‘ಪರೀಕ್ಷೆ ಬರೆಯೋದು ನಾನಾ... ನೀವಾ?!’

7

‘ಪರೀಕ್ಷೆ ಬರೆಯೋದು ನಾನಾ... ನೀವಾ?!’

Published:
Updated:
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

ಇದು ಮಗುವಿನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆ. ಗಂಭೀರವಾಗಿ ಓದದಿದ್ದರೆ ಮುಂದಿನ ವಿದ್ಯಾಭ್ಯಾಸ ಸುಲಭವಲ್ಲ. ಮಗುವಿಗಿನ್ನೂ ಅಷ್ಟೆಲ್ಲಾ ಗಂಭೀರವಾಗಿ ಆಲೋಚಿಸುವ ವಯಸ್ಸಲ್ಲ. ಅದರ ಪಾಡಿಗೆ ಅದು ಓದುತ್ತ, ಬರೆಯುತ್ತ, ಆಡುತ್ತ, ಕುಣಿಯುತ್ತ ಇದೆ.

‘ನಾಚಿಕೆಯಾಗಲ್ಲವಾ ನಿನಗೆ? ಇನ್ನೂ ಮೊಬೈಲು. ಟಿವಿ ಅಂತ ಸಮಯ ಹಾಳು ಮಾಡ್ತಿದ್ದೀಯಾ. ಓದಬೇಕೂಂತಿಲ್ಲವೇನೋ? ಪರೀಕ್ಷೆಯಲ್ಲಿ ಅಪರಾ ತಪರಾ ಮಾಡಿ ನಮ್ಮ ಮರ್ಯಾದೆ ತೆಗೆಯಬೇಕೂಂತಿದ್ದೀಯೇನೋ?’ ಎಂದು ಚಿಂತಿತಳಾದ ತಾಯಿಯ ಪ್ರಶ್ನೆ.

‘ನಾನು ಓದಬೇಕು. ಅದು ನನಗೆ ಗೊತ್ತಿದೆ ತಾನೆ? ಚೆನ್ನಾಗಿ ಮಾರ್ಕ್ಸ್‌ ತೆಗೆಯಬೇಕು ಎನ್ನುವುದು ನನಗೂ ಗೊತ್ತಿದೆ. ಮತ್ತೆ ನೀವೇಕೆ ಇಷ್ಟೆಲ್ಲ ಚಿಂತೆ ಮಾಡ್ತೀರಿ? ಮಾತು ಮಾತಿಗೂ ಬೈತೀರಿ? ನಾನು ಕಡಿಮೆ ಮಾರ್ಕ್ಸ್‌ ತೆಗೆದರೆ ನಿಮಗಿಂತ ಮೊದಲು ನನಗೇ ಅವಮಾನವಾಗತ್ತೆ!’ ಮಗ ಧ್ವನಿ ಏರಿಸಿಯೇ ಕೇಳಿದ. ಪಾಲಕರು ಅವಾಕ್ಕಾದರು.

ಶಿಕ್ಷಕರು ಮತ್ತು ಪಾಲಕರು ಸೇರಿಕೊಂಡು ಮಕ್ಕಳ ಮನಸ್ಸಿನಲ್ಲಿ ಪರೀಕ್ಷೆಯ ಬಗ್ಗೆ ಅನಗತ್ಯವಾಗಿ ಭಯವನ್ನು ಸೃಷ್ಟಿಸಿದ್ದೇವೆ. ಅದು ತಪ್ಪು. ಪರೀಕ್ಷೆಯ ಫಲಿತಾಂಶ ಉತ್ತಮವಾಗಿ ಬರದಿದ್ದರೆ ಆಗಬಾರದ ಅನಾಹುತವೇನೋ ಆಗಿಹೋಯಿತು ಎನ್ನುವ ಹಾಗೆ ವರ್ತಿಸುತ್ತೇವೆ. ಪಾಲಕರ ಇಂಥ ವರ್ತನೆಯಿಂದ ಮಕ್ಕಳು ಮತ್ತಷ್ಟು ಅಧೀರರಾಗುತ್ತಾರೆ. ಕೆಲವು ಮಕ್ಕಳು ಅನಾಹುತವನ್ನು ಮಾಡಿಕೊಳ್ಳುತ್ತಾರೆ.

ಶಾಲೆಯಲ್ಲಿ ಕಲಿಸುತ್ತಾರೆ. ಮಗು ಒಂದಿಷ್ಟು ಕಲಿಯುತ್ತದೆ. ನೆನಪಿದ್ದಷ್ಟರಲ್ಲಿ ಪರೀಕ್ಷೆಯಲ್ಲಿ ಬರೆಯುತ್ತದೆ. ಅದಕ್ಕೊಂದಿಷ್ಟು ಅಂಕಗಳು ಬರುತ್ತವೆ. ಅಷ್ಟರಿಂದಲೇ ಮಗುವಿನ ಜಾಣತನವನ್ನು ನಿರ್ಧರಿಸುತ್ತಾರೆ. ರ‍್ಯಾಂಕುಗಳನ್ನು ಹಂಚುತ್ತಾರೆ. ಎಲ್ಲವೂ ಅದರ ಪಾಡಿಗೆ ಅದು ನಡೆಯುತ್ತದೆ.

ಓದುವಂತೆ ಮಕ್ಕಳ ಮೇಲೆ ಬಹಳಷ್ಟು ಪಾಲಕರು ವಿಪರೀತ ಒತ್ತಡವನ್ನು ಹೇರುತ್ತಾರೆ. ಮಗು ತನ್ನ ಶಕ್ತಿಯನ್ನು ಮೀರಿ ಓದುತ್ತದೆ. ಕೆಲವು ಮಕ್ಕಳಿಗೆ ಓದಿದ್ದು ತಿಳಿಯುತ್ತದೆ. ಕೆಲವು ಮಕ್ಕಳಿಗೆ ತಿಳಿಯುವುದಿಲ್ಲ. ತಿಳಿದಿರುವದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಓದಿದ್ದು ತಿಳಿದರೂ ನೆನಪಿನಲ್ಲಿರುವುದಿಲ್ಲ. ನೆನಪಿನಲ್ಲಿಟ್ಟುಕೊಂಡವರು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರವನ್ನು ಬರೆಯುತ್ತಾರೆ. ಒಳ್ಳೆಯ ಅಂಕಗಳನ್ನು ಗಳಿಸುತ್ತಾರೆ. ‘ನೀನು ಹೀಗೇ ಅಧಿಕಪ್ರಸಂಗದ ಮಾತಾಡ್ತಾ ಇರು. ಮುಂದೆ ಪರೀಕ್ಷೆಯಲ್ಲಿ ಸರಿಯಾಗಿ ಮಾಡದಿದ್ದರೆ, ರಿಸಲ್ಟ್ ಬಂದನಂತರ ನಿನಗೆ ಮಾಡ್ತೀನಿ!’ ಎಂದು ಅಪ್ಪ ದಭಾಯಿಸಿದರು.

‘ನೀವು ರ‍್ಯಾಂಕ್‌ ಬರಲಿಲ್ಲ. ನಿಮ್ಹತ್ರ ಮಾಡಲಾಗಲಿಲ್ಲ. ಈಗ ನಾನು ರ‍್ಯಾಂಕ್‌ ಬರಬೇಕು, ಔಟ್ ಆಫ್‌ ಔಟ್ ತಗೋಬೇಕೂಂತ ಇಷ್ಟೆಲ್ಲ ಒತ್ತಡ ಹೇರುತ್ತೀರಿ! ಇದು ಸರೀನಾ? ಪರೀಕ್ಷೆ ಬರೆಯಬೇಕಾಗಿರೋದು ಯಾರು? ನಾನಾ? ನೀವಾ?!’

ಹತ್ತನೆಯ ತರಗತಿಯಲ್ಲಿರುವ ಮಗನ ಮತ್ತೊಂದು ಪ್ರಶ್ನೆ. ಮಗನ ಮಾತಿನಿಂದ ಪಾಲಕರಿಬ್ಬರೂ ಪರಸ್ಪರ ಮುಖ ಮುಖ ನೋಡಿಕೊಂಡರು.

‘ಸ್ಸಾರಿ, ಮಗು. ನಿನ್ನತ್ರ ಎಷ್ಟು ಸಾಧ್ಯವೋ ಅಷ್ಟನ್ನು ಓದು, ಸಮಾಧಾನದಿಂದಿರು. ನೀನು ಜಾಣ. ನಮ್ಹತ್ರ ಸಾಧ್ಯವಾಗದಿರುವುದನ್ನೂ ಸಾಧಿಸುವ ಶಕ್ತಿ ನಿನಗಿದೆ. ನೀನು ನಿಜಕ್ಕೂ ಚೆನ್ನಾಗಿಯೇ ಓದ್ತಾ ಇದ್ದೀಯಲ್ಲೋ! ಗುಡ್’ ಎಂದು ಪಾಲಕರು ಮಗನನ್ನು ಸಮಾಧಾನಿಸಿದರು.

ತಮ್ಮ ಕೈಲಿ ಸಾಧಿಸಲಿಕ್ಕೆ ಆಗದಿರುವುದನ್ನು ತಮ್ಮ ಮಕ್ಕಳು ಸಾಧಿಸಲಿ ಎಂದು ಪಾಲಕರು ಆಶಿಸುವುದು ತಪ್ಪಲ್ಲ. ಮಕ್ಕಳ ಯಶಸ್ಸಿನಲ್ಲಿ ತಮ್ಮ ಯಶಸ್ಸನ್ನು ಕಾಣುವುದೂ ತಪ್ಪಲ್ಲ. ಆದರೆ ಪಾಲಕರು ಹಾಗೆ ಒತ್ತಾಯಿಸುವುದು ಮಕ್ಕಳ ದೃಷ್ಟಿಯಲ್ಲಿ ತಪ್ಪು. ಪಾಲಕರ ಎಲ್ಲಾ ನಿರೀಕ್ಷೆಗಳನ್ನು ಪೂರೈಸುವ ಶಕ್ತಿ, ಆಸಕ್ತಿ ಮಕ್ಕಳಿಗೆ ಇರಲೇಬೇಕೆಂದೇನಿಲ್ಲ. ಆದರೂ ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ಪ್ರೀತಿಸಬೇಕಾದದ್ದು ಪಾಲಕರ ಕರ್ತವ್ಯ. ಮಕ್ಕಳಿಗೆ ಅಗತ್ಯವಾದಾಗಲೆಲ್ಲಾ ನೆರವಾಗುವುದು, ಸಹಕಾರ ನೀಡುವುದು ಪಾಲಕರ ಜವಾಬ್ದಾರಿ.

ಇದಂತೂ ಪರೀಕ್ಷೆಯ ಕಾಲ. ತಮ್ಮ ಸಹಪಾಠಿಗಳಿಗಿಂತ ತಾನು ಚೆನ್ನಾಗಿ ಓದಬೇಕು, ಚೆನ್ನಾಗಿ ಬರೆಯಬೇಕು ಎನ್ನುವ ಒತ್ತಡ ಸಹಜವಾಗಿಯೇ ಮಕ್ಕಳಿಗಿರುತ್ತದೆ. ನಪಾಸಾಗುವುದನ್ನು ಯಾರೂ ಬಯಸುವುದಿಲ್ಲ. ಅದಕ್ಕಾಗಿ ಮಕ್ಕಳು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಆದರೆ ಪಾಲಕರು ಮತ್ತೂ ಒತ್ತಡವನ್ನು ಹೇರಿದರೆ, ಬೈಯ್ದರೆ, ಹೀಗಳೆದರೆ, ಅವಮಾನಿಸಿದರೆ ಮಕ್ಕಳಿಗೆ ಮತ್ತೂ ಆಘಾತವಾಗುತ್ತದೆ. ಹದಿಹರೆಯದ ಮಕ್ಕಳ ಮನಸ್ಸಿಗೆ ನೋವಾಗುವ ಹಾಗೆ ಹಂಗಿಸಿ ಮಾತನಾಡಬಾರದು. ತಮ್ಮ ಮಕ್ಕಳ ಮನಸ್ಸನ್ನು, ಶಕ್ತಿಯನ್ನು ಪಾಲಕರು ತಿಳಿದುಕೊಂಡಿರಬೇಕು. ನಮ್ಮ ಮಕ್ಕಳು ಯಾವಾಗಲೂ ನಮ್ಮ ಮಕ್ಕಳೇ. ನಮ್ಮ ಹಾಗೆಯೇ ಇರುತ್ತಾರೆ.

ಮಕ್ಕಳು ಕೇಳಿದರೆಂದು ಮೊಬೈಲ್ ಅನ್ನು ಕೊಡಿಸಿದ ಪಾಲಕರೇ ಅನಂತರ ಮೊಬೈಲ್‌ ಅನ್ನು ಬಿಡಬೇಕೆಂದು ಮಕ್ಕಳನ್ನು ಗದರಿಸುವುದು ಸರಿಯೇ? ಮೊಬೈಲಿನಿಂದ ಸದುಪಯೋಗವನ್ನು ಮಾಡಿಕೊಳ್ಳುವಂತೆ ಮಕ್ಕಳನ್ನು ತರಬೇತುಗೊಳಿಸುವುದೊಂದೇ ಮಾರ್ಗ. ಆಧುನಿಕ ಮತ್ತು ಯಾಂತ್ರಿಕವಾಗುತ್ತಿರುವ ಇಂದಿನ ಸಮಾಜದಲ್ಲಿ ಮೊಬೈಲುಗಳಿಲ್ಲದ ಮನೆ ಇಲ್ಲ ಎನ್ನುವಂತಾಗಿದೆ.

ಇನ್ನು ಮಕ್ಕಳು ನೆಮ್ಮದಿಯಿಂದ ಪರೀಕ್ಷೆಗಾಗಿ ತಯಾರಿ ನಡೆಸಲಿ. ಯಾವುದೇ ಕಾರಣಕ್ಕೂ ಪಾಲಕರು ಮಕ್ಕಳನ್ನು ಬೈಯ್ಯಬಾರದು, ಹಂಗಿಸಬಾರದು. ಓದುವಂತೆ ಪದೇ ಪದೇ ಒತ್ತಾಯಿಸಬಾರದು. ಅವರಿವರೊಂದಿಗೆ ಹೋಲಿಸಬಾರದು. ಮಗುವಿನ ಆತ್ಮಸ್ಥೈರ್ಯ ಹಾಳಾಗುವಂತೆ ವರ್ತಿಸಬಾರದು. ಮಕ್ಕಳ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಜಂಕ್ ಫುಡ್‌ಗಳನ್ನು ಕೊಡಿಸಬಾರದು. ರಾತ್ರಿ ನಿದ್ರೆಗೆಡದಂತೆ, ಅತಿಯಾಗಿ ಸುಸ್ತಾಗದಂತೆ, ಊಟೋಪಚಾರಗಳಲ್ಲಿ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ವಿಷಯವನ್ನಾದರೂ ಮಗುವಿಗೆ ಸರಿಯಾಗಿ ತಿಳಿಯುವಂತೆ, ಸಮಾಧಾನದಿಂದ ಹೇಳಬೇಕು. ಮಕ್ಕಳೆಂದರೆ ಭಗವಂತನು ಕರುಣಿಸಿದ ಅದೃಷ್ಟ. ಯಾವತ್ತಿದ್ದರೂ, ಹೇಗಿದ್ದರೂ ನಮ್ಮ ಮಕ್ಕಳು, ನಮ್ಮ ಮಕ್ಕಳೇ! ಅವರನ್ನು ತಮ್ಮ ಕಣ್ಣಿನಂತೆ ಕಾಪಾಡಬೇಕಾಗಿದ್ದಷ್ಟೇ ಪಾಲಕರ ಕೆಲಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry