ಹಾಪ್‌ಕಾಮ್ಸ್‌ನಲ್ಲಿ ಸಿಗಲಿದೆ ಕಬ್ಬಿನಹಾಲು

7

ಹಾಪ್‌ಕಾಮ್ಸ್‌ನಲ್ಲಿ ಸಿಗಲಿದೆ ಕಬ್ಬಿನಹಾಲು

Published:
Updated:
ಹಾಪ್‌ಕಾಮ್ಸ್‌ನಲ್ಲಿ ಸಿಗಲಿದೆ ಕಬ್ಬಿನಹಾಲು

ಬೆಂಗಳೂರು: ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಇನ್ನು ಮುಂದೆ ಕಬ್ಬಿನಹಾಲು ಹಾಗೂ ಹಾಲಿನ ಉತ್ನನ್ನಗಳೂ ದೊರೆಯಲಿವೆ.

ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ವ್ಯಾಪಾರ ಆಗುತ್ತಿರುವ ಮಳಿಗೆಗಳನ್ನು ಲಾಭದಾಯಕಗೊಳಿಸುವ ಉದ್ದೇಶದಿಂದ ಹಾಪ್‌ಕಾಮ್ಸ್‌ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ನಷ್ಟದಲ್ಲಿರುವ ಮಳಿಗೆಗಳನ್ನು ಫ್ರಾಂಚೈಸಿ ನೀಡುವುದು, ಮಳಿಗೆಯಲ್ಲಿಯೇ ಕಬ್ಬಿನ ಹಾಲಿನ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಹಾಲು, ಅದರ ಉತ್ಪನ್ನಗಳ ಮಾರಾಟ ಮಾಡುವುದು ಪ್ರಮುಖವಾಗಿವೆ.

ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ 325 ಮಾರಾಟ ಮಳಿಗೆಗಳು ಇವೆ. ‘ನಗರದಲ್ಲಿ 270 ಮಳಿಗೆಗಳಿವೆ. ನಷ್ಟದಲ್ಲಿರುವ 100 ಮಳಿಗೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 50 ಮಳಿಗೆಗಳ ಫ್ರಾಂಚೈಸಿ ನೀಡಲು ನಿರ್ಧರಿಸಿದ್ದೇವೆ’ ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.

‘‍ಫ್ರಾಂಚೈಸಿ ಪಡೆದವರು ₹1 ಲಕ್ಷ ಠೇವಣಿ ಇಡಬೇಕು. ಜೊತೆಗೆ ಪ್ರತಿ ತಿಂಗಳು ₹1 ಲಕ್ಷದವರೆಗೆ ತರಕಾರಿ ಹಾಗೂ ಹಣ್ಣುಗಳನ್ನು ಹಾಪ್‌ಕಾಮ್ಸ್‌ನಿಂದಲೇ ಖರೀದಿಸಬೇಕು ಎಂಬ ಷರತ್ತು ವಿಧಿಸಿದ್ದೇವೆ’ ಎಂದು ವಿವರಿಸಿದರು.

‘ತರಕಾರಿ ವ್ಯಾಪಾರದಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಕಬ್ಬಿನಹಾಲಿನ ವ್ಯಾಪಾರಕ್ಕೆ ಅನುಮತಿ ನೀಡಿದ್ದೇವೆ. ಮಳಿಗೆಯಲ್ಲಿ 8 ಅಡಿ ಉದ್ದ ಹಾಗೂ 6 ಅಡಿ ಅಗಲದ ಜಾಗ ನೀಡಲು ಒದಗಿಸಲಾಗುತ್ತದೆ. ಅವರು ಪ್ರತಿ ತಿಂಗಳು ನಮಗೆ ₹15 ಸಾವಿರ ಪಾವತಿಸಬೇಕು’ ಎಂದು ಹೇಳಿದರು.

‘ಪ್ರಾಯೋಗಿಕವಾಗಿ ಜೆ.ಪಿ ನಗರದ ಎರಡು ಮಳಿಗೆಗಳಲ್ಲಿ ಕಬ್ಬಿನ ಹಾಲು ವ್ಯಾಪಾರ ಪ್ರಾರಂಭಿಸಲಾಗಿದೆ. ಇನ್ನೂ ಆರೇಳು ಕಡೆ ಶೀಘ್ರದಲ್ಲಿಯೇ ಆರಂಭವಾಗಲಿದೆ. ಎಲ್ಲಾ ಪ್ರದೇಶಗಳ ಒಂದೆರಡು ಅಂಗಡಿಗಳಲ್ಲಿ ಇದಕ್ಕೆ ಅವಕಾಶ ನೀಡಲಾಗುವುದು. ಶಿವಮೊಗ್ಗದ ರೈತರೊಬ್ಬರು 10 ಅಂಗಡಿಗಳ ಫ್ರಾಂಚೈಸಿ ಪಡೆದಿದ್ದಾರೆ’ ಎಂದರು.

‘ಮಳಿಗೆಗಳಲ್ಲಿ ಕಬ್ಬಿನ ಹಾಲು ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ಅನೇಕರು ಈ ಬಗ್ಗೆ ಒಲವು ತೋರಿದ್ದಾರೆ’ ಎಂದರು.

‘ಕೆಎಂಎಫ್‌ ಜೊತೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ನೊಂದು ವಾರದಲ್ಲಿ ನಂದಿನಿ ಹಾಲಿನ ಉತ್ಪನ್ನಗಳು ಹಾಗೂ ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳು ನಮ್ಮ ಮಳಿಗೆಗಳಲ್ಲಿ ಸಿಗಲಿವೆ. ಮೊದಲ ಹಂತದಲ್ಲಿ 25 ಮಳಿಗೆಗಳಲ್ಲಿ ಆರಂಭಿಸಲಾಗುತ್ತದೆ. ಜನರ ಪ್ರತಿಕ್ರಿಯೆ ನಂತರ ಉಳಿದ ಮಳಿಗೆಗಳಿಗೂ ವಿಸ್ತರಿಸಲಾಗುತ್ತದೆ’ ಎಂದರು.

ಇದಲ್ಲದೆ, ಯಲಹಂಕ, ಸರ್ಜಾಪುರ. ತಿಪ್ಪಸಂದ್ರ ಹಾಗೂ ಹೊಸಕೋಟೆಯಲ್ಲಿ ಸುಸಜ್ಜಿತ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ₹15 ಕೋಟಿ ಅನುದಾನ ಒದಗಿಸುವಂತೆ ತೋಟಗಾರಿಕಾ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

**

ವಾರಾಂತ್ಯಗಳಲ್ಲಿ ತರಕಾರಿ ಮೇಳ

ಲಾಲ್‌ಬಾಗ್‌ನಲ್ಲಿ ನಡೆಸಿದ ವಿವಿಧ ಮೇಳಗಳಿಂದ ಸಾಕಷ್ಟು ಲಾಭ ದೊರೆತಿದೆ. ದ್ರಾಕ್ಷಿ, ಕಲ್ಲಂಗಡಿ ಮೇಳಕ್ಕೂ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ನಯಾಪೈಸೆ ವೆಚ್ಚ ಮಾಡದೆ ಸಂಸ್ಥೆಗೆ ಲಾಭ ಸಿಗುತ್ತಿದೆ ಎಂದು ಚಂದ್ರೇಗೌಡ ತಿಳಿಸಿದರು.

ಪ್ರತಿ ವಾರವೂ ಮೇಳ ನಡೆಸಲು ನಿವಾಸಿಗಳಿಂದ ಬೇಡಿಕೆ ಬಂದಿದೆ. ಹಾಗಾಗಿ ಲಾಲ್‌ಬಾಗ್‌, ಕಬ್ಬನ್‌ ಉದ್ಯಾನದಲ್ಲಿ ವಾರಾಂತ್ಯಗಳಲ್ಲಿ ತರಕಾರಿ, ಹಣ್ಣಿನ ಮೇಳಗಳನ್ನು ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry