ಪಾವಗಡದಲ್ಲಿ ನನಸಾಗುತ್ತಿದೆ ಸೌರಶಕ್ತಿಯ ಕ್ರಾಂತಿ

ಶನಿವಾರ, ಮಾರ್ಚ್ 23, 2019
34 °C

ಪಾವಗಡದಲ್ಲಿ ನನಸಾಗುತ್ತಿದೆ ಸೌರಶಕ್ತಿಯ ಕ್ರಾಂತಿ

Published:
Updated:
ಪಾವಗಡದಲ್ಲಿ ನನಸಾಗುತ್ತಿದೆ ಸೌರಶಕ್ತಿಯ ಕ್ರಾಂತಿ

ಎಂಬತ್ತರ ದಶಕದಲ್ಲಿ ತೋಳಗಳ ಹಾವಳಿ ಹಾಗೂ ನಕ್ಸಲ್ ಚಟುವಟಿಕೆಗಳಿಂದಾಗಿ ನಾಡಿನ ಗಮನ ಸೆಳೆದಿದ್ದ ತುಮಕೂರು ಜಿಲ್ಲೆಯ ಪಾವಗಡ, ಈಗ ಸೌರ ಶಕ್ತಿಯ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್‌ ಪಾರ್ಕ್‌ ಇಲ್ಲಿ ತಲೆ ಎತ್ತಿದ್ದು, ದೇಶದ ಕಣ್ತೆರೆಸಿದೆ.

ನಾಗಲಮಡಿಕೆ ಹೋಬಳಿಯ ತಿರುಮಣಿ ಸುತ್ತಮುತ್ತಲಿನ ಐದು ಹಳ್ಳಿಗಳ ವ್ಯಾಪ್ತಿಯಲ್ಲಿ ಎರಡು ಸಾವಿರ ಮೆಗಾವಾಟ್‌ ಸೌರ ವಿದ್ಯುತ್‌ ಉತ್ಪಾದಿಸುವ ಬೃಹತ್‌ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಮಾ. 1) ಚಾಲನೆ ನೀಡಿದರು. ವರ್ಷಾನುಗಟ್ಟಲೆ ಮಳೆ ಇಲ್ಲದೆ, ಗುಳೆ ಹೋಗುವುದೊಂದೇ ಮಾರ್ಗ ಎನ್ನುತ್ತಿದ್ದ ರೈತರಲ್ಲಿ ಈ ಯೋಜನೆ ಒಂದು ರೀತಿಯಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಇದರ ರೂವಾರಿ ಕರ್ನಾಟಕ ಸೌರ ವಿದ್ಯುತ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ. ಬಲರಾಂ. ಇವರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ (ಕ್ರೆಡೆಲ್‌) ವ್ಯವಸ್ಥಾಪಕ ನಿರ್ದೇಶಕರೂ ಹೌದು. ಅವರೊಂದಿಗಿನ ಮಾತುಕತೆ ಇಲ್ಲಿದೆ.

* ಅತಿ ದೊಡ್ಡ ಯೋಜನೆ ಜಾರಿಯಾಗಿದೆ, ಹೇಗನಿಸುತ್ತಿದೆ?

ನಗುತ್ತಾ... ಒಂದು ರೀತಿ ಮನಸ್ಸಿಗೆ ನೆಮ್ಮದಿ. ನನ್ನ ಸೇವಾವಧಿಯಲ್ಲಿ ಇಂಥ ಬೃಹತ್‌ ಯೋಜನೆ ಕಾರ್ಯರೂಪಕ್ಕೆ ಬಂತು ಎನ್ನುವ ಸಮಾಧಾನ, ಯುದ್ಧ ಗೆದ್ದಷ್ಟೇ ಖುಷಿ ಕೊಡುತ್ತಿದೆ.

* ಈ ಯೋಜನೆಯ ಕಲ್ಪನೆ ಮೂಡಿದ್ದು ಹೇಗೆ?

ಅದಕ್ಕೊಂದು ಕಥೆಯೇ ಇದೆ. ಸೌರ ವಿದ್ಯುತ್‌ ಯೋಜನೆಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೆರವು ನೀಡಲಿದೆ ಎಂದು ಗೊತ್ತಾದ ಬಳಿಕ, ಅದಕ್ಕೆ ಪೂರಕವಾಗಿ ಜಮೀನು ಹುಡುಕಲು ಆರಂಭಿಸಿದೆ. ಅವರು ಕೇಳಿದಷ್ಟು ಜಮೀನು ಸಿಗುವುದು ಕಷ್ಟ ಎಂದೇ ಕಡಿಮೆ ಮಳೆಯಾಗುವ, ನಿರುಪಯುಕ್ತ ಜಮೀನು ಹೆಚ್ಚು ಇರುವ ಕಲಬುರ್ಗಿ, ಕೋಲಾರ, ತುಮಕೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಚರಿಸಿದೆ. ಕನಿಷ್ಠ ಎರಡು ಸಾವಿರ ಎಕರೆ ಸಿಕ್ಕಿದರೂ ಸಾಕು ಎಂದು ತಿರುಗಾಡಿದೆ. ಆದರೆ ಜಮೀನು ಕೊಡಲು ಯಾರೂ ಮುಂದೆ ಬರಲಿಲ್ಲ!

* ಪಾವಗಡದತ್ತ ಹೇಗೆ ಪ್ರಯಾಣ ಬೆಳೆಸಿದಿರಿ?

ಅದಕ್ಕೂ ಒಂದು ಸ್ವಾರಸ್ಯಕರ ಕಥೆ ಇದೆ. ಎಲ್ಲಿಯೂ ಜಾಗ ಸಿಗುತ್ತಿಲ್ಲ ಎಂದು ಸುಮ್ಮನಾಗಿದ್ದೆ. ಆ ಸಂದರ್ಭದಲ್ಲಿ ತಿರುಮಣಿ ಕಡೆಯಿಂದ ಒಂದಷ್ಟು ರೈತರು ಬಂದು ಜಮೀನು ಕೊಡುವುದಾಗಿ ಹೇಳಿದರು. ಅವರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ. ಅದಕ್ಕೆ ಕಾರಣ ಇದೆ. ಪಾವಗಡ ತಾಲ್ಲೂಕಿನಲ್ಲಿ ಬರೇ ಬೆಟ್ಟಗಳು. ಅಲ್ಲಿ ಸಮತಟ್ಟಾದ ಜಮೀನು ಎಲ್ಲಿದೆ ಎಂದು ಗೇಲಿ ಮಾಡಿದ್ದೆ. ಎರಡು– ಮೂರು ಬಾರಿ ರೈತರು ಬಂದಾಗಲೂ ಬೈಯ್ದು ಕಳುಹಿಸಿದ್ದೆ. ಒಮ್ಮೆ ಕೆಲ ರೈತರು ಬಂದು, ‘ಸುಮ್ಮನೆ ಜಮೀನು ನೋಡಿಕೊಂಡು ಹೋಗಿ ನಂತರ ನಿರ್ಧರಿಸಿ’ ಅಂದರು. ಹಾಗೆಯೇ ಒಂದು ದಿನ ಹುಟ್ಟೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಭೇಟಿ ಕೊಟ್ಟೆ. ಜಾಗ ನೋಡಿದ ಮೇಲೆ ಇದೇ ಸೂಕ್ತ ಸ್ಥಳ ಎಂದು ನಿಶ್ಚಯಿಸಿ, ಅಲ್ಲಿಂದ ಯೋಜನೆ ಜಾರಿಗೆ ಪೂರ್ವ ತಯಾರಿ ಆರಂಭಿಸಿದೆ. ಆದರೆ...

* ಏನಾದರೂ ತೊಡಕುಗಳು ಎದುರಾದವೇ?

ತೊಡಕು ಅಂದರೆ, ಸಾವಿರಾರು ಎಕರೆ ಭೂಸ್ವಾಧೀನ ಮಾಡುವುದು ಹೇಗೆ ಎನ್ನುವ ದೊಡ್ಡ ಚಿಂತೆ ನನ್ನನ್ನು ಆವರಿಸಿತು. ಅದು ಸಾಧ್ಯಾನಾ ಅನಿಸಿತು. ಇದು ಪಶ್ಚಿಮ ಬಂಗಾಳದ ಸಿಂಗೂರಿನ ಮತ್ತೊಂದು ‘ನ್ಯಾನೊ ಪ್ರಾಜೆಕ್ಟ್‌’ ಆಗಬಾರದು ಎಂದು ಯೋಚಿಸುತ್ತಿದ್ದಾಗಲೇ ಹೊಸ ಆಲೋಚನೆ ಹೊಳೆಯಿತು.

* ಏನದು ಹೊಸ ಆಲೋಚನೆ?

ಮಳೆ– ಬೆಳೆ ಇಲ್ಲದ ಕಾರಣ ಅತ್ಯಂತ ಕಡಿಮೆ ಬೆಲೆಗೇ ಜಮೀನು ಮಾರಲು ರೈತರು ಸಿದ್ಧ ಇದ್ದರು. ಆದರೆ, ಅನ್ನದಾತ ಜಮೀನು ಮಾರಿ ಬೀದಿಗೆ ಬರುವುದು ಬೇಡ ಎಂದು, ಅವರಿಂದ ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆಯಲು ವಿನೂತನ ಯೋಜನೆ ರೂಪಿಸಿದೆ. ಬಹುಶಃ ಇದು ಜಗತ್ತಿನಲ್ಲೇ ಮೊದಲು ಅನಿಸುತ್ತದೆ. ಅದಕ್ಕೆ ಒಳ್ಳೆಯ ಬೆಂಬಲವೂ ಸಿಕ್ಕಿತು. 2ರಿಂದ 3 ಸಾವಿರ ಎಕರೆ ಸಾಕು ಎನ್ನುತ್ತಿದ್ದ ನಮಗೆ ಎಲ್ಲ 2 ಸಾವಿರ ಮೆಗಾವಾಟ್‌ಗೂ ಬೇಕಾಗುವಷ್ಟು ಜಮೀನು ಒಂದೇ ಕಡೆ ಕೊಡುವುದಾಗಿ ರೈತರು ಮುಂದೆ ಬಂದರು. ಒಪ್ಪಿಗೆ ಪತ್ರಗಳನ್ನೂ ಕೊಟ್ಟರು.

* ದರ ನಿರ್ಧರಿಸಿದ್ದು ಹೇಗೆ?

ಅವೆಲ್ಲವನ್ನೂ ವೈಜ್ಞಾನಿಕವಾಗಿಯೇ ಮಾಡಲಾಯಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಅದರಲ್ಲಿ ಕೃಷಿ ಅಧಿಕಾರಿಗಳೂ ಇದ್ದರು. ಈ ಭಾಗದ ರೈತರು ಒಂದು ಎಕರೆ ಭೂಮಿಯಲ್ಲಿ ವರ್ಷಕ್ಕೆ ಎಷ್ಟು ಹಣ ಗಳಿಸುತ್ತಾರೆ ಎಂಬುದನ್ನು ಆಧಾರವಾಗಿ ಇಟ್ಟುಕೊಂಡು ಲೆಕ್ಕ ಹಾಕಲಾಯಿತು. ಬಳಿಕ ಮಾತುಕತೆ ನಂತರ ಎಕರೆಗೆ ವರ್ಷಕ್ಕೆ ₹21 ಸಾವಿರ ಕೊಡುವ ಒಪ್ಪಂದ ಆಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ಶೇ 5ರಷ್ಟು ಏರಿಕೆ ಮಾಡಲು ಅವಕಾಶ ಕಲ್ಪಿಸಲಾಯಿತು. ಹೀಗೆ 28 ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಲಾಯಿತು.

* ರೈತರಿಂದ ಗುತ್ತಿಗೆ ಪಡೆದಿದ್ದು ಎಷ್ಟು ಎಕರೆ?

2,300 ರೈತರಿಂದ 12,700 ಎಕರೆ ಗುತ್ತಿಗೆ ಪಡೆಯಲಾಗಿದೆ. ಇದರ ಬಾಬ್ತು ವರ್ಷಕ್ಕೆ ₹ 26.7 ಕೋಟಿ ರೈತರ ಬ್ಯಾಂಕ್‌ ಖಾತೆಗೆ ನೇರ ಜಮಾ ಮಾಡುತ್ತಿದ್ದೇವೆ. ಎರಡು ವರ್ಷಗಳಿಂದ ಹಣ ಕೊಡುತ್ತಿದ್ದೇವೆ. ರೈತರೂ ಆನಂದವಾಗಿದ್ದಾರೆ.

* ಸೌರ ವಿದ್ಯುತ್‌ ಪಾರ್ಕ್‌ನಲ್ಲಿ ಏನೆಲ್ಲ ಇದೆ?

50 ಮೆಗಾವಾಟ್‌ಗೆ ಒಂದರಂತೆ 40 ಬ್ಲಾಕ್‌ಗಳನ್ನು ಮಾಡಲಾಗಿದೆ. 220 ಕೆವಿಯ ಎಂಟು ವಿದ್ಯುತ್‌ ವಿತರಣಾ ಕೇಂದ್ರಗಳ ಪೈಕಿ ಮೂರನ್ನು ನಿರ್ಮಾಣ ಮಾಡಲಾಗಿದೆ. ಉಳಿದವು ಮೇ ತಿಂಗಳ ಒಳಗೆ ಮುಗಿಯಲಿವೆ. ರಸ್ತೆ, ಒಳಚರಂಡಿ, ಬೀದಿ ದೀಪ ಇತ್ಯಾದಿ ಮೂಲಸೌಲಭ್ಯಕ್ಕೆ ₹ 825 ಕೋಟಿ ಖರ್ಚು ಮಾಡಲಾಗಿದೆ.

* ಇಷ್ಟು ಅನುದಾನ ಹೊಂದಿಸಿದ್ದು ಹೇಗೆ?

ಕೇಂದ್ರ ಸರ್ಕಾರವೇ ಒಂದು ಮೆಗಾವಾಟ್‌ಗೆ ₹ 20 ಲಕ್ಷದಂತೆ ಒಟ್ಟು ₹ 240 ಕೋಟಿ ಪ್ರೋತ್ಸಾಹಧನ ಕೊಟ್ಟಿದೆ. ಉಳಿದ ಹಣ ಕೊಡಲು ವಿಶ್ವಬ್ಯಾಂಕ್ ಮುಂದೆ ಬಂತು. ಆದರೆ, ಅದರ ಷರತ್ತುಗಳು ವಿಪರೀತ ಕಠಿಣವಾಗಿದ್ದ ಕಾರಣ ಅದನ್ನು ಒಪ್ಪಲು ಸಾಧ್ಯವಾಗಲಿಲ್ಲ. ಅವರ ಸಹವಾಸ ಮಾಡಿದ್ದರೆ ಇಷ್ಟು ಬೇಗ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ.

* ಮತ್ತೇನು ಮಾಡಿದಿರಿ?

ಅದಕ್ಕೊಂದು ಯೋಜನೆ ಹಾಕಿದೆವು. ಸೌರ ವಿದ್ಯುತ್‌ ಅಭಿವೃದ್ಧಿದಾರರಿಂದಲೇ ಪ್ರತಿ ಮೆಗಾವಾಟ್‌ಗೆ ₹ 29.03 ಲಕ್ಷ ಪಡೆಯುವ ಯೋಜನೆ ರೂಪಿಸಿದೆವು. ಮೊದಲ ಹಂತದ ಟೆಂಡರ್‌ನಲ್ಲೇ ನಮಗೆ ಹಣ ಬರಲು ಆರಂಭವಾಯಿತು. ಇದರಿಂದಾಗಿ ಸಾಲ ಮಾಡುವುದಕ್ಕೂ ಹೋಗಲಿಲ್ಲ. ಎಲ್ಲವೂ ಸರಾಗವಾಗಿ ನಡೆದು, ಇವತ್ತು ಈ ಮಟ್ಟಕ್ಕೆ ಬಂದು ನಿಂತಿದೆ.

* ಸೌರವಿದ್ಯುತ್ ಉತ್ಪಾದಕರು ಹೂಡಿಕೆ ಮಾಡಿದ ಹಣ ಎಷ್ಟು?

ಒಟ್ಟಾರೆ ₹ 14,425 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇದರಲ್ಲಿ ಮೂಲಸೌಲಭ್ಯದ ₹ 825 ಕೋಟಿಯೂ ಸೇರಿದೆ. ಸೌರವಿದ್ಯುತ್‌ ಉತ್ಪಾದನೆಗೇ ₹ 12 ಸಾವಿರ ಕೋಟಿ ಹೂಡಿಕೆಯಾಗಲಿದೆ. 400/220 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣಕ್ಕೆ ₹ 1,600 ಕೋಟಿ ಖರ್ಚು ಮಾಡಲಾಗುತ್ತಿದೆ.

* ಸ್ಥಳೀಯರಿಗೆ ಉದ್ಯೋಗ ಸಿಕ್ಕಿಲ್ಲ ಎನ್ನುವ ಆರೋಪಗಳು ಇವೆಯಲ್ಲ?

ನಾವು ಭೂಸ್ವಾಧೀನ ಮಾಡಿಕೊಂಡು ಯೋಜನೆ ಅನುಷ್ಠಾನ ಮಾಡಿಲ್ಲ. ಹೀಗಾಗಿ ಉದ್ಯೋಗ ಭರವಸೆ ಕೊಡಲು ಬರುವುದಿಲ್ಲ. ಆದರೂ ತಾಂತ್ರಿಕ ಶಿಕ್ಷಣ ಪಡೆದಿರುವ ಅರ್ಹರಿಗೆ ಉದ್ಯೋಗ ನೀಡಲಾಗಿದೆ. ವಿದ್ಯಾರ್ಹತೆ ಇಲ್ಲದ ಯುವಕರಿಗೂ ತರಬೇತಿ ಕೊಡಲಾಗಿದೆ. ಹೀಗೆ ತರಬೇತಿ ಪಡೆದವರಿಗೆ ರಾಜ್ಯದ ಇತರ ಸೌರ ವಿದ್ಯುತ್‌ ಕೇಂದ್ರಗಳಲ್ಲಿ ಉದ್ಯೋಗ ಸಿಕ್ಕಿದೆ. ಸೋಲಾರ್‌ ಪ್ಯಾನಲ್‌ ಸ್ವಚ್ಛಗೊಳಿಸುವುದು, ಪಾರ್ಕ್‌ ನಿರ್ವಹಣೆ ಇತ್ಯಾದಿ ತಾಂತ್ರಿಕೇತರ ಕೆಲಸಗಳನ್ನು ಸ್ಥಳೀಯರೇ ಮಾಡುತ್ತಿದ್ದಾರೆ. ನೇರವಾಗಿ ಐದು ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಪರೋಕ್ಷವಾಗಿ ಇನ್ನೂ ಹೆಚ್ಚು ಜನರಿಗೆ ಅನುಕೂಲ ಆಗುತ್ತಿದೆ. ಹೋಟೆಲ್‌, ಬಾಡಿಗೆ ಮನೆ ಹೀಗೆ ಅಲ್ಲೊಂದು ಉಪ ನಗರವೇ ನಿರ್ಮಾಣ ಆಗುತ್ತಿದೆ. ಇವೆಲ್ಲವೂ ಉದ್ಯೋಗ ಸೃಷ್ಟಿಗೆ ಪೂರಕವಾಗಿಯೇ ಇವೆ.

* ಪೂರ್ಣ ಪ್ರಮಾಣದಲ್ಲಿ 2,000 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಇನ್ನೂ ಎಷ್ಟು ದಿನ ಬೇಕಾಗುತ್ತದೆ?

ಸದ್ಯ 600 ಮೆಗಾವಾಟ್‌ ಉತ್ಪಾದನೆ ಆರಂಭವಾಗಿ ಎರಡು ತಿಂಗಳಾಗಿದೆ. ಉಳಿದ 1,400 ಮೆಗಾವಾಟ್‌ ಉತ್ಪಾದನೆಗೆ 15 ದಿನಗಳಲ್ಲಿ ಟೆಂಡರ್ ಕರೆಯುತ್ತಿದ್ದು, ಡಿಸೆಂಬರ್ ವೇಳೆಗೆ ಅದೂ ಕಾರ್ಯಗತ ಆಗುತ್ತದೆ.

* ವಿದ್ಯುತ್‌ ಉತ್ಪಾದನೆ ಗುಣಮಟ್ಟ ಹೇಗಿದೆ?

ಎರಡು ತಿಂಗಳ ಅನುಭವವನ್ನು ನೋಡುವುದಾದರೆ ನಿರೀಕ್ಷೆ ಪ್ರಕಾರ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಉತ್ಪಾದಕರೂ ಖುಷಿಯಾಗಿದ್ದಾರೆ.

* 2020ರ ವೇಳೆಗೆ ಸೌರವಿದ್ಯುತ್‌ ಮೂಲಕವೇ 6,000 ಮೆಗಾವಾಟ್‌ ಉತ್ಪಾದಿಸುವ ರಾಜ್ಯದ ಯೋಜನೆ ಎಲ್ಲಿಗೆ ಬಂತು?

ಈಗಾಗಲೇ 3,628 ಮೆಗಾವಾಟ್‌ ಉತ್ಪಾದನೆ ಆಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಸೌರ ವಿದ್ಯುತ್‌ ಉತ್ಪಾದಿಸುವ ರಾಜ್ಯ ಕರ್ನಾಟಕ ಆಗಿದೆ. ಆರು ಸಾವಿರದ ಗುರಿ ಮುಟ್ಟಲು 2020ರವರೆಗೂ ಕಾಯಬೇಕಿಲ್ಲ. ಇನ್ನೊಂದು ವರ್ಷದಲ್ಲಿಯೇ ಗುರಿ ತಲುಪುತ್ತೇವೆ.

* ಭವಿಷ್ಯದ ಹೊಸ ಸೌರವಿದ್ಯುತ್‌ ಯೋಜನೆಗಳು ಯಾವುವು?

ಸದ್ಯಕ್ಕೆ ಯಾವ ಯೋಜನೆಯೂ ನಮ್ಮ ಮುಂದಿಲ್ಲ. ಒಂದಂತೂ ಸತ್ಯ, ಭವಿಷ್ಯ ಇರುವುದೇ ಸೌರ ವಿದ್ಯುತ್‌ ಮೇಲೆ. ಇಷ್ಟು ಪರಿಸರ ಸ್ನೇಹಿ ವಿದ್ಯುತ್‌ ಉತ್ಪಾದನೆ ಬೇರೆ ಯಾವುದರಿಂದಲೂ ಸಾಧ್ಯ ಇಲ್ಲ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಇದಕ್ಕೆ ಆದ್ಯತೆ ಕೊಡಬೇಕಾಗುತ್ತದೆ. ಎಲ್ಲೆಲ್ಲಿ, ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಚರ್ಚೆ ಆರಂಭವಾಗಿಲ್ಲ. ಸದ್ಯಕ್ಕೆ ಡಿಸೆಂಬರ್‌ ಒಳಗೆ ಪಾವಗಡ ಪ್ರಾಜೆಕ್ಟ್‌ ಮುಗಿಸುವ ಕಡೆಗೆ ಗಮನ ಕೊಟ್ಟಿದ್ದೇವೆ.

* ಪಾವಗಡದ ಪಾರ್ಕ್‌ನಿಂದ ರಾಜ್ಯದ ಎಸ್ಕಾಂಗಳಿಗೆ ಎಷ್ಟು ವಿದ್ಯುತ್‌ ಕೊಡುತ್ತೀರಾ?

ಇಲ್ಲಿ ಉತ್ಪಾದನೆಯಾಗುವ ಶೇ 90ರಷ್ಟು ವಿದ್ಯುತ್‌ (1,800 ಮೆಗಾವಾಟ್‌) ಅನ್ನು ರಾಜ್ಯದ ಎಸ್ಕಾಂಗಳಿಗೆ ಸರಬರಾಜು ಮಾಡುತ್ತೇವೆ. ಆ ಪ್ರಕಾರವೇ ಒಪ್ಪಂದ ಆಗಿದೆ.

* ಎಸ್ಕಾಂಗಳಿಗೆ ಕೊಡುತ್ತಿರುವ ಪ್ರತಿ ಯೂನಿಟ್‌ನ ದರ ಎಷ್ಟು?

ಸದ್ಯಕ್ಕೆ ಒಂದು ಯೂನಿಟ್‌ಗೆ ₹ 3.30 ಇದೆ. ಮುಂದಿನ 25 ವರ್ಷಗಳವರೆಗೆ ಇಷ್ಟೇ ಇರುತ್ತದೆ. ಹೊಸದಾಗಿ ಟೆಂಡರ್‌ ಕರೆಯುವ ಯೋಜನೆಗಳಲ್ಲಿ ವಿದ್ಯುತ್‌ ದರ ಇನ್ನೂ ಕಡಿಮೆ ಇರುತ್ತದೆ. ಅಂದಾಜು ₹ 2.9 ಆಗುವ ಸಾಧ್ಯತೆ ಇದೆ. ಎಲ್ಲವೂ ಹರಾಜು ಮೂಲಕವೇ ನಿರ್ಧರಿಸಲಾಗುತ್ತದೆ. ಕಡಿಮೆ ಮೊತ್ತಕ್ಕೆ ವಿದ್ಯುತ್‌ ಸರಬರಾಜು ಮಾಡಲು ಮುಂದೆ ಬರುವ ಸಂಸ್ಥೆಗಳಿಗೆ ಟೆಂಡರ್‌ ಕೊಡುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry