ನೆರಿಗೆಯ ಸೊಬಗು

7

ನೆರಿಗೆಯ ಸೊಬಗು

Published:
Updated:
ನೆರಿಗೆಯ ಸೊಬಗು

ಸೀರೆಗೆ ನೆರಿಗೆ ಜೋಡಿಸುವುದು ಒಂಥರಾ ಕಸರತ್ತು. ಎಳೆಎಳೆಯಾಗಿ ಹರಡುವ ನೆರಿಗೆಯೇ ಸೀರೆಯ ಅಂದವನ್ನು ಹೆಚ್ಚಿಸುವುದು. ಈ ಸೀರೆಯ ನೆರಿಗೆಗೆ ಪೈಪೋಟಿ ನೀಡುವ ದಿರಿಸೊಂದು ಇಂದಿನ ನಾರಿಯ ಮನ ಕದ್ದಿದೆ, ಅದುವೇ ರಫಲ್ (ನೆರಿಗೆ) ಉಡುಪು. ಸದ್ಯ ಈ ಉಡುಪು ಫ್ಯಾಷನ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ.

ರವಿಕೆ, ಚೂಡಿದಾರ, ಗೌನ್‌, ಪಾಶ್ಚಾತ್ಯ ದಿರಿಸುಗಳಲ್ಲಿಯೂ ‘ರಫಲ್‌’ ಅನಾವರಣಗೊಳ್ಳುತ್ತಿದೆ. ವಿಭಿನ್ನ ಲುಕ್‌ನೊಂದಿಗೆ ವಿಶೇಷ ವಿನ್ಯಾಸವನ್ನೂ ಹೊಂದಿರುವ ಉಡುಪುಗಳಿಗೆ ಈಗ ಬೇಡಿಕೆ ಕುದುರುತ್ತಿದೆ. ಫ್ಯಾಷನ್‌ ಜಗತ್ತಿನಲ್ಲಿ ಬಗೆಬಗೆ ಟ್ರೆಂಡ್‌ ಸೆಟ್‌ ಮಾಡುತ್ತಿರುವ ವಿನ್ಯಾಸಕರೂ ಹೊಸತನದ ದಿರಿಸುಗಳನ್ನು ಫ್ಯಾಷನ್‌ಪ್ರಿಯರಿಗಾಗಿ ನಾಜೂಕಾಗಿ ಜೋಡಿಸುತ್ತಿದ್ದಾರೆ. ಫ್ಯಾಷನ್‌ ಜಗತ್ತಿನಲ್ಲಿ ಕ್ಷಣಕ್ಷಣಕ್ಕೂ ಹೊಸತನ ಸೃಷ್ಟಿಸುವ ವಿನ್ಯಾಸಕಾರರ ಕಣ್ಣು ಸದ್ಯಕ್ಕೆ ಬಿದ್ದಿರುವುದು ಹಳೆತನ್ನೇ ಹೊಸದಾಗಿಸುವ ಬಗೆಯಲ್ಲಿ.

ಇದು ಪಾಶ್ಚಾತ್ಯ ವಿನ್ಯಾಸದ ದಿರಿಸಿನಲ್ಲಿ 50ರ ದಶಕದಲ್ಲಿಯೇ ಸ್ಥಾನ ಗಳಿಸಿತ್ತು. 1975ರ ‘ದಿ ಸ್ಟೆಪ್‌ಫಾರ್ಡ್‌ ಲೈಫ್‌’ ಸಿನಿಮಾದಲ್ಲಿ ರಫಲ್‌ ಉಡುಪಿನ ಚೆಲುವು ಮೇಳೈಸಿತ್ತು. ತಲೆಗೊಂದು ಟೋಪಿ, ಪದರ ಪದರವಾಗಿರುವ ರಫಲ್‌ ಉಡುಪಿನಲ್ಲಿ ಮಿಂಚಿದ್ದರು ಈ ಸಿನಿಮಾದ ಏಳು ನಟಿಯರು. ಅಲ್ಲಿಂದ ಈ ದಿರಿಸಿಗೆ ಹೆಚ್ಚಿನ ಪ್ರಚಾರ ದೊರಕಿತು.

ಹಿಂದೆಲ್ಲ ರಫಲ್‌ ತೋಳುಗಳು ಮತ್ತು ಶರ್ಟ್‌ಗಳ ಮುಂಭಾಗದಲ್ಲಿ ನೆರಿಗೆಗಳು ಹೆಚ್ಚು ಜನಪ್ರಿಯವಾಗಿತ್ತು. ಮಕ್ಕಳ ಫ್ರಾಕ್‌ಗಳಲ್ಲಿ ನೆರಿಗೆಗಳಿಗೆ ಮೇರು ಸ್ಥಾನ. ಆಧುನಿಕ ಮತ್ತು ಸಾಂಪ್ರದಾಯಿಕ ಎರಡು ಬಗೆಯ ಉಡುಪುಗಳಲ್ಲಿಯೂ ಇದು ಸ್ಥಾನ ಪಡೆದಿದೆ. ತೀರಾ ಇತ್ತೀಚೆಗೆ ರಫಲ್‌ ಸ್ಕರ್ಟ್‌, ಸೀರೆ, ಚೂಡಿದಾರಗಳು ಟ್ರೆಂಡ್‌ ಎನಿಸಿವೆ. ಹೊಸ ವರ್ಷದ ಹೊಸ್ತಿಲಲ್ಲಿ ನವೀನ ಬಗೆಯ ಫ್ಯಾಷನ್‌ ಟ್ರೆಂಡ್‌ ಪರಿಚಯಿಸುವುದು ಫ್ಯಾಷನ್‌ ಕ್ಷೇತ್ರದ ಸೂತ್ರ. ಈ ಬಾರಿ ಜನಪ್ರಿಯ ಫ್ಯಾಷನ್‌ ವಿನ್ಯಾಸಕಾರ ಮನೀಶ್‌ ಮಲ್ಹೋತ್ರ ರಫಲ್‌ ಲೆಹೆಂಗಾ ಸ್ಕರ್ಟ್‌ನಲ್ಲಿ ಮಾಡಿರುವ ವಿನ್ಯಾಸದ ಶೋ ಮಾಡಿದ್ದರು. ಹೀಗಾಗಿ ಇದು ಫ್ಯಾಷನ್‌ ಕ್ಷೇತ್ರದಲ್ಲಿ ಭಾರಿ ಭರವಸೆಯನ್ನೇ ಮೂಡಿಸಿದೆ.

ಸೀರೆ ಈಗ ಸಾಂಪ್ರದಾಯಿಕ ಉಡುಪು ಎಂಬ ಪಟ್ಟಕ್ಕಷ್ಟೇ ಸೀಮಿತವಾಗಿಲ್ಲ. ಸೀರೆಗಳಲ್ಲಿ ಆಶ್ಚರ್ಯವೆನಿಸುವಂತಹ ವಿನ್ಯಾಸಗಳು ಮಾರುಕಟ್ಟೆ ಪ್ರವೇಶಿಸಿವೆ. ಇವುಗಳಿಗೆ ಸೆಡ್ಡು ಹೊಡೆಯುವಂತಿದೆ ‘ರಫಲ್‌ ಸೀರೆ’. ಇದು ಆಧುನಿಕ ಮೆರುಗನ್ನು ನೀಡಿ ನಿಮ್ಮನ್ನು ಅಂದಗಾಣಿಸುವುದರಲ್ಲಿ ಸಂಶಯವಿಲ್ಲ.

ದಪ್ಪಗಿರುವವರು ಹೆಚ್ಚು ನೆರಿಗೆಗಳ ದಿರಿಸನ್ನು ಧರಿಸಿದರೆ ಇನ್ನಷ್ಟು ದಪ್ಪ ಕಾಣುತ್ತಾರೆ. ಹಾಗಾಗಿ ಒಂದೆರಡು ನೆರಿಗೆಯ ಉಡುಪನ್ನು ಆರಿಸಿಕೊಳ್ಳಿ. ಸಪೂರವಾಗಿರುವವರಿಗೆ ಈ ದಿರಿಸು ಚೆನ್ನಾಗಿ ಒಪ್ಪುತ್ತದೆ. ಫೆದರ್‌ ಬ್ಲೌಸ್‌ಗೆ ರಫಲ್‌ ಸ್ಕರ್ಟ್‌ ಚೆನ್ನಾಗಿ ಒಪ್ಪುತ್ತದೆ.

ಸದ್ಯ ಹೊಸ ರೂಪಿನೊಂದಿಗೆ ಮತ್ತೆ ಫ್ಯಾಷನ್‌ ಜಗತ್ತನ್ನು ಆಕ್ರಮಿಸಿಕೊಂಡಿರುವ ರಫಲ್ ಉಡುಗೆಗಳನ್ನು ಸಂಭಾಳಿಸುವುದು ಕಷ್ಟ ಎನಿಸದು. ಹಗುರವಾದ ಫ್ಯಾಬ್ರಿಕ್‌ಗಳಿಂದಲೇ ಇದನ್ನು ತಯಾರಿಸುವುದರಿಂದ ತೊಟ್ಟಾಗ ಕಿರಿಕಿರಿ ಆಗುವುದಿಲ್ಲ. ಈ ವಿಭಿನ್ನ ದಿರಿಸುಗಳು ಈಗಾಗಲೇ ಹಿಂದಿ ಧಾರಾವಾಹಿ ಲೋಕದಲ್ಲಿ ನಟಿಮಣಿಯರನ್ನು ಅಲಂಕರಿಸಿ ನೋಡುಗರ ಹುಬ್ಬೇರುವಂತೆ ಮಾಡಿವೆ.

ಆಭರಣಗಳ ಆಯ್ಕೆಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಚಿನ್ನ, ಬೆಳ್ಳಿ ಅಥವಾ ಆಕ್ಸಿಡೈಸ್ಡ್‌ ವಿನ್ಯಾಸದ ಆಭರಣಗಳೂ ಒಪ್ಪುತ್ತವೆ. ಮಣಿಗಳಿಂದ ಮಾಡಿದ ಆಭರಣಗಳು ವಿಶೇಷ ನೋಟ ನೀಡಬಲ್ಲವು.

**

ಸಾಂಪ್ರದಾಯಿಕ ಉಡುಪುಗಳಲ್ಲಿಯೂ ‘ರಫಲ್‌ ವಿನ್ಯಾಸ’ವನ್ನು ಮಹಿಳೆಯರು ಈಚೆಗೆ ಇಷ್ಟಪಡುತ್ತಿದ್ದಾರೆ. ಸಪೂರ ದೇಹದವರಿಗೆ ಈ ಉಡುಪು ಚಂದ ಕಾಣುತ್ತದೆ. ಕಾಲೇಜು ಹುಡುಗಿಯರಿಗೆ ಹೆಚ್ಚು ಪ್ರಿಯವಾದ ವಿನ್ಯಾಸವಿದು.

– ಪ್ರಿಯಾ, ವಸ್ತ್ರವಿನ್ಯಾಸಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry