯಂಚಿನ ಕಚ್ಚೆ ಉಟ್ಟು ನಾಮ ಹಾಕಿಕೊಂಡ ನನಗೆ, ತುಳುನಾಡಿನ ದೈವ ಸಿರಿಯ ಮಗ ಕುಮಾರನೇ ಮೈಹೊಕ್ಕ ಹಾಗೆ ಅನ್ನಿಸುತ್ತಿತ್ತು. ಅಪ್ಪ ಆಗಲೇ ಸಿರಿಯ ವೇಷ ಧರಿಸಿ “ಮುದ್ದೂ, ಜಾಗ್ರತೆ, ನಾನು ಹೋಗುತ್ತೇನೆ” ಎಂದು ರಂಗಸ್ಥಳಕ್ಕೆ ಹೊರಟು ಹೋಗಿದ್ದು ಕನಸಿನಲ್ಲಿ ನಡೆದುಹೋದಂತೆ ಕಾಣಿಸಿತ್ತು. ನನ್ನ ಎದೆ ಡವಗುಟ್ಟುತ್ತಿತ್ತು. ಗೆಜ್ಜೆಕಟ್ಟಿಕೊಂಡು ರಂಗಸ್ಥಳದತ್ತ ನಡೆದವಳು ಇನ್ನೊಂದು ಸಲ ಎಡವಿ ಬಿದ್ದೆ. ವೇಷಕಟ್ಟಿದ್ದವರು, “ಏಳಿ ಮಗಾ, ದೇವರಿಗೆ ಇನ್ನೊಂದು ನಮಸ್ಕಾರ ಆಯಿತು, ಹೋಗಿ ಬನ್ನಿ” ಎಂದು ಜೋರಾಗಿ ನಕ್ಕು ಮೈದಡವಿ ನನ್ನನ್ನು ಕಳುಹಿಸಿದ್ದರು. ನಾನು ರಂಗಸ್ಥಳವನ್ನು ಹತ್ತುವ ಹೊತ್ತಲ್ಲಿ ರಂಗದ ಎಡ ಭಾಗದಲ್ಲಿ ಗಾಜಿನ ಚೂರುಗಳು ಬಿದ್ದಿರುವುದನ್ನು ತನ್ನ ಕಡೆಗಣ್ಣಿಂದ ನೋಡುತ್ತಿದ್ದ ಅಪ್ಪ ಎಲ್ಲಿ ಮಗಳ ಕಾಲಿಗೆ ಗಾಜಿನ ಚೂರುಗಳು ಚುಚ್ಚುವುದೋ ಎಂದು ಅತ್ತ ಕುಣಿಯಲೂ ಆಗದೆ ಇತ್ತ ನಿಲ್ಲಿಸಲೂ ಆಗದೆ ಚಡಪಡಿಸುತ್ತಿದ್ದರಂತೆ. ಇದು ಅಪ್ಪ ನನಗೆ ಆಮೇಲೆ ಹೇಳಿದ್ದು, ಎಷ್ಟೋ ವರ್ಷಗಳ ನಂತರ. ನಾನು ಕವಿತೆಗಳನ್ನು ಬರೆಯಲು ಶುರುಮಾಡಿದ ಮೇಲೆ.

ನನಗೆ ಈಗ ನೆನಪಾಗುತ್ತಿರುವುದು ಸಿರಿಯ ಪಾತ್ರದಲ್ಲಿ ಕುಣಿಯುತ್ತಿದ್ದ ಅಪ್ಪನ ನೃತ್ಯದ ಕಾಲುಗಳು, ಮಗಳು ರಂಗಸ್ಥಳವ ಏರುವುದನ್ನು ತಾಯಿಯಂತೆ ನಿರುಕಿಸುತ್ತಿದ್ದ ಬಣ್ಣ ಹಚ್ಚಿದ್ದ ಅವರ ಕಣ್ಣುಗಳು, ಹೊರಗಿನ ಕತ್ತಲು ಮತ್ತು ರಂಗಸ್ಥಳದ ಬೆಳಕಲ್ಲಿ ಕುಮಾರನಾಗುತ್ತಾ ಹೆಜ್ಜೆ ಇಡುತ್ತಿದ್ದ ನನ್ನ ಪುಟ್ಟಪಾದಗಳು. ಅಪ್ಪ ಉರುಹೊಡೆಸಿದ್ದ ಆ ಉದ್ದದ ದೊಡ್ಡ ಮಾತು ಮುಗಿದಾದ ಮೇಲೆ ಸಿರಿ ತನ್ನ ಮಗು ಕುಮಾರನನ್ನು ಬಿಟ್ಟು ಹೋಗುವ ಸಂದರ್ಭ. ಅಲ್ಲಿ ಸಿರಿಯ ಸೇವಕಿ ದಾರುವೂ ಇರುತ್ತಾಳೆ. ಮೂವರೂ ಬಿಟ್ಟುಹೋಗಿ ದೈವಗಳಾಗುವ ಸನ್ನಿವೇಶ. ಎಲ್ಲರೂ ಜೋರಾಗಿ ಅಳಬೇಕು. ಅಪ್ಪ ಮೊದಲೇ “ಅಲ್ಲಿ ನಿಜವಾಗಿ ಅಳಬೇಕು ಸುಮ್ಮನೆ ಅತ್ತ ಹಾಗೆ ಮಾಡಬಾರದು”, ಎಂದು ಸಾರಿ ಹೇಳಿದ್ದು ನೆನಪಾಗಿ ಮತ್ತೆ ಮತ್ತೆ ವಿನಾಕಾರಣ ಬಿಕ್ಕಿ ಅಳುತ್ತಿದ್ದೆ. ನನ್ನ ಕಾಲಿಗೆ ಗಾಜಿನ ಚೂರು ತಾಗಿರುವುದನ್ನು ಊಹಿಸಿಕೊಂಡು ಅಪ್ಪ ಇನ್ನೂ ಸಿಕ್ಕಾಪಟ್ಟೆ ಅಳುತ್ತಿದ್ದರಂತೆ. ಅವರು ಸಿರಿಯಾಗಿ ಕುಮಾರನಿಗಾಗಿ ಅಳುತ್ತಿರುವರೆಂದು ಊಹಿಸಿ ಹೆದರಿಕೆಯಲ್ಲಿ ನಾನು ಮತ್ತೂ ಅಳುತ್ತಿದ್ದೆ. ಈ ನಡುವೆ ನಮ್ಮಿಬ್ಬರ ಅಳುವಿಗೆ ಸರಿಸಾಟಿಯಾಗುವಂತೆ ಅಳುತ್ತಿದ್ದ ಸೇವಕಿ ದಾರು!! ಎಂತಹ ಸಂದರ್ಭವದು! ನಿಜ ಯಾವುದು? ಸುಳ್ಳು ಯಾವುದು? ಯಾರು ಅಳುತ್ತಿದ್ದುದ್ದು ಯಾಕಾಗಿ ಎಂದು ಯಾರ ಅರಿವಿಗೂ ಬಾರದೆ ನಡೆದುಹೋಗುತ್ತಿದ್ದ ಜಗನ್ನಿಯಾಮಕನ ಆಟದಂತಹ ಒಂದು ಪ್ರಸಂಗದಂತಿತ್ತು. ನನಗೆ ಯಾಕೋ ಇದೀಗ ಎದುರುಗಡೆ ಕುಳಿತಿದ್ದ ಪ್ರೇಕ್ಷಕರ ಕಣ್ಣೀರು ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಬರುತ್ತಿರುವ ಮೊಂಡು ಮಗುವಿನಂತಹ ಕವಿತೆಯ ಕುರಿತ ಈ ಮಾತುಗಳು. ಆ ಹೊತ್ತಲ್ಲಿ, ನನ್ನ ಪುಟ್ಟ ಪಾದಗಳಿಗೆ ಚುಚ್ಚಿದ್ದ ಗಾಜಿನ ಚೂರುಗಳು ಇಷ್ಟು ಕಾಲ ಅಲ್ಲೇ ಮೂಳೆಯ ಮಜ್ಜೆಯೊಳಗೆ ಸುಮ್ಮನೆ ಕುಳಿತು ಇದೀಗ ನನ್ನನ್ನು ನೋಯಿಸುತ್ತಿದೆಯಲ್ಲಾ ಅನಿಸುತ್ತಿದೆ. ಕವಿತೆಯೂ ಸೇರಿದಂತೆ ಈ ಎಲ್ಲವೂ ಯಾರು ಆಡಿಸುತ್ತಿರುವ ಆಟವಿರಬಹುದು?

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry