ಕಾರ್ಮಿಕರಿಗೆ ಕೌಶಲದ ಬಲ

ಸೋಮವಾರ, ಮಾರ್ಚ್ 25, 2019
28 °C

ಕಾರ್ಮಿಕರಿಗೆ ಕೌಶಲದ ಬಲ

Published:
Updated:
ಕಾರ್ಮಿಕರಿಗೆ ಕೌಶಲದ ಬಲ

ಗ್ರಾಮೀಣ ಪ್ರದೇಶದ ಮಹಿಳೆಯರು ಛಲ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ತಮ್ಮ ಸಾಧನೆಗೆ ಪೂರಕ ವ್ಯವಸ್ಥೆಯನ್ನು ತಾವೇ ರೂಪಿಸಿಕೊಳ್ಳಬೇಕು. ಇನ್ನೊಬ್ಬರನ್ನು ಅವಲಂಭಿಸಬಾರದು. ಹಾಗಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ...’

ಇದು ಲೇಬರ್‌ನೆಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ವಾಸುದೇವನ್ ಅವರ ನುಡಿ.

ಯಶಸ್ವಿ ವಾಣಿಜ್ಯೋದ್ಯಮಿಯಾಗಿರುವ ಅವರು, ತಮ್ಮ ಸಂಸ್ಥೆಯ ಮೂಲಕ ಅಸಂಘಟಿತ ವಲಯಗಳ ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಮತ್ತು ಉದ್ಯೋಗ ದೊರಕಿಸಿಕೊಡುವ ಮೂಲಕ ಆಸರೆಯಾಗಿದ್ದಾರೆ.

2008ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಲೇಬರ್‌ನೆಟ್ ಸಂಸ್ಥೆಯು ಇಂದು ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಕೇರಳ, ರಾಜಸ್ಥಾನ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲೂ ಶಾಖೆಗಳನ್ನು ಹೊಂದಿದೆ. 1000 ಮಂದಿ ನೌಕರರಿದ್ದಾರೆ. ಪ್ರತಿವರ್ಷ 2 ಲಕ್ಷ ಮಂದಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತಿದೆ.

‘ಅಸಂಘಟಿತ ವಲಯದ ಕಾರ್ಮಿಕರಿಗೆ ತಿಂಗಳಲ್ಲಿ 25 ದಿವಸವಾದರೂ ಕೆಲಸ ದೊರೆಯಬೇಕು ಎಂಬ ಉದ್ದೇಶದಿಂದ ನಾವು ಈ ಸಂಸ್ಥೆಯನ್ನು ಆರಂಭಿಸಿದೆವು. ಆರಂಭದಲ್ಲಿ ಮೂವ್‌ಮೆಂಟ್ ಫಾರ್ ಆಲ್ಟರ್ನೇಟಿವ್ ಫಾರ್ ಯೂತ್ ಅವೇರ್‌ನೆಸ್‌ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ನಿರುದ್ಯೋಗಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತಿದ್ದೆವು. ಇದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕೆಂಬ ಉದ್ದೇಶದಿಂದ ಪ್ರತ್ಯೇಕವಾಗಿ ಲೇಬರ್‌ನೆಟ್ ಸಾಮಾಜಿಕ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದೆವು’ ಎನ್ನುತ್ತಾರೆ ಗಾಯತ್ರಿ.

ಈ ಸಂಸ್ಥೆಯು ಕೃಷಿ, ನಿರ್ಮಾಣ, ಉತ್ಪಾದನೆ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಸಾಮಾಜಿಕ ಮತ್ತು ವೈಯಕ್ತಿಕ ಸೇವೆಗಳು, ಸಾರಿಗೆ ಹಾಗೂ ಸರಕು ಸಾಗಣೆ ಸೇರಿದಂತೆ ವಿವಿಧ ಕ್ಷೇತ್ರಗಳ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತಿದೆ. ಬಸವೇಶ್ವರನಗರದಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆಯನ್ನೂ ನಡೆಸುತ್ತಿದೆ.

‘ನಾನು ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲೆ ಪೂರೈಸಿದ್ದೇನೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ರಾಷ್ಟ್ರೀಯ ಸೇವಾ ಯೋಜನೆಗೆ (ಎನ್‌ಎಸ್‌ಎಸ್‌) ಸೇರಿದ್ದ. ದೆಹಲಿಯ ಕೊಳೆಗೇರಿಯ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನವನ್ನೂ ಮಾಡಿದ್ದೆವು. 1992ರಲ್ಲಿ ಮುಂಬೈಯಲ್ಲಿ ನಡೆದ ಗಲಭೆ ಹಾಗೂ 1993ರಲ್ಲಿ ಮಹರಾಷ್ಟ್ರದ ಲಾತೂರ್‌ನಲ್ಲಿ ನಡೆದ ಭೂಕಂಪ ಸಂತ್ರಸ್ತರ ಪರಿಹಾರಕಾರ್ಯದಲ್ಲೂ ಪಾಲ್ಗೊಂಡಿದ್ದೇನೆ. ದುರ್ಬಲ ವರ್ಗದವರ ಕಲ್ಯಾಣಕ್ಕೆ ದುಡಿಯಬೇಕೆಂಬ ಆಶಯ ಇಟ್ಟುಕೊಂಡಿದ್ದೆ. ಮುಂದೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಲ್ಲಿ (ಐಎಲ್ಒ) ಎಂಟು ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಆ ವೇಳೆ ಕಾರ್ಮಿಕರ ಸಮಸ್ಯೆಗಳನ್ನು ಅರ್ಥೈಸಿಕೊಂಡೆ. ಲೇಬರ್‌ನೆಟ್‌ ಆರಂಭಿಸಲು ಇದೆಲ್ಲವೂ ಪ್ರೇರಣೆ' ಎಂದು ಅವರು ತಮ್ಮ ಬದುಕಿನ ಅನುಭವ ಬಿಚ್ಚಿಡುತ್ತಾರೆ.

‘2022ರ ಹೊತ್ತಿಗೆ ನಮ್ಮ ಸಂಸ್ಥೆಯ ವತಿಯಿಂದ 1 ಕೋಟಿ ಕಾರ್ಮಿಕರಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಿದ್ದೇವೆ' ಎನ್ನುತ್ತಾರೆ ಅವರು.

‘ಮಹಿಳೆಯರು ನೌಕರಿ ಹಾಗೂ ಕುಟುಂಬ ಎರಡರಲ್ಲೂ ಸಮತೋಲನ ಸಾಧಿಸಿ ಮುನ್ನಡೆಯಬೇಕಾಗುತ್ತದೆ. ನನಗೆ ಕುಟುಂಬದ ಸಹಕಾರ ಉತ್ತಮ ರೀತಿಯಲ್ಲಿತ್ತು. ಇದರಿಂದ ನಾನು ಬಯಸಿದ ಗುರಿ ಮುಟ್ಟಲು ಸಾಧ್ಯವಾಯಿತು' ಎಂದೂ ಅವರು ಹೇಳುತ್ತಾರೆ. 

***

ಲೇಬರ್‌ನೆಟ್ ಬಗ್ಗೆ ಒಂದಿಷ್ಟು...

ಲೇಬರ್‌ನೆಟ್ ಸಂಸ್ಥೆಯು ಕೌಶಲ ಅಭಿವೃದ್ಧಿ, ವೃತ್ತಿಪರ ಶಿಕ್ಷಣ, ಉದ್ಯೋಗ, ಉದ್ಯಮಶೀಲತೆಯ ಮೂಲಕ ಮಹಿಳೆಯರ, ನಿರುದ್ಯೋಗಿಗಳ, ಅಸಂಘಟಿತ ವಲಯಗಳ ಕಾರ್ಮಿಕರ ಆರ್ಥಿಕ ಸದೃಢತೆಗೆ ನೆರವು ನೀಡುತ್ತಿದೆ. ಕೌಶಲ ತರಬೇತಿಯ ಮೂಲಕ ಕಾರ್ಮಿಕರಿಗೆ ಗಳಿಕೆ ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ. ಸಣ್ಣ ಪ್ರಮಾಣದ ಉದ್ಯಮ ಆರಂಭಿಸುವವರಿಗೆ ಉತ್ಪಾದನೆ, ಮಾರುಕಟ್ಟೆ ಮೊದಲಾದವುಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಲೇಬರ್‌ನೆಟ್‌ನ ಅಂಗಸಂಸ್ಥೆ ‘ಲೇಬರ್‌ನೆಟ್ ಮ್ಯಾನೇಜ್‌ಮೆಂಟ್ ಸರ್ವಿಸಸ್’ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರು ಮತ್ತು ಉದ್ಯೋಗದಾತ ಕಂಪನಿಗಳ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ಮಾಹಿತಿಗೆ www.labournet.in ನೋಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry