ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗಾಗಿ ‘ಬಯಸಿದ ಕರು ಪಡೆಯುವ ಭಾಗ್ಯ’

ಲಿಂಗ ನಿರ್ಧರಿತ ವೀರ್ಯ ಬಳಕೆ ಮೂಲಕ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಪ್ರಾಯೋಗಿಕ ಚಾಲನೆ
Last Updated 4 ಮಾರ್ಚ್ 2018, 11:43 IST
ಅಕ್ಷರ ಗಾತ್ರ

ರಾಮನಗರ: ವೀರ್ಯದ ಹಂತದಲ್ಲಿಯೇ ಕರುವಿನ ಲಿಂಗ ನಿರ್ಧರಿಸುವ ಕೃತಕ ಗರ್ಭಧಾರಣೆ ವಿಧಾನವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳು ಮುಂದಾಗಿವೆ. ‘ಬಯಸಿದ ಕರು ಪಡೆಯುವ ಭಾಗ್ಯ’ ಎಂದು ಈ ಕಾರ್ಯಕ್ರಮಕ್ಕೆ ಹೆಸರಿಡಲಾಗಿದೆ.

ರಾಜ್ಯದ ಹೈನುಗಾರಿಕೆ ಇತಿಹಾಸದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಲಿದೆ. ಸುಧಾರಿತ ವಿದೇಶಿ ತಂತ್ರಜ್ಞಾನದ ಮೂಲಕ ಕೃತಕ ಗರ್ಭಧಾರಣೆ ಮಾಡಿಸುವ ಗುರಿ ಹೊಂದಲಾಗಿದೆ. ಇದರಿಂದ ಜನಿಸುವ ಶೇ90ಕ್ಕೂ ಹೆಚ್ಚು ಕರುಗಳು ಹೆಣ್ಣಾಗಿರಲಿವೆ ಎನ್ನುತ್ತಾರೆ ಪಶುವೈದ್ಯಕೀಯ ತಜ್ಞರು.

ಏನಿದು ಪ್ರಯೋಗ: ಹುಟ್ಟುವ ಕರುವಿನ ಲಿಂಗ ನಿರ್ಧಾರವಾಗುವುದು ಹೋರಿಗಳ ವೀರ್ಯದಿಂದ. ಹೋರಿಗಳ ವೀರ್ಯದಲ್ಲಿ ಎಕ್ಸ್ (x) ಮತ್ತು ವೈ (y) ಎನ್ನುವ ಎರಡು ಬಗೆಯ ವೀರ್ಯಾಣುಗಳಿರುತ್ತವೆ. ಇದರಲ್ಲಿ ಎಕ್ಸ್ ಬಗೆಯ ವೀರ್ಯವು ಹಸುವಿನ ಅಂಡಾಣು ಜೊತೆ ಸೇರಿದಲ್ಲಿ ಹೆಣ್ಣು ಕರು ಹಾಗೂ ವೈ ಬಗೆಯ ವೀರ್ಯ ಸೇರಿದಲ್ಲಿ ಗಂಡು ಕರು ಜನಿಸುತ್ತದೆ.

ವೀರ್ಯದ ಹಂತದಲ್ಲಿಯೇ ಈ ಎಕ್ಸ್ ಮತ್ತು ವೈ ವೀರ್ಯಾಣುಗಳನ್ನು ವಿಭಜಿಸಿ, ಕೇವಲ ಎಕ್ಸ್‌ ವೀರ್ಯಾಣುಗಳನ್ನು ಆಯ್ಕೆ ಮಾಡಿಕೊಂಡು ಅದರಿಂದ ಹಸುಗಳಿಗೆ ಗರ್ಭಧಾರಣೆ ಮಾಡಿಸುವ ಕ್ರಮವು ಈಗಾಗಲೇ ವಿದೇಶಗಳಲ್ಲಿ ಜಾರಿಯಲ್ಲಿದೆ. ವಿವಿಧ ದೇಶಗಳು ಕಳೆದ 20 ವರ್ಷಗಳಿಂದ ಈ ತಂತ್ರಜ್ಞಾನ ಅನುಸರಿಸುತ್ತಿವೆ. ದೇಶದಲ್ಲಿ ಪಂಜಾಬ್, ಹರಿಯಾಣ ಮೊದಲಾದ ರಾಜ್ಯಗಳಲ್ಲಿಯೂ ವಿರಳವಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಇದರ ಸಾಮೂಹಿಕ ಪ್ರಯೋಗಕ್ಕೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಪಿ.ನಾಗರಾಜು ನೇತೃತ್ವದ ತಂಡ ಸಜ್ಜಾಗಿದೆ.

‘ಸದ್ಯ ಈ ಮಾದರಿಯ ಸಾವಿರ ನಳಿಕೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಒಂದು ನಳಿಕೆಯ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ₹900–1000 ದಷ್ಟಿದೆ. ಇದರಲ್ಲಿ ಸರ್ಕಾರ ಶೇ50ರಷ್ಟು ಸಹಾಯಧನ ನೀಡಿದೆ. ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಈ ಮಾದರಿಯ ವೀರ್ಯ ನಳಿಕೆ ಬಳಸಿ ಹಸುಗಳಿಗೆ ಕೃತಕ ಗರ್ಭಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಪಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಹಸುಗಳ ಆಯ್ಕೆ: ಮೊದಲ ಹಂತದಲ್ಲಿ ರಾಮನಗರ ತಾಲ್ಲೂಕಿನ 20 ಹಳ್ಳಿಗಳಿಂದ 150 ಹಸುಗಳನ್ನು ಈ ಗರ್ಭಧಾರಣೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹಸುವಿನ ಆರೋಗ್ಯ, ವಯಸ್ಸು ಪರಿಗಣಿಸಿ ತಜ್ಞರೇ ಆಯ್ಕೆ ಮಾಡಿಕೊಂಡಿದ್ದಾರೆ.

ಅನುಕೂಲಗಳೇನು: ಎಚ್‌ಎಫ್‌ ತಳಿಯ ವೀರ್ಯವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಈ ತಳಿ ಹಸು ಒಂದು ಕರಾವಿನ ಹಂತದಲ್ಲಿ ಸರಾಸರಿ 9843 ಲೀಟರ್‌ನಷ್ಟು ಹಾಲು ನೀಡುವ ಸಾಮರ್ಥ್ಯ ಹೊಂದಿದೆ. ಒಂದು ದಿನಕ್ಕೆ 30–35 ಲೀಟರ್‌ನಷ್ಟು ಹಾಲು ನೀಡಬಲ್ಲದಾಗಿದೆ ಎನ್ನುತ್ತಾರೆ ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯ (ಎನ್‌ಡಿಆರ್‌ಐ) ದಕ್ಷಿಣ ವಲಯ ಕೇಂದ್ರದ ನಿರ್ದೇಶಕರಾದ ಕೆ.ಪಿ.ರಮೇಶ್.

ಹೆಣ್ಣು ಕರುಗಳೇ ಹುಟ್ಟುವುದರಿಂದ ರೈತರು ಎಳೆಯ ಕರುಗಳನ್ನು ಕಸಾಯಿಖಾನೆಗಳಿಗೆ ಕಳುಹಿಸುವುದು ತಪ್ಪುತ್ತದೆ. ಹಾಲಿನ ಉತ್ಪಾದನೆ ಹೆಚ್ಚಿ ರೈತರ ಆದಾಯ ವೃದ್ಧಿಸುತ್ತದೆ. ಹೆಚ್ಚೆಚ್ಚು ಮಂದಿಗೆ ಉದ್ಯೋಗವೂ ಸಿಗಲಿದೆ ಎಂದು ಅವರು ಹೇಳುತ್ತಾರೆ.

ಸದ್ಯ ವಿದೇಶಿ ಕಂಪೆನಿಗಳು ಈ ನಳಿಕೆ ತಯಾರಿಕೆಯ ಪೇಟೆಂಟ್‌ ಹೊಂದಿವೆ. ನಮ್ಮಲ್ಲಿಯೂ ಈ ತಂತ್ರಜ್ಞಾನದ ಮಾರ್ಪಾಡು ಮಾಡಿಕೊಂಡು ವೀರ್ಯ ನಳಿಕೆಗಳ ಉತ್ಪಾದನೆಗೆ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವ: ಈ ಮಾದರಿಯ ವೀರ್ಯ ನಳಿಕೆಯ ಯಂತ್ರವೊಂದಕ್ಕೆ ₹30–40 ಕೋಟಿಯಷ್ಟು ವೆಚ್ಚ ತಗುಲಲಿದೆ. ಎರಡು ಮೂರು ಯಂತ್ರಗಳನ್ನು ಖರೀದಿ ಮಾಡಿದಲ್ಲಿ ನಳಿಕೆಗಳ ವೆಚ್ಚ ಕಡಿಮೆ ಆಗಲಿದೆ. ಈ ಕುರಿತು ಶೀಘ್ರದಲ್ಲಿಯೇ ಕೆಎಂಎಫ್‌ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಇದೇ ಮಾದರಿಯನ್ನು ಬಳಸಿಕೊಂಡು ದೇಶಿ ತಳಿಯ ಹಸುಗಳು, ಎಮ್ಮೆಗಳಲ್ಲಿಯೂ ಗರ್ಭಧಾರಣೆ ಮಾಡಬಹುದಾಗಿದೆ ಎಂದು ಹೇಳಿದರು

‘ಸದ್ಯ ತಾಲ್ಲೂಕಿನಲ್ಲಿ ರಾಸುಗಳ ಕೃತಕ ಗರ್ಭಧಾರಣೆಗೆ ತಗುಲುವ ವೆಚ್ಚವನ್ನು ಸ್ವಂತ ಹಣದಿಂದ ಭರಿಸುತ್ತಿದ್ದೇನೆ. ಒಟ್ಟು 5 ಸಾವಿರ ಹಸುಗಳಿಗೆ ಈ ಗರ್ಭಧಾರಣೆಯ ಗುರಿಯನ್ನು ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.
***
ಕಾರ್ಯಕ್ರಮ ಇಂದು

ಎನ್‌ಡಿಆರ್‌ಐ ಮತ್ತು ರಾಮನಗರ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ‘ರಾಸುಗಳಲ್ಲಿ ಸಮೂಹ ಬೆದೆ ಹಾಗೂ ಲಿಂಗ ನಿರ್ಧಾರಿತ ವೀರ್ಯ ಬಳಸಿ ಕೃತಕ ಗರ್ಭಧಾರಣೆ’ ಕಾರ್ಯಕ್ರಮ ಇದೇ 4ರಂದು ಬೆಳಿಗ್ಗೆ 11ಕ್ಕೆ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಪಶು ಸಂಗೋಪನಾ ಇಲಾಖೆ ಆಯುಕ್ತ ಡಾ. ಸುರೇಶ್‌ ಹೊನ್ನಪ್ಪಗೋಳ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆಎಂಎಫ್‌ ಅಧ್ಯಕ್ಷ ಪಿ. ನಾಗರಾಜ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿ ಹೆಚ್ಚು ಹಾಲು ಶೇಖರಣಾ ಸಂಘಗಳು ಹಾಗೂ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತರಿಗೆ ಸನ್ಮಾನವೂ ನಡೆಯಲಿದೆ.

ಮೂರು ನಿರ್ಣಯ

ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಮೂರು ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಸತ್ತರೆ ನೀಡಲಾಗುವ ವಿಮೆ ಹಣದ ಕಂತನ್ನು ₹2 ಲಕ್ಷಕ್ಕೆ ಏರಿಸುವುದು. ಈ ವಿಮೆಯನ್ನು ರಾಜ್ಯದ ಎಲ್ಲ ರೈತರಿಗೂ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು. ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳಿಗೆ ಸಂಪೂರ್ಣ ಸಬ್ಸಿಡಿ ನೀಡುವಂತೆ ಕೋರಲು ತೀರ್ಮಾನಿಸಲಾಗಿದೆ.
**
ಕರ್ನಾಟಕದಲ್ಲಿಯೇ ಇದೊಂದು ವಿಶಿಷ್ಟ ಬಗೆಯ ಕಾರ್ಯಕ್ರಮವಾಗಲಿದೆ. ಒಟ್ಟು 5 ಸಾವಿರ ರಾಸುಗಳಿಗೆ ಈ ಕೃತಕ ಗರ್ಭಧಾರಣೆ ಮಾಡಿಸುವ ಗುರಿ ಇದೆ.
– ಪಿ. ನಾಗರಾಜು, ಅಧ್ಯಕ್ಷ, ಕೆಎಂಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT