ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೋಹನಗೊಳಿಸುವ ಶಿಲ್ಪಗಳ ಸಮಾಗಮ

300 ವರ್ಷಗಳಷ್ಟು ಪುರಾತನ ದೇಗುಲ: ಕಲೆಗಾರನ ಕೈಚಳಕಕ್ಕೆ ನೋಡುಗ ಮಂತ್ರಮುಗ್ದ
ಅಕ್ಷರ ಗಾತ್ರ

ಗುರುಮಠಕಲ್: ಇಲ್ಲಿಗೆ ಸಮೀಪದ ಗಾಜರಕೋಟ ಗ್ರಾಮದ ಹೊರವಲಯದಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ಮಲ್ಲಿಕಾರ್ಜುನ ದೇವಸ್ಥಾನದ ಶಿಲೆಗಳಲ್ಲಿ ಶಿಲ್ಪಿಯ ಕೈ ಚಳಕದಿಂದಾಗಿ ಶಿಲೆಯಲ್ಲಿ ಜೀವಂತಿಕೆ ಭಾಸವಾಗುತ್ತದೆ. ಯೋಗ ಭಂಗಿಗಳು, ಬಸವ, ಕುಸುರಿ ಕಲೆ ಅರಳಿದ್ದು, ನೋಡುಗರಲ್ಲಿ ಭಕ್ತಿ ಭಾವದ ಜೊತೆಗೆ ಕಲಾ ರಸಿಕತೆಯನ್ನು ಉಂಟು ಮಾಡುತ್ತದೆ.

ನಿರ್ಮಾಣದ ಹಿನ್ನಲೆ:
‘ಇಲ್ಲಿನ ರೈತಾಪಿ ವರ್ಗದವರು ತಮ್ಮ ಆರಾಧ್ಯ ದೈವವಾದ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕಾಗಿ ಸುಮಾರು ಮೂರು ತಿಂಗಳುಗಳ ಕಾಲ ಕಾಲುನಡಿಗೆಯ ಮೂಲಕ ಶ್ರೀಶೈಲದವರೆಗೆ ಪ್ರಯಾಣ ಮಾಡಿ ದರ್ಶನ ಮಾಡಿಬರುತ್ತಿದ್ದರು. ಇದು ಅತ್ಯಂತ ಪ್ರಯಾಸಕರ ಹಾಗೂ ಹೆಚ್ಚಿನ ಸಮಯವನ್ನು ಪಡೆಯುವುದರಿಂದ ಕಷ್ಟವೆಂದರಿತು ಶಿವಶರಣ ಚನ್ನಪ್ಪಯ್ಯ ತಾತ ಎನ್ನುವವರು ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ’ ಎನ್ನುವುದು ಸ್ಥಳೀಯರು ಹೇಳುವ ಮಾತು.

ದೇವಾಲಯವು ಸಂಪೂರ್ಣವಾಗಿ ಕಪ್ಪು ಶಿಲೆಯಿಂದ ನಿರ್ಮಾಣಗೊಂಡಿದೆ. ಪ್ರವೇಶಿಸುತ್ತಿದ್ದಂತೆ ಶಿಲೆಯಲ್ಲಿ ಅರಳಿ ಜೀವಂತಿಕೆಯ ಪ್ರತಿಮೆಗಳಂತಹ ಹಲವು ಕಲಾಕೃತಿಗಳು ಮನಸ್ಸನ್ನು ಆಕರ್ಷಿಸುತ್ತವೆ. ಇವು ಶಿಲ್ಪಕಾರನ ಅಗಾಧ ಪರಿಶ್ರಮವನ್ನು ಬಿಂಬಿಸುತ್ತವೆ. ದೇವಸ್ಥಾನದ ಸುತ್ತಲೂ ಹಲವು ಬಗೆಯ ಯೋಗಾಭ್ಯಾಸದ ಭಂಗಿಗಳನ್ನು, ದೇವತೆಗಳ ಮೂರ್ತಿಗಳನ್ನು ಹಲವಾರು ಪೌರಾಣಿಕ ಸನ್ನಿವೇಶಗಳನ್ನು ಕೆತ್ತಲಾಗಿದೆ.

ಕಪ್ಪು ಶಿಲೆಯಲ್ಲಿ ಕೆತ್ತಲಾಗಿರುವ ಈ ಕಲಾಕೃತಿಗಳು ಕಲ್ಲಿನಲ್ಲಿ ಅರಳಿದ ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಾಗಿವೆ.ಆದರೆ, ದೇವಸ್ಥಾನಕ್ಕೆ ಪ್ರತಿವರ್ಷ ಹಾಕಲಾಗುವ ಸುಣ್ಣ–ಬಣ್ಣಗಳಿಂದಾಗಿ ಕಲಾಕೃತಿಗಳ ಸೂಕ್ಷ್ಮ ಕೆತ್ತನೆಗಳು ಮುಚ್ಚಿಹೋಗಿವೆ. ಶಿಲೆಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ ಸುಣ್ಣವನ್ನು ತೆಗೆದರೆ ಕೆತ್ತನೆಯಲ್ಲಿ ಮತ್ತೆ ಸೌಂದರ್ಯದ ಜೀವಂತಿಕೆಯು ಹರಿಯುತ್ತದೆ.

‘ದೇವಾಲಯದ ಗರ್ಭ ಗುಡಿಯ ಎದುರಿನಲ್ಲಿರುವ ನಂದಿ ವಿಗ್ರಹವು ಅತ್ಯಾಕರ್ಷಕವಾಗಿದೆ. ನೈಜತೆಯನ್ನು ಪ್ರತಿಬಿಂಬಿಸುವಂತಿದೆ. ಕಲ್ಲಿನಿಂದ ಕೆತ್ತಲಾಗಿರುವ ಈ ಆಕೃತಿಗಳು ನಿಜಕ್ಕೂ ಶಿಲ್ಪಕಾರನ ಹೆಚ್ಚುಗಾರಿಕೆಯನ್ನು ಹಾಗೂ ಆತನ ತಾಳ್ಮೆಯನ್ನು ಪ್ರತಿಬಿಂಬಿಸುತ್ತವೆ’ ಎನ್ನುವುದು ಸ್ಥಳೀಯರಾದ ನಾಗಪ್ಪ, ಬಸಯ್ಯ ಸ್ವಾಮಿ, ಶಂಕ್ರಪ್ಪ ಅವರ ಅಭಿಪ್ರಾಯ.

ಪುಷ್ಕಳ ಸೆಲೆಯ ತೀರ್ಥ:
ದೇಗುಲದ ಎಡಬದಿಗೆ ದೇವಸ್ಥಾನದ ನಿರ್ಮಾಣದ ಸಮಯದಲ್ಲಿಯೇ ನಿರ್ಮಿಸಲಾಗಿರುವ, ಉತ್ತಮವಾದ ನೀರಿನ ಸೆಲೆಯಿರುವ ಬಾವಿ ಇದೆ. ಇಂದಿಗೂ ಬಾವಿಯ ಗೋಡೆಗಳು ಸುಸ್ಥಿತಿಯಲ್ಲಿವೆ.

ಆದರೆ ಸೂಕ್ತವಾದ ನಿರ್ವಹಣೆಯಿಲ್ಲ. ಐದಾರು ವರ್ಷಗಳ ಹಿಂದೆ ಶಿವದೀಕ್ಷೆ ಧರಿಸಿದ ಭಕ್ತರ ನೇತೃತ್ವದಲ್ಲಿ ಅಲ್ಪ-ಸ್ವಲ್ಪ ಶಿಥಿಲಗೊಂಡಿದ್ದ ದೇಗುಲ ಹಾಗೂ ಬಾವಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ.

ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜಾತ್ರೆ, ವಿಶೇಷ ಪೂಜೆ, ರಥೋತ್ಸವ ಜರುಗುವುದರಿಂದಾಗಿ ದೇವಾಲಯವು ಮತ್ತೆ ತನ್ನ ವೈಭವವನ್ನು ಪಡೆಯುವ ಜೊತೆಗೆ ದೇವಸ್ಥಾನದ ನಿರ್ಮಾಣ ಮಾಡಿದ ಉದ್ದೇಶದಂತೆ ರೈತರಿಗೆ ಇಲ್ಲಿಯೇ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯುವ ಭಾಗ್ಯ ದೊರೆತಂತಾಗಿದೆ.

‘ಪುರಾತನವಾದ ಹಾಗೂ ಶಿಲ್ಪಕಲೆಯ ಅತ್ಯದ್ಭುತ ಸಮಾಗಮವಾಗಿರುವ ಈ ದೇಗುಲದ ರಕ್ಷಣೆ ಮತ್ತು ಜಲ ಸಂಪನ್ಮೂಲದ ನಿರ್ವಹಣೆಯು ನಮ್ಮ ಜವಾಬ್ದಾರಿಯೆಂದು ಅರಿತು ಸಾರ್ವಜನಿಕರಾದಿಯಾಗಿ ಸ್ಥಳೀಯ ಆಡಳಿತ, ಸಂಘ, ಸಂಸ್ಥೆಗಳು ಗಮನ ಹರಿಸಬೇಕಿದೆ ಎನ್ನುವುದು ಗ್ರಾಮಸ್ಥರ ಮನವಿ.
**
ಗ್ರಾಮದ ಐತಿಹಾಸಿಕ ದೇಗುಲ ಹಾಗೂ ಪಕ್ಕದ ತೀರ್ಥವನ್ನು ಶಿವದೀಕ್ಷಾ ಮಂಡಳಿಯ ನೇತೃತ್ವದಲ್ಲಿ ಗ್ರಾಮಸ್ಥರೇ ಜೀರ್ಣೋದ್ಧಾರ ಮಾಡಿದ್ದಾರೆ.
ಶಂಭುಲಿಂಗಪ್ಪ ಅರುಣಿ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT