ಶಾಜರ್ ರಿಜ್ವಿ ವಿಶ್ವದಾಖಲೆ

7

ಶಾಜರ್ ರಿಜ್ವಿ ವಿಶ್ವದಾಖಲೆ

Published:
Updated:
ಶಾಜರ್ ರಿಜ್ವಿ ವಿಶ್ವದಾಖಲೆ

ನವದೆಹಲಿ: ಭಾರತದ ಶಾಜರ್ ರಿಜ್ವಿ ಮೆಕ್ಸಿಕೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾನುವಾರ ವಿಶ್ವದಾಖಲೆ ಬರೆದರು.

ಮೀರಠ್‌ನ ರಿಜ್ವಿ 10 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ 242.3 ಅಂಕಗಳನ್ನು ಗಳಿಸಿ ಚಿನ್ನದ ಪದಕ ಗೆದ್ದರು. ಈ ವಿಭಾಗದಲ್ಲಿ ಜರ್ಮನಿಯ ಕ್ರಿಸ್ಟಿಯನ್‌ ರಿಟ್ಜ್‌ (239.7) ಬೆಳ್ಳಿ ಪದಕ ಗೆದ್ದರು. ಭಾರತದ ಇನ್ನೊಬ್ಬ ಶೂಟರ್ ಜಿತು ರಾಯ್ 219 ಪಾಯಿಂಟ್ಸ್‌ಗಳಿಸಿ ಕಂಚಿನ ಪದಕ ಪಡೆದರು.

ಫೈನಲ್‌ನಲ್ಲಿ ಭಾರತದ ಮೂವರು ಸ್ಪರ್ಧಿಗಳು ಪದಕಕ್ಕಾಗಿ ಪೈಪೋಟಿ ನಡೆಸಿದರು. ಕುತೂಹಲದ ಹಣಾಹಣಿಯಲ್ಲಿ ರಿಜ್ವಿ ಹಾಗೂ ಜಿತು ಯಶಸ್ವಿಯಾದರೆ ಓಂಪ್ರಕಾಶ್ ಮಿತ್ರವಾಲ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಂತಿಮ ಸುತ್ತಿನಲ್ಲಿ ಅವರು 198.4 ಪಾಯಿಂಟ್ಸ್ ಗಳಿಸಿದ್ದರು.

ಅರ್ಹತಾ ಸುತ್ತಿನ ಪೈಪೋಟಿಯಲ್ಲಿ ರಿಜ್ವಿ 578 ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಜರ್ಮನಿಯ ಕ್ರಿಸ್ಟಿಯನ್‌ ರಿಟ್ಜ್‌ 579 ಪಾಯಿಂಟ್ಸ್‌ ಗಳಿಸಿ ಫೈನಲ್‌ ಪ್ರವೇಶಿಸಿದ್ದರು.

ಮೆಹುಲಿ ಮಿಂಚು

ಸೀನಿಯರ್ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಮೆಹುಲಿ ಮಹಿಳೆಯರ 10ಮೀ ಏರ್ ರೈಫಲ್ ವಿಭಾಗದಲ್ಲಿ ಮಿಂಚಿದರು. ವಿಶ್ವ ಜೂನಿಯರ್ ವಿಭಾಗದ ದಾಖಲೆಯನ್ನು ಮುರಿದ ಅವರು ಫೈನಲ್‌ನಲ್ಲಿ 228.4 ಪಾಯಿಂಟ್ಸ್ ಕಲೆಹಾಕಿದರು. ಈ ವಿಭಾಗದಲ್ಲಿ ಕೂಡ ಭಾರತದ ಮೂವರು ಸ್ಪರ್ಧಿಗಳು ಫೈನಲ್ ಪ್ರವೇಶಿಸಿದ್ದರು.

ಅಂಜುಮ್ ಮುದ್ಗಿಲ್‌ 208.6 ಪಾಯಿಂಟ್ಸ್‌ಗಳಿಂದ ನಾಲ್ಕನೇ ಸ್ಥಾನ ಗಳಿಸಿದರೆ, ಅಪೂರ್ವಿ ಚಾಂಡೇಲಾ 144.1 ಪಾಯಿಂಟ್ಸ್‌ ಗಳಿಸುವ ಮೂಲಕ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು. ಚೀನಾದ ಹಾಂಗ್ ಕ್ಸು (251.0) ಬೆಳ್ಳಿ ಗೆದ್ದರೆ, ರುಮೇನಿಯಾದ ಲೂರಾ ಕೊಮನ್‌ ಚಿನ್ನಕ್ಕೆ ಕೊರಳೊಡ್ಡಿದರು.

‘ಭಾರತದ ಯುವ ತಂಡ ಅತ್ಯುತ್ತಮ ಸಾಮರ್ಥ್ಯ ತೋರಿದೆ. ರಿಜ್ವಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಭಾರತ ರೈಫಲ್ ಅಸೋಸಿಯೇಷನ್‌ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಹೇಳಿದ್ದಾರೆ.

‘ಮೆಹುಲಿ  ಭಾರತದ ಗೌರವ ಹೆಚ್ಚಿಸಿದ್ದಾರೆ. ಸೀನಿಯರ್ ವಿಶ್ವಕಪ್‌ನಲ್ಲಿ ಅವರ ಸಾಧನೆ ನೋಡಿ ಖುಷಿಯಾಯಿತು. ಅವರ ಭವಿಷ್ಯ ಉಜ್ವಲವಾಗಿರಲಿ’ ಎಂದು ಅವರು ಹಾರೈಸಿದ್ದಾರೆ.–ಮೆಹುಲಿ ಘೋಷ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry