ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣನೆಗೆ ನಿಲುಕದ ‘ಬೆಳದಿಂಗಳ ಬುತ್ತಿಜಾತ್ರೆ’

ತಳುವಗೇರಾ: ಆಧುನಿಕತೆಯಲ್ಲೂ ಮರೆಯಾಗದ ಗ್ರಾಮೀಣ ಸೊಗಡು
Last Updated 4 ಮಾರ್ಚ್ 2018, 11:02 IST
ಅಕ್ಷರ ಗಾತ್ರ

ಕುಷ್ಟಗಿ: ಬಾನಂಗಳದಲ್ಲಿ ಚಂದ್ರ ಮೇಲಕ್ಕೇಳುತ್ತಿದ್ದಂತೆ ಊರಿಗೆ ಊರೇ ರಂಗೇರುತ್ತದೆ. ಸಾಂಪ್ರದಾಯಿಕ ವಾದ್ಯ ಮೇಳದವರು ಮುನ್ನಡೆಯುತ್ತಿದ್ದರೆ ಬಣ್ಣ ಬಣ್ಣದ ಉಡುಗೆ ತೊಟ್ಟ ನೂರಾರು ಮಹಿಳೆಯರು, ಮಕ್ಕಳು ತಲೆಯಮೇಲೆ ಬುತ್ತಿಗಂಟುಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕುತ್ತಿರುತ್ತಾರೆ. ಊರಿನ ಹಿರಿಯರು, ಯುವಕರು ಮೆರವಣಿಗೆ ಯಲ್ಲಿ ಸಾಗುತ್ತಿದ್ದರೆ ಸಂಭ್ರಮೋಲ್ಲಾಸ ಮನೆ ಮಾಡಿರುತ್ತದೆ.

ಹೌದು, ಇಂಥದೊಂದು ಅಪರೂಪದ ಕ್ಷಣಗಳನ್ನು ಕಣ್ತುಂಬಿ ಕೊಳ್ಳಬೇಕಾದರೆ ತಾಲ್ಲೂಕಿನ ತಳುವಗೇರಾ ಗ್ರಾಮದಲ್ಲಿ ಪ್ರತಿವರ್ಷ ಹೋಳಿ ಹುಣ್ಣಿಮೆಯ ಮರುದಿನ ನಡೆಯುವ ವನಕಾಂಡ ಹೆಸರಿನ ‘ಬೆಳದಿಂಗಳ ಬುತ್ತಿಜಾತ್ರೆ’ಗೆ ಬರಬೇಕು.

ಗ್ರಾಮದ ಎಲ್ಲ ಜನರು ಜಾತಿ ಮತ ಭೇದ ಮರೆತು ಒಂದೇ ಸ್ಥಳದಲ್ಲಿ ಕುಳಿತು ಪರಸ್ಪರ ಬುತ್ತಿ ಹಂಚಿಕೊಂಡು ಉಣ್ಣುವುದು, ಹರಟೆ ಹೊಡೆಯು ವುದು, ಮನಬಿಚ್ಚಿ ಮಾತನಾಡುವ ಮೂಲಕ ಹೃದಯ ಹಗುರ ಮಾಡಿಕೊಂಡು ದೊರೆತ ಸಮಯವನ್ನು ಸಂತೋಷದಿಂದ ಕಳೆಯುವುದು ಬುತ್ತಿ ಜಾತ್ರೆಯ ಸಂಪ್ರದಾಯ.

ಜಾತ್ರಾ ಮಹೋತ್ಸವದ ನೆನಪಿಗಾಗಿ ಹಿರಿಯರು ನಡೆಸುತ್ತ ಬಂದಿರುವ ಈ ಆಚರಣೆ ಅನೇಕ ವರ್ಷಗಳಿಂದಲೂ ಮುಂದುವರೆದಿದೆ. ತಳುವಗೇರಾ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಜನರು, ಬಂಧು ಬಾಂಧವರು, ಪಟ್ಟಣದ ಪ್ರಮುಖರು, ಮಠಾಧೀಶರು, ಚುನಾಯಿತ ಪ್ರತಿನಿಧಿಗಳೂ ಇದರಲ್ಲಿ ಭಾಗಿಯಾಗುವುದು ಮತ್ತೊಂದು ವಿಶೇಷ.

ಸಂಜೆಯಾಗುತ್ತಿದ್ದಂತೆ ಎಲ್ಲ ಮನೆಗಳಿಂದ ರುಮಾಲು ಸುತ್ತಿದ ರೈತರು, ಊರಿನ ಹಿರಿಯರು ಹೊಸ ಬಟ್ಟೆಗಳನ್ನು ತೊಟ್ಟು ಸಿಂಗಾರಗೊಂಡ ಮಹಿಳೆಯರು, ಮಕ್ಕಳು, ತಲೆಯ ಮೇಲೆ ಬುತ್ತಿ ಗಂಟುಗಳನ್ನು ಹೊತ್ತುಕೊಂಡು ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿ ಅಕ್ಷರಶಃ ಅಪ್ಪಟ ಗ್ರಾಮೀಣ ಸೊಗಡು ಮೇಳೈಸಿರುತ್ತದೆ.

ವೃದ್ಧರು, ಅಶಕ್ತರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಜನ ಬುತ್ತಿಜಾತ್ರೆಗೆ ನಡೆಯುವುದರಿಂದ ಬಹುತೇಕ ಮನೆಗಳ ಬಾಗಿಲು ಮುಚ್ಚಿರು ತ್ತವೆ. ಗ್ರಾಮ ಬಿಕೊ ಎನ್ನುತ್ತಿರುತ್ತದೆ. ಇನ್ನೊಂದೆಡೆ ಜನರ ಸಂಭ್ರಮ ಮೇರೆ ಮೀರಿರುತ್ತದೆ. ಮೇಲು ಕೀಳು, ಬಡವ ಬಲ್ಲಿದ ಎಂಬ ಮೇಲರಿಮೆ, ಕೀಳರಿಮೆಗೆ ಅಲ್ಲಿ ಅವಕಾಶವೇ ಇಲ್ಲದಷ್ಟು ಭಾವೈಕ್ಯತೆ ಮತ್ತು ಭ್ರಾತೃತ್ವ ಮೇಲುಗೈ ಪಡೆದಿರುತ್ತದೆ.

‘ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನರು ಮುಖಾಮುಖಿಯಾಗಿ ಹೃದಯಕ್ಕೆ ಹತ್ತಿರವಾಗಿ ಮಾತನಾಡು ವುದೇ ಅಪರೂಪ. ಇನ್ನು, ಒಂದೆ ಕಡೆ ಕಲೆತು ಹಾಲು ಚೆಲ್ಲಿದ ಬೆಳದಿಂಗಳಲ್ಲಿ ತುತ್ತು ಹಂಚಿಕೊಂಡು ಉಣ್ಣುವ ಪರಿ ನೋಡುವುದೇ ಒಂದು ಭಾಗ್ಯ. ತಾಂತ್ರಿಕತೆ ಎಷ್ಟೇ ಬೆಳೆದರೂ ಬುತ್ತಿ ಜಾತ್ರೆ ಸಂಪ್ರದಾಯ ಮತ್ತು ಸಾಂಸ್ಕೃತಿಕ ಹಿರಿಮೆಗೆ ಭಂಗ ಬಂದಿಲ್ಲ. ಯುವಕರಲ್ಲಿ ಹುಮ್ಮಸ್ಸನು ಇದೆ’ ಎನ್ನುತ್ತಾರೆ ತಳುವಗೇರಾ ಗ್ರಾಮಸ್ಥ ಉಮೇಶ ಮೇಳಿ.

ವೈವಿಧ್ಯತೆಯ ಬುತ್ತಿ: ಪರಸ್ಥಳದಿಂದ ಹೋದ ಅತಿಥಿಗಳಿಗೆ ಎಲ್ಲರಿಂದಲೂ ಸತ್ಕಾರ ದೊರೆಯುತ್ತದೆ. ಊಟದಲ್ಲೂ ವೈವಿಧ್ಯತೆ ಇರುತ್ತದೆ. ಬದನೆಕಾಯಿ ಇತರೆ ಪಲ್ಯೆ, ಉಸುಳಿ, ಹೋಳಿಗೆ, ಕರ್ಚಿಕಾಯಿ, ಮಿರ್ಚಿ ಭಜಿ, ಕಡಕ್‌ ರೊಟ್ಟಿ, ಚಪಾತಿ ಹೀಗೆ ಬಾಯಲ್ಲಿ ನೀರೂರಿಸುವ ತರಹೆವಾರಿ ತಿನಿಸು. ಬೇರೆ ಮನೆಯವರಾದರೂ ‘ಕಾಕ, ಅಪ್ಪ, ಅವ್ವ, ಚಿಗವ್ವ, ಅಣ್ಣ, ಅಕ್ಕ, ತಂಗಿ, ಮಾವ’ ಹೀಗೇ ಹೃದಯಸ್ಪರ್ಷಿಸುವ ಮಾತುಗಳ ಮೂಲಕ ಅಕ್ಕಂದಿರು ನೀಡುವ ತುತ್ತಿನಲ್ಲಿ ಭಾವನೆಗಳು ಬೆರೆತು ರುಚಿಯನ್ನು ಹೆಚ್ಚಿಸುತ್ತದೆ.

‘ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲೂ ತನ್ನ ಗ್ರಾಮೀಣ ಸಂಸ್ಕೃತಿ ಯನ್ನು ಚಾಚೂ ತಪ್ಪದೆ ಉಳಿಸಿ ಕೊಂಡು ಬಂದಿರುವ ತಳುವಗೇರಾ ಗ್ರಾಮದ ಬುತ್ತಿಜಾತ್ರೆ ಬಣ್ಣನೆಗೂ ನಿಲುಕದಂಥದ್ದು’ ಎಂಬು ದಾಗಿ ನಿಡಶೇಸಿಯ ರಾಮಣ್ಣ, ತೋಪಲ ಕಟ್ಟಿಯ ಬಸನಗೌಡ ವರ್ಣಿಸುತ್ತಾರೆ.
**
ಒಂದು ವರ್ಷದ ಅವಧಿಯಲ್ಲಿ ಯಾವುದೇ ಕಾರಣಗಳಿಗೆ ಜಗಳವಾಡಿ ಮಾತು ಬಿಟ್ಟವರು ಈ ದಿನ ಪರಸ್ಪರ ಮಾತನಾಡಿ ದ್ವೇಷ ಮರೆತು ಒಂದಾಗುವುದು ಬುತ್ತಿಜಾತ್ರೆ ವಿಶೇಷ.
ಉಮೇಶ ಮೇಳಿ, ತಳುವಗೇರಾ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT