ಮೂರನೇ ವ್ಯಕ್ತಿ ಸ್ಪರ್ಧಿಸಿದರೆ ತ್ಯಾಗಕ್ಕೆ ಸಿದ್ಧ

7

ಮೂರನೇ ವ್ಯಕ್ತಿ ಸ್ಪರ್ಧಿಸಿದರೆ ತ್ಯಾಗಕ್ಕೆ ಸಿದ್ಧ

Published:
Updated:
ಮೂರನೇ ವ್ಯಕ್ತಿ ಸ್ಪರ್ಧಿಸಿದರೆ ತ್ಯಾಗಕ್ಕೆ ಸಿದ್ಧ

ಶ್ರೀರಂಗಪಟ್ಟಣ: ‘ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಮೂವರು, ನಾಲ್ವರು ಸ್ಪರ್ಧಿಸುತ್ತಾರೆ ಎಂಬುದು ಕೇವಲ ಊಹಾಪೋಹ. ಇಬ್ಬರು ಮಾತ್ರ ಸ್ಪರ್ಧಿಸುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಕುಮಾರ ಪರ್ವ, ರವೀಂದ್ರ ಶ್ರೀಕಂಠಯ್ಯ ಮತ್ತು ಅವರ ಬೆಂಬಲಿಗರ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕುಟುಂಬದಿಂದ ಇಬ್ಬರಿಗಿಂತ ಹೆಚ್ಚು ಮಂದಿ ಸ್ಪರ್ಧಿಸುವ ಪರಿಸ್ಥಿತಿ ಇಲ್ಲವೇ ಇಲ್ಲ. ಮೂರನೇ ವ್ಯಕ್ತಿ ಸ್ಪರ್ಧಿಸುವ ಸನ್ನಿವೇಶ ಬಂದರೆ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ. ಈ ಕುರಿತು ಬಹಿರಂಗವಾಗಿ ವಾಗ್ದಾನ ಮಾಡುತ್ತಿದ್ದೇನೆ’ ಎಂದರು.

‘ಕುಟುಂಬದ ಸಾಮರಸ್ಯ ಹದಗೆಡಿಸುವ ಪ್ರಯತ್ನ ನಡೆಯುತ್ತಿದೆ. ದೇವೇಗೌಡರ ಕುಟುಂಬದಲ್ಲಿ ಕಲಹ ನಡೆಯುತ್ತಿದೆ. ಪ್ರಜ್ವಲ್‌ ರೇವಣ್ಣ ಹಾಗೆಂದರು, ಹೀಗೆಂದರು ಎಂದು ಸುದ್ದಿ ಹಬ್ಬಿಸಿ ಒಗ್ಗಟ್ಟು ಮುರಿಯುವ ಯತ್ನ ನಡೆಯುತ್ತಲೇ ಇದೆ. ಅದಕ್ಕೆ ಆಸ್ಪದ ಕೊಡುವುದಿಲ್ಲ. ಯಾರು ಏನೇ ಮಾಡಿದರೂ ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ. ವಿರೋಧಿಗಳ ಯತ್ನ ಫಲಿಸುವುದಿಲ್ಲ’ ಎಂದರು.

‘ಜೆಡಿಎಸ್‌ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ವಿರೋಧಿಗಳು ಬೊಬ್ಬೆ ಹೊಡೆಯುತ್ತಾರೆ. ಮಧು ಬಂಗಾರಪ್ಪ, ಫಾರೂಕ್‌, ಎಚ್‌. ವಿಶ್ವನಾಥ್‌, ಡಾ. ಅನ್ನದಾನಿ ಇವರೆಲ್ಲ ಯಾರು’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಮಾಜಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ತಮ್ಮ ಬೆಂಬಲಿಗರ ಜೊತೆ ಜೆಡಿಎಸ್‌ಗೆ ಸೇರಿದರು. ಸಂಸದ ಸಿ.ಎಸ್‌. ಪುಟ್ಟರಾಜು, ಶಾಸಕರಾದ ಮಧು ಬಂಗಾರಪ್ಪ, ಡಿ.ಸಿ. ತಮ್ಮಣ್ಣ, ಜಿ.ಟಿ. ದೇವೇಗೌಡ, ಕೆ.ಟಿ. ಶ್ರೀಕಂಠೇಗೌಡ, ವಿಧಾನಪರಿಷತ್‌ ಉಪ ಸಭಾಪತಿ ಮರಿತಿಬ್ಬೇಗೌಡ ಇದ್ದರು.

‘ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ’

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮಾತನಾಡಿ, ‘ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ. ವಾಸ್ತವ ಸಂಗತಿ ಗೊತ್ತಿಲ್ಲದ ಮುಖ್ಯಮಂತ್ರಿ ಹಾಗೂ ಮಂಡ್ಯ ಜಿಲ್ಲೆಯ ಕೆಲವರು ಸಿಹಿ ಹಂಚಿ ಸಂಭ್ರಮಿಸಿದರು. 2007ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿ ನ್ಯಾಯ ಮಂಡಳಿಯ ತೀರ್ಪನ್ನು ಪ್ರಶ್ನಿಸದೇ ಇದ್ದರೆ ಇಷ್ಟೂ ನೀರು ಸಿಗುತ್ತಿರಲಿಲ್ಲ. ಈಗಲೂ ಮೇಸ್ತುವಾರಿ ಸಮಿತಿ ರಚನೆಯಾದರೆ ಗಂಡಾಂತರ ತಪ್ಪಿದ್ದಲ್ಲ. 1964ರಿಂದ ಕಾವೇರಿ ವಿಷಯದಲ್ಲಿ ಹೋರಾಟ ಮಾಡಿದ್ದೇನೆ. ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry