ಐಎಸ್‌ಎಲ್‌: ಎಫ್‌ಸಿ ಗೋವಾಕ್ಕೆ ‘ಮಾಡು ಇಲ್ಲವೇ ಮಡಿ’ ಹೋರಾಟ

7

ಐಎಸ್‌ಎಲ್‌: ಎಫ್‌ಸಿ ಗೋವಾಕ್ಕೆ ‘ಮಾಡು ಇಲ್ಲವೇ ಮಡಿ’ ಹೋರಾಟ

Published:
Updated:
ಐಎಸ್‌ಎಲ್‌: ಎಫ್‌ಸಿ ಗೋವಾಕ್ಕೆ ‘ಮಾಡು ಇಲ್ಲವೇ ಮಡಿ’ ಹೋರಾಟ

ಜೆಮ್‌ಷೆಡ್‌ಪುರ: ಎಫ್‌ಸಿ ಗೋವಾ ಹಾಗೂ ಜೆಮ್‌ಷೆಡ್‌ಪುರ ಎಫ್‌ಸಿ ತಂಡಗಳು ಭಾನುವಾರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಜಯಿಸುವ ತಂಡವು ಪ್ಲೇ ಆಫ್‌ ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಮೊದಲ ಮೂರು ಸ್ಥಾನದಲ್ಲಿರುವ ಬೆಂಗಳೂರು ಎಫ್‌ಸಿ, ಎಫ್‌ಸಿ ಪುಣೆ ಸಿಟಿ, ಚೆನ್ನೈಯಿನ್ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ಪ್ಲೇ ಆಫ್‌ ಹಂತಕ್ಕೆ ಈಗಾಗಲೇ ಲಗ್ಗೆಯಿಟ್ಟಿವೆ. ಆದರೆ ನಾಲ್ಕನೇ ತಂಡ ನಿರ್ಧಾರವಾಗಬೇಕಿದೆ.

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಸಹ ಮಾಲೀಕತ್ವದ ಎಫ್‌ಸಿ ಗೋವಾ ತಂಡದ ಬಳಿ 27 ಪಾಯಿಂಟ್ಸ್‌ಗಳಿವೆ. ಜೆಮ್‌ಷೆಡ್‌ಪುರ 26 ಪಾಯಿಂಟ್ಸ್ ಹೊಂದಿದೆ. ಆದ್ದರಿಂದ ಗೆದ್ದ ತಂಡ ಪ್ಲೇ ಆಫ್‌ ತಲುಪುವುದು ಖಚಿತವಾಗಿದೆ. ಪಂದ್ಯ ಡ್ರಾ ಆದರೆ ಗೋವಾ ತಂಡಕ್ಕೆ ಅದೃಷ್ಠ ಒಲಿಯಲಿದೆ.

ಗೋವಾ ತಂಡ ಪ್ರಬಲವಾಗಿದೆ. ಆದರೆ ತವರಿನಲ್ಲಿ ಆಡುವ ಜೆಮ್‌ಷೆಡ್‌ಪುರ ಕೂಡ ಜಯದ ವಿಶ್ವಾಸದಲ್ಲಿದೆ. ಈ ತಂಡದಲ್ಲಿ ಬಲಿಷ್ಠ ಆಟಗಾರರು ಇದ್ದಾರೆ. ಜೆಮ್‌ಷೆಡ್‌ಪುರ ಕೂಡ ವಿಶ್ವಾಸದಲ್ಲಿದೆ.

‘ಟೂರ್ನಿಯ ಪ್ರಮುಖ ಘಟ್ಟದಲ್ಲಿ ನಾವು ಸೋಲುವುದಿಲ್ಲ. ಇಲ್ಲಿಯವರೆಗೂ ಉತ್ತಮವಾಗಿ ಆಡಿ ಈಗ ಹಿನ್ನಡೆ ಅನುಭವಿಸುವ ಪ್ರಶ್ನೆಯೇ ಇಲ್ಲ. ಎದುರಾಳಿ ತಂಡ ಕೂಡ ಪ್ರಬಲವಾಗಿದೆ. ಅವರನ್ನು ಹಗುರವಾಗಿ ಪರಿಗಣಿಸದೇ ಉತ್ತಮವಾಗಿ ಆಡುವ ವಿಶ್ವಾಸವಿದೆ’ ಎಂದು ಜೆಮ್‌ಷೆಡ್‌ಪುರ ಎಫ್‌ಸಿ ತಂಡದ ಕೋಚ್‌ ಸ್ಟೀವ್ ಕೊಪೆಲ್‌ ಹೇಳಿದ್ದಾರೆ.

‘ನಮ್ಮ ತಂಡ ಡ್ರಾ ಸಾಧಿಸಿದರೆ ಸಾಕು. ಆದರೆ ಈ ರೀತಿಯ ಅವಕಾಶ ಸಿಗುವುದು ಅಪರೂಪ. ಗೆಲುವು ನಮ್ಮ ಗುರಿ’ ಎಂದು ಗೋವಾ ಕೋಚ್ ಸರ್ಜಿಯೊ ಲೊಬೆರಾ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry