ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಪ್ರತಿಭಟನೆ; ಕ್ರಮಕ್ಕೆ ಒತ್ತಾಯ

ಶಿಡಗಳಲೆ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯಿಂದಲೇ ಬೀಗ
Last Updated 4 ಮಾರ್ಚ್ 2018, 10:32 IST
ಅಕ್ಷರ ಗಾತ್ರ

ಸಕಲೇಶಪುರ: ಕರ್ತವ್ಯ ಲೋಪದ ಆರೋಪದ ಮೇಲೆ ಬೇರೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ತಾಲ್ಲೂಕಿನ ಶಿಡಿಗಳಲೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತೆರಳದೆ ತಮ್ಮ ಅಧಿಕಾರ ಚಲಾಯಿಸಲು ಮುಂದಾಗಿ ಕೇಂದ್ರ ಬೀಗ ಹಾಕಿದ್ದನ್ನು ಖಂಡಿಸಿ ಗ್ರಾಮಸ್ಥರು ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಎರಡು ತಿಂಗಳ ಹಿಂದೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಗ ಗ್ರಾಮಸ್ಥರ ಒತ್ತಾಯದ ಮೇರೆಗೆ ವನಜಾಕ್ಷಿ ಅವರನ್ನು ಬೇರೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ.

ಬೇರೆ ಅಂಗನವಾಡಿ ಕೇಂದ್ರಕ್ಕೆ ನಾನು ಹೋಗುವುದಿಲ್ಲ ಇದೇ ಕೇಂದ್ರದಲ್ಲಿ ಇರುತ್ತೇನೆ ಎಂದು ಹಠಕ್ಕೆ ಬಿದ್ದು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಹೋಗಿದ್ದರು. ಸುಮಾರು 15 ಮಕ್ಕಳು ಕೇಂದ್ರದ ಹೊರಗೆ ಬೀದಿಯಲ್ಲಿ ನಿಲ್ಲಬೇಕಾಯಿತು.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವನಜಾಕ್ಷಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಹಿಂದಿ ನಿಂದಲೂ ಇವರು ಇದೇ ರೀತಿ ವರ್ತನೆ ಮಾಡುತ್ತಿದ್ದಾರೆ. ಕೇಂದ್ರದ ಸಹಾಯಕಿಯೊಂದಿಗೆ ಸದಾ ಜಗಳವಾಡುತ್ತಾರೆ ಎಂದು ದೂರಿದರು.

ಬೇರೆಡೆ ನಿಯೋಜನೆಗೊಂಡರೂ ಹೋಗದೆ ಬೀಗ ಹಾಕಿಕೊಂಡು ಹೋಗುವ ಮೂಲಕ ಅಧಿಕಾರ ಚಲಾಯಿಸಲು ಹೊರಟಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲ್ಲೂಕು ಪ್ರಭಾರಿ ಸಿಡಿಪಿಒ ಕಸ್ತೂರಿ ಹಾಗೂ ಸಹಾಯಕಿ ಉಮಾ, ದೂರವಾಣಿ ಮೂಲಕ ವನಜಾಕ್ಷಿ ಅವರೊಂದಿಗೆ ಮಾತನಾಡಿದಾಗ ಅಧಿಕಾರಿಗಳೊಂದಿಗೂ ಸಹ ಅಸಭ್ಯವಾಗಿ ವರ್ತಿಸಿದ್ದಾರೆ. ಆಗ ಸಿಡಿಪಿಒ ಕೇಂದ್ರದ ಬೀಗ ತೆರವುಗೊಳಿಸಿ ಕೂರಲು ಮಕ್ಕಳಿಗೆ ಅನುವು ಮಾಡಿ ಕೊಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಡಿಪಿಒ ಕಸ್ತೂರಿ, ‘ಕಟ್ಟಡಕ್ಕೆ ಬೀಗ ಹಾಕಿ ಮಕ್ಕಳನ್ನು ಹೊರಗೆ ನಿಲ್ಲಿಸಿರುವ ವನಜಾಕ್ಷಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ ಪರಿಶಿಷ್ಟ ಜಾತಿ ತಾಲ್ಲೂಕು ಕಾರ್ಯದರ್ಶಿ ಸಂದೀಪ್ ಶಿಡಿಗಳಲೆ, ಬಸವರಾಜ್, ರಾಜಯ್ಯ, ನಿಂಗರಾಜ್, ಸೋಮಶೇಖರ್, ಚಂದ್ರಶೇಖರ್, ಮಲ್ಲಯ್ಯ, ಕುಮಾರ್, ವಿಮಲ, ಸರೋಜಮ್ಮ, ಪ್ರಕೃತಿ, ಬೇಬಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT