ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ವಾರಣ್ಯ’ಕ್ಕೆ ಬಂದ ‘ಬೋಗಣ್ಣ’

Last Updated 4 ಮಾರ್ಚ್ 2018, 10:02 IST
ಅಕ್ಷರ ಗಾತ್ರ

‘ಬೋಗಣ್ಣ ಕ್ವಾರಣ್ಯಕ್ಕೆ ಬಂದವ್ರೆ, ಅಕ್ಕಿ, ರಾಗಿ ತತ್ತಾ’ ಎಂಬ ಮಾತು ಶಿವರಾತ್ರಿ ನಂತರ ಹಳ್ಳಿಗಳಲ್ಲಿ ಕೇಳಿಬರುತ್ತಿತ್ತು. ಈಗೀಗ ಆ ಮಾತು ಬಹುತೇಕ ಕಡಿಮೆಯಾಗಿದೆ. ಆದರೆ ಇತ್ತೀಚೆಗೆ ಅಲ್ಲಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೂ ಅಪರೂಪಕ್ಕೊಮ್ಮೆ ಬೋಗಣ್ಣನನ್ನು ವಿವಿಧೆಡೆ ಕಾಣ ಸಿಗುತ್ತಾರೆ.

ವೀರಗಾಸೆ ಕಲಾವಿದರನ್ನು ಹಳ್ಳಿಗಳಲ್ಲಿ ‘ಬೋಗಣ್ಣ’ ಎಂದೇ ಕರೆಯುವರು. ಕಲಾವಿದರು ಎಷ್ಟೇ ಕಾರ್ಯಕ್ರಮಗಳಿಗೆ ಹೋಗಿ ವೀರಗಾಸೆ ಕಲೆ ಪ್ರದರ್ಶಿಸಿದರೂ ಶಿವರಾತ್ರಿಯಿಂದ ಯುಗಾದಿ ಹಬ್ಬದೊಳಗೆ ಕನಿಷ್ಠ ಮೂರು ಮನೆಗಾದರೂ ಕ್ವಾರಣ್ಯಕ್ಕೆ ಹೋಗಬೇಕೆಂಬ ಸಂಪ್ರದಾಯವಿದೆ. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಹಳ್ಳಿಗರು ಎಂದೂ ಬರಿಗೈಯಲ್ಲಿ ಕಳುಹಿಸದೆ ‘ಭಿಕ್ಷೆ’ ನೀಡಿ ಪೂಜನೀಯ ಭಾವದಿಂದ ನಮಸ್ಕರಿಸುತ್ತಾರೆ.

‘ನಾನೊಬ್ಬ ವೀರಗಾಸೆ ಕಲಾವಿದ. ನನ್ನ ತಾತ ಬಸಪ್ಪ, ತಂದೆ ಮರಿವೀರಭದ್ರಯ್ಯ ಕೂಡ ವೀರಗಾಸೆ ಕಲಾವಿದರು. ಅವರಿಂದಲೇ ಈ ವಿದ್ಯೆ ಕಲಿತೆ. ತಂದೆಗೆ ಐವರು ಮಕ್ಕಳು. ಆದರೆ ಕಲೆಯನ್ನು ಮುಂದುವರಿಸಿದ್ದು ನಾನೊಬ್ಬನೇ. ಈ ಕಲೆ ಬಿಟ್ಟರೆ ದರಿದ್ರ ಬರುತ್ತದೆ ಎಂದು ನನ್ನ ತಾತ ಹೇಳುತ್ತಿದ್ದರು’ ಎಂದು ಮಾತಿಗಿಳಿದರು ಭಕ್ತರಹಳ್ಳಿ ಮೂಲದ ಶಿವಕುಮಾರ್‌.

‘ಹಲವಾರು ಕಡೆ ನಾನು ವೀರಗಾಸೆ ಕಲಾಪ್ರದರ್ಶನ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ. ಕಲಾ ಪ್ರದರ್ಶನಕ್ಕಾಗಿ ಹಲವು ಪ್ರಶಸ್ತಿಗಳೂ ಬಂದಿವೆ. ಆದರೂ ಕ್ವಾರಣ್ಯಕ್ಕೆ ಹೋಗಲೇಬೇಕು. ಇದು ಸಂಪ್ರದಾಯ’ ಎನ್ನುವರು.

‘ನಮಗೆ ರೇಷ್ಮೆ ಬೇಸಾಯವಿದೆ. ಹುಳುಮನೆಯಿದೆ. ಸ್ವಲ್ಪ ತೋಟವಿದೆ. ಆದರೂ ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ನಡುವೆ ಹತ್ತು ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಹೊಸಹುಡ್ಯ, ಗಿಡ್ನಹಳ್ಳಿ, ಚೌಡಸಂದ್ರ, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಮುತ್ತೂರು, ಗಂಗನಹಳ್ಳಿ, ಕೊಂಡೇನಹಳ್ಳಿ ಮುಂತಾದೆಡೆ ಮನೆಗಳಿಗೆ ಹೋಗುತ್ತೇನೆ. ಕಣದ ಸಮಯವಾದ್ದರಿಂದ ಜನರು ಕೊಡುವ ರಾಗಿ, ಪ್ರೀತಿಯಿಂದ ಕೊಡುವ ದಕ್ಷಿಣೆಯನ್ನು ಸ್ವೀಕರಿಸುತ್ತೇನೆ. ವಡಪುಗಳನ್ನು ಹೇಳಿ ಬರುತ್ತೇನೆ’ ಎಂದು ಅವರು ತಮ್ಮ ಕಾಯಕ ಕುರಿತು ವಿವರಿಸಿದರು.

ಈ ಕಲಾವಿದರ ವೇಷಭೂಷಣ ವೈಶಿಷ್ಟ್ಯಪೂರ್ಣ. ತಲೆಗೆ ಬಿಳಿ ಚೌಲಿ ಹಾಕಿಕೊಂಡಿರುತ್ತಾರೆ. ಕಿರೀಟ ಸಹ ಧರಿಸುವರು. ಕಾವಿ ಅಂಗಿ, ಕಾವಿ ಕಾಸೆಪಂಚೆ, ಕಿವಿಗೆ ರುದ್ರಾಕ್ಷಿ, ಹಣೆ ಹುಬ್ಬು ಕಿವಿಗಳಿಗೆ ವಿಭೂತಿ, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿಮಾಲೆ, ನಾಗಾಭರಣ, ಎದೆ ಹತ್ತಿರ ವೀರಭದ್ರಸ್ವಾಮಿ ಹಲಗೆ, ಸೊಂಟದಲ್ಲಿ ಚೌಲಿ ಹಾಕಿದ ಹಿತ್ತಾಳೆಯ ನರಸಿಂಹ ಮತ್ತು ದಕ್ಷಬ್ರಹ್ಮನ ಶಿರ ಧರಿಸಿರುತ್ತಾರೆ. ಮೊಣಕಾಲಿಗೆ ಜಂಗು ಧರಿಸುವರು. ಇದಕ್ಕೆ ಕಾಲಕಡಗ, ತೋಡು ಎಂದೂ ಕರೆಯುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆಯನ್ನು ಹಿಡಿದಿರುತ್ತಾರೆ.

‘ಈ ‘ಲಿಂಗದ ವೀರ’ ರು ಮನೆಗೆ ಬಂದು ಭಿಕ್ಷೆ ಸ್ವೀಕರಿಸಿ ವಡಪು ಹೇಳಿದರೆ ಗ್ರಾಮಕ್ಕೆ, ಮನೆಗೆ ಒಳ್ಳೆಯದು. ದನಕರುಗಳಿಗೆ ರೋಗರುಜಿನಗಳು ಅಂಟದು ಎಂಬ ಜನರ ನಂಬಿಕೆಯಿದೆ. ಅದು ತಪ್ಪೋ ಸರಿಯೋ ತಿಳಿಯದು. ಆದರೆ ಕಲೆಯ ಪೋಷಣೆಯಂತೂ ನಡೆಯುತ್ತದೆ. ಹಿಂದೆ ಹಲವಾರು ಮಂದಿ ಈ ಕಲೆಯನ್ನು ನಂಬಿ ಬದುಕುತ್ತಿದ್ದರು. ಆದರೆ ಈಗ ಅವರೂ ವಿರಳರಾಗಿದ್ದಾರೆ’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT