ಪಾಲಿಕೆ ಆದಾಯ ಹೆಚ್ಚಳಕ್ಕೆ ಆದ್ಯತೆ

7
ನೂತನ ಮೇಯರ್‌ ಸುಧೀರ ಸರಾಫ್‌, ಉಪ ಮೇಯರ್‌ ಮೇನಕಾ ಹುರಳಿ ಹೇಳಿಕೆ

ಪಾಲಿಕೆ ಆದಾಯ ಹೆಚ್ಚಳಕ್ಕೆ ಆದ್ಯತೆ

Published:
Updated:
ಪಾಲಿಕೆ ಆದಾಯ ಹೆಚ್ಚಳಕ್ಕೆ ಆದ್ಯತೆ

ಹುಬ್ಬಳ್ಳಿ: ಅವಳಿ ನಗರದಲ್ಲಿ ಬಿಟ್ಟುಹೋಗಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಪಾಲಿಕೆ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು ಎಂದು ನೂತನ ಮೇಯರ್‌ ಸುಧೀರ ಸರಾಫ್‌ ಮತ್ತು ಉಪ ಮೇಯರ್‌ ಮೇನಕಾ ಹುರಳಿ ಹೇಳಿದರು.

ಚುನಾವಣೆಯ ಬಳಿಕ ಮೇಯರ್‌ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ಟುಹೋಗಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದರಿಂದ ಪಾಲಿಕೆಗೆ ವರ್ಷಕ್ಕೆ ₹ 15 ಕೋಟಿಯಿಂದ ₹ 20 ಕೋಟಿ ಆದಾಯ ಬರಲಿದ್ದು, ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದರು.

ಅವಳಿ ನಗರದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗುವುದು. ನಗರದ ಸ್ವಚ್ಛತೆಗೆ ಸಾರ್ವಜನಿಕರು ಪಾಲಿಕೆಯ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಸಕ್ತ ಪಾಲಿಕೆಯ ಅಧಿಕಾರವಧಿ ಕೇವಲ ಒಂದು ವರ್ಷ ಬಾಕಿ ಇದ್ದು, ಮುಂದಿನ ಆರು ತಿಂಗಳ ಒಳಗಾಗಿ ಸ್ವಚ್ಛತೆಯಲ್ಲಿ ಶೇ 50ರಷ್ಟು ಸುಧಾರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಮುಂಗಾರು ಆರಂಭವಾಗುವುದರೊಳಗಾಗಿ ಅವಳಿ ನಗರದ ಚರಂಡಿ, ನಾಲೆಗಳ ಹೂಳು ತೆಗೆಸಿ, ಮಳೆ ನೀರು ರಸ್ತೆ ಮೇಲೆ ನಿಲ್ಲದೇ ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೂ ಹೆಚ್ಚಿನ ಒತ್ತು ನೀಡಲಾಗುವುದು. ಹಳೆ ಹುಬ್ಬಳ್ಳಿಗೆ ಕನಿಷ್ಠ ವಾರಕ್ಕೊಮ್ಮೆಯಾದರೂ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಮಲಪ್ರಭಾದಿಂದ ಹೆಚ್ಚಿನ ನೀರನ್ನು ಹುಬ್ಬಳ್ಳಿಗೆ ಪೂರೈಸಲು ಅಗತ್ಯವಿರುವ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.

ಅವಳಿ ನಗರದ ಅಭಿವೃದ್ಧಿಗೆ ಪಾಲಿಕೆ ಅಧಿಕಾರಿಗಳ ಸಹಕಾರ ಮುಖ್ಯವಾಗಿ ಬೇಕಾಗಿದೆ. ಒಂದು ವೇಳೆ ಅಸಹಕಾರ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರದಿಂದ ಪಾಲಿಕೆಗೆ ಬರಬೇಕಿರುವ ಪಿಂಚಣಿ ಬಾಕಿ ಅನುದಾನವನ್ನು ತರಲು ಎಲ್ಲ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳ ಸಹಕಾರ ಕೋರಿದರು.

***

ಜೋಶಿ ನಿಷ್ಠನಿಗೆ ಒಲಿದ ಮೇಯರ್‌ ಪಟ್ಟ

ನೂತನ ಮೇಯರ್‌ ಸುಧೀರ ಸರಾಫ್‌ ಅವರು ಸಂಸದ ಪ್ರಹ್ಲಾದ ಜೋಶಿ ಮತ್ತು ಬಿಜೆಪಿಯ ನಿಷ್ಠಾವಂತ ಅನುಯಾಯಿ. ಹೀಗಾಗಿಯೇ ಅವರಿಗೆ, ಈ ಪಟ್ಟ ಒಲಿದು ಬಂದಿದೆ.

ಡಿಪ್ಲೊಮಾ ಪದವೀಧರರಾಗಿರುವ ಇವರು, ಹುಬ್ಬಳ್ಳಿಯಲ್ಲಿ ನಡೆದ ಈದ್ಗಾ ಮೈದಾನ, ನೈರುತ್ಯ ರೈಲ್ವೆ ವಲಯ ಕಚೇರಿ ಹಾಗೂ ಧಾರವಾಡ ಹೈಕೋರ್ಟ್‌ ಪೀಠ ಸ್ಥಾಪನೆ ಕುರಿತು ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

1988ರಿಂದ ವಾರ್ಡ್‌ನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದ ಅವರು, 1996ರಲ್ಲಿ ಹುಬ್ಬಳ್ಳಿ ಶಹರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 1999ರಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು 2004ರಲ್ಲಿ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

2007 ಮತ್ತು 2013ರಲ್ಲಿ 52ನೇ ವಾರ್ಡ್‌ನಿಂದ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು.

2012ರಲ್ಲಿ ಪಾಲಿಕೆಯ ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, 2017ರಲ್ಲಿ ಪಾಲಿಕೆಯ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry