ಬಹುಮುಖ ಕಲಾವಿದ ರಂಗನಾಥ್

ಶನಿವಾರ, ಮಾರ್ಚ್ 23, 2019
34 °C

ಬಹುಮುಖ ಕಲಾವಿದ ರಂಗನಾಥ್

Published:
Updated:
ಬಹುಮುಖ ಕಲಾವಿದ ರಂಗನಾಥ್

ಮಧುಗಿರಿ: 1979ರ ಸಮಯ. ನಟ ಧೀರೇಂದ್ರ ಗೋಪಾಲ್, ಸಿನಿಮಾಗಳ ಜತೆ ಜತೆಯಲ್ಲಿಯೇ ಹಳ್ಳಿಗಳಲ್ಲಿಯೂ ನಾಟಕ ಪ್ರದರ್ಶಿಸುತ್ತಿದ್ದರು. ನಮ್ಮ ಊರು ಮಧುಗಿರಿ ತಾಲ್ಲೂಕಿನ ಮಿಡಿಗೇಶಿಗೂ ಬಂದರು. ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ‘ಎಚ್ಚೆಮ್ಮ ನಾಯಕ’ ನಾಟಕದಲ್ಲಿ ನನಗೆ ಸಣ್ಣ ಪಾತ್ರ ಕೊಟ್ಟರು. ಅಲ್ಲಿಂದ ನನಗೆ ನಾಟಕಗಳ ಬಗ್ಗೆ ಆಸಕ್ತಿ ಬೆಳೆಯಿತು.

ಹೀಗೆ ತಮ್ಮ ನಟನೆಯ ಆರಂಭ ನೆನಪಿಸಿಕೊಳ್ಳುವರು ರಂಗನಾಥ್. ಅಂದಹಾಗೆ ರಂಗಭೂಮಿಯಲ್ಲಿ ರಂಗನಾಥ್ ಬಟವಾಡಿ ಎಂದೇ ಪರಿಚಿತರಾಗಿರುವ ಇವರು ಬಹುಮುಖಿ ಕಲಾವಿದ. ಸಿನಿಮಾ, ಕಿರುತೆರೆ, ಟೆಲಿಫಿಲ್ಮ್ ನಿರ್ಮಾಣ, ರಂಗಭೂಮಿ, ಗಾಯನ ಹೀಗೆ ಹಲವು ಆಯಾಮಗಳಲ್ಲಿ ಕಲಾಕ್ಷೇತ್ರದಲ್ಲಿ ಗುರುತಾದವರು.

ಎಸ್ಸೆಸ್ಸೆಲ್ಸಿಯಲ್ಲಿ ಓದುವಾಗಲೇ ಬೇಲೂರು ಕೃಷ್ಣಮೂರ್ತಿ ಅವರ ‘ಕಲೆಯೇ ಕೊಲೆ’ ನಾಟಕ ನಿರ್ದೇಶಿಸಿ, ಅಭಿನಯಿಸಿದ್ದರು. ಧೀರೇಂದ್ರ ಗೋಪಾಲ್ ಅವರ ಪ್ರೋತ್ಸಾಹವೇ ರಂಗನಾಥ್ ಬಣ್ಣ ಹಚ್ಚಲು ಮೂಲಪ್ರೇರಣೆ. ಶಾಲಾ ದಿನಗಳಲ್ಲಿ ಆರಂಭವಾದ ನಟನೆಯ ಗೀಳು ಕಾಲೇಜು ದಿನಗಳಲ್ಲಿ ಹೆಚ್ಚಿತು. ‘ಕುರುಕ್ಷೇತ್ರ’ ನಾಟಕದ ಭೀಷ್ಮ ಮತ್ತು ಅರ್ಜುನನ ಪಾತ್ರ ಅವರಿಗೆ ಒಳ್ಳೆಯ ಗೌರವ ತಂದುಕೊಟ್ಟಿತು. ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ತೊಡಗಿದ್ದ ರಂಗನಾಥ್ 1981ರಲ್ಲಿ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು.

ಕಲ್ಯಾಣ್ ಕುಮಾರ್ ಮತ್ತು ರೂಪಾದೇವಿ ಅಭಿನಯದ ‘ಪ್ರೇಮದ ಪುತ್ರಿ’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಅಲ್ಲಿಂದ ಸಿನಿಮಾ ಪಯಣ ಆರಂಭ. ‘ಚಲಿಸದ ಸಾಗರ’, ‘ಗಿರಿಬಾಲೆ’, ‘ವೀರಪ್ಪನ್’ (ದೇವರಾಜ್ ಅಭಿನಯ), ‘ಲಾಠಿಚಾರ್ಚ್’, ‘ಕೋಗಿಲೆ ಓ ಕೋಗಿಲೆ’, ‘ಹುಂಜ’ ಹೀಗೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದ ಪೋಷಾಕುತೊಟ್ಟಿದ್ದಾರೆ . ‘ಮತ್ತೆ ಬಂದ ವೀರಪ್ಪನ್’ ಸದ್ಯ ತೆರೆ ಕಾಣಬೇಕಾಗಿರುವ ಚಿತ್ರ.

‘ಲಾಠಿಚಾರ್ಚ್’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದ್ದೇನೆ. ಆ ಚಿತ್ರದಿಂದ ಹೆಚ್ಚಿನ ಗುರುತು ಸಿಕ್ಕಿತು’ ಎಂದು ಖುಷಿಯಲ್ಲಿ ನುಡಿಯುವರು ರಂಗನಾಥ್. ‘ಜೋಕಾಲಿ’, ‘ಲಕ್ಷ್ಮಿ ಝಾನ್ಸಿಯ ಮಗಳು’, ‘ಬೃಂದಾವನ’ ಅವರು ನಟಿಸಿರುವ ಪ್ರಮುಖ ಧಾರಾವಾಹಿಗಳು. ನಟನೆಯ ಜತೆಯಲ್ಲಿ ಗಾಯಕರಾಗಿಯೂ ಕಲಾಸೇವೆ ಮುಂದುವರಿಸಿದ್ದಾರೆ. ಗಾಯಕಿ ಬಿ.ಆರ್.ಛಾಯಾ ಅವರ ಜತೆ ‘ಲಕ್ಷ್ಮಿಪುರ ವಾಸಿನಿ’ ಕ್ಯಾಸೆಟ್‌ನಲ್ಲಿ ಗಾಯಕರಾಗಿದ್ದಾರೆ.

‘ತೂಗುಯ್ಯಾಲೆ’, ‘ಗಿರಿವನದ ಕುಸುಮಾ’ ಸೇರಿದಂತೆ ಹಲವು ಟೆಲಿಫಿಲ್ಮ್‌ಗಳಿಗೆ ಸಾಹಿತ್ಯ ಬರೆದಿದ್ದಾರೆ. ಹೀಗೆ ನಟನೆ, ಸಾಹಿತ್ಯ ರಚನೆ, ಗಾಯನದ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಾಗಿದ್ದಾರೆ ರಂಗನಾಥ್. ಕನ್ನಡದ ಪ್ರಸಿದ್ಧ ಪೋಷಕ ನಟರ ಜತೆ ತೆರೆ ಹಂಚಿಕೊಂಡ ಖುಷಿ ಅವರ ಮಾತುಗಳಲ್ಲಿ ತುಳುಕುತ್ತದೆ.

ಇಂತಿಪ್ಪ ಬಹುಮುಖ ಕಲಾವಿದ ವೃತ್ತಿಯಲ್ಲಿ ಮಧುಗಿರಿಯ ಸ್ಫೂರ್ತಿ ಮೋಟರ್ ಡ್ರೈವಿಂಗ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ‘ನಟನೆಯನ್ನು ಹವ್ಯಾಸವಾಗಿ ಪರಿಗಣಿಸಿರುವೆ. ಬಿಡುವಿನ ಅವಧಿಯಲ್ಲಿ ಮತ್ತು ಅವಕಾಶಗಳು ಸಿಕ್ಕಿದಾಗ ಅಭಿನಯಿಸುವೆ’ ಎನ್ನುವರು ರಂಗನಾಥ್. ಕಲಾಸೇವೆ ಗುರುತಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಕಲಾತಂಡಗಳು ರಂಗನಾಥ್ ಅವರನ್ನು ಸನ್ಮಾನಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry