ಕಾಯುವ ಕಾಯಕ ಇನ್ನೆಷ್ಟು ಕಾಲ?

7

ಕಾಯುವ ಕಾಯಕ ಇನ್ನೆಷ್ಟು ಕಾಲ?

Published:
Updated:
ಕಾಯುವ ಕಾಯಕ ಇನ್ನೆಷ್ಟು ಕಾಲ?

‘ಆತ ಅತ್ಯುತ್ತಮ ಆಟಗಾರ. ಹೀಗಾಗಿ ಭಾರತ ತಂಡದಲ್ಲಿ ಸ್ಥಾನ ಗಳಿಸುವುದು ಖಚಿತ. ಆದರೆ ಸದ್ಯ ತಂಡಕ್ಕೆ ಆತನ ಅಗತ್ಯವಿಲ್ಲದ ಕಾರಣ ಆಯ್ಕೆಗೆ ಪರಿಗಣಿಸಿಲ್ಲ. ಸರದಿಯಲ್ಲಿ ಇರುವುದರಿಂದ ಯಾವುದೇ ಸಂದರ್ಭದಲ್ಲಿ ಕರೆ ಬರಬಹುದು; ಅಂತರರಾಷ್ಟ್ರೀಯ ಪಂದ್ಯ ಆಡುವ ಕನಸು ನನಸಾಗಬಹುದು..’

ಪತ್ರಿಕಾಗೋಷ್ಠಿಯಲ್ಲಿ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್‌ ‘ಆತ’ ಎಂದು ಹೇಳಿದ್ದು ಬೇರೆ ಯಾರಿಗೂ ಅಲ್ಲ; ದೇಶಿ ಕ್ರಿಕೆಟ್‌ನ ವಿವಿಧ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ ಕರ್ನಾಟಕದ ಮಯಂಕ್‌ ಅಗರವಾಲ್‌ ಅವರಿಗೆ.

ಅತ್ತ ಮಯಂಕ್‌ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟ್ವೆಂಟಿ–20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಎರಡು ದಿನಗಳ ನಂತರ ನಡೆದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ 90 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಆಯ್ಕೆ ಸಮಿತಿಗೆ ಪಂಚ್‌ ನೀಡಿದರು.

ಕರ್ನಾಟಕದ ಆಟಗಾರರನ್ನು ಇತ್ತೀಚೆಗೆ ರಾಷ್ಟ್ರೀಯ ತಂಡದ ಆಯ್ಕೆ ಸಂದರ್ಭದಲ್ಲಿ ಕಡೆಗಣಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರ ಹೇಳುವವರಿಗೆ ಪೂರಕವಾಗಿದೆ ಮಯಂಕ್‌ ಕಥೆ. ಆಯ್ಕೆ ‘ವಿಧಾನ’ ಏನೇ ಇರಲಿ; ಉತ್ತಮ ಸಾಮರ್ಥ್ಯ ತೋರಿದವರನ್ನು ಪರಿಗಣಿಸಬೇಕು ಎಂಬುದು ಕ್ರಿಕೆಟ್‌ ಪ್ರಿಯರ ವಾದ. ಈ ಆಶಯಕ್ಕೆ ಪೂರಕವಾಗಿಲ್ಲ ಈಗಿನ ಪರಿಸ್ಥಿತಿ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಲ್‌ರೌಂಡರ್‌ ಜಲಜ್ ಸಕ್ಸೇನಾ ತಮ್ಮನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸದೇ ಇದ್ದಾಗ ಬೇಸರದಿಂದ ಕೇಳಿದ ಪ್ರಶ್ನೆ ‘ಆಯ್ಕೆ ಮಂಡಳಿ ಗಮನ ಸೆಳೆಯಲು ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ’ ಎಂಬುದಾಗಿತ್ತು. ಮಯಂಕ್‌ ಪರವಾಗಿ ಕ್ರಿಕೆಟ್‌ ಪ್ರಿಯರೆಲ್ಲರೂ ಈಗ ಕೇಳುತ್ತಿರುವ ಪ್ರಶ್ನೆಯೂ ಇದೇ ಆಗಿದೆ.

ದೇಶಿ ಕ್ರಿಕೆಟ್‌ ಸುಮ್ಮನೆ?

ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸುವುದಕ್ಕೂ ದೇಶಿ ಕ್ರಿಕೆಟ್‌ನಲ್ಲಿ ತೋರಿದ ಸಾಮರ್ಥ್ಯಕ್ಕೂ ಭಾರಿ ನಂಟು ಇದೆ. ಆದರೆ ಇತ್ತೀಚೆಗೆ ಐಪಿಎಲ್‌ನ ಸಾಧನೆಯೇ ಮಾನದಂಡ ಆಗುತ್ತಿದೆಯೇ ಎಂಬ ಸಂದೇಹವೂ ಕಾಡಲು ಆರಂಭವಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಆಯ್ಕೆಯ ಪ್ರಮುಖ ಮಾನದಂಡ ಆಗುತ್ತಿದ್ದರೆ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರರ ಪಾರುಪತ್ಯ ಈಗಲೂ ಮುಂದುವರಿಯುತ್ತಿತ್ತು. ಆದರೆ ಈಗ ರಾಜ್ಯದ ಯಾವ ಆಟಗಾರರು ಕೂಡ ಕಾಯಂ ಆಗಿ ತಂಡದಲ್ಲಿ ಉಳಿಯುತ್ತಿಲ್ಲ. ಹೀಗಿರುವಾಗ ಹೊಸಬರಿಗೆ ಅವಕಾಶ ಸಿಗುವುದಾದರೂ ಹೇಗೆ?

ಇತ್ತೀಚಿನ ವರ್ಷಗಳಲ್ಲಿ ಆರ್‌.ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಶ್ರೀನಾಥ್ ಅರವಿಂದ್ ಮತ್ತು ಕರುಣ್‌ ನಾಯರ್ ಅವರನ್ನು ‘ಬಳಸಿ ಬಿಸಾಕಿದ’ ಆಯ್ಕೆ ಸಮಿತಿ ಕೆ.ಎಲ್‌.ರಾಹುಲ್‌ ಅವರನ್ನು ಆಗೊಮ್ಮೆ ಈಗೊಮ್ಮೆ ಪರಿಗಣಿಸುತ್ತದೆ. ಅವರನ್ನು ಆಡಿಸಿದ್ದಕ್ಕಿಂತ ಬೆಂಚು ಕಾಯಿಸಿದ್ದೇ ಹೆಚ್ಚು. ಮನೀಷ್ ಪಾಂಡೆಗೆ ಮಾತ್ರ ಆಗಾಗ ಉತ್ತಮ ಅವಕಾಶಗಳು ಸಿಗುತ್ತಿವೆ.

ಬ್ಯಾಟಿಂಗ್ ಕ್ರಮಾಂಕದ ಸಮಸ್ಯೆ?

ಪರಿಸ್ಥಿತಿಗೆ ತಕ್ಕಂತೆ ಕೆಲವು ಆಟಗಾರರನ್ನು ಪರಿಗಣಿಸಲಾಗುತ್ತದೆ ಎಂಬ ವಾದವೂ ಆಯ್ಕೆ ಸಮಿತಿಯಲ್ಲಿದೆ. ಆದರೆ ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಆರಿಸುವಾಗ ಈ ವಿಷಯದಲ್ಲೂ ಎಡವಟ್ಟು ಆಗಿದೆ. ಅಗ್ರಕ್ರಮಾಂಕದ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದ ಮಹೇಂದ್ರ ಸಿಂಗ್ ದೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿದ ಸಮಿತಿ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಟೂರ್ನಿಯಲ್ಲಿ ಮೂರು ಅರ್ಧ ಶತಕ ಒಳಗೊಂಡ 258 ರನ್‌ ಗಳಿಸಿದ ಮಯಂಕ್‌ ಹೆಸರನ್ನು ನೆನಪಿಸಿಕೊಂಡಿಲ್ಲ. ಈ ಟೂರ್ನಿಯಲ್ಲಿ 152 ರನ್‌ ಗಳಿಸಿದ ತಮಿಳುನಾಡಿನ ವಿಜಯ್‌ ಶಂಕರ್‌ ಸುಲಭವಾಗಿ ಕಣ್ಣಿಗೆ ಬಿದ್ದಿದ್ದಾರೆ.

ರಾಜ್ಯದ ಬೌಲರ್‌ಗಳಿಗೆ ಯಾಕೆ ಸ್ಥಾನ ಸಿಗುತ್ತಿಲ್ಲ ಎಂಬ ಪ್ರಶ್ನೆಯೂ ಉತ್ತರವಿಲ್ಲದೆ ಉಳಿಯುತ್ತದೆ. ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹತ್ತು ತಿಂಗಳ ಒಳಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ ಅಪರೂಪದ ಆಟಗಾರ ಅಭಿಮನ್ಯು ಮಿಥುನ್‌. 2010ರಲ್ಲಿ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ ಸಮಿತಿ ಬೆರಳೆಣಿಕೆಯ ಪಂದ್ಯಗಳಲ್ಲಿ ಆಡಿಸಿ ವಾಪಸ್ ಕಳುಹಿಸಿತು. 2011ರ ಜುಲೈನಲ್ಲಿ ಕೊನೆಯ ಟೆಸ್ಟ್ ಆಡಿದ ಅವರು ಡಿಸೆಂಬರ್‌ನಲ್ಲಿ ಕೊನೆಯ ಏಕದಿನ ಪಂದ್ಯ ಆಡಿದ್ದರು.

ಆರ್.ವಿನಯ್‌ ಕುಮಾರ್‌ 2012ರಲ್ಲಿ ಏಕೈಕ ಟೆಸ್ಟ್‌ ಆಡಿದ್ದಾರೆ. 31 ಏಕದಿನ ಪಂದ್ಯಗಳಲ್ಲಿ 38 ವಿಕೆಟ್ ಉರುಳಿಸಿರುವ ಅವರಿಗೆ 2013ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದ ನಂತರ ಅವಕಾಶವೇ ಸಿಗಲಿಲ್ಲ. 2013ರ ಅಕ್ಟೋಬರ್‌ ನಂತರ ಟ್ವೆಂಟಿ–20 ಕ್ರಿಕೆಟ್‌ನಿಂದಲೂ ಅವರನ್ನು ದೂರ ಇರಿಸಲಾಗಿದೆ. ಮುನ್ನೂರು ರನ್‌ಗಳ ಸರದಾರ ಕರುಣ್‌ ನಾಯರ್ ಟೆಸ್ಟ್‌ನಲ್ಲಿ ಮಿಂಚಿದ್ದು ನಾಲ್ಕೇ ತಿಂಗಳು. ಏಕದಿನದಲ್ಲಿ ಆಡಿದ್ದು ಒಂದು ಸರಣಿ ಮಾತ್ರ. ಚುಟುಕು ಕ್ರಿಕೆಟ್‌ನಲ್ಲಿ ಸ್ಫೋಟಿಸಬಲ್ಲ ಅವರಿಗೆ ಈ ಮಾದರಿಯಲ್ಲಿ ಅವಕಾಶವೇ ಸಿಗಲಿಲ್ಲ.

ಕರ್ನಾಟಕದ ಆಟಗಾರರ ಪೈಕಿ ಆಗಾಗ ಅವಕಾಶಗಳು ಲಭಿಸುತ್ತಿರುವುದು ಮನೀಷ್ ಪಾಂಡೆಗೆ ಮಾತ್ರ. ಅವರ ಏಕದಿನ ಪಂದ್ಯಗಳ ಸರಾಸರಿ 39.27. ಟ್ವೆಂಟಿ–20ಯಲ್ಲಿ 36. ಆದರೂ ಅವಕಾಶಗಳು ನಿರಂತರವಾಗಿ ಲಭಿಸುತ್ತಿವೆ. ಅವರಿಗೆ ಹೋಲಿಸಿದರೆ ರಾಹುಲ್‌ಗೆ ಲಭಿಸಿದ ಅವಕಾಶಗಳು ಕಡಿಮೆ. ಮೂರೂ ಮಾದರಿಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಬಲ್ಲ ಅವರು ನಾಲ್ಕು ವರ್ಷಗಳ ಅವಧಿಯಲ್ಲಿ ಎಲ್ಲ ಮಾದರಿಗಳಲ್ಲಿ ಆಡಿದ್ದು 45 ಪಂದ್ಯಗಳನ್ನು ಮಾತ್ರ. ಪಾಂಡೆ ಎರಡು ವರ್ಷಗಳಲ್ಲಿ ಎರಡೇ ಮಾದರಿಗಳಲ್ಲಿ 40 ಪಂದ್ಯ ಆಡಿದ್ದಾರೆ. ಕರ್ನಾಟಕದ ಪಾಲಿಗೆ ಇತ್ತೀಚೆಗೆ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಆಟಗಾರ ರಾಬಿನ್‌ ಉತ್ತಪ್ಪ. ವಿಜಯ್ ಭಾರದ್ವಾಜ್‌ ನಿವೃತ್ತಿ ನಂತರ ನಾಲ್ಕು ವರ್ಷಗಳ ಕಾಯುವಿಕೆಯ ಕೊನೆಯಲ್ಲಿ ರಾಜ್ಯದಿಂದ ಆಯ್ಕೆಯಾದ ಉತ್ತಪ್ಪ ಸ್ಫೋಟಕ ಬ್ಯಾಟಿಂಗ್ ಮೂಲಕ ಉತ್ತಮ ಹೆಸರು ಮಾಡಿದ್ದರು. ಆದರೆ 2015ರ ಜಿಂಬಾಬ್ವೆ ಪ್ರವಾಸದ ನಂತರ ಆಯ್ಕೆ ಸಮಿತಿಯ ಪಟ್ಟಿಯಲ್ಲಿ ಅವರು ಕಾಣಿಸಿಕೊಳ್ಳಲೇ ಇಲ್ಲ.

ಮೂಡಿದ ಭರವಸೆ

ನಿರಾಸೆಗಳ ನಡುವೆ ಇರಾನಿ ಟ್ರೋಫಿ ಟೂರ್ನಿಗೆ ಆಯ್ಕೆ ಮಾಡಿರುವ ತಂಡ ಕರ್ನಾಟಕದ ಆಟಗಾರರಲ್ಲಿ ಭರವಸೆ ಮೂಡಿಸಿದೆ. ತಂಡದ ನಾಯಕತ್ವವನ್ನು ಕರುಣ್‌ ನಾಯರ್‌ಗೆ ವಹಿಸಿರುವ ಆಯ್ಕೆ ಸಮಿತಿ ಈ ಆಟಗಾರನ ಮೇಲೆ ವಿಶ್ವಾಸವಿರಿಸಿರುವುದಾಗಿ ಪರೋಕ್ಷವಾಗಿ ಸೂಚಿಸಿದೆ. ಮಯಂಕ್ ಅವರನ್ನು ಮತ್ತೊಂದು ಅಗ್ನಿ ಪರೀಕ್ಷೆಗೆ ಒಳಪಡಿಸಿರುವ ಸಮಿತಿ ಆರ್‌.ಸಮರ್ಥ್ ಅವರನ್ನೂ ತಂಡಕ್ಕೆ ಕರೆಸಿಕೊಂಡು ಶುಭ ಸೂಚನೆ ನೀಡಿದೆ.

1996ರಲ್ಲಿ ಕರ್ನಾಟಕದ ಆರು ಮಂದಿಯನ್ನು ಹೊಂದಿದ್ದ ಭಾರತ ತಂಡ ಇವರ ಪೈಕಿ ಟೈಟನ್ ಕಪ್‌ ಫೈನಲ್‌ನಲ್ಲಿ ಐದು ಮಂದಿಯನ್ನು ಕಣಕ್ಕೆ ಇಳಿಸಿತ್ತು. ಅಂಥ ಸುವರ್ಣ ಕಾಲ ಮರುಕಳಿಸುವ ನಿರೀಕ್ಷೆಯಲ್ಲಿದೆ ರಾಜ್ಯ ಕ್ರಿಕೆಟ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry