ವೇತನ ಆಯೋಗದ ವರದಿ ಯಥಾವತ್‌ ಜಾರಿ: ಸಿದ್ದರಾಮಯ್ಯ

7

ವೇತನ ಆಯೋಗದ ವರದಿ ಯಥಾವತ್‌ ಜಾರಿ: ಸಿದ್ದರಾಮಯ್ಯ

Published:
Updated:
ವೇತನ ಆಯೋಗದ ವರದಿ ಯಥಾವತ್‌ ಜಾರಿ: ಸಿದ್ದರಾಮಯ್ಯ

ಬೆಂಗಳೂರು: ಆರನೇ ವೇತನ ಆಯೋಗದ ಅಂತಿಮ ವರದಿ ಏಪ್ರಿಲ್‌ನಲ್ಲಿ ಬರಲಿದ್ದು, ಅದನ್ನು ಯಥಾವತ್ತಾಗಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಸರ್ಕಾರ ನೌಕರರ ಸಂಘ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಹಾ ಸಮ್ಮೇಳನ ಮತ್ತು ‘ಪ್ರಜಾಸ್ನೇಹಿ ಆಡಳಿತ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.‌

‘ನೌಕರರ ಅಹವಾಲು ಆಲಿಸಿ ಅಂತಿಮ ವರದಿ ನೀಡಲು ಆಯೋಗಕ್ಕೆ ಹೆಚ್ಚುವರಿ ಮೂರು ತಿಂಗಳ ಕಾಲವಕಾಶ ನೀಡಿದ್ದೇನೆ’ ಎಂದು ಅವರು ಹೇಳಿದರು.

‘ಈ ಸಮ್ಮೇಳನಕ್ಕೂ ಮುನ್ನ ನಿಮಗೆ ಸಿಹಿ ಸುದ್ದಿ ನೀಡಬೇಕೆಂಬ ಕಾರಣಕ್ಕೆ ಸಚಿವ ಸಂಪುಟದ ಮುಂದೆ ತರದೆ ವೇತನ ಹೆಚ್ಚಳ ಆದೇಶ ಹೊರಡಿಸಿದ್ದೇನೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನನ್ನ ಬದ್ಧತೆ’ ಎಂದರು.

ಅಂತಿಮ ವರದಿ ಜಾರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಲಿದೆ ಎಂಬ ಆತಂಕ ಬೇಡ. ಮಧ್ಯಂತರ ವರದಿ ಏ.1ರಿಂದ ಜಾರಿಗೆ ಆದೇಶಿಸಿರುವ ಕಾರಣ ಅಂತಿಮ ವರದಿ ಜಾರಿಗೆ ತೊಡಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಸರ್ಕಾರಿ ನೌಕರರಿಗೆ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ನನ್ನ ವಿರೋಧ ಯಾವತ್ತೂ ಇಲ್ಲ. ‌ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ನೌಕರರ ವೇತನ ಹೆಚ್ಚಳ ಪ್ರಸ್ತಾಪ ಬಂದಿತ್ತು. ಆಗ ಹಣಕಾಸು ಸಚಿವನಾಗಿದ್ದ ನಾನು ವಿರೋಧ ವ್ಯಕ್ತಪಡಿಸದಿದ್ದರೂ ಅಪಪ್ರಚಾರ ಮಾಡಲಾಗಿತ್ತು’ ಎಂದು ಹೇಳಿದರು.

ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ವ್ಯತ್ಯಾಸ ಮುಂದುವರಿದಿದೆ. ಹೀಗಾಗಿ ವೇತನ ಆಯೋಗದ ಶಿಫಾರಸುಗಳನ್ನು ಪುನರ್ ಪರಿಶೀಲಿಸಿ‌ ಕನಿಷ್ಠ ಶೇ 45 ಹಾಗೂ ಗರಿಷ್ಠ ಶೇ 113ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.

ವಾರ್ಷಿಕ ವೇತನ ಬಡ್ತಿಯನ್ನು ಶೇ 3ರಷ್ಟು ಹೆಚ್ಚಳ ಮಾಡಬೇಕು. ನಗರ ಪರಿಹಾರ ಭತ್ಯೆಯನ್ನು ಕನಿಷ್ಠ ₹ 1,300ಕ್ಕೆ ಹೆಚ್ಚಳ ಮಾಡಬೇಕು. ಹೊಸ ‍ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಾಂಶಗಳು

* ‘ನಾನು ಸರ್ಕಾರಿ ನೌಕರರ ವಿರೋಧಿ ಅಲ್ಲ’– ಮುಖ್ಯಮಂತ್ರಿ

* ಅಂತಿಮ ವರದಿ ಜಾರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಆಗದು

* ಮನವಿ ಪತ್ರ ಸಲ್ಲಿಸಿದ ನೌಕರರ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry