ಜಿಮ್ನಾಸ್ಟಿಕ್ಸ್‌ ಅಮೂಲ್ಯ ಮುತ್ತು ಅರುಣಾ

7

ಜಿಮ್ನಾಸ್ಟಿಕ್ಸ್‌ ಅಮೂಲ್ಯ ಮುತ್ತು ಅರುಣಾ

Published:
Updated:
ಜಿಮ್ನಾಸ್ಟಿಕ್ಸ್‌ ಅಮೂಲ್ಯ ಮುತ್ತು ಅರುಣಾ

‘ನಾನು ಹದಿನಾಲ್ಕು ವರ್ಷದವಳಿದ್ದಾಗ ಅಪ್ಪ ತೀರಿಕೊಂಡರು. ಆಗಲೇ ಜಿಮ್ನಾಸ್ಟಿಕ್ಸ್‌ ಬಿಟ್ಟುಬಿಡಬೇಕು ಎಂದುಕೊಂಡೆ. ಆದರೆ ನಾನು ದೊಡ್ಡ ಜಿಮ್ನಾಸ್ಟ್‌ ಆಗಬೇಕೆಂದು ಅಪ್ಪ ಕನಸು ಕಂಡಿದ್ದರು. ಅಮ್ಮ, ಅಕ್ಕ ಮತ್ತು ಭಾವ ಕೂಡ ನೆರವಿಗೆ ನಿಂತಿದ್ದರಿಂದ ಈ ಕ್ರೀಡೆಯಲ್ಲಿ ಮುಂದುವರಿದೆ. ಪರಿಶ್ರಮಕ್ಕೆ ಇವತ್ತು ಫಲ ಸಿಕ್ಕಿದೆ’– ಮೆಲ್ಬರ್ನ್‌ನಲ್ಲಿ ಈಚೆಗೆ ನಡೆದ ವಿಶ್ವಕಪ್ ಜಿಮ್ನಾಸ್ಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹೈದರಾಬಾದಿನ ಅರುಣಾ ಬುದ್ಧಾರೆಡ್ಡಿ ಅವರ ಮಾತುಗಳಿವು.

ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್‌ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಅದರಲ್ಲೂ ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಸವಾಲಿನ ಸ್ಪರ್ಧೆ ವಾಲ್ಟ್‌ನಲ್ಲಿ ಅವರ ಸಾಧನೆ ದಾಖಲಾಗಿದೆ. ಅವರು 13.649 ಪಾಯಿಂಟ್ ಗಳಿಸಿ ಮೂರನೇ ಸ್ಥಾನ ಪಡೆದರು. ವಾಲ್ಟ್‌ನಲ್ಲಿ ಮಾತ್ರವಲ್ಲ. ಅವರು ತಮ್ಮ ಜೀವನದುದ್ದಕ್ಕೂ ಕಠಿಣ ಸವಾಲುಗಳನ್ನು ಎದುರಿಸುತ್ತಲೇ ಬೆಳೆದಿದ್ದಾರೆ. ಬಾಲ್ಯದಲ್ಲಿ ಕರಾಟೆ ಕಲಿಯುತ್ತಿದ್ದ ಅರುಣಾಗೆ ಜಿಮ್ನಾಸ್ಟಿಕ್ಸ್‌ ಕಲಿಯುವಂತೆ ಮಾಡಿದ್ದು ತಂದೆ ನಾರಾಯಣರೆಡ್ಡಿ ಅವರು.

ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ನಾರಾಯಣರೆಡ್ಡಿ ಅವರಿಗೆ ಅರುಣಾ ಎರಡನೇ ಮಗಳು. ಮೊದಲ ಮಗಳು ಪಾವನಿ ಈಗ ಕಂಪನಿ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಜನಾರ್ಧನ ರೆಡ್ಡಿ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದಾರೆ. ಹೈದರಾಬಾದಿನ ಲಾಲ್ ಬಹಾದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಜಿಮ್ನಾಸ್ಟಿಕ್ಸ್‌ ತರಬೇತಿಗೆ ಐದು ವರ್ಷದ ಮಗಳನ್ನು ಸೇರಿಸಿದರು.  ಕ್ರೀಡಾಂಗಣದಿಂದ 11 ಕಿಲೋಮೀಟರ್ಸ್‌ ದೂರದಲ್ಲಿ ಅವರ ಮನೆಯಿತ್ತು. ಪ್ರತಿದಿನವೂ ಸಿಟಿಬಸ್‌ನಲ್ಲಿಯೇ ಬಂದು ತರಬೇತಿ ಮುಗಿಸಿ ಮರಳುತ್ತಿದ್ದರು. ಶಾಲೆ ಮತ್ತು ಓದಿಗೂ ಸಮಯ ಮೀಸಲಿಡಬೇಕಿತ್ತು. ಇದೆಲ್ಲವನ್ನೂ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದರು.

ಮೊದಲ ಕೋಚ್ ಸ್ವರ್ಣಲತಾ ಮತ್ತು ಜಿ. ರವೀಂದರ್ ಅವರ ಮಾರ್ಗದರ್ಶನದಲ್ಲಿ ಅರುಣಾ ಬಹಳ ವೇಗವಾಗಿ ಕೌಶಲಗಳನ್ನು ಕಲಿತರು. 2008ರಲ್ಲಿ ಗಿರಿರಾಜ್ ಅವರು ಕೋಚಿಂಗ್ ಮಾಡಿದರು. ಅಪಘಾತವೊಂದರಲ್ಲಿ ಗಿರಿರಾಜ್ ತೀರಿಕೊಂಡ ನಂತರ ಬ್ರಿಜ್ ಕಿಶೋರ್ ಅವರಿಂದ ಅರುಣಾ ತರಬೇತಿ ಪಡೆಯಲಾರಂಭಿಸಿದರು. ಫ್ಲೋರ್‌ ಎಕ್ಸೈಜ್, ಅನ್‌ ಈವನ್ ಬಾರ್ಸ್‌, ವಾಲ್ಟ್‌ಗಳಲ್ಲಿ ಪರಿಣತಿ ಸಾಧಿಸತೊಡಗಿದರು. ಹತ್ತನೇ ವಯಸ್ಸಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದರು. ಆಗಿನಿಂದ ಜಿಮ್ನಾಸ್ಟಿಕ್ಸ್‌ನಲ್ಲಿ ಮತ್ತಷ್ಟು ಆಸಕ್ತಿ ವಹಿಸಿದರು.

ಓದು ಮತ್ತು ಜಿಮ್ನಾಸ್ಟಿಕ್ಸ್‌ಗಳೆರಡೇ ಅವರ ಜೀವನದ ಭಾಗಗಳಾಗಿದ್ದವು. ಆದರೆ, ವಿಧಿಯಾಟ ಬೇರೆಯೇ ಇತ್ತು. ಎಂಟು ವರ್ಷಗಳ ಹಿಂದೆ ತಂದೆಯ ಅಗಲಿಕೆಯ ನೋವನ್ನು ಅರುಣಾ ಅನುಭವಿಸಬೇಕಾಯಿತು. ಕುಟುಂಬದ ಆರ್ಥಿಕ ನಿರ್ವಹಣೆಯೇ ಕಷ್ಟವಾಗಿತ್ತು. ಆಗಲೇ ಜಿಮ್ನಾಸ್ಟಿಕ್ಸ್‌ ಬಿಡಲು ಯೋಚಿಸಿದ್ದರು. ಆದರೆ ಅಕ್ಕ–ಭಾವ ನೆರವಿಗೆ ನಿಂತರು. ಜಿಮ್ನಾಸ್ಟಿಕ್ಸ್‌ ಸ್ಪರ್ಧೆಗಳಲ್ಲಿ ಗೆದ್ದಾಗ ಬರುತ್ತಿದ್ದ ನಗದು ಬಹುಮಾನವನ್ನು ತಮ್ಮ ಹಾಗೂ ಅಮ್ಮನಿಗಾಗಿ ವಿನಿಯೋಗಿಸುತ್ತಿದ್ದರು. ಪ್ರತಿ ಬಾರಿ ಜಯಿಸಿದಾಗಲೂ ಪ್ರಮಾಣಪತ್ರ, ಪದಕವನ್ನು ತಂದು ಅ‍ಪ್ಪನ ಭಾವಚಿತ್ರದ ಮುಂದಿಟ್ಟು, ನಗದು ಪುರಸ್ಕಾರವನ್ನು ಅಮ್ಮನ ಕೈಗಿಡುತ್ತಿದ್ದರು. ಮತ್ತೊಂದು ಸ್ಪರ್ಧೆಯ ಗೆಲುವಿಗಾಗಿ ಸಿದ್ಧತೆ ಆರಂಭಿಸುತ್ತಿದ್ದರು.

ಎರಡು ವರ್ಷಗಳ ನಂತರ ಭಾರತ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾದ ಅರುಣಾ ಅವರ ಜೀವನ ಬದಲಾಯಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಿಂದ ನೆರವು ಲಭಿಸಿತು. ಸತತ ಮೂರು ವರ್ಷ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದರು.

2013 (ಆ್ಯಂಟ್ವರ್ಪ್‌), 2014 (ನ್ಯಾನಿಂಗ್) ಮತ್ತು 2017 (ಮಾಂಟ್ರಿಯಲ್‌) ನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರು.  ಆದರೆ, ಮುಖ್ಯ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಆದರೆ ಈ ಸಲ ಅವರು ಎಡವಲಿಲ್ಲ. ಮೊದಲ ಸ್ಥಾನ ಪಡೆದ ಸ್ಲೋವಾಕಿಯಾದ ಜಾಸಾ ಕೈಸಲೆಫ್  (13.800 ಅಂಕ) ಮತ್ತು ಬೆಳ್ಳಿ ಪದಕ ಪಡೆದ ಆಸ್ಟ್ರೇಲಿಯಾದ ಎಮಿಲಿ ವೈಟ್‌ಹೆಡ್ (13.699 ಅಂಕ) ಅವರಿಗಿಂತ ಕೆಲವೇ ಪಾಯಿಂಟ್ಸ್‌ಗಳ ಹಿನ್ನಡೆ ಅನುಭವಿಸಿದರು.

ಈ ಹಿಂದೆ ಭಾರತದ ಯಾವ ಜಿಮ್ನಾಸ್ಟ್‌ ಕೂಡ ವಿಶ್ವಕಪ್ ವೇದಿಕೆಯಲ್ಲಿ ಪದಕ ಸಾಧನೆ ಮಾಡಿರಲಿಲ್ಲ. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಶಿಶ್ ಕುಮಾರ್ ಅವರು ಕಂಚು ಗೆದ್ದಿದ್ದರು. ಅಂತರರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತಕ್ಕೆ ಒಲಿದಿದ್ದ ಮೊಟ್ಟಮೊದಲ ಪದಕ ಅದು. 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೀಪಾ ಕರ್ಮಾಕರ್ ಕಂಚು ಗೆದ್ದಿದ್ದರು.

ದೀಪಾ 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದರು. ಭಾರತದಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಮೊದಲ ಜಿಮ್ನಾಸ್ಟ್‌ ಎಂಬ ಶ್ರೇಯವನ್ನೂ ದೀಪಾ ಪಡೆದುಕೊಂಡರು. ವಾಲ್ಟ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದ ದೀಪಾ ಇಡೀ ವಿಶ್ವದ ಗಮನ ಸೆಳೆದಿದ್ದರು. ‘ದೀಪಾ ದೀದಿಯೇ ನನಗೆ ಪ್ರೇರಣೆ’ ಎಂದು ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿರುವ ಅರುಣಾ ಈಗ ಏಪ್ರಿಲ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

‘ಅರುಣಾ ನಮ್ಮ ಬಳಿ ತರಬೇತಿಗೆ ಬಂದಾಗಿ ಐದು ವರ್ಷದ ಹುಡುಗಿ. ಆರಂಭದಲ್ಲಿ ಅಲ್ಪಸ್ವಲ್ಪ ಆಸಕ್ತಿ ಇತ್ತು. ಆದರೆ ದಿನಕಳೆದಂತೆ ಕೌಶಲಗಳನ್ನು ರೂಢಿಸಿಕೊಳ್ಳುವತ್ತ ಆಸಕ್ತಿ ತೋರಿದರು. ಬಹಳಷ್ಟು ಹೊತ್ತು ಕಸರತ್ತು ನಡೆಸುತ್ತಿದ್ದರು. ಅರುಣಾ ಸಾಧನೆಯ ಹಿಂದೆ ಅವರ ತಂದೆಯ ಕೊಡುಗೆ ದೊಡ್ಡದು. ಅಪ್ಪನ ಆಸೆಗೆ ತಕ್ಕಂತೆ ಮಗಳು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ’ ಎಂದು ಕೋಚ್ ರವೀಂದರ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಜಿಮ್ನಾಸ್ಟಿಕ್ಸ್‌ ಕ್ರೀಡೆಯಲ್ಲಿ ಗಾಯಗೊಳ್ಳುವ ಅಪಾಯ ಹೆಚ್ಚು. ಇದರ ಅರಿವು ಇರುವ ಅರುಣಾ ಬಹಳ ಜಾಗರೂಕತೆಯಿಂದ ಆಭ್ಯಾಸ ನಡೆಸುತ್ತಾರೆ. ತೀರಾ ಅತ್ಯಾಧುನಿಕವಲ್ಲದ ಸೌಲಭ್ಯಗಳಲ್ಲಿಯೇ ಅಭ್ಯಾಸ ಮಾಡುವ ಅವರು ಈ ಮಟ್ಟಕ್ಕೆ ಏರಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ದೀಪಾ ಕರ್ಮಾಕರ್ ಮತ್ತು ಕೋಚ್ ವಿಶ್ವೇಶ್ವರ್ ನಂದಿ ಅವರ ಸಲಹೆಗಳನ್ನೂ ಪಡೆದುಕೊಂಡಿದ್ದರು.

‘ಜಿಮ್ನಾಸ್ಟಿಕ್ಸ್‌ ಕಲಿಕೆ ಮತ್ತು ಸ್ಪರ್ಧೆಗಳ ನಡುವೆ ಓದು ಮರೆತಿಲ್ಲ.  ಇಡೀ ವರ್ಷ ಆಟದಲ್ಲಿಯೇ ಮುಳುಗಿರುತ್ತಿದ್ದೆ. ಆದರೆ ಫೆಬ್ರುವರಿಯಲ್ಲಿ ಪುಸ್ತಕ ಖರೀದಿಸಿ, ಮಾರ್ಚ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದೆ. ಶೇ 80ರಷ್ಟು ಅಂಕಗಳು ಬರುತ್ತಿದ್ದವು. ನನ್ನ ಶಾಲೆ ಮತ್ತು ಕಾಲೇಜುಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರ ನೆರವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಶುಕ್ರವಾರ ಹೈದರಾಬಾದ್‌ಗೆ ಮರಳಿದ ಅರುಣಾ ಸುದ್ದಿ ಜಾಲತಾಣಕ್ಕೆ ಹೇಳಿದ್ದರು.

2001ರಲ್ಲಿ ಪುಲ್ಲೇಲಾ ಗೋಪಿಚಂದ್ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಗೆದ್ದರು. 2012ರ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚು ಮತ್ತು 2016ರ ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಬೆಳ್ಳಿ ಗಳಿಸಿದ ನಂತರ ಹೈದರಾಬಾದ್‌ ನಗರಿಯು ಬ್ಯಾಡ್ಮಿಂಟನ್ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಆದರೆ ದಶಕಗಳ ಹಿಂದೆ ಇಲ್ಲಿ ಜಿಮ್ನಾಸ್ಟಿಕ್ಸ್‌ ಕೂಡ ಅಪಾರ ಜನಪ್ರಿಯತೆ ಗಳಿಸಿತ್ತು. ಇದೀಗ ಅರುಣಾ ಸಾಧನೆಯಿಂದ ಜಿಮ್ನಾಸ್ಟಿಕ್ಸ್‌ ಮತ್ತೆ  ಮುಂಚೂಣಿಗೆ ಬಂದಿದೆ. ಇದರಿಂದ ಮುತ್ತಿನ ನಗರಿಯ ಕ್ರೀಡಾ ಹೆಗ್ಗಳಿಕೆಯೂ ನೂರ್ಮಡಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry