ಮರಗಳಿಗೂ ಮತವಿದ್ದರೆ ವರದಿ ಜಾರಿಯಾಗುತ್ತಿತ್ತೇ?

7

ಮರಗಳಿಗೂ ಮತವಿದ್ದರೆ ವರದಿ ಜಾರಿಯಾಗುತ್ತಿತ್ತೇ?

Published:
Updated:
ಮರಗಳಿಗೂ ಮತವಿದ್ದರೆ ವರದಿ ಜಾರಿಯಾಗುತ್ತಿತ್ತೇ?

ಉತ್ತರದ ಗುಜರಾತ್‌ನಿಂದ ಆರಂಭವಾಗಿ ದಕ್ಷಿಣದ ತುದಿಯ ಕೇರಳ ಸೇರಿದಂತೆ ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟ, ಅಪರೂಪದ ಜೀವವೈವಿಧ್ಯ, ನೈಸರ್ಗಿಕ ಸಂಪತ್ತು, ನಶಿಸುತ್ತಿರುವ ಸಸ್ಯ ಮತ್ತು ಪ್ರಾಣಿ ಪ್ರಪಂಚಕ್ಕೆ ಆಶ್ರಯ ನೀಡಿದೆ. ಮೂರು ಮಹಾನದಿಗಳು ಇಲ್ಲಿಯೇ ಜನ್ಮತಾಳಿವೆ. ಇಂತಹ ಅಪರೂಪದ ಜೀವವೈವಿಧ್ಯ ತಾಣವನ್ನು ಕಾಪಾಡಲು ‘ಪರಿಸರ ಸೂಕ್ಷ್ಮ ಪ್ರದೇಶ’ವನ್ನು ಗುರುತಿಸಿ, ಅದರ ಸಂರಕ್ಷಣೆಗಾಗಿ ನೀಡಿದ್ದ ಡಾ.ಕೆ. ಕಸ್ತೂರಿರಂಗನ್‌ ಸಮಿತಿಯ ವರದಿಯನ್ನು ಜಾರಿ ಮಾಡುವ ಪ್ರಕ್ರಿಯೆಗೆ ರಾಜಕೀಯ ಮೇಲಾಟದಿಂದ ಗ್ರಹಣ ಹಿಡಿದಿದೆ.

ಕುರುಚಲು ಕಾಡಿನಿಂದ ಆರಂಭವಾಗುವ ಘಟ್ಟದಲ್ಲಿ ನಿತ್ಯಹರಿದ್ವರ್ಣದ ಕಾಡು, ಶೋಲಾ ಅರಣ್ಯವೂ ಇದೆ. ಇಂತಹ ಸಸ್ಯ ಸಂಪತ್ತು ಭಾರತಕ್ಕೆ ಮುಂಗಾರು ಮಳೆ ಸುರಿಸಲು ಸದಾ ಕಾಣಿಕೆ ನೀಡುತ್ತಲೇ ಬಂದಿದೆ. ಈ ಅರಣ್ಯದಿಂದಲೇ ಅನೇಕ ಜೀವ ಜಗತ್ತು, ಬುಡಕಟ್ಟು ನಿವಾಸಿಗಳು ಆಶ್ರಯ ಪಡೆದಿದ್ದರೆ, ಹಲವು ಬಗೆಯ ಜನಪದವೂ ಬೆಳೆಯುತ್ತಾ ಬಂದಿದೆ. ಕಣ್ಮರೆಯಾಗುತ್ತಿರುವ ಸಸ್ಯಗಳ ಪೈಕಿ 229 ಸಸ್ಯ ಪ್ರಭೇದ, 31 ವರ್ಗದ ಪ್ರಾಣಿಗಳು, 15 ಬಗೆಯ ಪಕ್ಷಿಗಳು, 43 ಶೀತ ರಕ್ತ ಪ್ರಾಣಿಗಳು ಮತ್ತು ತಲಾ ಒಂದು ಬಗೆಯ ಮೀನು ಮತ್ತು ಕೀಟಕ್ಕೆ ಈ ಘಟ್ಟ ಆಶ್ರಯ ನೀಡಿದೆ.

ಕೃಷ್ಣಾ, ಗೋದಾವರಿ ಮತ್ತು ಕಾವೇರಿ... ಈ ಪ್ರಮುಖ ಮೂರು ನದಿಗಳು ರಾಜ್ಯಗಳನ್ನೇ ಹಾದು ಹೋದರೆ, ಸುಮಾರು ನೂರಕ್ಕೂ ಹೆಚ್ಚು ಸಣ್ಣ ನದಿಗಳು ಮುಖ್ಯ ನದಿಗಳನ್ನು ಸೇರಿ ಅವು ಬೃಹತ್‌ ಆಕಾರ ಪಡೆಯಲು ಸಹಕಾರಿಯಾಗಿವೆ. ಈ ನದಿಗಳು ಸದಾ ಹರಿಯುವಂತೆ ಮಾಡಲು ಶೋಲಾ ಮತ್ತು ನಿತ್ಯ ಹರಿದ್ವರ್ಣದ ಕಾಡುಗಳೇ ಕಾರಣ. ಬೆಟ್ಟಗಳ ನಡುವೆ ಸದಾ ಹಸಿರಾಗಿರುವ ಶೋಲಾಕ್ಕೆ ಧಕ್ಕೆಯಾದರೆ ಝರಿಗಳು ಸತ್ತಂತೆ. ಪರ್ವತದ ಆಕಾರದಲ್ಲಿರುವ ಘಟ್ಟ ಮತ್ತು ಮುಗಿಲನ್ನು ಮುಟ್ಟಲು ಪೈಪೋಟಿ ನೀಡುವ ಮರಗಳು ಮೋಡಗಳನ್ನು ತಡೆದು ರಾಜ್ಯಗಳಲ್ಲಿ ಮಳೆ ಸುರಿಸಲು ಕಾರಣವಾಗುತ್ತವೆ. ಕೆಲ ಭಾಗಗಳಲ್ಲಿ ಒಂದೇ ದಿನದಲ್ಲಿ 40 ಸೆಂಟಿ ಮೀಟರ್‌ ಮಳೆ ಬಿದ್ದ ಉದಾಹರಣೆಯೂ ಇದೆ. ದಕ್ಷಿಣದ ಚಿರಾಪುಂಜಿ ಎಂದೇ ಖ್ಯಾತಿಯಾದ ಆಗುಂಬೆ ಸಹ ಇದೇ ಘಟ್ಟದಲ್ಲಿದೆ. ಈ ಘಟ್ಟ ಪ್ರದೇಶಗಳಲ್ಲಿ ಮಳೆ ಬಿದ್ದರೆ ಮಾತ್ರವೇ ಬಯಲು ಪ್ರದೇಶದಲ್ಲಿ ಕೃಷಿ ನಡೆಯಲು ಸಾಧ್ಯ. ಆಯಾ ಅಣೆಕಟ್ಟೆಗಳಿಗೆ ನೀರು ಬಂದರೆ ಮಾತ್ರವೇ ಅಚ್ಚುಕಟ್ಟಿಗೆ ನೀರು ಹರಿಯುತ್ತದೆ. ಅಂದರೆ, ಘಟ್ಟ ಪ್ರದೇಶದಲ್ಲಿ ಸಸ್ಯ ಸಂಪತ್ತು ಉಳಿದರೆ ಮಾತ್ರ ಮಳೆ ಬರುತ್ತದೆ.

ಕಾಡಿನ ಸಂರಕ್ಷಣೆಗೆ ಮೊದಲು ಕಾನೂನು ತಂದಿದ್ದೇ ಮೈಸೂರು ಸಂಸ್ಥಾನ. ಇದರ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಿದ್ದರೂ, ಘಟ್ಟದಲ್ಲಿರುವ ಅಪೂರ್ವ ಜೀವವೈವಿಧ್ಯದ ಸಂರಕ್ಷಣೆಗೆ ಮತ್ತಷ್ಟು ಒತ್ತು ನೀಡುವ ಉದ್ದೇಶದಿಂದ ಹಿರಿಯ ವಿಜ್ಞಾನಿ ಮಾಧವ ಗಾಡ್ಗೀಳ್‌ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿತು. ಈ ಸಮಿತಿಯು 2011ರ ಆಗಸ್ಟ್‌ 31ರಂದು ಘಟ್ಟದ 1,29,037 ಚದರ ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬಹುದು ಎನ್ನುವ ಶಿಫಾರಸು ಮಾಡಿತು. ಘಟ್ಟದ ಶೇ 64ರಷ್ಟು ಪ್ರದೇಶದಲ್ಲಿ ಅಭಿವೃದ್ಧಿಗೆ ಕೆಲ ನಿರ್ಬಂಧ ಹಾಕಬೇಕು ಎಂದೂ ಹೇಳಿತು. ಇದಕ್ಕೆ ರಾಜಕೀಯ ವಲಯದಲ್ಲಿ ಭಾರಿ ವಿರೋಧ ಎದುರಾದಾಗ ಗಾಡ್ಗೀಳ್‌ ವರದಿ ಪರಿಶೀಲನೆಗಾಗಿ ಕೇಂದ್ರ ಸರ್ಕಾರ, 2013ರ ಏಪ್ರಿಲ್‌ 15ರಂದು ಡಾ.ಕೆ. ಕಸ್ತೂರಿರಂಗನ್‌ ಸಮಿತಿ ರಚಿಸಿತು. ಈ ಸಮಿತಿ ಅದೇ ವರ್ಷದ ನವೆಂಬರ್‌ 13ರಂದು ವರದಿ ನೀಡಿ, ಘಟ್ಟದ ಶೇ 37ರಷ್ಟು ಅರಣ್ಯ ಪ್ರದೇಶವನ್ನು ಅಂದರೆ 60,000 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿತು.

ಆರು ರಾಜ್ಯಗಳ 1,500 ಕಿ.ಮೀ ಪ್ರದೇಶದಲ್ಲಿ ಹಾದುಹೋಗುವ 1,65,280 ಚದರ ಕಿ.ಮೀ ಪ್ರದೇಶದಲ್ಲಿರುವ ಪಶ್ಚಿಮಘಟ್ಟದ ಜೀವವೈವಿಧ್ಯವನ್ನು ಉಳಿಸುವ ಉದ್ದೇಶದಿಂದ ರಚಿಸಿದ್ದ ಕಸ್ತೂರಿರಂಗನ್‌ ಸಮಿತಿ ಮಾಡಿರುವ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರಲು ಆಯಾ ರಾಜ್ಯ ಸರ್ಕಾರಗಳಿಗೆ ಕಾಳಜಿ ಇದ್ದಂತಿಲ್ಲ. ಘಟ್ಟವನ್ನು ಉಳಿಸಲು ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಮಾಡಿದ ಪ್ರಯತ್ನಗಳಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ರಾಜಕೀಯ ವಲಯದಲ್ಲೂ ಅದು ಪ್ರತಿಧ್ವನಿಸಿದೆ. ಆರಂಭದಲ್ಲಿ ಕೇರಳ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ತಕರಾರು ಎತ್ತಿದ್ದವು. ಇದೇ ಹಾದಿಯಲ್ಲಿ ಕರ್ನಾಟಕವೂ ನಡೆಯಿತು. ಕಸ್ತೂರಿ ರಂಗನ್‌ ಮತ್ತು ಗಾಡ್ಗೀಳ್‌ ಸಮಿತಿಗಳು ಮಾಡಿದ ಶಿಫಾರಸುಗಳೇನು ಎನ್ನುವ ಬಗ್ಗೆ ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಘಟ್ಟದ ವ್ಯಾಪ್ತಿಗೆ ಬರುವ ಹಳ್ಳಿಗಳ ಜನರಿಗೆ ತಿಳಿ ಹೇಳುವ ಯತ್ನವನ್ನೇ ಅರಣ್ಯ ಇಲಾಖೆ ಮಾಡಲಿಲ್ಲ. ಕೆಲವೇ ಜಿಲ್ಲೆಗಳಲ್ಲಿ ಸ್ಥಳೀಯ ರಾಜಕಾರಣಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಸರ್ಕಾರ ಬೆಚ್ಚಿ ಬಿದ್ದಿತು. ಮತ ಬ್ಯಾಂಕ್‌ ರಾಜಕೀಯ ಎಲ್ಲಾ ಪ್ರಮುಖ ಪಕ್ಷಗಳಿಗೂ ಬೇಕಾಗಿತ್ತು.

ಅಲ್ಲಲ್ಲಿ ನಡೆದ ಸಣ್ಣ ಪ್ರತಿಭಟನೆಗೆ ಬೆಚ್ಚಿದ ರಾಜ್ಯ ಸರ್ಕಾರ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪತ್ರ ಬರೆದು ತನ್ನ ಅಭಿಪ್ರಾಯವನ್ನು ಮಂಡಿಸಿತು. ‘ಮಾನವ ನಿರ್ಮಿತ ಅರಣ್ಯ ಮತ್ತು ನೈಸರ್ಗಿಕ ಅರಣ್ಯ ಎಂಬ ವರ್ಗೀಕರಣವೇ ಸರಿಯಲ್ಲ. ಅರಣ್ಯ ಕಾಯ್ದೆ ಜಾರಿಯಲ್ಲಿರುವ ಸಂರಕ್ಷಿತ ಪ್ರದೇಶ, ಮೀಸಲು ಅರಣ್ಯ, ವನ್ಯಜೀವಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಅಭಯಾರಣ್ಯಗಳನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿಸಬಹುದು. ಕಸ್ತೂರಿರಂಗನ್‌ ಸಮಿತಿಯು ಸರಿಯಾದ ಮಾನದಂಡವನ್ನು ಅನುಸರಿಸದ ಕಾರಣದಿಂದ ಶೇ 80ರಷ್ಟು ಮಾನವ ನಿರ್ಮಿತ ಅರಣ್ಯ ಹೊಂದಿರುವ ಪ್ರದೇಶವೂ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದೆ. ಇದಕ್ಕೆ ಈ ಪ್ರದೇಶದಲ್ಲಿ ವಾಸಿಸುವ ಜನರ ವಿರೋಧವಿದೆ’ ಎಂದು ಅದು ವಾದಿಸಿತು.

ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಈಗಾಗಲೇ ವಿದ್ಯುತ್‌ ಉತ್ಪಾದನಾ ಘಟಕಗಳು ಕೆಲಸ ಮಾಡುತ್ತಿವೆ. ಇವುಗಳ ವಿಸ್ತರಣೆಗೆ ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆ ಇರಬಾರದು ಎನ್ನುವ ಆಗ್ರಹವನ್ನೂ ರಾಜ್ಯ ಸರ್ಕಾರ ಮಾಡಿದೆ. ಈ ಪ್ರದೇಶದಲ್ಲಿ ಅನೇಕ ಧಾರ್ಮಿಕ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ವರ್ಷದ ಅನೇಕ ದಿನಗಳ ಕಾಲ ಧಾರ್ಮಿಕ ಆಚರಣೆ ನಡೆಯುತ್ತಿರುತ್ತದೆ. ಇವುಗಳ ಮೇಲೆ ನಿಯಂತ್ರಣ ವಿಧಿಸಬಹುದಾದರೂ ಆ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಹೇರಬಾರದು ಎನ್ನುವ ಮನವಿಯನ್ನು ಸಹ ಮಾಡಿದೆ. ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎನ್ನುವ ವಾದವನ್ನೂ ಮುಂದಿರಿಸಿದೆ.

ಮಾನವ ನಿರ್ಮಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಪರಿಸರ ಸೂಕ್ಷ್ಮ ವಲಯಕ್ಕೆ ಗ್ರಾಮಸ್ಥರ ವಿರೋಧವಿದೆ ಎನ್ನುವ ವಾದವನ್ನು ಇರಿಸಿಕೊಂಡು ಸಮಿತಿಯ ಸದುದ್ದೇಶಗಳನ್ನು ದುರ್ಬಲ ಮಾಡುವ ಪ್ರಯತ್ನಗಳು ನಡೆದಿವೆ.

‘1986ರ ಪರಿಸರ ರಕ್ಷಣಾ ಕಾಯ್ದೆಯ ಅಡಿಯಲ್ಲೇ ಕಸ್ತೂರಿರಂಗನ್‌ ವರದಿಯ ಕರಡು ಅಧಿಸೂಚನೆ ಹೊರಡಿಸಿತು. ಅಂದರೆ ಹೊಸ ಕಾಯ್ದೆಯನ್ನು ತರುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಲಿಲ್ಲ. ಸ್ಥಳೀಯ ರಾಜಕಾರಣಿಗಳು, ತಮ್ಮ ಬೆಂಬಲಿಗರು ನಡೆಸುತ್ತಿದ್ದ ಮರಳು ಗಣಿಗಾರಿಕೆ, ಕಲ್ಲು ಕ್ವಾರಿ, ಮರ ಕತ್ತರಿಸುವ ಲಾಬಿಯ ಹಿತ ಕಾಯುವುದಕ್ಕಾಗಿ ವರದಿ ಜಾರಿ ಮಾಡಿದರೆ ರೈತರು ಜಮೀನು ಕಳೆದುಕೊಳ್ಳುತ್ತಾರೆ ಎನ್ನುವ ಗುಲ್ಲನ್ನು ಎಬ್ಬಿಸಿದರು. ಇದಕ್ಕೆ ಸರ್ಕಾರ ತಲೆಬಾಗಿತು’ ಎಂದು ವೈಲ್ಡ್ ಲೈಫ್‌ ಫಸ್ಟ್‌ನ ಟ್ರಸ್ಟಿ ಪ್ರವೀಣ್‌ ಭಾರ್ಗವ್‌ ಬೇಸರ ವ್ಯಕ್ತಪಡಿಸುತ್ತಾರೆ. ಇವರು ಸುಮಾರು ಮೂರೂವರೆ ದಶಕದಿಂದ ಘಟ್ಟ ಸಂರಕ್ಷಣೆಯಲ್ಲಿ ಹಲವು ವಿಧದಲ್ಲಿ ನಿರತರಾಗಿದ್ದಾರೆ. ಕುದುರೆ ಮುಖದಲ್ಲಿ ಗಣಿಗಾರಿಕೆ ನಿಲ್ಲಲು ಇವರೇ ಮೂಲ ಕಾರಣ.

‘ಸಣ್ಣ ಗುತ್ತಿಗೆದಾರರೇ ಸ್ಥಳೀಯ ರಾಜಕಾರಣಿಗಳಿಗೆ ಹಣದ ಮೂಲ. ರಸ್ತೆ ನಿರ್ಮಾಣ, ಪೈಪ್‌ಲೈನ್‌ ಕಾಮಗಾರಿ, ವಿದ್ಯುತ್‌ ತಂತಿ ಅಳವಡಿಕೆಯಂತಹ ಅಭಿವೃದ್ಧಿ ಕಾಮಗಾರಿಗೆ ವರದಿ ಅಡ್ಡಿಯಾಗುತ್ತದೆ ಎನ್ನುವ ಆತಂಕದಿಂದ ಘಟ್ಟದ ಎಲ್ಲಾ ಜಿಲ್ಲೆಗಳಲ್ಲಿ ವಿರೋಧ ಬಂತು. ಕಾಡಿನಂಚಿನ ಹಳ್ಳಿಗಳಲ್ಲಿ ಜೆಸಿಬಿ ಓಡಾಡಿದರೆ ಹಣ ಹರಿದಾಡುತ್ತದೆ. ಎಲ್ಲಾ ಪಕ್ಷಗಳ ಹಿಂಬಾಲಕರು ಈ ರೀತಿಯ ಗುತ್ತಿಗೆದಾರರೇ ಆಗಿದ್ದಾರೆ. ಇವರಿಗೆ ಕೆಲಸ ಕೊಡಿಸುವುದು ಎಂದರೆ ತಮ್ಮ ಹಿಂಬಾಲಕರಿಗೆ ಪುಡಾರಿಗಳು ಉಡುಗೊರೆ ನೀಡಿದಂತೆ. ಹೀಗಾಗಿಯೇ, ‘ವರದಿ ಜಾರಿಯಾದರೆ ನಿಮ್ಮ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ, ನಿಮಗೆ ನೀರು, ವಿದ್ಯುತ್‌ ಸಿಗಲ್ಲ’ ಎಂದು ಹೆದರಿಸಿದರು. ಯುನೆಸ್ಕೋ, ಘಟ್ಟದ ಕೆಲ ಪ್ರದೇಶಕ್ಕೆ ಮಾನ್ಯತೆ ನೀಡುತ್ತದೆ ಎಂದಾಗಲೂ ಇದೇ ರೀತಿ ಜನರನ್ನು ಹೆದರಿಸಿದರು’ ಎಂದು ಅವರು ಒಳನೋಟ ತೆರೆದಿಡುತ್ತಾರೆ.

‘ಸೂಕ್ಷ್ಮ ಪರಿಸರ ಪ್ರದೇಶದಿಂದ ಗ್ರಾಮಸ್ಥರನ್ನು ಸ್ಥಳಾಂತರ ಮಾಡುವುದಿಲ್ಲ ಎಂಬುದು ವರದಿಯ ಕರಡನ್ನು ಸರಿಯಾಗಿ ಓದಿದರೆ ಅರ್ಥವಾಗುತ್ತದೆ. ಗಣಿಗಾರಿಕೆ ನಿಷೇಧ ಆದರೆ ಹಣದ ಹರಿವು ನಿಲ್ಲುತ್ತದೆ. ಇದೇ ಉದ್ದೇಶಕ್ಕೆ ವರದಿಗೆ ವಿರೋಧ ಬರುತ್ತಿದೆ. ಹೀಗಾಗಿಯೇ ಕರಡು, ಆದೇಶದ ರೂಪವನ್ನೇ ತಾಳಲಿಲ್ಲ. ತೀರಾ ಇತ್ತೀಚೆಗೆ ರಾಜ್ಯದ ಬಿಜೆಪಿ ನಿಯೋಗ ಕೇಂದ್ರ ಅರಣ್ಯ, ಪರಿಸರ ಸಚಿವ ಡಾ. ಹರ್ಷವರ್ಧನ್‌ ಅವರನ್ನು ಭೇಟಿ ಮಾಡಿ ವರದಿ ಜಾರಿ ಮಾಡಬೇಡಿ ಎಂದು ಮನವಿ ಮಾಡಿದೆ. ವರದಿ ಜಾರಿ ಮಾಡಿದರೆ ಘಟ್ಟದ ಸೂಕ್ಷ್ಮ ಪ್ರದೇಶ ಉಳಿಯುತ್ತದೆ. ಇದನ್ನು ಆಯಾ ಪ್ರದೇಶದ ಜನ ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದೂ ಅವರು ವಿವರಿಸುತ್ತಾರೆ.

ಘಟ್ಟ ಪ್ರದೇಶದಲ್ಲಿ ಕಸ್ತೂರಿರಂಗನ್‌ ವರದಿಯ ವಿರುದ್ಧ ಪ್ರತಿಭಟನೆ ನಡೆಯಲು ಮರ ಕಳ್ಳಸಾಗಾಣಿಕೆ ಲಾಬಿಯೇ ಮುಖ್ಯ ಕಾರಣ ಎನ್ನುವ ಕೊಡಗಿನ ಪರಿಸರವಾದಿ ತಮ್ಮು ಪೂವಯ್ಯ, ‘ಪಕ್ಷಾತೀತವಾಗಿ ಇಲ್ಲಿಯ ರಾಜಕಾರಣಿಗಳಿಗೆ ಮರದ ವ್ಯಾಪಾರಿಗಳ ಮೇಲೆ ಎಲ್ಲಿಲ್ಲದ ಪ್ರೀತಿಯಿದೆ. ಇದರ ಫಲವಾಗಿ ರಾಜಕಾರಣಿಗಳ ಆದಾಯ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ವರದಿಯ ವಿರುದ್ಧ ಇವರು ಸ್ಥಳೀಯ ಜನರನ್ನು ಎತ್ತಿ ಕಟ್ಟಿದರು. ಅರಣ್ಯ ಸಚಿವ ರಮಾನಾಥ ರೈ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಮಡಿಕೇರಿಗೆ ಬಂದಾಗ, ಮೂರು ಜನ ಪರವಾಗಿ ಮಾತನಾಡಿದರೆ, 600 ಜನ ವಿರೋಧ ಮಾಡಿದರು. ಜಿಲ್ಲಾಧಿಕಾರಿಯನ್ನೇ ಮಾತನಾಡಲು ಬಿಡಲಿಲ್ಲ. ಅವರು ಸಭೆಯಿಂದಲೇ ಹೊರ ನಡೆದರು. ವಿರೋಧ ಮಾಡಿದವರೆಲ್ಲಾ ಟಿಂಬರ್‌ ಲಾಬಿಯ ಪರ ಇದ್ದವರೇ’ ಎಂದು ವಾಸ್ತವವನ್ನು ಬಿಚ್ಚಿಡುತ್ತಾರೆ.

1994ರಲ್ಲಿ ಕಾಫಿಯ ಮೇಲಿನ ನಿಯಂತ್ರಣ ತೆರವಾದ ನಂತರ ಜಿಲ್ಲೆಯಲ್ಲಿ ಇಳುವರಿ 60 ಸಾವಿರ ಟನ್‌ನಿಂದ 1.3 ಲಕ್ಷ ಟನ್‌ಗೆ ಏರಿದೆ. ಇದಕ್ಕೆ ಉತ್ತಮ ಇಳುವರಿ ತರುವ ಗಿಡ ಮತ್ತು ತೋಟ ವಿಸ್ತರಣೆ ಕಾರಣ. ಇಲ್ಲಿ ದೇವರಕಾಡು ಸಹ ಮೂಲಸ್ವರೂಪವನ್ನು ಕಳೆದುಕೊಂಡಿದೆ. ಎರಡು ರಾಜ್ಯಗಳ ಜೀವನಾಡಿ ಎನ್ನುವ ಕಾವೇರಿಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಇಂತಹ ಕಟುಸತ್ಯ ಕಣ್ಣಮುಂದೆ ಇರುವಾಗ ಕಸ್ತೂರಿರಂಗನ್‌ ವರದಿಯನ್ನು ಜಾರಿ ಮಾಡದಿರುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

‘ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಲಕಾವೇರಿ ಬಳಿ ದೊಡ್ಡ ಎಸ್ಟೇಟ್‌ ಖರೀದಿ ಮಾಡಿದ್ದಾರೆ. ಹಣ ಇರುವ ರಾಜಕೀಯ ಮುಖಂಡರಿಗೆ ತೋಟ ಖರೀದಿ ಮಾಡುವ ಖಯಾಲಿ ಆರಂಭವಾಗಿದೆ. ಇವರಿಗೆ ತೋಟ ಹುಡುಕುವ ದಲ್ಲಾಳಿಗಳು ಸೃಷ್ಟಿಯಾಗಿದ್ದಾರೆ. ತೋಟಕ್ಕೆ ಹೊಂದಿಕೊಂಡಿರುವ ಅರಣ್ಯಕ್ಕೂ ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಇವರಿಗೆ ಕಾಡು, ಸೂಕ್ಷ್ಮ ಪರಿಸರ ಉಳಿಸುವ ಯಾವ ಕಾನೂನು ಬೇಕಾಗಿಲ್ಲ. ಎಲ್ಲಾ ವಿರೋಧದ ನಡುವೆಯೂ ನಮ್ಮಂತಹ ಪರಿಸರವಾದಿಗಳು ಹೋರಾಟ ಮಾಡುತ್ತಲೇ ಇರುತ್ತೇವೆ’ ಎಂದು ವಿವರಿಸುತ್ತಾರೆ.

ಕೊಡಗಿನ ಮೂಲಕ ಅರಣ್ಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹಾದುಹೋಗುವ ಕೇರಳ ಮತ್ತು ಮೈಸೂರು ಸಂಪರ್ಕಿಸುವ ರೈಲ್ವೆ ಯೋಜನೆಗೆ ಈಗ ವಿರೋಧ ವ್ಯಕ್ತವಾಗುತ್ತಿದೆ. ಮೈಸೂರಿನಲ್ಲಿ ಪ್ರತಿಭಟನೆಯೂ ನಡೆದಿದೆ. ಇದೇ ಜಿಲ್ಲೆಯ ಅರಣ್ಯವನ್ನು ಒಳಗೊಂಡಂತೆ ಕಸ್ತೂರಿರಂಗನ್‌ ವರದಿ ಜಾರಿ ಮಾಡಿದ್ದರೆ, ಬೃಹತ್‌ ಯೋಜನೆಗೆ ಅಡ್ಡಿಯಾಗುತ್ತಿತ್ತು.

ಇದೇ ಸ್ಥಿತಿ ಘಟ್ಟದಲ್ಲಿರುವ ಜಿಲ್ಲೆಗಳಲ್ಲೂ ಇದೆ. ‘ಕಾಡು ಇರಬೇಕು; ನಮಗಾಗಿ ಇರಬೇಕು. ಸಂರಕ್ಷಣಾ ಕಾಯ್ದೆ ಇರಬೇಕು; ನಮಗೆ ತೊಂದರೆ ನೀಡದಂತೆ ಇರಬೇಕು’ ಎನ್ನುವ ಮನೋಭಾವ ಇದೆ. ಹೀಗಾಗಿ ಪರಿಸರ, ಕಾಡು, ಜೀವ ಜಗತ್ತು ಉಳಿಸುವ ಯಾವುದೇ ಹೋರಾಟ ಚುನಾವಣಾ ವಿಷಯ ಆಗಿಲ್ಲ. ಮರಗಳಿಗೂ ಮತ ಚಲಾಯಿಸುವ ಹಕ್ಕಿದ್ದರೆ ಇಂತಹ ವರದಿಗಳಿಗೆ ಮಾನ್ಯತೆ ದೊರಕುತ್ತಿತ್ತು ಎನ್ನಬಹುದು.

153 ‘ಸೂಕ್ಷ್ಮ’ ಗ್ರಾಮ

ಕಸ್ತೂರಿರಂಗನ್‌ ವರದಿಯಲ್ಲಿ ರಾಜ್ಯದ 1,438 ಗ್ರಾಮಗಳನ್ನು ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಗುರುತಿಸಲಾಗಿತ್ತು. ಅದರ ವಿರುದ್ಧ ತಕರಾರು ಎತ್ತಿದ ರಾಜ್ಯ ಸರ್ಕಾರ, ಕೇವಲ 153 ಗ್ರಾಮಗಳನ್ನು ಮಾತ್ರವೇ ಈ ವಲಯಕ್ಕೆ ಸೇರಿಸಲು ಸಮ್ಮತಿಸಿತ್ತು. ಈ ಗ್ರಾಮಗಳು ಈಗಾಗಲೇ ರಕ್ಷಿತ ಅರಣ್ಯ ಅಥವಾ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿದ್ದು, ಅವುಗಳಿಗೆ ಅರಣ್ಯ ಕಾಯ್ದೆ ಅನ್ವಯವಾಗುತ್ತಿದೆ. ಉಳಿದ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಬಾರದು ಎಂದು ಅದು ಆಕ್ಷೇಪ ಎತ್ತಿತ್ತು.

ತರ್ಕಕ್ಕೆ ಬೆಲೆಯಿಲ್ಲ...

ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಅದಿರು ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು 20 ಸಾವಿರ ಚದರ ಮೀಟರ್‌ನಷ್ಟು ಬೃಹತ್‌ ಕಟ್ಟಡದ ನಿರ್ಮಾಣಕ್ಕೆ ಕಡಿವಾಣ ಹಾಕುವಂತೆ ಕಸ್ತೂರಿರಂಗನ್‌ ವರದಿ ಶಿಫಾರಸು ಮಾಡಿದೆ. ಪಶ್ಚಿಮಘಟ್ಟ ಪ್ರದೇಶದ ಜನಪ್ರತಿನಿಧಿಗಳು ಆರಂಭದಿಂದಲೂ ಇದಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.

‘ಮರಳು, ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು. ಇದು ಸ್ಥಳೀಯ ಪ್ರದೇಶಾಭಿವೃದ್ಧಿಗೆ ಸಹಕಾರಿ’ ಎನ್ನುವುದು ಅವರ ಆಗ್ರಹವೂ ಆಗಿತ್ತು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಪರಿಸರ ಉಳಿಯುವುದಿಲ್ಲ ಎನ್ನುವ ತರ್ಕಕ್ಕೆ ರಾಜಕೀಯ ವಲಯದಲ್ಲಿ ಬೆಲೆಯೇ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry