ಕನಕಪ್ಪನ ಗುಡ್ಡದ ಮೇಲೆ ಭಾವೈಕ್ಯದ ಜಾತ್ರೆ..!

7

ಕನಕಪ್ಪನ ಗುಡ್ಡದ ಮೇಲೆ ಭಾವೈಕ್ಯದ ಜಾತ್ರೆ..!

Published:
Updated:
ಕನಕಪ್ಪನ ಗುಡ್ಡದ ಮೇಲೆ ಭಾವೈಕ್ಯದ ಜಾತ್ರೆ..!

ಮುಂಡರಗಿ: ತಾಲ್ಲೂಕಿನ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮೀ ಕನಕ ನರಸಿಂಹನ ಜಾತ್ರೆಯು ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿ. ಎಲ್ಲ ಜಾತಿ, ಧರ್ಮಗಳ ಜನರು ಒಂದಾಗಿ ಈ ಜಾತ್ರೆ ಆಚರಿಸುತ್ತಾರೆ. ಮಾರ್ಚ್‌ ಮೊದಲ ವಾರದಲ್ಲಿ ಹೂಳಿ ಹುಣ್ಣಿಮೆ ಬೆನ್ನಲ್ಲೇ, ಈ ಜಾತ್ರೆಗೆ ಚಾಲನೆ ಲಭಿಸುತ್ತದೆ. ನಿಜ ಅರ್ಥದಲ್ಲಿ ಇದೊಂದು ಜಾತ್ಯತೀತ ಜಾತ್ರೆ.

ಪಟ್ಟಣದ ಮಂಡಗೈ ಭೀಮರಾಯರ ವಂಶಜರಾದ ವಿ.ಎಸ್‌.ನಾಡಗೌಡ ಅವರ ನೇತೃತ್ವದಲ್ಲಿ ಒಟ್ಟು 9 ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಸದ್ಯ ಮಾರ್ಚ್ 2ರಿಂದ ಜಾತ್ರೆ ಪ್ರಾರಂಭವಾಗಿದೆ. ಒಂದೊಂದು ದಿನ ಒಂದೊಂದು ಸಮುದಾಯಕ್ಕೆ ಸೇರಿದ ಜನರು ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವುದು ಇಲ್ಲಿನ ವಿಶೇಷ. ಬ್ರಾಹ್ಮಣರು,ದಲಿತರು ಸೇರಿದಂತೆ ಎಲ್ಲ ಜಾತಿಯ ಜನರು ಮುಕ್ತವಾಗಿ ಜಾತ್ರೆ ಹಾಗೂ ಜಾತ್ರೆಯ ಪ್ರಯುಕ್ತ ನಡೆಯುವ ವಿವಿಧ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸುತ್ತಾರೆ.

ಬ್ರಾಹ್ಮಣ, ಹಾಲುಮತ, ಉಪ್ಪಾರ ಸಮಾಜದವರಿಂದ ಮುಂಜಾನೆಯಿಂದ ಸಂಜೆಯವರೆಗೂ ಹರಿದಾಸ ಕೀರ್ತನೆ, ಹರಿಭಕ್ತಸಾರ ಪಠಣ, ಪಂಚಾಮೃತ ಅಭಿಷೇಕ, ಶಂಖಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ನಂತರ ಸಂಜೆ ಲಘು ರಥೋತ್ಸವ ಹಾಗೂ ರಾತ್ರಿ ಪಲ್ಲಕ್ಕಿ ಸೇವೆ ನಡೆಯುತ್ತದೆ.

ವಾಲ್ಮೀಕಿ ಸಮಾಜದವರಿಂದ ಶಂಖಾಭಿಷೇಕ, ಪುಷ್ಪಾಲಂಕಾರ, ವಾಯುಸ್ಥಿತಿ, ನರಸಿಂಹ ಸುಳಾದಿ ಪಠಣ, ಮಹಾಮಂಗಳಾರತಿ, ಲಘು ರಥೋತ್ಸವ ನಡೆಯುತ್ತದೆ. ನಂತರ ವಿಶ್ವ ಕರ್ಮ ಸಮಾಜದವರಿಂದ ಅಭಿಷೇಕ, ಅಲಂಕಾರ, ಮಹಾನೈವೇದ್ಯ, ಮಹಾ ಮಂಗಳಾರತಿ ಸೇವೆ ನಡೆಯುತ್ತದೆ. ಹೀಗೆ ಒಂದು ಸಮಾಜದ ನಂತರ ಮತ್ತೊಂದು ಸಮಾಜ ಧಾರ್ಮಿಕ ಸೇವೆ ಮಾಡುತ್ತದೆ.

6ರಂದು ಮುಂಜಾನೆ 9ಗಂಟೆಗೆ ಹರಿಜನರು ಸಂಪ್ರದಾಯದಂತೆ ಲಕ್ಷ್ಮಿ ಕನಕ ನರಸಿಂಹನಿಗೆ ಬೃಹತ್‌ ಪಾದರಕ್ಷೆ ಮಾಡಿಕೊಂಡು ವಿಶೇಷ ಗರುಡಾರುತಿ ಸಮೇತ ಕನಕಪ್ಪನ ಗುಡ್ಡಕ್ಕೆ ತೆರಳಿ ಗರುಡಾರತಿ ಸೇವೆ ಸಲ್ಲಿಸುವುದು ಈ ಜಾತ್ರೆಯ ಮತ್ತೊಂದು ವಿಶೇಷ. ನಂತರ ದೇವಾಲಯ ಪ್ರವೇಶ ನಡೆಯುತ್ತದೆ.

ಮಾರ್ಚ್‌ 7ರಂದು ಗಂಗಾ ಪೂಜೆ, ಪಲ್ಲಕ್ಕಿ ಸೇವೆ, ಮಹಾನೈವೇದ್ಯ, ಅನ್ನ ಸಂತರ್ಪಣೆ ನಡೆಯುತ್ತದೆ. ಜಾತ್ರೆಯಲ್ಲಿ ತಾಲ್ಲೂಕಿನ ಎಲ್ಲ ಜಾತಿಯ ಜನರೂ ಸಕ್ರೀಯವಾಗಿ ಭಾಗವಹಿಸಿ, ಸಂಭ್ರಮಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry