ಕಾಂಗ್ರೆಸ್‌ ಹೈಕಮಾಂಡ್‌ಗೆ ‘ಅಹಿಂಸಾ’ ಬೆದರಿಕೆ

7

ಕಾಂಗ್ರೆಸ್‌ ಹೈಕಮಾಂಡ್‌ಗೆ ‘ಅಹಿಂಸಾ’ ಬೆದರಿಕೆ

Published:
Updated:
ಕಾಂಗ್ರೆಸ್‌ ಹೈಕಮಾಂಡ್‌ಗೆ ‘ಅಹಿಂಸಾ’ ಬೆದರಿಕೆ

ಬೆಂಗಳೂರು: ‘ಬಡ್ತಿ ಮೀಸಲು ಕಾಯ್ದೆ 2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ 2017ರ ಫೆ. 9ರಂದು ಹೊರಡಿಸಿದ್ದ ಆದೇಶ ಪಾಲಿಸಲು ಹಿಂದೇಟು ಹಾಕುತ್ತಿರುವ ಆಡಳಿತರೂಢ ಕಾಂಗ್ರೆಸ್‌ ಪಕ್ಷಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ಸರ್ಕಾರಿ ನೌಕರರು) ಒಕ್ಕೂಟ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ಒಂಬತ್ತು ಪುಟಗಳ ಪತ್ರ ಬರೆದಿರುವ ಒಕ್ಕೂಟ, ಕೋರ್ಟ್ ಆದೇಶದ ವಿರುದ್ಧ ನಡೆದುಕೊಂಡರೆ 2013ರ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಫಲಿತಾಂಶ ಬಂದ ಕ್ಷೇತ್ರ

ಗಳಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸುವ‌ ಬೆದರಿಕೆ ಒಡ್ಡಿದೆ.

‘ರಾಜ್ಯ ಸರ್ಕಾರದ ಈವರೆಗಿನ ವರ್ತನೆ ಗಮನಿಸಿದರೆ, ಅದಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಮನಸ್ಸಿದಂತಿಲ್ಲ ಎನ್ನುವುದು ಸ್ಪಷ್ಟ. ಸರ್ಕಾರದ ಈ ನಿಲುವು 12 ಲಕ್ಷ ಉದ್ಯೋಗಿಗಳು ಮತ್ತು ಅವರ ಕುಟುಂಬ ವರ್ಗ ಸೇರಿ ಅಂದಾಜು 60 ಲಕ್ಷದಷ್ಟಿರುವ ಮತದಾರರಲ್ಲಿ ಹತಾಶೆ ಮೂಡಿಸಿದೆ. ಈ ಉದ್ಯೋಗಿಗಳ ಹಿತಾಸಕ್ತಿ ಕಡೆಗಣಿಸಿದರೆ ಕಾಂಗ್ರೆಸ್‌ ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದೂ ‌ಒಕ್ಕೂಟ

ಸ್ಪಷ್ಟಪಡಿಸಿದೆ.

ರಾಹುಲ್‌ಗೆ ಬರೆದಿರುವ ಪತ್ರದಲ್ಲಿ ಬಡ್ತಿ ಮೀಸಲು ಪ್ರಕರಣದ ಸಂಪೂರ್ಣ ಮಾಹಿತಿ ನೀಡಿರುವ ಒಕ್ಕೂಟ, ಏಳು ಇಲಾಖೆಗಳಲ್ಲಿ ಕರ್ತವ್ಯ ನಿರತ ಒಟ್ಟು ಸಿಬ್ಬಂದಿ, ಬಡ್ತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮತ್ತು ಆ ವರ್ಗಕ್ಕೆ ದಕ್ಕಿದ ಮೀಸಲಾತಿ ಪ್ರಮಾಣದ ವಿವರವನ್ನೂ ನೀಡಿದೆ.

ಈ ಬಗ್ಗೆ ’ಪ್ರಜಾವಾಣಿ’ ಜೊತೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜ, ‘ಈಗಾಗಲೇ ನೀಡಿರುವ ಆದೇಶವನ್ನು ಇದೇ ಮಾರ್ಚ್‌ 15ರ ಒಳಗೆ ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಆದೇಶ ಪಾಲಿಸಲು ರಾಜ್ಯ ಸರ್ಕಾರ ಹಿಂಜರಿಯುತ್ತಿದೆ. ಹೀಗಾಗಿ, ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್‌ ಹೈಕಮಾಡ್‌ ಅನ್ನು ಕೋರಿದ್ದೇವೆ’ ಎಂದರು.

‘ಈ ವಿಷಯಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ರಾಹುಲ್‌ ಗಾಂಧಿಗೆ ತಿಳಿಸುವ ಉದ್ದೇಶದಿಂದ ನವದೆಹಲಿಯಲ್ಲಿ ಅಥವಾ ರಾಜ್ಯಕ್ಕೆ ಬಂದಾಗ ಭೇಟಿಗೆ ಕಾಲಾವಕಾಶ ಕೋರಿದ್ದೆವು. ಮುಂಬೈ ಕರ್ನಾಟಕ ಭಾಗದಲ್ಲಿ ರಾಹುಲ್‌ ಪ್ರವಾಸ ಕೈಗೊಂಡಿದ್ದಾಗ ಭೇಟಿ ಮಾಡಲು ತೀರ್ಮಾನಿಸಿದ್ದೆವು. ಆದರೆ, ಸಾಧ್ಯವಾಗಲಿಲ್ಲ. ಹೀಗಾಗಿ ಶೀಘ್ರದಲ್ಲೆ ನವದೆಹಲಿಗೆ ತೆರಳಲು ತೀರ್ಮಾನಿಸಿದ್ದೇವೆ’ ಎಂದರು.

ನೌಕರರ ಜ್ಯೇಷ್ಠತಾ ಪಟ್ಟಿಯನ್ನು 1978ರಿಂದ ಪರಿಷ್ಕರಿಸಿ, ತತ್ಪರಿಣಾಮ ಮುಂಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ, ಇದರಿಂದ ಹಿಂಬಡ್ತಿಗೆ ಒಳಗಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತ ಕಾಪಾಡುವ ಉದ್ದೇಶ

ದಿಂದ ರಾಜ್ಯ ಸರ್ಕಾರ ರೂಪಿಸಿದ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳು ಅಂಗೀಕಾರ ನೀಡಿದ್ದರೂ ರಾಷ್ಟ್ರಪತಿ ಅಂಕಿತ ಇನ್ನೂ ಬಿದ್ದಿಲ್ಲ. ಈ ಮಧ್ಯೆ, ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇದೇ ಜ. 15ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, 45 ದಿನಗಳ ಒಳಗೆ ಆದೇಶ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದೆ.

10ರಂದು ಮತ್ತೆ ಹೋರಾಟ

‘ಅಹಿಂಸಾ ವರ್ಗದ ನೂರಾರು ನೌಕರರು ಅರ್ಹತೆ ಮತ್ತು ನ್ಯಾಯಾಲಯದ ಆದೇಶದ ಹೊರತಾಗಿಯೂ ಬಡ್ತಿ ಪಡೆಯದೆ ನಿವೃತ್ತರಾಗುತ್ತಿದ್ದಾರೆ. ನೌಕರರಿಗೆ ಆಗಿರುವ ಅನ್ಯಾಯ, ಕೋರ್ಟ್‌ ತೀರ್ಪು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಇದೇ 10ರಂದು ಹುಬ್ಬಳ್ಳಿಯಲ್ಲಿ ಒಕ್ಕೂಟದ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ’ ಎಂದು ಎಂ. ನಾಗರಾಜ ತಿಳಿಸಿದರು.

ಗದಗ ರಸ್ತೆಯ ರೇಲ್‌ ನಗರದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಉತ್ತರ ಕರ್ನಾಟಕ ಭಾಗದವರಷ್ಟೆ ಅಲ್ಲದೆ, ರಾಜ್ಯದ ಇತರ ಭಾಗಗಳಿಂದಲೂ ನೌಕರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

13ನೇ ನೆನಪಿನೋಲೆ!

ಸುಪ್ರೀಂ ಕೋರ್ಟ್‌ ಗಡುವು ಹತ್ತಿರ ಬರುತ್ತಿರುವ (ಮಾ. 15) ಕಾರಣ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯಿಂದ ಪ್ರತಿ ವೃಂದಗಳ ಹುದ್ದೆಗಳಲ್ಲಿ ಉಂಟಾಗಲಿರುವ ಬದಲಾವಣೆಯ ಮಾಹಿತಿಯನ್ನು ತಕ್ಷಣ ಒದಗಿಸುವಂತೆ ಪ್ರತಿ ಇಲಾಖೆಗಳ ಮುಖ್ಯಸ್ಥರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌  ಮತ್ತೊಮ್ಮೆ ಸೂಚನೆ ನೀಡಿದ್ದಾರೆ. ಇದು ವಿವಿಧ ಇಲಾಖೆಗಳಿಗೆ ಡಿಪಿಎಆರ್‌ ಕಳುಹಿಸುತ್ತಿರುವ 13ನೇ ನೆನಪಿನೋಲೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ನಡೆಗೆ ಪ್ರತೀಕಾರದ ಎಚ್ಚರಿಕೆ

50 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿರುದ್ಧ ನಿಲುವು

ರಾಹುಲ್‌ಗೆ ಬರೆದ ಪತ್ರದಲ್ಲಿ ಸಮಗ್ರ ಮಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry