‘ಶುದ್ಧ ಶುಂಠಿ’ಯ ಮುಷ್ಟಿಯಲ್ಲಿ ನಕ್ಷತ್ರ!

ಗುರುವಾರ , ಮಾರ್ಚ್ 21, 2019
25 °C

‘ಶುದ್ಧ ಶುಂಠಿ’ಯ ಮುಷ್ಟಿಯಲ್ಲಿ ನಕ್ಷತ್ರ!

Published:
Updated:
‘ಶುದ್ಧ ಶುಂಠಿ’ಯ ಮುಷ್ಟಿಯಲ್ಲಿ ನಕ್ಷತ್ರ!

‘ಶುದ್ಧ ಶುಂಠಿ’, ‘ಸೋಡಾ ಬುಡ್ಡಿ’ ಎಂದು ಶಾಲೆಯ ಮಕ್ಕಳು ಕಿಚಾಯಿಸುತ್ತಿದ್ದರೆ ಬಾಲಕ ಎಡ್ವರ್ಡ್ ಕ್ರಿಸ್ಟೊಫರ್ ಶೀರನ್ ಕಣ್ಣುಗಳು ತೇವಗೊಳ್ಳುತ್ತಿದ್ದವು. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಅವನ ಕಣ್ಣುಗಳು ಚುರುಕಾಗಿರಲಿಲ್ಲ. ಅಗಲವಾದ ದಪ್ಪ ಕನ್ನಡಕ ಹಾಕಿಕೊಳ್ಳದೇ ವಿಧಿ ಇರಲಿಲ್ಲ. ಟೀಚರ್ ಕೇಳುವ ಪ್ರಶ್ನೆಗೆ ಉತ್ತರ ಹೇಳಲೆಂದು ಎದ್ದುನಿಂತರೆ, ಮಾತೇ ಹೊರಡುತ್ತಿರಲಿಲ್ಲ. ಒಂದೊಂದು ಅಕ್ಷರ ಹೇಳಲೂ ಉಗ್ಗುತ್ತಿದ್ದ.

‘ಶೇಪ್ ಆಫ್ ಯೂ’ ಪಾಶ್ಚಾತ್ಯ ಗೀತೆಗೆ ಚಿಣ್ಣರಿಂದ ಹಿಡಿದು ವಯೋವೃದ್ಧರವರೆಗೂ ಹೆಜ್ಜೆ ಹಾಕುತ್ತಿರುವ ಈ ಹೊತ್ತಿನಲ್ಲಿ ಆ ಗೀತೆ ಸಂಯೋಜಿಸಿ ಹಾಡಿದ ಹುಡುಗನ ಬಾಲ್ಯದ ಕಷ್ಟ ಅಚ್ಚರಿಯಂತೆ ಕಂಡೀತು.

ಎಡ್ ಶೀರನ್ ಎನ್ನುವುದು ಜನಪ್ರಿಯ ಹೆಸರು. ಹೀಗಳಿಕೆಗಳಿಂದ ಹೊರಬರಲು ಬಾಲಕ ಆರಿಸಿಕೊಂಡಿದ್ದು ಸಂಗೀತ. ಗಿಟಾರ್ ಕೈಗೆತ್ತಿಕೊಂಡಾಗ ವಯಸ್ಸಿನ್ನೂ ನಾಲ್ಕು. ಚರ್ಚ್‌ನ ಸಮೂಹ ಗಾಯನದಲ್ಲಿ ಕಂಠ ಶುದ್ಧಿ ಮಾಡಿಕೊಂಡ ಬಾಲಕ, ಸಂಗೀತದ ವಿಷಯದಲ್ಲಿ ಎಂದೂ ಉಗ್ಗಲಿಲ್ಲ. ಚರ್ಚ್ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು ಕಲಿಸಿದ ಡೇಮಿಯನ್ ರೈಸ್ ಈ ಬಾಲಕನಿಗೆ ಸ್ಫೂರ್ತಿ. ಒಂದನೇ ತರಗತಿಯಲ್ಲಿ ಕಲಿಯುವಾಗಲೇ ಶೀರನ್ ಹಾಡುಗಳನ್ನು ಬರೆಯತೊಡಗಿದ. ಅವಕ್ಕೆ ಸ್ವರ ಸಂಯೋಜನೆ ಮಾಡಿ ಸುಖಿಸಿದ.

ಇಂಗ್ಲೆಂಡ್‌ನ ಹ್ಯಾಲಿಫಾಕ್ಸ್ ಶೀರನ್‌ನ ತವರು. ಅಪ್ಪ-ಅಮ್ಮ ಕಲಾ ಸಲಹಾ ಕೇಂದ್ರ ನಡೆಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಕೆಂಪು ಕೂದಲಿನ ಬಿಳಿ ಮಕ್ಕಳನ್ನು 'ಶುದ್ಧ ಶುಂಠಿ ' ಎಂದು ಆಡಿಕೊಳ್ಳುವುದು 1990ರ ದಶಕದಲ್ಲಿ ಮಾಮೂಲಾಗಿತ್ತು. ಮಗನಿಗೆ ಮಾತನಾಡುವ ಚಿಕಿತ್ಸೆ ಕೊಡಿಸಿದರೂ ಫಲ ಕೊಡದೇ ಇರುವುದನ್ನು ಅರಿತ ಅಪ್ಪನಿಗೆ ಸಂಗೀತವೇ ಅವನನ್ನು ಕಾಪಾಡೀತು ಎನ್ನುವುದು ಬೇಗ ಗೊತ್ತಾಯಿತು. ಅದೊಂದು ದಿನ ಎಮಿನೆಮ್ಸ್‌ನ ಸೀಡಿ ತಂದುಕೊಟ್ಟರು. ಶೀರನ್ ಅದರ ಪದ ಪದವನ್ನೂ ಅನುಕರಿಸಿ ಹಾಡಿದ. ಹಾಗೆ ಹಾಡುವಾಗ ಸ್ವಲ್ಪವೂ ಉಗ್ಗಲಿಲ್ಲ. ವೇದಿಕೆ ಹತ್ತಿ ಹಾಡಿದರೆ ಉಗ್ಗುವಿಕೆಯಿಂದ ಹೊರಬರಬಹುದು ಎಂದು ಅವನು ತೀರ್ಮಾನಿಸಿದ್ದು ಹತ್ತನೇ ವಯಸ್ಸಿನಲ್ಲಿ. ತಾನೇ ಬರೆದ ಹಾಡುಗಳ ಕಾರ್ಯಕ್ರಮ ನೀಡಲಾರಂಭಿಸಿದ. ವಾರಕ್ಕೆ ಹನ್ನೆರಡು ಪ್ರದರ್ಶನಗಳನ್ನು ಸಲೀಸಾಗಿ ಒಪ್ಪಿಕೊಳ್ಳುವ ಮಟ್ಟಕ್ಕೆ ಬೆಳೆದ. ಕೆಲವು ಸೀಡಿಗಳಲ್ಲಿ ಧ್ವನಿ ಮುದ್ರಿಸಿ, ಮಾರಾಟ ಮಾಡಲು ಪ್ರಾರಂಭಿಸಿದ.

ಸಂಗೀತಗಾರರಿಗೆ ಅಮೆರಿಕ ಹುಲ್ಲುಗಾವಲು ಎಂದು ಅರಿತಿದ್ದ ಅವನು, ಅದಕ್ಕೆ ಪೂರ್ವಭಾವಿಯಾಗಿ ಮೊದಲು ಲಂಡನ್‌ಗೆ ಹೊರಟ. ಗಿಟಾರ್ ಹಾಗೂ ನಾಲ್ಕೈದು ಜೊತೆ ಬಟ್ಟೆಗಳನ್ನು ಚೀಲಕ್ಕೆ ಹಾಕಿಕೊಂಡು ಫಕೀರನಂತೆ ದೊಡ್ಡ ನಗರಿಗೆ ಹೋದ ಅವನಿಗೆ ನೆಲೆ ಇರಲಿಲ್ಲ. ಸಬ್ ವೇಗಳಲ್ಲಿ, ಉದ್ಯಾನಗಳಲ್ಲಿ ಮಲಗಿ ಕೆಲವು ದಿನಗಳನ್ನು ಕಳೆದ. 2009ರಲ್ಲಿ 300ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟ. ಅಮೆರಿಕಕ್ಕೆ ಹೋಗಲು ಎಷ್ಟು ಹಣ ಒಟ್ಟು ಮಾಡಬೇಕೋ ಅಷ್ಟನ್ನು ಸೇರಿಸಿದ.

ಅಮೆರಿಕದ ಜೀಮಿ ಫಾಕ್ಸ್ ರೇಡಿಯೊದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅವರೊಮ್ಮೆ ಶೀರನ್‌ನನ್ನು ಆಹ್ವಾನಿಸಿದರು. 12 ನಿಮಿಷ ಹುಡುಗ ಗಿಟಾರ್ ನುಡಿಸಿದ. ಅದಕ್ಕೆ ಅಸಂಖ್ಯ ಶ್ರೋತೃಗಳು ಅಭಿಮಾನಿಗಳಾದರು.  ಹಾಡುಗಳ ಧ್ವನಿಮುದ್ರಿಸಲು ತಮ್ಮ ಸ್ಟುಡಿಯೊವನ್ನು ಪುಕ್ಕಟೆಯಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟವರು ಜೀಮಿ. ಅಮೆರಿಕದಲ್ಲಿಯೂ ಸಂಗೀತದಿಂದಲೇ ನೆಲೆನಿಂತ ಶೀರನ್, ನೋಡನೋಡುತ್ತಲೇ ‘ಐಟ್ಯೂನ್ಸ್ನ’ ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ. ಅಟ್ಲಾಂಟಿಕ್ ರೆಕಾರ್ಡ್ಸ್ ಕಂಪನಿಯು ಕೆಂಪುಹಾಸಿನ ಆಹ್ವಾನ ನೀಡಿತು.‘+’ ಎಂಬ ಆಲ್ಬಂನ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಖರ್ಚಾದವು. ‘ಐ ಸೀ ಫೈರ್’, ‘X’ ಎಂಬ ಆಲ್ಬಂಗಳು ಜನಪ್ರಿಯತೆ ತಂದುಕೊಟ್ಟವು. 2016ರಲ್ಲಿ ಗ್ರ್ಯಾಮಿ ಪ್ರಶಸ್ತಿ ಸಂದಾಗ ಶೀರನ್ 25ರ ತರುಣ.

ಈಗ ಎಲ್ಲರ ಬಾಯಲ್ಲಿ 'ಶೇಪ್ ಆಫ್ ಯೂ'. ವಿಶ್ವದಾದ್ಯಂತ ಒಂದು ವರ್ಷದಿಂದ ಜನ ಗುನುಗುತ್ತಿರುವ ಈ ಹಾಡಿನ ಸೃಷ್ಟಿಕರ್ತ ಶೀರನ್ ಈಗ ಸ್ವಲ್ಪವೂ ಉಗ್ಗುವುದಿಲ್ಲ. ಅವನನ್ನು ಶಾಲೆಯಲ್ಲಿ ಆಡಿಕೊಳ್ಳುತ್ತಿದ್ದ ಹುಡುಗ ಈಗ ಪ್ಲಂಬರ್. ಅವನು ಬಂದು ಆಟೋಗ್ರಾಫ್ ಕೇಳಿದಾಗ ಶೀರನ್ ಕಣ್ಣಲ್ಲಿ ನೀರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry