ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಮೆನಿಯನ್‌ ಬೇಬಿಗೆ ‘ಲವ್‌ ಮೀ’ ಎನ್ನುತ್ತಿರುವ ಚಂದನ್‌

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಚಂದನ್‌ ಶೆಟ್ಟಿ ಅವರ ಅದೃಷ್ಟ ಮತ್ತು ಜನಪ್ರಿಯತೆ ಹಿಗ್ಗಿವೆ. ಈ ಹಿಗ್ಗು ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ಇಷ್ಟೇ ಅಲ್ಲ, ಅವರ ವ್ಯಕ್ತಿತ್ವವನ್ನೂ ಬಿಗ್‌ಬಾಸ್ ಮನೆ ತಿದ್ದಿದೆ. ‘ಒಮ್ಮೆ ನರಕಕ್ಕೆ ಭೇಟಿ ನೀಡಿ ಬಂದ ಅನುಭವ ಆಯ್ತು’ ಎಂದು ನೆನಪಿಸಿಕೊಳ್ಳುವ ಚಂದನ್‌ ಹಿಂದಿಗಿಂತಲೂ ಹೆಚ್ಚು ನಮ್ರರಾಗಿದ್ದರು. ಹಾಗೆಯೇ ಮುಂದಿನ ದಿನಗಳಲ್ಲಿ ತಾನು ಏನು ಮಾಡಬೇಕು ಎಂಬ ಸ್ಪಷ್ಟತೆಯೂ ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು.

ಬಿಗ್‌‌‌‌ಬಾಸ್‌ ಮನೆಯಿಂದ ಬಂದ ಕೂಡಲೇ ಅವರಿಗೆ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶವೂ ಸಾಕಷ್ಟು ಬಂದಿದ್ದವಂತೆ. ‘ನಟನೆ ಮತ್ತು ಸಂಗೀತ ಎರಡನ್ನೂ ಸಂಭಾಳಿಸಿಕೊಂಡು ಹೋಗುವುದು ಕಷ್ಟ. ಸಂಗೀತ ಮತ್ತು ನಟನೆ ಇವೆರಡಕ್ಕೂ ಬೇರೆಯದೇ ಮನಸ್ಥಿತಿ ಬೇಕು. ನನಗೆ ಸಂಗೀತ ಮುಖ್ಯ. ಅದೇ ನನ್ನ ಜೀವನ. ಜನರು ಚಂದನ್‌ ಶೆಟ್ಟಿಯನ್ನು ಗುರ್ತಿಸುವುದು ಪ್ರೀತಿಸುವುದು ರ್‍ಯಾಪ್‌ ಮ್ಯೂಸಿಕ್‌ನಿಂದ. ಅದನ್ನೇ ಉಳಿಸಿಕೊಳ್ಳಬೇಕು ಎನ್ನುವುದು ನನ್ನ ನಿರ್ಧಾರ.ಆದ್ದರಿಂದ ಸದ್ಯಕ್ಕಂತೂ ಖಂಡಿತ ನಟನೆಯ ಕಡೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದೆಂದಾದರೂ ಒಳ್ಳೆಯ ಕಥೆ, ತಂಡ ಸಿಕ್ಕರೆ ನೋಡೋಣ’ ಎನ್ನುತ್ತಾರೆ ಅವರು.

‘ಕನ್ನಡವನ್ನು ನನ್ನ ಸಂಗೀತದ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ನನ್ನ ಕನಸು’ ಎನ್ನುವ ಅವರು ಆ ದಿಶೆಯಲ್ಲಿಯೇ ನಡೆಯುತ್ತಿದ್ದಾರೆ. ಈಗಾಗಲೇ ರೊಮೆನಿಯಾ ದೇಶದ ಸಂಗೀತಗಾರರೊಬ್ಬರ ಜತೆಗೆ ಸಂಪರ್ಕ ಸಾಧಿಸಿ ಅವರ ಜತೆಯಲ್ಲಿ ಒಂದು ಆಲ್ಬಂ ಅನ್ನೂ ರೂಪಿಸಿದ್ದಾರೆ.

‘ನಾನು ಕನ್ನಡದಲ್ಲಿ ಎಷ್ಟು ಜನಪ್ರಿಯನೋ, ರೊಮೆನಿಯಾದಲ್ಲಿ ಅವರು ಅಷ್ಟೇ ಜನಪ್ರಿಯ ಸಂಗೀತಗಾರರು. ನಾವಿಬ್ಬರೂ ಸೇರಿಕೊಂಡು ಕನ್ನಡ ಮತ್ತು ರೊಮೆನಿಯನ್‌ ಭಾಷೆ ಎರಡನ್ನೂ ಬಳಸಿಕೊಂಡು ಒಂದು ಹಾಡು ರೂಪಿಸಿದ್ದೇವೆ. ಅವರು ರೊಮೆನಿಯಾದಲ್ಲಿಯೂ ನಾನು ಕನ್ನಡದಲ್ಲಿಯೂ ಹಾಡುತ್ತೇವೆ. ಎರಡೂ ದೇಶದ ಜನರಿಗೆ ಪರಸ್ಪರ ಭಾಷೆಗಳ ಪರಿಚಯ ಆಗಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ತಮ್ಮ ಹೊಸ ಯೋಜನೆಯ ಕುರಿತು ಅವರು ವಿವರಿಸುತ್ತಾರೆ.

ಈ ಆಲ್ಬಂನ ಹೆಸರು ‘ಲವ್‌ ಮೀ ಬೇಬಿ’. ಇನ್ನೂ ಒಪ್ಪಂದ ಪೂರ್ತಿಯಾಗದ ಕಾರಣ ಅವರು ರೊಮೆನಿಯಾದ ಗಾಯಕನ ಹೆಸರು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ರೊಮೆನಿಯಾ ಮತ್ತು ಕನ್ನಡದ ಜತೆಗೆ ಇಂಗ್ಲಿಷ್‌ ಭಾಷೆಯ ಮಿಶ್ರಣವೂ ಇರಲಿದೆ. ಮುಂದೆ ಇದೇ ರೀತಿ ಬೇರೆ ದೇಶದ ಗಾಯಕರ ಪರಿಚಯ ಮಾಡಿಕೊಂಡು ಸಹಯೋಗದೊಂದಿಗೆ ಇದೇ ರೀತಿಯ ಹಾಡುಗಳನ್ನು ರೂಪಿಸುವ ಕನಸೂ ಅವರಿಗಿದೆ. ಇದರ ಜತೆಗೆ ಎಸ್‌. ನಾರಾಯಣ್‌ ಅವರ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ.

‘ಹಳ್ಳಿಗಳಲ್ಲಿ ರ್‍ಯಾಪ್‌ ಮ್ಯೂಸಿಕ್‌ಗಳನ್ನೆಲ್ಲ ಕೇಳುವುದಿಲ್ಲ ಎಂಬ ಮಾತು ನಮ್ಮಲ್ಲಿದೆ. ಆದರೆ ಅದು ಸುಳ್ಳು ಎಂದು ನನ್ನ ’3 ಪೆಗ್‌’ ಹಾಡು ಸಾಬೀತು ಮಾಡಿತು. ಯಾವುದೋ ಹಳ್ಳಿಯಲ್ಲಿರುವವರು, ಭಾಷೆಯ ಅರಿವಿಲ್ಲದಿದ್ದರೂ ರಿದಂನ ಕಾರಣಕ್ಕೆ ಇಂಗ್ಲಿಷ್‌ ಆಲ್ಬಂಗಳನ್ನು ಕೇಳುತ್ತಿರುತ್ತಾರೆ. ನನ್ನ ಅನೇಕ ಹಾಡುಗಳನ್ನು ಎಲ್ಲ ಕಡೆಗಳ ಜನರೂ ಕೇಳಿದ್ದಾರೆ’ ಎನ್ನುತ್ತಾರೆ ಚಂದನ್‌.

‘3 ಪೆಗ್‌’ ಉಲ್ಲೇಖ ಬಂದಾಕ್ಷಣ ಮಾತು ಆ ಹಾಡಿನ ಕುರಿತ ವಿವಾದದ ಕುರಿತು ಹೊರಳಿಕೊಂಡಿತು.

‘ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದು ನಾನು. ಆದರೆ ನನ್ನ ಬಗ್ಗೆ  ಚಂದನ್‌ ಎಲ್ಲಿಯೂ ಹೇಳುತ್ತಿಲ್ಲ’ ಎಂದು ವಿಜೇತ್‌ ಕೃಷ್ಣ ಎನ್ನುವರು ಆರೋಪಿಸಿದ್ದರು. ಈ ಕುರಿತು ಪ್ರಶ್ನಿಸಿದಾಗ ಚಂದನ್‌, ‘ನಾನು ಈ ಆರೋಪಕ್ಕೆ ಪ್ರತಿಕ್ರಿಯಿಸುವ ಅವಶ್ಯಕತೆ ಕಾಣಲಿಲ್ಲ’ ಎಂದರು. ‘ನಾನು ನನ್ನ ಮ್ಯೂಸಿಕ್‌ ಆಲ್ಬಂನಲ್ಲಿ ವಿಜೇತ್‌ ಅವರ ಹೆಸರನ್ನು ಸಂಗೀತ ನಿರ್ದೇಶಕ ಎಂದು ಉಲ್ಲೇಕಿಸಿದ್ದೇನೆ. ಟೈಟಲ್‌ನಲ್ಲಿಯೇ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ನಾನೊಬ್ಬ ತಂತ್ರಜ್ಞನಷ್ಟೆ, ಆ ಹಾಡಿನ ನಿರ್ಮಾಪಕ ಅಲ್ಲ. ವಿಜೇತ್‌ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಆ ಆರೋಪವೂ ಆಧಾರರಹಿತ’ ಎನ್ನುತ್ತಾರೆ ಚಂದನ್.

ಈ ಕುರಿತು ಚಂದನ್‌, ವಿಜೇತ್‌ ಅವರನ್ನು ಸಂಪರ್ಕಿಸಿದಾಗ ’ಒಂದಿಷ್ಟು ಮಾಧ್ಯಮದವರು ಕೆದಕಿ ಕೆದಕಿ ಹೇಳಿಸಿದರು. ನಾನು ಹಾಗೆ ಹೇಳಬೇಕು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರಂತೆ. ಹಾಗೆಯೇ ಹಣವನ್ನೂ ಅವರು ಹೇಳಿದ್ದಕ್ಕಿಂತ ಜಾಸ್ತಿ ಕೊಟ್ಟಿದ್ದೇವೆ. ಅದರ ಬಗ್ಗೆಯೆಲ್ಲಾ ಇಲ್ಲಿ ಮಾತನಾಡುವುದಿಲ್ಲ’ ಎಂದು ಚಂದನ್‌ ಹೇಳಿದರು.

‘ಅವರ ಸಂಗೀತ ಕೇಳಿದಾಗ ತಕ್ಷಣವೇ ನಾನು ಸಾಹಿತ್ಯ ಬರೆದುಬಿಟ್ಟೆ. ಅದನ್ನು ರೆಕಾರ್ಡ್‌ ಮಾಡಿದ್ದು 2009ರಲ್ಲಿ. ಆದರೆ ಅವತ್ತು ಈ ಸಾಂಗ್‌ ಇಟ್ಟುಕೊಂಡು ನಮ್ಮನ್ನು ನಾವು ಪರಿಚಯಿಸಿಕೊಳ್ಳಬೇಕು ಎಂದು ಇಬ್ಬರೂ ಅಂದುಕೊಂಡಿದ್ದೆವು. ಆದರೆ ಆ ಹಾಡನ್ನು ಬಿಡುಗಡೆ ಮಾಡಲು ಸಾಧ್ಯವಾಗಿದ್ದು 2015ರಲ್ಲಿ. ಸುಮಾರು ಆರು ವರ್ಷಗಳ ಕಾಲ ಆ ವಿಡಿಯೊಗೆ ಒಂದೊಂದು ರೂಪಾಯಿ ತರಲೂ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎಂಬುದು ನನಗೆ ಮತ್ತು ದಿನಿ ಸಿನಿ ಕ್ರಿಯೇಶನ್ಸ್‌ನವರಿಗೆ ಮಾತ್ರ ಗೊತ್ತು. ಅವತ್ತು ನನ್ನ ಜತೆ ಇವರ್‍ಯಾರೂ ಇರಲಿಲ್ಲ. ಈಗ ಪ್ರಸಿದ್ಧಿಗೆ ಬಂದ ತಕ್ಷಣ ಎಲ್ಲರೂ ಬರುತ್ತಾರೆ’ ಎಂದು ಬೇಸರದಿಂದಲೇ ಅವರು ಹೇಳಿಕೊಳ್ಳುತ್ತಾರೆ. ಜತೆಗೆ ‘ನಾವು ಒಬ್ಬರು ಗೆಲ್ಲಲಿ ಎಂದು ಹಾರೈಸುವುದರ ಜತೆಗೆ ಗೆದ್ದಾಗ ಖುಷಿಪಡುವ ಮನಸ್ಸನ್ನೂ ಉಳಿಸಿಕೊಳ್ಳಬೇಕಲ್ಲವೇ?’ ಎಂದು ಪ್ರಶ್ನಿಸುತ್ತಾರೆ.

ವಿವಾದದ ಸುದ್ದಿಯಿಂದ ಕೊಂಚ ಇತ್ತ ಹೊರಳಿ ‘ತುಂಬ ಹುಡುಗಿಯರ ಜತೆ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲಾ?’ ಎಂದು ಕೆದಕಿದರೆ ’ಸಾಕಷ್ಟು ಸಂದೇಶಗಳು, ಫೋನ್‌ ಕರೆಗಳು ಬರುತ್ತಲೇ ಇರುತ್ತವೆ. ನನಗದಕ್ಕೆಲ್ಲ ಈಗ ಸಮಯ ಇಲ್ಲ. ನನಗೆ ಸಿಕ್ಕಿರುವ ಈ ಪ್ರೀತಿ, ಹೆಸರು, ಅವಕಾಶ ಎಷ್ಟು ಜನರಿಗೆ ಸಿಗುತ್ತದೆ? ಇದನ್ನು ನಾನು ಸರಿಯಾಗಿ ಬಳಸಿಕೊಳ್ಳಬೇಕಲ್ಲವೇ?’ ಎಂದು ಮರುಪ್ರಶ್ನಿಸುವ ಚಂದನ್ ‘ಇನ್ನು ಮೂರು ವರ್ಷಗಳಂತೂ ಹುಡುಗಿಯರ ಪಾಲಿಗೆ ನನ್ನ ಮನಸ್ಸಿನ ಬಾಗಿಲು ಮುಚ್ಚಿರುತ್ತದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT