ಸೃಜನಶೀಲತೆ ಅರಳಿದಾಗ...

ಮಂಗಳವಾರ, ಮಾರ್ಚ್ 26, 2019
26 °C
ವಿಶ್ರಾಂತಿ ಅವಧಿಯಲ್ಲಿ ಕಾಷ್ಟ ಕಲೆಯನ್ನು ಸಿದ್ಧಿಸಿಕೊಂಡ ದಯಾನಂದ ಬೇಲೆಕರ

ಸೃಜನಶೀಲತೆ ಅರಳಿದಾಗ...

Published:
Updated:
ಸೃಜನಶೀಲತೆ ಅರಳಿದಾಗ...

ಚಿಕ್ಕೋಡಿ: ವ್ಯಕ್ತಿಯೊಬ್ಬ ಸುಂದರ ಬದುಕು ರೂಪಿಸಿಕೊಳ್ಳಲು ಸಕಾರಾತ್ಮಕ ಚಿಂತನೆ ಮತ್ತು ಸೃಜನಶೀಲ ಮನೋಭಾವ ಪೂರಕ. ಎದುರಾಗುವ ಸಂಕಷ್ಟ, ಸಮಸ್ಯೆಗಳಿಗೆ ಧೃತಿಗೆಡದೇ ಪ್ರಗತಿಪರ ಚಿಂತನೆ ಮತ್ತು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಂಕಷ್ಟಗಳು ಸರಿದು ಹೋಗಿ ನವ ಚೈತನ್ಯ ಚಿಮ್ಮುತ್ತದೆ. ಹೊಸ ಬದುಕಿಗೆ ನಾಂದಿ ಹಾಡುತ್ತದೆ ಎಂಬ ಮಾತುಗಳಿಗೆ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮದ ದಯಾನಂದ ಕಲ್ಲಪ್ಪ ಬೇಲೆಕರ ಉತ್ತಮ ನಿದರ್ಶನವಾಗಿದ್ದಾರೆ.

ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಸೂಕ್ತ ಚಿಕಿತ್ಸೆ ಪಡೆದು ಗುಣಮುಖವಾದರೂ ‘ಹೀಗಾಯಿತಲ್ಲ?’ ಎಂದು ಬಹುತೇಕರು ಕೈಚೆಲ್ಲಿ ಜೀವನೋತ್ಸಾಹ ಕಳೆದುಕೊಳ್ಳುವುದು ಸಾಮಾನ್ಯ. ಆದರೆ, ಬೈಕ್ ಅಪಘಾತದಲ್ಲಿ ಕಾಲು ಮೂಳೆ ಮುರಿದು, ಕೈಗೆ ಗಂಭೀರ ಗಾಯವಾಗಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು ವಿಶ್ರಾಂತಿ ಅವಧಿಯಲ್ಲಿ ಕಲಾಕೃತಿ ರಚನೆಯಲ್ಲಿ ತೊಡಗಿದ ದಯಾನಂದ ಅಪರೂಪದ, ಅತ್ಯಾಕರ್ಷಕ ಕಲಾಕೃತಿಗಳನ್ನು ರಚಿಸಿದ್ದಾರೆ.

10ನೇ ತರಗತಿ ಓದಿರುವ ದಯಾನಂದ ಬೇಲೆಕರ, ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದ ವೆಂಕಟೇಶ್ವರ್ ಪವರ್ ಪ್ರಾಜೆಕ್ಟ್‌ನ ಉದ್ಯೋಗಿ. ಮೂರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಅವರ ಕಾಲು ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರ ಸಲಹೆಯಂತೆ ಎರಡು ತಿಂಗಳು ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿತ್ತು. ಈ ಅವಧಿಯನ್ನು ವ್ಯರ್ಥವಾಗಿ ಕಳೆಯದೇ ಕಳೆಯದೇ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ದಯಾನಂದ ಅವರು ಕಟ್ಟಿಗೆಯಿಂದ ಕಲಾಕೃತಿಗಳನ್ನು ತಯಾರಿಸಲು ಆರಂಭಿಸಿದರು.

ಕಲಾ ಕೌಶಲ ಕುರಿತು ಯಾವುದೇ ತರಬೇತಿ ಪಡೆಯದೇ ಇದ್ದರೂ ಬಿದಿರಿನ ಚಿಕ್ಕ ಚಿಕ್ ತುಣುಕುಗಳು, ಕಡ್ಡಿಪೆಟ್ಟಿಗೆ, ಕಡ್ಡಿ, ಫೆವಿಕಾಲ್‌ಗಳನ್ನು ಬಳಸಿ ಅತ್ಯಾಕರ್ಷಕವಾದ ಚಕ್ಕಡಿ, ಟಾಂಗಾ ಗಾಡಿ, ಬೈಸಿಕಲ್‌, ಚಿಕ್ಕ ಐಷರಾಮಿ ಕುರ್ಚಿ, ಮನೆಯ ಮಾದರಿ, ಪೆನ್‌ ಬಾಕ್ಸ್‌... ಇತ್ಯಾದಿ ಕಲಾಕೃತಿಗಳನ್ನು ರಚಿಸುವ ಕೌಶಲ ಸಿದ್ಧಿಸಿಕೊಂಡರು. ಯಾವುದೇ ಯಂತ್ರವನ್ನು ಬಳಸದೇ ಕೇವಲ ಎಕ್ಸೆಲ್‌ ಬ್ಲೇಡ್‌ ಸಹಾಯದಿಂದ ಕಟ್ಟಿಗೆಯ ತುಣಕುಗಳನ್ನು ಸವರಿ ಅಳತೆಗೆ ತಕ್ಕಂತೆ ಒಪ್ಪವಾಗಿ ಫೆವಿಕಾಲ್‌ನಿಂದ ಅಂಟಿಸಿ ಸುಂದರ ಕಲಾಕೃತಿ ರೂಪಿಸಲು ಇವರು 3ರಿಂದ 4 ಗಂಟೆಯ ಅವಧಿ ತೆಗೆದುಕೊಳ್ಳುತ್ತಾರೆ.

‘ಅಪಘಾತದಲ್ಲಿ ಗಾಯಗೊಂಡರೂ ಧೃತಿಗೆಡದ ದಯಾನಂದ ಬೇಲೆಕರ ವಿಶ್ರಾಂತಿ ಅವಧಿಯನ್ನು ಸೃಜನಾತ್ಮಕ ಕ್ರಿಯೆಯಲ್ಲಿ ತೊಡಗಿಸಿಕೊಂಡು ಅದ್ಬುತ ಕಲಾಕೃತಿಗಳನ್ನು ರಚಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಅವರ ಪ್ರತಿಭೆಗೆ ಸಾಕ್ಷಿ’ ಎಂದು ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಪಘಾತದ ಗಾಯದಿಂದ ಈಗ ಗುಣಮುಖಗೊಂಡು ಉದ್ಯೋಗಕ್ಕೆ ಹಾಜರಾಗಿದ್ದೇನೆ. ಗಾಯಗೊಂಡು ಚಿಕಿತ್ಸೆ ಪಡೆಯುವ ಅವಧಿಯನ್ನು ಸೃಜನಶೀಲತೆಗಾಗಿ ಬಳಸಿಕೊಂಡು ಕಲಾಕೃತಿಗಳನ್ನು ತಯಾರಿಸುವುದನ್ನು ಕಲಿತುಕೊಂಡಿದ್ದೇನೆ. ಬಿಡುವಿನ ವೇಳೆಯಲ್ಲಿ ಇಂತಹ ಕಲಾಕೃತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸುವ ಚಿಂತನೆಯೂ ಇದೆ’ ಎಂದು ದಯಾನಂದ ಬೇಲೆಕರ ಹೇಳಿದರು. ದಯಾನಂದ ಅವರನ್ನು ಮೊ: 97413 71380 ಮೂಲಕ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry