ಮಾತಾ ಭಾಗ ಕೌರ್ ಗುರುದ್ವಾರ ನಿರ್ಮಾಣ

ಮಂಗಳವಾರ, ಮಾರ್ಚ್ 19, 2019
26 °C
ಇಂದು ಉದ್ಘಾಟನೆ: ಸಮಾರಂಭಕ್ಕೆ ಸಾಕ್ಷಿಯಾಗಲಿರುವ ವಿವಿಧೆಡೆಯ ಸಿಖ್ಖರು

ಮಾತಾ ಭಾಗ ಕೌರ್ ಗುರುದ್ವಾರ ನಿರ್ಮಾಣ

Published:
Updated:
ಮಾತಾ ಭಾಗ ಕೌರ್ ಗುರುದ್ವಾರ ನಿರ್ಮಾಣ

ಜನವಾಡ: ಬೀದರ್ ತಾಲ್ಲೂಕಿನ ಜನವಾಡದಲ್ಲಿ ನಿರ್ಮಿಸಲಾಗಿರುವ ಕೋಟೆ ಮಾದರಿಯ ಮಾತಾ ಭಾಗ ಕೌರ್ ಗುರುದ್ವಾರ ಉದ್ಘಾಟನೆಗೆ ಸಜ್ಜುಗೊಂಡಿದೆ.

ಮೊದಲು ಇದ್ದ ಮಾತಾ ಭಾಗ ಕೌರ್ ಗುರುದ್ವಾರ ಸ್ಥಳದಲ್ಲಿಯೇ ಈಗ ನೂತನ ಗುರುದ್ವಾರ ತಲೆ ಎತ್ತಿದೆ. ಪಂಜಾಬ್ ಹಾಗೂ ರಾಜಸ್ತಾನದ ಕಟ್ಟಡ ಕಾರ್ಮಿಕರು ಸುಂದರ ಗುರುದ್ವಾರ ನಿರ್ಮಿಸಿದ್ದಾರೆ.

ಸ್ವರ್ಣ ಲೇಪಿತ ಏಳು ಕಳಸಗಳು ಗುರುದ್ವಾರಕ್ಕೆ ಮೆರುಗು ನೀಡಿವೆ. ಇನ್ನು ಗುರುದ್ವಾರ ಮುಂಭಾಗದಲ್ಲಿ ನಿರ್ಮಿಸಿರುವ 111 ಅಡಿ ಎತ್ತರದ ನಿಶಾನ್ ಸಾಹೇಬ್ ಎಲ್ಲರ ಗಮನ ಸೆಳೆಯುತ್ತಿದೆ. ಗುರುದ್ವಾರದಲ್ಲಿ ಭಕ್ತರಿಗಾಗಿ ಲಂಗರ್ (ದಾಸೋಹ ಕೋಣೆ), ಸಿಬ್ಬಂದಿ ಕೋಣೆ, ಸ್ನಾನಗೃಹಗಳನ್ನೂ ನಿರ್ಮಾಣ ಮಾಡಲಾಗಿದೆ.

‘ಪಂಜಾಬ್ ಹಾಗೂ ರಾಜಸ್ಥಾನದ 180 ಕಟ್ಟಡ ಕಾರ್ಮಿಕರು 20 ತಿಂಗಳಲ್ಲಿ ಗುರುದ್ವಾರ ನಿರ್ಮಿಸಿದ್ದಾರೆ. ಕೋಟೆ ಮಾದರಿಯಲ್ಲಿ ನಿರ್ಮಿಸಿದ ದೇಶದ ಏಕೈಕ ಗುರುದ್ವಾರ ಇದಾಗಿದೆ’ ಎಂದು ತಿಳಿಸುತ್ತಾರೆ ಬೀದರ್‌ನ ಗುರುದ್ವಾರ ಪ್ರಬಂಧಕ ಸಮಿತಿಯ ಸದಸ್ಯ ಮನ್‌ಪ್ರೀತ್‌ಸಿಂಗ್‌ ಖನೂಜಾ.

‘ಗುರುದ್ವಾರದ ಒಳಭಾಗದಲ್ಲಿ ರಾಜಸ್ಥಾನದ ಮಕರಾಣಾದ ಅಮೃತಶಿಲೆ ಹಾಗೂ ಹೊರಭಾಗಕ್ಕೆ ಆಗ್ರಾದ ಢೋಲಪುರದ ಕೆಂಪು ಬಣ್ಣದ ಕಲ್ಲುಗಳನ್ನು ಬಳಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಒಟ್ಟು 25 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಅವರಯ ತಿಳಿಸಿದರು..

‘ಗುರುದ್ವಾರ ಉದ್ಘಾಟನೆ ಪ್ರಯುಕ್ತ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಭಾನುವಾರ (ಮಾ. 4) ಗುರುದ್ವಾರ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಗುರುದ್ವಾರವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪಂಜಾಬ್, ಹರಿಯಾಣ, ನವದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಿಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ’ ಎಂದು ಹೇಳಿದರು.

‘ಎರಡು ದಿನಗಳಿಂದ ದಾಸೋಹ ನಡೆಯುತ್ತಿದೆ. ಭಕ್ತರಿಗಾಗಿ ಲಂಗರ್‌ನಲ್ಲಿ ಐದು ಪ್ರಕಾರದ ಸಿಹಿ ತಿನಿಸು ಸೇರಿದಂತೆ ಮೊದಲಾದ ತಿಂಡಿಗಳನ್ನು ಸಿದ್ಧಪಡಿಸಲಾಗಿದೆ’ ಎಂದರು.

***

ಮೊಘಲರ ವಿರುದ್ಧ ಹೋರಾಡಿದ್ದ ಭಾಗ ಕೌರ್‌

ಜನವಾಡ: ಶೌರ್ಯಕ್ಕೆ ಹೆಸರಾಗಿದ್ದ ಮಾತಾ ಭಾಗ ಕೌರ್ ಗುರುಗೋಬಿಂದರ ಶಿಷ್ಯೆಯಾಗಿದ್ದರು. ಮೊಘಲ್‌ ಸೈನಿಕರು ಗುರುಗೋಬಿಂದರನ್ನು ಬಂಧಿಸಿದಾಗ ಅವರ ವಿರುದ್ಧ ಹೋರಾಟ ನಡೆಸಿದ್ದರು.

ಜನವಾಡದ ಮುಖಂಡರಾಗಿದ್ದ ಬಾಲಾಜಿರಾವ್ ಮತ್ತು ರುಸ್ತುಂರಾವ್ ಅವರನ್ನು ಪುಣೆಯಲ್ಲಿ ಬಂಧಿಸಿ ಇಟ್ಟಾಗ ಅವರು ತಮ್ಮ ಬಿಡುಗಡೆಗಾಗಿ ಗುರುಗೋಬಿಂದರ ಮೊರೆ ಹೋಗಿದ್ದರು.

ಗುರುಗೋಬಿಂದರ ಆಜ್ಞೆಯಂತೆ ಮಾತಾ ಭಾಗ ಕೌರ್ ತಮ್ಮ ಬೆಂಬಲಿಗರ ನೆರವಿನೊಂದಿಗೆ ಅವರನ್ನು ಬಿಡುಗಡೆ ಮಾಡಿಸಿ ಜನವಾಡಕ್ಕೆ ತಂದು ಬಿಟ್ಟಿದ್ದರು. ಬಳಿಕ ಬಹಳ ವರ್ಷಗಳ ಕಾಲ ಜನವಾಡದಲ್ಲಿಯೇ ಉಳಿದು ಕೊನೆಯುಸಿರು ಎಳೆದಿದ್ದರು. ಗುರುಗೋಬಿಂದರ ಶಿಷ್ಯೆಯಾಗಿ ಗುರುತಿಸಿಕೊಂಡ ಕಾರಣ ಅವರ ಸ್ಮರಣೆಯಲ್ಲಿ ಗುರುದ್ವಾರ ಕಟ್ಟಲಾಗಿದೆ.

***

ಮಾತಾ ಭಾಗ ಕೌರ್ ಗುರುದ್ವಾರ ಜಿಲ್ಲೆಯ ಸಿಖ್ಖರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಗುರುದ್ವಾರ ನಿರ್ಮಾಣಗೊಂಡಿರುವುದು ಭಕ್ತರಲ್ಲಿ ಸಂತಸ ಉಂಟು ಮಾಡಿದೆ.

– ಮನ್‌ಪ್ರೀತ್‌ಸಿಂಗ್‌ ಖನೂಜಾ, ಗುರುದ್ವಾರ ಪ್ರಬಂಧಕ ಸಮಿತಿ ಸದಸ್ಯ

***


ನಾಗೇಶ ಪ್ರಭಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry