ಅಪರಾಧಿಗೆ ವರವಾದ ಪೊಲೀಸರ ನಿರ್ಲಕ್ಷ್ಯ

7

ಅಪರಾಧಿಗೆ ವರವಾದ ಪೊಲೀಸರ ನಿರ್ಲಕ್ಷ್ಯ

Published:
Updated:
ಅಪರಾಧಿಗೆ ವರವಾದ ಪೊಲೀಸರ ನಿರ್ಲಕ್ಷ್ಯ

ಹಸ್ಮತ್‌ ಪಾಷ

‘ಎಲ್ಲೊ ಹೊರಗೆ ನಿಂತು ಹೇಳುವ ನೈತಿಕ ಪಾಠಗಳಿಗಿಂತಲೂ ಮಿಗಿಲಾಗಿ, ನನಗೆ ಸಾಕ್ಷ್ಯಗಳೇ ಮುಖ್ಯ’ ಎಂಬುದು ನಮ್ಮ ನ್ಯಾಯದೇವತೆಯ ಅಂಬೋಣ! ‘ನನ್ನೆದುರಿಗೆ ದುಮ್ಮಾನ ಹರವಿಕೊಂಡು ನ್ಯಾಯ ಬೇಡುತ್ತಿರುವ ವ್ಯಕ್ತಿ ಯಾರೆಂಬುದನ್ನು ನಾನು ನೋಡುವುದಿಲ್ಲ. ನೋಡಿದರೆ ನ್ಯಾಯದಾನದಲ್ಲಿ ತಾರತಮ್ಯವಾದೀತು’ ಎಂದೇ ಆಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾಳೆ. ‘ಪಕ್ಷಗಾರರು ಹೇಳಿದ್ದನ್ನು ಮಾತ್ರವೇ ಕೇಳಿಸಿಕೊಂಡು ಸಾಕ್ಷಿಯನ್ನು ತಕ್ಕಡಿಯಲ್ಲಿಟ್ಟು ತೂಗಿ ನ್ಯಾಯ ನೀಡುತ್ತೇನೆ’ ಎಂದೇ ಕೈಯಲ್ಲಿ ತಕ್ಕಡಿ ಹಿಡಿದು ನಿಂತಿದ್ದಾಳೆ.

ಕ್ರಿಮಿನಲ್‌ ಪ್ರಕರಣಗಳಲ್ಲಿ ನಮ್ಮ ಪೊಲೀಸರಿಗೆ ಒಂಚೂರು ಸಾಕ್ಷ್ಯ ಸಿಕ್ಕರೆ ಸಾಕು ಆರೋಪಿಗೆ ಶಿಕ್ಷೆ ವಿಧಿಸಲು ಅವೇ ಅಂತಿಮ ಎಂದು ಮೈಮರೆತುಬಿಡುತ್ತಾರೆ. ಕೋರ್ಟ್‌ನಲ್ಲಿ ವಕೀಲರ ಪಾಟೀ ಸವಾಲು ಶುರುವಾದಾಗಲೇ ಅವರಿಗೆ ತಾವೆಲ್ಲಿ ದಾರಿ ತಪ್ಪಿದ್ದೇವೆ ಎಂಬುದು ಅರಿವಿಗೆ ಬರುತ್ತದೆ. ಆದರೇನು, ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ!

ಇಂತಹದೊಂದು ಮಾತನ್ನು ಪುಷ್ಟೀಕರಿಸುವ ಪ್ರಕರಣವನ್ನು ನಾನು ಸವಾಲಿನಂತೆ ಸ್ವೀಕರಿಸಿ ಗೆದ್ದೆ. ಇಲ್ಲಿ ಗೆದ್ದೆ ಎಂದು ಬೀಗುವುದಕ್ಕಿಂತಲೂ ಮಿಗಿಲಾಗಿ ತನಿಖಾಧಿಕಾರಿಗಳ ವೈಫಲ್ಯಕ್ಕೆ ಇದು ಮೇರು ನಿದರ್ಶನದಂತಿದೆ.

ಚೆನ್ನೈನ ಮನೀಷ್‌ ಕುಮಾರ್‌ಗೆ ಆಗಿನ್ನೂ 26ರ ತುಳುಕುವ ಪ್ರಾಯ. ಎಂಜಿನಿಯರಿಂಗ್ ಪದವಿಯಲ್ಲಿ ರ‍್ಯಾಂಕ್‌ ಪಡೆದವನು. ಕ್ಯಾಂಪಸ್‌ ಸೆಲೆಕ್ಷನ್‌ನಲ್ಲೇ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದ. ತನ್ನ ಪ್ರಾಜೆಕ್ಟ್‌ ಕೆಲಸದ ಮೇಲೆ ಆಗಾಗ್ಗೆ ಇಟಲಿಗೂ ಹೋಗಿ ಬರುತ್ತಿದ್ದ. ಸದ್ಗುಣಿಯೂ ಆಗಿದ್ದ ಮನೀಷ್‌, ಹೇಳಿಕೇಳಿ ಅಯ್ಯಂಗಾರರ ಹುಡುಗ. ಸನಾತನ ಸಂಸ್ಕಾರಗಳ ಚೌಕಟ್ಟಿನಲ್ಲಿ ಶಿಸ್ತಿನ ಜೀವನ ಪಾಲಿಸಿಕೊಂಡು ಬಂದಿದ್ದ. 26 ವಸಂತಗಳನ್ನು ಕಳೆದರೂ ಆ ತನಕ ಯಾವುದೇ ಹೆಣ್ಣಿನ ಮೋಹಪಾಶದಲ್ಲಿ ಸಿಲುಕಿರಲಿಲ್ಲ. ಅಂತೂ ಆ ಗಳಿಗೆಯೂ ಅವನ ಜೀವನದಲ್ಲಿ ಕಾಲಿಟ್ಟಿತು.

ಪ್ರಾಜೆಕ್ಟ್‌ ಕೆಲಸವೊಂದರಲ್ಲಿ ಪರಿಚಯವಾದ ಸಿವಿಲ್‌ ಎಂಜಿನಿಯರ್‌ ಅಶ್ವಿನಿ ಎಂಬ ಗೃಹಿಣಿ, ಮನೀಷ್‌ನ ಹೃದಯ ಕದ್ದಳು. ತನ್ನ ತೋಳಿನ ಮೇಲೆ ಆ ತನಕ ಒಂದು ಹೆಣ್ಣಿನ ತೋಳಭಾರವನ್ನೂ ಕಾಣದ ಮನೀಷ್‌ ಆಕೆಯ ರೂಪು, ಲಾವಣ್ಯಕ್ಕೆ ಬೆರಗಾದ. ಮೊಗೆಮೊಗೆದು ಕೊಡುತ್ತಿದ್ದ ಅವಳ ಪ್ರೀತಿಯ ಬಿಸಿಬುಗ್ಗೆಯಲ್ಲಿ ಮಂಜಿನಂತೆ ಕರಗಿಹೋದ.

ಮಗ ಜೀವನದಲ್ಲಿ ಒಂದು ಹಂತಕ್ಕೆ ಬಂದು ನಿಂತಿದ್ದಾನೆ ಎಂಬ ತೀರ್ಮಾನಕ್ಕೆ ಬಂದ ಮನೀಷ್‌ನ ತಂದೆ ತಾಯಿ, ಸಹಜವಾಗಿಯೇ ಅವನೆದುರು ಮದುವೆ ಪ್ರಸ್ತಾಪ ಇಟ್ಟರು. ಅದೇಕೋ ಮನೀಷ್‌ಗೆ ಅಪ್ಪ ಅಮ್ಮನ ಮಾತು ಮೀರುವ ಮನಸ್ಸಾಗಲಿಲ್ಲ. ಹಿಂದೆ ಮುಂದೆ ಯೋಚಿಸದೆ ಹ್ಞೂಂ ಎಂದುಬಿಟ್ಟ. ಸರಿ, ತಂದೆ–ತಾಯಿ ಅವನಿಗೆ ಸರಿಹೊಂದುವ ಸಾಫ್ಟ್‌ವೇರ್‌ ಎಂಜಿನಿಯರ್‌ ಹುಡುಗಿಯನ್ನೇ ಹುಡುಕಿದರು. ಅದೃಷ್ಟವಶಾತ್‌ ಆಕೆಯೂ ಮನೀಷ್‌ ಉದ್ಯೋಗ ಮಾಡುತ್ತಿದ್ದ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಳು.

ಅಯ್ಯಂಗಾರರ ಪದ್ಧತಿಯಂತೆ 2008ರ ಆಗಸ್ಟ್‌ನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲಾಯಿತು. ಲತಾ, ಹೇಳಿಕೊಳ್ಳುವಂತಹ ಸುಂದರಿಯಲ್ಲದಿದ್ದರೂ ಎಣ್ಣೆಗೆಂಪಿನ ಒಪ್ಪವಾದ ಹುಡುಗಿ, ಸುಶೀಲೆ. ಆದರೆ, ಮನೀಷ್‌ಗೆ ಮಾತ್ರ ಲತಾಳ ಬಗ್ಗೆ ತುಡಿತಗಳೇ ಇರಲಿಲ್ಲ. ಅಪ್ಪ–ಅಮ್ಮನ ಮಾತಿಗೆ ತಲೆದೂಗಿ ಮದುವೆಯಾಗಿದ್ದವನ ಮನದಾಳದ ಕೊಳದಲ್ಲಿ ಅಶ್ವಿನಿಯೆಂಬ ಮಾಯಾದೇವಿ ಈಜು ಹೊಡೆಯುತ್ತಿದ್ದಳು. ಇವನಿಗೂ ಅಶ್ವಿನಿಯ ಎಡೆಗಿನ ಸೆಳೆತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು.

ಗಂಡನ ಅನ್ಯಮನಸ್ಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಲತಾ, ಇಂದು ಸರಿ ಹೋದಾನು, ನಾಳೆ ಸರಿ ಹೋದಾನು ಎಂದೇ ಗಂಡನ ನಿರ್ಲಕ್ಷ್ಯವನ್ನು ಸಹಿಸಿಕೊಂಡಿದ್ದಳು. ಮಧ್ಯರಾತ್ರಿಯಲ್ಲೂ ಅವನ ಫೋನ್‌ ಬ್ಯುಸಿ ಇರುತ್ತಿದ್ದುದನ್ನು ಅಲಕ್ಷಿಸಿದ್ದಳು. ಅದು ಆಕೆ ಮದುವೆಯಾಗಿ ಅನುಭವಿಸುತ್ತಿದ್ದ ಮೊದಲ ಚಳಿಗಾಲವಾಗಿತ್ತು. ಆದರೆ, ಆ ಚಳಿಯನ್ನು ಓಡಿಸುವ ಆಲಿಂಗನ ಅವಳ ಬದುಕಿನ ಬಾಗಿಲನ್ನು ಇನ್ನೂ ಬಡಿದೇ ಇರಲಿಲ್ಲ. ನವೆಂಬರ್ ಆರಂಭದ ದಿನಗಳು. ಜ್ವರದಿಂದ ಬಳಲುತ್ತಿದ್ದ ಲತಾ, ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ  ಉಳಿದಿದ್ದಳು.

ಮದುವೆಯಾದ ದಿನದಿಂದಲೂ ಲತಾಳ ಬಗ್ಗೆ ಒಳಗೊಳಗೇ ಕಠೋರವಾದ ತಿರಸ್ಕಾರ ಭಾವ ಬೆಳೆಸಿಕೊಂಡಿದ್ದ ಮನೀಷ್‌, ‘ಇನ್ನಿವಳು ನನ್ನ ಬಾಳಿನಲ್ಲಿ ಇರಕೂಡದು’ ಎಂದು ನಿಶ್ಚಿಯಿಸಿದ್ದ. ಇವಳಿಗೊಂದು ಗತಿ ಕಾಣಿಸಲು ಇದೇ ಸರಿಯಾದ ಸಮಯ ಎಂದು ತೀರ್ಮಾನಿಸಿದ.

ಆವತ್ತು 2008ರ ನವೆಂಬರ್‌ 7ನೇ ತಾರೀಖು. ಎಂದಿನಂತೆ ಬೆಳಿಗ್ಗೆ ಮುರುಗೇಶಪಾಳ್ಯದ ತನ್ನ ಮನೆಯಿಂದ ಮೋಟಾರ್‌ ಬೈಕ್‌ನಲ್ಲಿ ಹೊರಟು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ತನ್ನ ಕಚೇರಿಯನ್ನು 9.30ರ ಹೊತ್ತಿಗೆ ತಲುಪಿದ. ಅರೆಮನಸ್ಸಿನಲ್ಲೇ ಚಡಪಡಿಸುತ್ತಿದ್ದವನು ಮಧ್ಯಾಹ್ನ 12.30ರ ಹೊತ್ತಿಗೆ ಕಚೇರಿಯಿಂದ ಬಿಗು ಮೌನದಲ್ಲಿ ಹೊರಬಿದ್ದ. ಸೀದಾ ಮನೆಗೆ ಬಂದ. ಮನೆಯಲ್ಲಿ ಒಬ್ಬಳೇ ಇದ್ದ ಲತಾಗೆ ಆಶ್ಚರ್ಯ. ‘ಅರೆ ಇದೇನಿದು ಹೀಗೆ ಬಂದಿರಿ’ ಎಂದು ಕೇಳಿದ್ದಕ್ಕೆ ಖುಷಿಖುಷಿಯಾಗಿಯೇ ಉತ್ತರಿಸಿದ ಮನೀಷ್‌, ‘ನಿನಗೊಂದು ಅಚ್ಚರಿಯ ಉಡುಗೊರೆ ತಂದಿದ್ದೇನೆ’ ಎಂದು ತನ್ನ ಮುಷ್ಟಿ ತೋರಿಸಿ, ‘ಕಣ್ಣಮುಚ್ಚಿಕೊ’ ಎಂದ. ತನ್ನ ಪಾಲಿನ ಏಕಾಂತ ಇನ್ನು ದೂರವಾಯಿತು ಎಂದೇ ಪುಳಕಗೊಂಡ ಲತಾ, ಕಣ್ಣು ಮುಚ್ಚಿದಳು.

‘ಈಗ ತೆರೆದು ನೋಡು’ ಎಂದ. ಕಣ್ಣು ತೆರೆಯುತ್ತಿದ್ದಂತೆಯೇ ಅಂಗೈಯಲ್ಲಿ ಅದುಮಿಟ್ಟುಕೊಂಡಿದ್ದ ಖಾರದ ಪುಡಿಯನ್ನು ಅವಳ ಕಣ್ಣಿಗೆ ಎರಚಿದ. ಆಕೆ ಸಾವರಿಸಿಕೊಳ್ಳುವ ಮುನ್ನವೇ ತನ್ನ ಬಲವನ್ನೆಲ್ಲಾ ಕೂಡಿಸಿ ಅಲ್ಲೇ ಎತ್ತಿಟ್ಟಿದ್ದ ಕಬ್ಬಿಣದ ರಾಡಿನಿಂದ ಅವಳ ತಲೆಗೆ ಬಾರಿಸಿದ. ಕ್ಷಣಮಾತ್ರದಲ್ಲಿ ನೆಲಕ್ಕೆ ಕುಸಿದ ಲತಾ, ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟಳು.

ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಆಕೆಯ ಮೈಮೇಲಿದ್ದ ಬಂಗಾರದ ಬಳೆ, ಕೈಗಡಗ, ಕಿವಿಯೋಲೆ ಬಿಚ್ಚಿಕೊಂಡ. ಅಲ್ಮೇರಾದಲ್ಲಿ ಇಟ್ಟಿದ್ದ ₹ 30 ಸಾವಿರವನ್ನೂ ಎತ್ತಿಕೊಂಡ. ನಂತರ ಅಲ್ಲಿಂದ ಕಾಲ್ತೆಗೆದವನೇ ಸೀದಾ ಕಚೇರಿಯ ಹಾದಿ ಹಿಡಿದ. ಬರುವಾಗ ದಾರಿ ಮಧ್ಯದಲ್ಲಿ ಮಿಲಿಟರಿ ಮೈದಾನದ ಒಂದು ಮೂಲೆಯಲ್ಲಿ ಗುಂಡಿ ತೋಡಿ ಒಡವೆಗಳನ್ನು ಹುದುಗಿಸಿಟ್ಟ. ಲತಾಳ ಮೊಬೈಲಿನ ಸಿಮ್‌ ತೆಗೆದು ಅದೇ ಮೈದಾನದಲ್ಲಿ ಕಣ್ಣಿಗೆ ಕಾಣದಷ್ಟು ದೂರಕ್ಕೆ ಎಸೆದು ನಿಟ್ಟುಸಿರುಬಿಟ್ಟ.

4 ಗಂಟೆ ವೇಳೆಗೆ ವಾಪಸು ಕಚೇರಿ ತಲುಪಿ ಎಂದಿನಂತೆ ಕೆಲಸದಲ್ಲಿ ಮಗ್ನನಾದ. ಪ್ಯಾಂಟ್‌ ಮೇಲೆ ರಕ್ತದ ಕಲೆಗಳಿವೆ ಎಂಬ ಕಾರಣಕ್ಕೆ, ಬರುವಾಗ ಪ್ಯಾಂಟ್‌ ಬದಲಾಯಿಸುವುದನ್ನು ಮರೆತಿರಲಿಲ್ಲ. ಏನೂ ಆಗಿಯೇ ಇಲ್ಲ ಎಂಬಂತೆ ಕಚೇರಿ ಕೆಲಸ ಪೂರೈಸಿ ರಾತ್ರಿ ಏಳು ಗಂಟೆಗೆ ಮನೆಗೆ ಬಂದವನೇ ಬಾಗಿಲು ತೆರೆದು ಜೋರಾಗಿ ಕಿರುಚಿಕೊಂಡು, ‘ಹೆಂಡತಿಯ ಕೊಲೆಯಾಗಿದೆ’ ಎಂದು ಬೊಬ್ಬೆ ಹಾಕಿದ. ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಜನರೆಲ್ಲ ಅಲ್ಲಿ ಕಲೆತರು. ಯಾರೊ ದರೋಡೆಕೋರರೇ ಕೊಲೆ ಮಾಡಿರಬಹುದು ಅಂದುಕೊಂಡರು. ಶವವನ್ನು ಪೋಸ್ಟ್‌ ಮಾರ್ಟಂ ಮಾಡಲಾಯಿತು. ಆನಂತರ ಚೆನ್ನೈಗೆ ಕೊಂಡೊಯ್ಯಲಾಯಿತು. ಎರಡೂ ಕುಟುಂಬದವರು ಕೂಡಿಯೇ ಶವ ಸಂಸ್ಕಾರ ನಡೆಸಿದರು.

ಚೆನ್ನೈನಲ್ಲಿ ಮೂರನೇ ದಿನದ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಪೊಲೀಸರು ಕ್ಷಿಪ್ರ ತನಿಖೆಯಲ್ಲಿ ಪ್ರಗತಿ ಸಾಧಿಸಿದ್ದರು. ಕಂಪನಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿತ್ತು. ಮನೀಷ್‌ ಬೆಳಿಗ್ಗೆ ಕಚೇರಿಗೆ ಬಂದಾಗ ಧರಿಸಿದ್ದ ಪ್ಯಾಂಟ್‌ ಮತ್ತು ಸಂಜೆ ಕಚೇರಿಯಿಂದ ಹೊರ ಹೋಗುವಾಗ ಧರಿಸಿದ್ದ ಪ್ಯಾಂಟ್‌ ಬೇರೆಯಾಗಿತ್ತು. ಆತ ಮಧ್ಯಾಹ್ನ 1.05ರಿಂದ 4.17ರ ನಡುವೆ ಕಚೇರಿಯಲ್ಲಿ ಇಲ್ಲದಿರುವ ಅಂಶವೂ ಪತ್ತೆಯಾಯಿತು. ಪ್ರಕರಣದ ತನಿಖಾಧಿಕಾರಿ ಡಿಸೋಜಾ ತಡ ಮಾಡಲೇ ಇಲ್ಲ. ಸೀದಾ ಚೆನ್ನೈಗೆ ಧಾವಿಸಿದರು. ಹೆಂಡತಿಯ ಅಸ್ಥಿ ವಿಸರ್ಜನೆ ಮಾಡುತ್ತಿದ್ದ ಮನೀಷ್‌ನನ್ನು ದಸ್ತಗಿರಿ ಮಾಡಿ ಬೆಂಗಳೂರಿಗೆ ಎಳೆತಂದರು. ಮಾಮೂಲಿ ಪೊಲೀಸ್‌ ‘ಟ್ರೀಟ್‌ಮೆಂಟ್‌’ ಮೂಲಕ ಬಾಯಿ ಬಿಡಿಸಿ ಅವನ ಸ್ವಯಂ ಹೇಳಿಕೆ ದಾಖಲು ಮಾಡಿಕೊಂಡರು.

ಮಿಲಿಟರಿ ಮೈದಾನದಲ್ಲಿ ಬಚ್ಚಿಟ್ಟಿದ್ದ ಒಡವೆಗಳನ್ನು ಮತ್ತು ಐಎಂಇಐ (ಅಂತರರಾಷ್ಟ್ರೀಯ ಮೊಬೈಲ್‌ ಉಪಕರಣ ಗುರುತು) ನಂಬರ್‌ ಮೂಲಕ ಮೈದಾನದಲ್ಲಿ ಬಿಸಾಡಿದ್ದ ಮೊಬೈಲ್‌ ಪತ್ತೆ ಹಚ್ಚಲಾಯಿತು. ಕಳುವಾಗಿದೆ ಎನ್ನಲಾದ ₹ 30 ಸಾವಿರವನ್ನೂ ವಶಕ್ಕೆ ಪಡೆಯಲಾಯಿತು. ಈ ಎಲ್ಲಾ ಸಾಕ್ಷ್ಯಗಳ ಆಧಾರದಲ್ಲಿ ದೋಷಾರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಮೇಲ್ನೋಟಕ್ಕೆ ಸಾಕಷ್ಟು ಬಲವಾದ ಸಾಕ್ಷ್ಯಗಳಿದ್ದುದರಿಂದ ಮನೀಷ್‌ ವಿಚಾರಣಾಧೀನ ಕೈದಿಯಾಗಿ ಜೈಲು ಪಾಲಾದ. ಜೈಲಿನಲ್ಲಿದ್ದ ವೇಳೆ ಸಹ ಕೈದಿಗಳು ನನ್ನ ಹೆಸರು ಸೂಚಿಸಿದ್ದರಿಂದ ಪ್ರಕರಣವನ್ನು ನನಗೆ ಒಪ್ಪಿಸಿದ. ವಕಾಲತ್ತು ವಹಿಸಿದ ಕೆಲ ದಿನಗಳಲ್ಲಿಯೇ ಆತನಿಗೆ ಜಾಮೀನು ಸಿಗುವಂತೆ ನೋಡಿಕೊಂಡೆ.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಕೀಲರು, ತಾವು ವಶಕ್ಕೆ ಪಡೆದಿದ್ದ ಎಲ್ಲ ಸಾಕ್ಷ್ಯಗಳ ಮೇಲೆ ಸಾಕಷ್ಟು ಬೆಳಕು ಚೆಲ್ಲಿದರು. ನ್ಯಾಯಾಧೀಶರಂತೂ, ‘ಇವನೇ ಅಲ್ಲವೇ, ಹೆಂಡತಿಯನ್ನು ಸಾಯಿಸಿದವನು. ಇವನಿಗೆ ಹೇಗೆ ಸಿಕ್ಕಿತು ಜಾಮೀನು’ ಎಂದು ಹುಬ್ಬೇರಿಸಿದ್ದರು. ಆದಾಗ್ಯೂ ನಾನು, ಪಾಟೀ ಸವಾಲಿನಲ್ಲಿ ಸಾಕ್ಷ್ಯಗಳು ಹೇಗೆ ಅಪರಾಧ ಸಾಬೀತು ಮಾಡಲು ಅಸಹಾಯಕವಾಗಿವೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟೆ.

ಕಂಪನಿಯ ಸರ್ವರ್‌ ಸಿಸ್ಟಂನಲ್ಲಿ ದಾಖಲಾಗಿದ್ದ ದೃಶ್ಯಾವಳಿಯಲ್ಲಿ ಮನೀಷ್‌ ಮಧ್ಯಾಹ್ನ 1.05ರಿಂದ ಅದೇ ದಿನ ಸಂಜೆ 4.17ರವರೆಗೆ ಕಚೇರಿಯಲ್ಲಿ ಇರಲಿಲ್ಲ ಎಂಬುದನ್ನು ತೋರಿಸುತ್ತಿತ್ತು. ಇದು ನಿಜವೇ ಆದರೂ ಆತ ತನ್ನ ಪ್ರಾಜೆಕ್ಟ್‌ ಕೆಲಸದ ಮೇಲೆ ಹೊರಗೆ ಹೋಗಿದ್ದ ಎಂದೇ ನಾನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟೆ. ಲತಾ ಸಾಯುವ ಮುನ್ನ ಆಕೆಯ ಅಂಗೈನಲ್ಲಿ ಮನೀಷ್‌ನ ಒಂದೇ ಒಂದು ಕೂದಲೆಳೆ ಸಿಕ್ಕಿದೆ. ಅಂದರೆ, ಅವಳು ಸಾಯುವ ಮೊದಲು ಕೊಸರಾಡಿಕೊಂಡು ಇವನ ತಲೆಗೂದಲನ್ನು ಹಿಡಿದಿದ್ದಳು ಎಂಬ ಸಾಕ್ಷಿಯನ್ನೂ ಅಲ್ಲಗಳೆದೆ. ಕೂದಲು ಮನೀಷನದ್ದೇ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಒಂದು ಕೂದಲು ಇಂತಹುದೇ ವ್ಯಕ್ತಿಯದು ಎಂದು ಹೇಳಬೇಕಾದರೆ ಅದರ ಬೇರಿನ ಗುಣ ಲಕ್ಷಣಗಳನ್ನೂ ದಾಖಲಿಸಬೇಕು. ಉದುರಿಬಿದ್ದ ಕೂದಲಿಗೂ, ಕಿತ್ತ ಕೂದಲಿಗೂ ಇರುವ ಗುಣಗಳು ಭಿನ್ನವಾಗಿರುತ್ತವೆ ಎಂಬ ಅಂಶವನ್ನು ಮುಂದಿಟ್ಟೆ.

ಕಚೇರಿಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಲಾಕರ್ ನೀಡಲಾಗಿರುತ್ತದೆ. ಬಟ್ಟೆ ಬದಲಾಯಿಸಲೂ ಅವಕಾಶವಿರುತ್ತದೆ. ಹಾಗಾಗಿ ಮನೀಷ್‌, ಪ್ಯಾಂಟ್‌ ಬದಲಾಯಿಸಿರುವುದರಲ್ಲಿ ತಪ್ಪೇನಿಲ್ಲ. ಬಚ್ಚಿಟ್ಟಿದ್ದ ಜಾಗದಲ್ಲಿ ಒಡವೆಗಳನ್ನು ವಶಪಡಿಸಿಕೊಂಡಾಗ ಮಹಜರು ನಡೆಸಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ, ಮನೀಷ್‌ನನ್ನು ಚೆನ್ನೈನಿಂದ ಬೆಂಗಳೂರಿಗೆ ಕರೆದುಕೊಂಡು ಬಂದ ತನಿಖಾಧಿಕಾರಿ ಎರಡು ದಿನ ಠಾಣೆಯಲ್ಲೇ ಇರಿಸಿಕೊಂಡಿದ್ದರು. ಈತ ಕೊಲೆ ಮಾಡುವ ವೇಳೆ ಇವನಿಗೆ ಏನಾದರೂ ಗಾಯಗಳಾಗಿವೆಯೇ ಹೇಗೆ ಎಂದು ಪರೀಕ್ಷಿಸಲು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ವೈದ್ಯರು ಇರಲಿಲ್ಲ ಎಂದು ಎರಡು ದಿನ ಠಾಣೆಯಲ್ಲೇ ಇರಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ 24 ಗಂಟೆಗಳ ಒಳಗೆ ಸ್ಥಳೀಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರುಪಡಿಸಬೇಕು ಎಂಬ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಇದು ಅಕ್ರಮ ಬಂಧನ. ಬಂಧನದ ವೇಳೆ ಆರೋಪಿಯಿಂದ ಬಲವಂತವಾಗಿ ಸುಳ್ಳು ಹೇಳಿಕೆ ಪಡೆಯಲಾಗಿದೆ. ಆದ್ದರಿಂದ ಮನೀಷ್‌ ನಿರಪರಾಧಿ ಎಂದು ಪ್ರತಿಪಾದಿಸಿದೆ.

ಅಂತಿಮ ಅಸ್ತ್ರವಾಗಿ ಪ್ರಾಸಿಕ್ಯೂಷನ್‌ ಮನೀಷ್‌ಗೆ ಅನೈತಿಕ ಸಂಬಂಧ ಇದೆ ಎಂದೂ ಆರೋಪಿಸಿತ್ತು. ಆದರೆ, ಈ ಬಗ್ಗೆ ಯಾವುದೇ ನೇರ ಸಾಕ್ಷ್ಯ ಇಲ್ಲ ಎಂದು ಆ ಆಂಶವೂ ಬಿದ್ದುಹೋಯಿತು. ಇಷ್ಟೆಲ್ಲಾ ತಾರ್ಕಿಕ ಪಾಟೀ ಸವಾಲು ನಡೆಸಿದ್ದರೂ ನಮಗೆ ಫಲ ಸಿಗಲಿಲ್ಲ. ಪ್ರಾಸಿಕ್ಯೂಷನ್‌ ವೈಫಲ್ಯಗಳನ್ನು ಸೆಷನ್ಸ್‌ ನ್ಯಾಯಾಧೀಶರು ಪರಿಗಣಿಸಲೇ ಇಲ್ಲ. ಕಡೆಗೂ ಮನೀಷ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದಾಗ ನ್ಯಾಯಮೂರ್ತಿ ವಿನೀತ್‌ ಸರಣ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರಾಸಿಕ್ಯೂಷನ್‌ ವೈಫಲ್ಯದ ನಮ್ಮ ಅಂಶಗಳನ್ನು ಎತ್ತಿ ಹಿಡಿಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದ ಮನೀಷ್‌ ನಿರ್ದೋಷಿ ಎಂದು ಸಾರಿತು.

ಮನುಷ್ಯ ಎಷ್ಟೇ ಸಂಸ್ಕಾರವಂತನಾಗಿದ್ದರೂ ಅವನೊಳಗಿನ ಕ್ರೌರ್ಯ ಮತ್ತು ಮಾನಸಿಕ ತುಮುಲಗಳು ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ.

ಹೆಸರುಗಳನ್ನು ಬದಲಾಯಿಸಲಾಗಿದೆ.

*ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry