ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಹೊರಲು ಹೆಗಲು ಕೊಟ್ಟ ಪೊಲೀಸರು!

Last Updated 3 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಕಂಯ ಕಡಬ ಸಮೀಪದ ಕೊಯಿಲದ ಗುಡ್ಡದಲ್ಲಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದ ವೃದ್ಧರೊಬ್ಬರ ಶವವನ್ನು ಮನೆಗೆ ಸ್ಥಳಾಂತರಿಸಲು ಕುಟುಂಬವೊಂದು ಹಿಂಜರಿದ ಸಂದರ್ಭದಲ್ಲಿ ಪೊಲೀಸರೇ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಜಂಬದಹಳ್ಳಿಯ ಅಸಲಪ್ಪ (80) ಎಂಬುವವರು 20 ವರ್ಷಗಳಿಂದ ಕೊಯಿಲದ ಗುಲ್ಲೋಡಿಯಲ್ಲಿ ವಾಸವಾಗಿದ್ದರು. ಶನಿವಾರ ಮಧ್ಯಾಹ್ನ ಜಂಬದಹಳ್ಳಿಗೆ ಹೋಗಲು ಕಾಲುದಾರಿಯಲ್ಲಿ ಕೊಯಿಲಕ್ಕೆ ಹೊರಟಿದ್ದರು. ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್‌ ದೂರದಲ್ಲಿ ಗುಡ್ಡದಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಕೊಯಿಲದಲ್ಲಿ ಭಾನುವಾರದಿಂದ ದೈವದ ನೇಮ ಮತ್ತು ಜಾತ್ರೆ ಪ್ರಾರಂಭವಾಗಲಿದೆ. ಶವ ಮುಟ್ಟಿದರೆ ಮೈಲಿಗೆ ಆಗುತ್ತದೆ ಎಂಬ ನಂಬಿಕೆಯಲ್ಲಿ ಗ್ರಾಮದ ಯಾರೊಬ್ಬರೂ ಮೃತದೇಹ ಸಾಗಿಸಲು ನೆರವಿಗೆ ಬಂದಿರಲಿಲ್ಲ. ಇದರಿಂದ ಅಸಲಪ್ಪ ಅವರ ಮಗ ರವಿ ಚಿಂತಾಕ್ರಾಂತರಾಗಿದ್ದರು. ಸುದ್ದಿ ತಿಳಿದ ಕಡಬ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಪ್ರಕಾಶ್‌ ದೇವಾಡಿಗ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು.

‘ಊರಿನ ಯಾರೂ ಮೃತದೇಹ ಇರುವ ಸ್ಥಳಕ್ಕೆ ಬರಲು ಒಪ್ಪಲಿಲ್ಲ. ಇದರಿಂದ ಮೃತ ವ್ಯಕ್ತಿಯ ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಪ್ರಕಾಶ್‌ ದೇವಾಡಿಗ, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ರವಿ ಮತ್ತು ಗೃಹರಕ್ಷಕ ಸಂದೀಪ್‌ ಮೃತರ ಮಗನೊಂದಿಗೆ ಸೇರಿಕೊಂಡು ಶವ ಹೊರಲು ಹೆಗಲು ಕೊಟ್ಟರು. ಅರ್ಧ ಕಿ.ಮೀ. ಹೊತ್ತು ಮೃತದೇಹವನ್ನು ಮನೆಗೆ ತಲುಪಿಸಿದರು’ ಎಂದು ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದರು.

‘ಮೃತದೇಹ ಮನೆ ತಲುಪಿದ ಬಳಿಕವೂ ನೆರವಿಗೆ ಹೆಚ್ಚಿನ ಜನರು ಇರಲಿಲ್ಲ. ಆಗಲೂ ಪೊಲೀಸರು ನೆರವು ನೀಡಿದರು. ಅಸಲಪ್ಪ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಮೃತದೇಹ ಹೊರಲು ನೆರವಾಗುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ’ ಎಂದು ಎಸ್‌ಪಿ ಹೇಳಿದರು.

ಪೊಲೀಸರು ಶವ ಹೊರುತ್ತಿರುವ ಫೋಟೊಗಳು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಪೊಲೀಸರ ಈ ಕಾರ್ಯಕ್ಕೆ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT