ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಭಾಗ್ಯ ಜಾರಿ ಮಾಡುವುದು ಅಗತ್ಯ

ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಲಸಚಿವ ರಂಗರಾಜ ವನದುರ್ಗ ಹೇಳಿಕೆ
Last Updated 4 ಮಾರ್ಚ್ 2018, 11:40 IST
ಅಕ್ಷರ ಗಾತ್ರ

ರಾಯಚೂರು: ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಸರ್ಕಾರ ಪುಸ್ತಕ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಟಮಾರಿ ಗ್ರಾಮದ ಮಹಾಂತೇಶ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಎರಡು ದಿನಗಳ ತಾಲ್ಲೂಕ ಮಟ್ಟದ ನಾಲ್ಕನೇ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಕ್ರಿಕೆಟ್‌ನಲ್ಲಿ ಕ್ರೀಡಾಪಟುಗಳನ್ನು ಖರೀದಿಸಿ ಆಟವಾಡಿಸಿದಂತೆ ಸಾಹಿತಿ ಗಳಿಗೂ ಪ್ರೋತ್ಸಾಹ ದೊರಕಿಸಲು ಸರ್ಕಾರ ಪುಸ್ತಕ ಭಾಗ್ಯದ ಮೂಲಕ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿ, ಖರೀದಿಸಬೇಕು. ಕಳೆದು ಹೋಗು ತ್ತಿರುವ ಕಾಲದ ಒತ್ತಡದ ನಡುವೆ ಕವಿಗಳ ಹಾಗೂ ಸಾಹಿತಿಗಳ ಸಾಮಾಜಿಕ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದ್ದು, ಸಾಹಿತಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಬೇಕು ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಅರಮನೆಯಲ್ಲಿದ್ದು ಅರ್ಜುನನ್ನಾಗಿಸುವ ಶಿಕ್ಷಣಕ್ಕಿಂತ ಅರಣ್ಯದಲ್ಲಿ ಏಕಲವ್ಯನಾಗುವ ಶಿಕ್ಷಣ ವ್ಯವಸ್ಥೆಗೆ ಮಹತ್ವ ನೀಡುವ ಮೂಲಕ ಗುಣಾತ್ಮಕ ಶಿಕ್ಷಣವನ್ನು ಬೆಳೆಸಬೇಕು. ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ವೈದ್ಯ, ಎಂಜಿನಿಯರ್ ಹಾಗೂ ಸಾಫ್ಟ್‌ವೇರ್ ಆಗಬೇಕು ಎಂದು ಬಯಸುತ್ತಾರೆ. ಆದರೆ, ಶಿಕ್ಷಕರಾಗಲಿ ಎಂದು ಬಯಸುವುದಿಲ್ಲ. ಪ್ರತಿಭಾವಂತರೆಲ್ಲ ವೃತ್ತಿಪರ ಕ್ಷೇತ್ರಕ್ಕೆ ಹೋದರೆ, ಮುಂದಿನ ಪೀಳಿಗೆಗೆ ಶಿಕ್ಷಣ ಕೊಡುವವರು ಯಾರು ಎಂಬುದನ್ನು ಚಿಂತಿಸಬೇಕು.

ಸಾಮಾನ್ಯ ರೀತಿಯ ಫಲಿತಾಂಶ ಪಡೆದವರು ಶಿಕ್ಷಕರಾದರೆ ಮುಂದಿನ ವೈದ್ಯರು ಹಾಗೂ ಎಂಜಿನಿಯರ್‌ಗಳು ಕೂಡ ಸಾಮಾನ್ಯ ರೀತಿಯ ಆಗಿರುತ್ತಾರೆ. ಬಲಿಷ್ಠ ಭಾರತ ಹೋಗಿ ಸಾಮಾನ್ಯ ರೀತಿಯ ಭಾರತ ನಿರ್ಮಾಣವಾಗಲಿದೆ. ಅದರಂತೆ ಕರ್ನಾಟಕವೂ ಆಗುತ್ತದೆ ಆದ್ದರಿಂದ ಈ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು ಎಂದರು.

ಸಮ್ಮೇಳನಾಧ್ಯಕ್ಷ ಆಂಜನೇಯ ಜಾಲಿಬೆಂಚಿ ಮಾತನಾಡಿ, ಬೇರೆ ಬೇರೆ ರಾಜ್ಯಗಳಿಂದ ನಾಡಿಗೆ ಬರುವ ವಿವಿಧ ಭಾಷಿಕರೊಂದಿಗೆ ಅವರ ಭಾಷೆಯಲ್ಲೇ ಕನ್ನಡಿಗರು ಮಾತನಾಡುತ್ತಾರೆ. ಆದರೆ, ಕನ್ನಡತನ ಉಳಿಸುವ ಸಲುವಾಗಿ ಕನ್ನಡ ದಲ್ಲೇ ಮಾತನಾಡಬೇಕಾಗಿದೆ ಎಂದರು.

ದೇಶಕ್ಕೆ ಅನ್ನ ನೀಡುವ ರೈತ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ರೈತರು ಗ್ರಾಮಗಳಿಂದ ನಗರದ ಕಡೆಗೆ ಮುಖ ಮಾಡಿದ್ದಾನೆ. ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ ಹೊಂದಿದ್ದರೂ, ಜಿಲ್ಲೆಯು ವಿದ್ಯುತ್, ಚಿನ್ನ ಹಾಗೂ ಅನ್ನ ನೀಡುವ ಮೂಲಕ ತನ್ನದೇ ಹಿರಿಮೆ ಸಂಪಾದಿಸಿಕೊಂಡಿದೆ. ಆದರೆ, ಶೈಕ್ಷಣಿಕ, ಆರೋಗ್ಯ ಹಾಗೂ ನೀರಾವರಿ ಸೇರಿದಂತೆ ಬಹಳಷ್ಟು ಸಮಸ್ಯೆಗಳು ಹೆಚ್ಚಾಗಿವೆ ಎಂದರು.

ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಿರುವ ಸಂವಿಧಾನದ 371 (ಜೆ) ಕಾಯ್ದೆಯಡಿ ಎಬಿಸಿಡಿ ಗ್ರೇಡ್‌ ಹುದ್ದೆಗಳಲ್ಲಿ 80:20 ಅನುಪಾತದಲ್ಲಿ ಮೀಸಲಾತಿ ನೀಡಬೇಕು. ಇದರಿಂದ ಪ್ರಾದೇಶಿಕ ಅಸಮಾನತೆ ನೀಗಿಸಲು ಅನುಕೂಲವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶ ಅವಕಾಶ ವಂಚಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಕನ್ನಡ ಭಾಷೆ ಬೆಳೆಸಲು ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.

ಈ ಭಾಗದಲ್ಲಿನ 46 ಸಾವಿರ ಹುದ್ದೆಗಳಲ್ಲಿ ಸರ್ಕಾರದ ಪ್ರಕಾರ 20 ಸಾವಿರ ಹುದ್ದೆಗಳನ್ನು ತುಂಬಲಾಗಿದೆ. ಆದರೆ, ಇನ್ನೂ 26 ಸಾವಿರ ಹುದ್ದೆಗಳು ಖಾಲಿಯಿವೆ ಎಂದು ಸರ್ಕಾರವೇ ತಿಳಿಸಿದೆ. ಈ ಮಾಹಿತಿ ಸಂಗ್ರಹಿಸಲು ನಿರಂತರವಾಗಿ ಸದನದಲ್ಲಿ ಪ್ರಶ್ನೆ ಮಾಡಿದ್ದೇನೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕ ತಿಪ್ಪರಾಜು ಹವಾಲ್ದಾರ ಸ್ವಾಗತಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕೆ.ಗಿರಿಜಾ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಬಸಪ್ಪ ತಿಪ್ಪಾರೆಡ್ಡಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ವೀರಭದ್ರಪ್ಪ, ಈಶ್ವರಯ್ಯ ಮಠ, ಅಬ್ದುಲ್ ರಜಾಕ್ ಉಸ್ತಾದ್, ಭೀಮನಗೌಡ ಇಟಗಿ, ಉರುಕುಂದಪ್ಪ ನಾಯಕ ಇದ್ದರು. ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT