ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಇಂಗ್ಲೆಂಡ್‌ಗೆ ರೋಚಕ ಜಯ

Last Updated 3 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ರೋಚಕ ಹಂತ ತಲುಪಿದ್ದ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡ ಕೇವಲ 4ರನ್‌ಗಳಿಂದ ನ್ಯೂಜಿಲೆಂಡ್‌ಗೆ ಸೋಲುಣಿಸುವ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2–1ರಲ್ಲಿ ಮುನ್ನಡೆ ಸಾಧಿಸಿದೆ.

ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ 15 ರನ್‌ಗಳ ಅಗತ್ಯವಿತ್ತು. ಕೇನ್‌ ವಿಲಿಯಮ್ಸನ್‌ ಶತಕ ದಾಖಲಿಸಿ ಇನ್ನೂ ಕ್ರೀಸ್‌ನಲ್ಲಿ ಇದ್ದರು. ಈ ವೇಳೆ ಮಿಂಚಿದ ಇಂಗ್ಲೆಂಡ್‌ ಬೌಲರ್‌ ಕ್ರಿಸ್‌ ವೋಕ್ಸ್‌ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮ ಓವರ್‌ನಲ್ಲಿ ಒಂದು ಸಿಕ್ಸರ್ ಸೇರಿದಂತೆ 11ರನ್‌ಗಳು ಮಾತ್ರ ಬಂದವು.

ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 234 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪಡೆ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 230ರನ್ ಗಳಿಸಿತು.

ಸುಲಭ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 12 ರನ್ ದಾಖಲಿಸುವಷ್ಟರಲ್ಲಿ ಮಾರ್ಟಿನ್ ಗಪ್ಟಿಲ್ (3) ವಿಕೆಟ್‌ ಕಳೆದುಕೊಂಡಿತು. ಕಾಲಿನ್ ಮನ್ರೊ (49, 62ಎ, 7ಬೌಂ) ಅರ್ಧಶತಕದ ಅಂಚಿನಲ್ಲಿ ಇದ್ದಾಗ ಅದಿಲ್ ರಶೀದ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟದೆ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದರು. ಈ ವೇಳೆ ನಾಯಕ ಕೇನ್‌ ವಿಲಿಯಮ್ಸನ್‌ (143ಎ, 6ಬೌಂ,2ಸಿ) ಅಮೋಘ ಇನಿಂಗ್ಸ್ ಕಟ್ಟಿದರು.

ಮಿಷೆಲ್‌ ಸ್ಯಾಂಟನರ್‌ (41) ಅವರನ್ನು ಹೊರತುಪಡಿಸಿ ವಿಲಿಯಮ್ಸನ್‌ಗೆ ಉಳಿದ ಬ್ಯಾಟ್ಸ್‌ಮನ್‌ಗಳು ನೆರವು ನೀಡಲಿಲ್ಲ. ಈ ಜೋಡಿ ಏಳನೇ ವಿಕೆಟ್ ಜೊತೆಯಾಟದಲ್ಲಿ 96ರನ್ ಕಲೆಹಾಕಿದ್ದಾಗ ಇಂಗ್ಲೆಂಡ್ ತಂಡ ಒತ್ತಡಕ್ಕೆ ಒಳಗಾಯಿತು. ಆದರೆ 45ನೇ ಓವರ್‌ನಲ್ಲಿ ಸ್ಯಾಂಟನರ್‌ ರನೌಟ್ ಬಲೆಗೆ ಬಿದ್ದರು.

ಮೊಯೀನ್‌ ಅಲಿ (36ಕ್ಕೆ3), ಕ್ರಿಸ್‌ ವೋಕ್ಸ್‌ (40ಕ್ಕೆ2) ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ನಾಯಕ ಎಯಾನ್ ಮಾರ್ಗನ್ (48, 71ಎ, 3ಬೌಂ,1ಸಿ) ಈ ತಂಡದ ಅಧಿಕ ಸ್ಕೋರರ್ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 234 (ಎಯಾನ್‌ ಮಾರ್ಗನ್‌ 48, ಬೆನ್‌ ಸ್ಟೋಕ್ಸ್‌ 39, ಜೋಸ್‌ ಬಟ್ಲರ್‌ 29, ಮೊಯೀನ್‌ ಅಲಿ 23; ಟಿಮ್ ಸೌಥಿ 48ಕ್ಕೆ1, ಟ್ರೆಂಟ್ ಬೌಲ್ಟ್‌ 47ಕ್ಕೆ2, ಇಶ್ ಸೋಧಿ 53ಕ್ಕೆ3).

ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 230 (ಕಾಲಿನ್ ಮನ್ರೊ 49, ಕೇನ್ ವಿಲಿಯಮ್ಸನ್‌ 112, ಮಿಷೆಲ್‌ ಸ್ಯಾಂಟನರ್‌ 41; ಕ್ರಿಸ್‌ ವೋಕ್ಸ್‌ 40ಕ್ಕೆ2, ಮೊಯೀನ್ ಅಲಿ 36ಕ್ಕೆ3).

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 4 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ಮೊಯೀನ್ ಅಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT