ಕಬಡ್ಡಿ ಕಣದಲ್ಲಿ ಚುನಾವಣೆ ಪಣ

7

ಕಬಡ್ಡಿ ಕಣದಲ್ಲಿ ಚುನಾವಣೆ ಪಣ

Published:
Updated:
ಕಬಡ್ಡಿ ಕಣದಲ್ಲಿ ಚುನಾವಣೆ ಪಣ

ನಾಲ್ಕೈದು ವರ್ಷಗಳ ಹಿಂದೆ ಒಂದು ಪಂದ್ಯ ಆಡಲು ಸಿಕ್ಕರೆ ಅದರಷ್ಟು ಖುಷಿ ಇನ್ನೊಂದಿರುತ್ತಿರಲಿಲ್ಲ. ಆದರೆ ಈಗ ಕಬಡ್ಡಿ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಬೇಸರವಾಗಿದೆ. ಪದೇ ಪದೇ ಟೂರ್ನಿಗಳಲ್ಲಿ ಆಡುತ್ತಿರುವುದರಿಂದ ಫಿಟ್‌ನೆಸ್‌ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ..’

ಕರ್ನಾಟಕದ ಹೆಸರಾಂತ ಕಬಡ್ಡಿ ಆಟಗಾರರೊಬ್ಬರ ಜೊತೆ ಇತ್ತೀಚೆಗೆ ಮಾತನಾಡುತ್ತಿದ್ದಾಗ ಅವರು ಅತ್ಯಂತ ಬೇಸರದಿಂದ ಈ ಮಾತುಗಳನ್ನು ಹೇಳಿದರು. ಹಾಗೆ ಮಾತು ಮುಂದುವರಿದು ‘ಕರ್ನಾಟಕದಲ್ಲಿ ಪ್ರತಿ ವಿಷಯವೂ ರಾಜಕಾರಣಕ್ಕೆ ವಸ್ತು ಆಗುವುದು ಏಕೆ, ಆಟಗಾರರಿಗೆ ಹಾಗೂ ದೇಶಿ ಕ್ರೀಡೆಗೆ ರಾಜಕಾರಣಿಗಳು ಕೊಡುವ ಗೌರವ ಇದೇನಾ’ ಎಂದೂ ಪ್ರಶ್ನಿಸಿದ್ದರು.

ಪ್ರೊ ಕಬಡ್ಡಿ ಲೀಗ್ ಆರಂಭವಾಗುವ ಮೊದಲು ಗ್ರಾಮೀಣ ಕ್ರೀಡೆ ಈಗಿನಷ್ಟು ರಾಜಕೀಯ ಪ್ರಚಾರದ ದಾಳವಾಗಿರಲಿಲ್ಲ. ಈಗ ಎಲ್ಲಿ ನೋಡಿದರಲ್ಲಿ ಕಬಡ್ಡಿಯದ್ದೇ ಸದ್ದು. ಕರ್ನಾಟಕದಲ್ಲಿ ಈಗ ವಿಧಾನಸಭಾ ಚುನಾವಣೆಯ ತಯಾರಿ ನಡೆಯುತ್ತಿದೆ. ಒಂದೆರಡು ವಾರಗಳಲ್ಲಿ ಚುನಾವಣಾ ವೇಳಾಪಟ್ಟಿ ಕೂಡ ಪ್ರಕಟವಾಗುತ್ತದೆ. ಅಷ್ಟರಲ್ಲಿ ಪಕ್ಷದ ಮತ್ತು ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ರಾಜಕಾರಣಿಗಳು ಕಬಡ್ಡಿ ಹಾಗೂ ಫುಟ್‌ಬಾಲ್‌ ಟೂರ್ನಿಗಳ ಮೊರೆ ಹೋಗುತ್ತಿದ್ದಾರೆ. ಈ ಮೂಲಕ ಆಯಾ ಜಿಲ್ಲೆಯ ಯುವಕರನ್ನು ಮತ್ತು ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ.

ಇತ್ತೀಚೆಗೆ ವಿಜಯಪುರದಲ್ಲಿ ಕೆ. ಎಚ್‌.ಪಾಟೀಲ ಅವರ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಆಹ್ವಾನಿತ ಫುಟ್‌ಬಾಲ್‌ ಟೂರ್ನಿ ನಡೆದಿತ್ತು. ಟೂರ್ನಿಯಲ್ಲಿ  ನೈಜೀರಿಯಾ, ಆಫ್ರಿಕಾದ ಆಟಗಾರರು ಪಾಲ್ಗೊಂಡಿದ್ದರು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ, ಕಾರವಾರದಲ್ಲಿ, ಜಮಖಂಡಿ, ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ನಿರಂತರವಾಗಿ ಕಬಡ್ಡಿ ಟೂರ್ನಿಗಳು ನಡೆಯುತ್ತವೆ. ಆಯಾ ಜಿಲ್ಲೆಗಳಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿ ಫ್ರಾಂಚೈಸ್‌ಗಳ ಆಧಾರದ ಮೇಲೆ ಟೂರ್ನಿಗಳೇ ಹೆಚ್ಚಾಗಿ ಜರುಗುತ್ತಿವೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ನಾಯಕರ ಮತ್ತು ಮುಖಂಡರ ಹೆಸರಿನಲ್ಲಿ ಟ್ರೋಫಿ ನೀಡುತ್ತಿವೆ. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿವೆ. ಕರ್ನಾಟಕದಲ್ಲಿ ಕಬಡ್ಡಿ ಮೊದಲಿನಿಂದಲೂ ಖ್ಯಾತಿ ಹೊಂದಿರುವ ಕ್ರೀಡೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳ ಜನರಲ್ಲಿ ಈ ಕ್ರೀಡೆ ಬದುಕಿನ ಭಾಗವೇ ಆಗಿದೆ. ದೇವಸ್ಥಾನ ಅಥವಾ ಊರಿನ ಮುಂದಿನ ಜಾಗದಲ್ಲಿ ಪಂದ್ಯಗಳನ್ನು ನಡೆಸಿ ಮನರಂಜನೆ ಪಡೆಯುತ್ತಿದ್ದ ಜನ ಈಗ ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ. ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಿಂಚಿರುವ ತಾರೆಯರ ಆಟವನ್ನು ತಮ್ಮೂರಿನಲ್ಲಿಯೇ ನೋಡುವ ಅವಕಾಶವೂ ಅವರಿಗೆ ಲಭಿಸಿದೆ.

ಮಂಡ್ಯ, ಮೈಸೂರು ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಪ್‌, ಬಾಲಗಂಗಾಧರನಾಥ ಸ್ವಾಮೀಜಿ ಕಪ್‌, ಕನ್ನಂಬಾಡಿ ಕಪ್ ಟೂರ್ನಿಗಳು ನಡೆದರೆ, ಉತ್ತರ ಕರ್ನಾಟಕದಲ್ಲಿ ಸತೀಶ್‌ ಸೈಲ್‌ ಕೃಷ್ಣಗಿರಿ ಟ್ರೋಫಿ, ಎಚ್‌.ಕೆ. ಪಾಟೀಲ ಸ್ಮರಣಾರ್ಥ ಫುಟ್‌ಬಾಲ್‌ ಟೂರ್ನಿ, ಗದಗ, ಹಾವೇರಿ ಜಿಲ್ಲಾ ಕಬಡ್ಡಿ ಲೀಗ್‌ ಹೀಗೆ ಅನೇಕ ಟೂರ್ನಿಗಳು ನಡೆಯುತ್ತಿವೆ.

ಪ್ರೊ ಆಟಗಾರರೇ ಬೇಕು

ನಾಲ್ಕೈದು ವರ್ಷಗಳಲ್ಲಿ ಯಶಸ್ಸಿನ ಉತ್ತುಂಗಕ್ಕೇರಿರುವ ಪ್ರೊ ಕಬಡ್ಡಿಯಲ್ಲಿ ಆಡಿದ ಆಟಗಾರರೇ ಎಲ್ಲ ಟೂರ್ನಿಗಳಲ್ಲಿ ಭಾಗವಹಿಸಬೇಕು. ಈ ಮೂಲಕ ತಮಗೆ ತಾರಾ ಪ್ರಚಾರ ತಂದುಕೊಡಬೇಕು ಎಂಬುದು ಟೂರ್ನಿ ಸಂಘಟಕರ ಒತ್ತಾಯ.

ಸಿಐಎಲ್‌, ಒಎನ್‌ಜಿಸಿ. ಪೆಟ್ರೋಲಿಯಂ, ಬ್ಯಾಂಕುಗಳು ಹೀಗೆ ವಿವಿಧ ಕಡೆ ಉದ್ಯೋಗಿಗಳಾಗಿರುವವರು ಅನಿವಾರ್ಯವಾಗಿ ಟೂರ್ನಿಗಳಲ್ಲಿ ಆಡಬೇಕಾಗುತ್ತದೆ. ಇದರಿಂದ ಟೂರ್ನಿಗೆ ತಾರಾ ಮೆರುಗು ಬರುತ್ತದೆ ಎಂಬುದು ಸಂಘಟಕರ ಲೆಕ್ಕಾಚಾರ.

‘ಚುನಾವಣಾ ವೇಳಾಪಟ್ಟಿ ಘೋಷಣೆಯಾದ ದಿನದಿಂದಲೇ ನೀತಿ ಸಂಹಿತೆ ಕೂಡ ಜಾರಿಗೆ ಬರುತ್ತದೆ. ಆಗ ಕಬಡ್ಡಿ ಟೂರ್ನಿ ನಡೆಸಲು ಆಗುವುದಿಲ್ಲ. ಆದ್ದರಿಂದ ಈಗ ಶಾಸಕರು, ಸಚಿವರು ಮತ್ತು ನಮ್ಮ ಪಕ್ಷದ ಮುಖಂಡರ ಹೆಸರಿನಲ್ಲಿ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ದೇಶಿ ಕ್ರೀಡೆಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ನಿರಂತರವಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂದು ಈ ಹಿಂದೆಯೇ ಗುರಿ ಹಾಕಿಕೊಂಡಿದ್ದೆವು’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.

ಆಟಗಾರರ ಸಾಮರ್ಥ್ಯ ಕುಂಠಿತ

ನಿರಂತರವಾಗಿ ಟೂರ್ನಿಗಳಲ್ಲಿ ಆಡುವುದರಿಂದ ಆಟಗಾರರಿಗೆ ಫಿಟ್‌ನೆಸ್‌ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಆಟಗಾರರ ಸಾಮರ್ಥ್ಯ ಕೂಡ ಕಡಿಮೆಯಾಗುತ್ತಿದೆ ಎಂದು ಯು ಮುಂಬಾ ತಂಡದ ಕೋಚ್‌ ರವಿಶೆಟ್ಟಿ ಆತಂಕ ವ್ಯಕ್ತಪಡಿದ್ದಾರೆ.

ಪ್ರೊ ಕಬಡ್ಡಿ ಟೂರ್ನಿಯ ಸ್ಟಾರ್ ಆಟಗಾರ ಪ್ರದೀಪ ನರ್ವಾಲ್‌ ರೈಡಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಈಗ ವಿಶ್ರಾಂತಿ ಇಲ್ಲದಿರುವುದರಿಂದ ಮೊದಲಿನ ವೇಗದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ನಡೆದ ರಾಷ್ಟ್ರೀಯ ಸೀನಿಯರ್ ಕಬಡ್ಡಿ ಮತ್ತು ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ನರ್ವಾಲ್‌ ನೀಡಿದ ಕಳಪೆ ಪ್ರದರ್ಶನವೇ ಇದಕ್ಕೆ ಸಾಕ್ಷಿ.

ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕದ ಎದುರು ಉತ್ತರಾಖಂಡ ಹೆಚ್ಚು ಪಾಯಿಂಟ್ಸ್‌ ಅಂತರದಿಂದ ಸೋತಿತ್ತು. ಫೆಡರೇಷನ್‌ ಕಪ್‌ನಲ್ಲಿ 12–45ರಲ್ಲಿ ಕರ್ನಾಟಕ ಆ ತಂಡದ ವಿರುದ್ಧ ಪರಾಭವಗೊಂಡಿತ್ತು. ಆ ಪಂದ್ಯದಲ್ಲಿ ನರ್ವಾಲ್‌ ಗಳಿಸಿದ್ದು ಎರಡೇ ಪಾಯಿಂಟ್‌.

ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಕಬಡ್ಡಿ ‘ಆಟ’ ನಿಲ್ಲುತ್ತದೆ. ಮುಂದಿನ ಪ್ರೊ ಕಬಡ್ಡಿ ಟೂರ್ನಿಗೆ ತರಬೇತಿ ಶಿಬಿರ ಆರಂಭವಾಗುತ್ತದೆ. ಮುಂಬರುವ ಟೂರ್ನಿಗಾಗಿ ಈಗಾಗಲೇ ಎಲ್ಲ ಫ್ರಾಂಚೈಸ್‌ಗಳು ಪ್ರತಿಭಾಶೋಧ ಕಾರ್ಯ ಆರಂಭಿಸಿವೆ. ಇಲ್ಲಿ ದಣಿದ ಆಟಗಾರರು ಅಲ್ಲಿ ಹೇಗೆ ಪ್ರತಿಭೆ ತೋರುವರು ಎಂಬ ಕುತೂಹಲ ಕಬಡ್ಡಿ ಪ್ರಿಯರಲ್ಲಿದೆ.

***

‘ವರ್ಚಸ್ಸು ಬೆಳೆಸಿಕೊಳ್ಳಲು ಕಬಡ್ಡಿ ಬೇಡ’

ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಕಬಡ್ಡಿ ಟೂರ್ನಿಗಳನ್ನು ಸಂಘಟಿಸುವ ಮೂಲಕ ಪಕ್ಷದ ಮತ್ತು ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಈ ರೀತಿ ಮಾಡುವುದರಿಂದ ಆಟಗಾರರ ಫಿಟ್‌ನೆಸ್‌ಗೆ ಪೆಟ್ಟು ಬೀಳುತ್ತದೆ.

ಪ್ರೊ ಕಬಡ್ಡಿಯಲ್ಲಿ ಆಡುವ ಆಟಗಾರರಿಗೆ ಹರಾಜಿನಲ್ಲಿ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆ. ಗುಣಮಟ್ಟದ ವಸತಿ ಸೌಲಭ್ಯ, ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಮಯ ಎಲ್ಲವೂ ಲಭಿಸುತ್ತದೆ. ಆದರೆ ಚುನಾವಣೆಗೋಸ್ಕರ ನಡೆಯುವ ಟೂರ್ನಿಗಳಲ್ಲಿ ಒಂದು ಅಥವಾ ಎರಡು ಲಕ್ಷ ಬಹುಮಾನ ಮೊತ್ತ ನಿಗದಿ ಮಾಡಿರುತ್ತಾರೆ. ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರೆ ಪ್ರತಿ ಆಟಗಾರನಿಗೆ ಸಾವಿರಾರು ರೂಪಾಯಿ ಮಾತ್ರ ಹಣ ಸಿಗುತ್ತದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಬಡ್ಡಿಗೆ ನೀಡದ ಮಹತ್ವ ಈ ಬಾರಿಯ ಚುನಾವಣೆಗೆ ಏಕೆ ನೀಡಲಾಗುತ್ತಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿದೆ.

ರವಿ ಶೆಟ್ಟಿ, ಯು ಮುಂಬಾ ತಂಡದ ಸಹಾಯಕ ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry