ಮರಳಿ ಗೂಡು ಸೇರಿದ ಹರಪನಹಳ್ಳಿ

7

ಮರಳಿ ಗೂಡು ಸೇರಿದ ಹರಪನಹಳ್ಳಿ

Published:
Updated:
ಮರಳಿ ಗೂಡು ಸೇರಿದ ಹರಪನಹಳ್ಳಿ

ಹರಪನಹಳ್ಳಿ: ಹೈದರಾಬಾದ್- ಕರ್ನಾಟಕ ವಿಶೇಷ ಸ್ಥಾನಮಾನದಿಂದ ವಂಚಿತ ಹರಪನಹಳ್ಳಿ ತಾಲ್ಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿಸಲು ರಾಜ್ಯ ಸಚಿವ ಸಂಪುಟದಲ್ಲಿ ಶನಿವಾರ ನಿರ್ಧಾರ ಕೈಗೊಂಡಿರುವುದರಿಂದ ತಾಲ್ಲೂಕಿನ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸಮೀಪಿಸಿದಂತಾಗಿದೆ.

ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಹರಪನಹಳ್ಳಿಯೂ ಒಂದು. ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟಿರುವುದರಿಂದ ಹೈದರಾಬಾದ್ ಕರ್ನಾಟಕ ಸೌಲಭ್ಯಗಳಿಂದ ಇಲ್ಲಿನ ಜನ ವಂಚಿತರಾಗಿದ್ದರು.

1997ರಲ್ಲಿ ಜಿಲ್ಲೆಗಳ ಪುನರ್‌ರಚನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿಯನ್ನು ಬೇರ್ಪಡಿಸಿ, ದಾವಣಗೆರೆ ಜಿಲ್ಲೆಗೆ ಸೇರಿದರು. ಹರಪನಹಳ್ಳಿಯ ಅಂದಿನ ಶಾಸಕ ಡಿ.ನಾರಾಯಣದಾಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಪಟೇಲರು ಮಣಿದಿರಲಿಲ್ಲ. ಎರಡು ದಶಕಗಳ ನಂತರ ಹರಪನಹಳ್ಳಿಗೆ ಮತ್ತೆ ‘ತಾಯಿಯ ಮಡಿಲು’ ಸೇರುವ ಭಾಗ್ಯ ಬಂದಿದೆ.

ಹರಪನಹಳ್ಳಿ ದಾವಣಗೆರೆ ಜಿಲ್ಲೆಗೆ ಸೇರಿದ್ದರೂ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಬಳ್ಳಾರಿ ಸೊಗಡನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡಿದೆ. ಎರಡು ದಶಕಗಳು ಕಳೆದಿದ್ದರೂ ಪದವೀಧರ ಕ್ಷೇತ್ರ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಹರಪನಹಳ್ಳಿ ಜನರು ಬಳ್ಳಾರಿ ಜಿಲ್ಲೆಗೆ ಮತದಾನ ಮಾಡುತ್ತಿದ್ದಾರೆ. ಅಂಚೆ ಇಲಾಖೆ, ಬಿ.ಎಸ್.ಎನ್.ಎಲ್, ಎಲ್‌ಐಸಿ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಹೈದರಾಬಾದ್ ಕರ್ನಾಟಕ ಸೌಲಭ್ಯವನ್ನು ತಮಗೂ ಕೊಡಬೇಕು ಎಂಬುದು ಜನರ ಹಕ್ಕೊತ್ತಾಯವಾಗಿತ್ತು.

2012ರಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ ‘371ಜೆ’ ಕಲಂಗೆ ತಿದ್ದುಪಡಿ ತಂದು, ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಿಸಿದ ಸಂದರ್ಭದಲ್ಲಿ ಈ ಕ್ಷೇತ್ರವನ್ನು ಬಿಜೆಪಿಯ ಶಾಸಕ ಜಿ.ಕರುಣಾಕರರೆಡ್ಡಿ ಪ್ರತಿನಿಧಿಸುತ್ತಿದ್ದರು. ಹರಪನಹಳ್ಳಿಗೂ ಈ ಸೌಲಭ್ಯ ವಿಸ್ತರಿಸುವಂತೆ ಅವರು ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಆದರೆ, 2013-14ನೇ ಸಾಲಿನವರೆಗೂ ಹರಪನಹಳ್ಳಿಗೆ ಹೈದರಾಬಾದ್ ಕರ್ನಾಟಕ ಪ್ರದೇಶ ಮಂಡಳಿಯ ಅನುದಾನ ಲಭಿಸಿತ್ತು. ಆದರೆ, 2014ರಲ್ಲಿ ವಿಶೇಷ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಉಪಸಮಿತಿ ರಚನೆಯಾದ ನಂತರ ಕಾನೂನಾತ್ಮಕವಾಗಿ ‘371ಜೆ’ ಕಲಂ ಸೌಲಭ್ಯದಿಂದ ಹರಪನಹಳ್ಳಿ ಜನರು ವಂಚಿತರಾದರು.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತಗಳಿಕೆಗೆ ಇದು ಪ್ರಮುಖ ವಿಷಯವೂ ಆಗಿತ್ತು. 2015ರ ಡಿಸೆಂಬರ್ 13ರಂದು ಶಾಸಕ ಎಂ.ಪಿ.ರವೀಂದ್ರ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿತ್ತು. ತಾಲ್ಲೂಕಿನ ಸ್ವಾಮೀಜಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಾಹಿತಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ಇದಕ್ಕೆ ಸರ್ಕಾರ ಸ್ಪಂದಿಸದೇ ಇದ್ದಾಗ 2016ರ ಜುಲೈ 21ರಂದು ಹರಪನಹಳ್ಳಿ ಬಂದ್ ಮಾಡಲಾಗಿತ್ತು.

ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸುವಂತೆ ಶಾಸಕ ಎಂ.ಪಿ.ರವೀಂದ್ರ ಕರೆ ನೀಡಿದರು. ನೀಲಗುಂದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಜಿಲ್ಲಾಧಿಕಾರಿ ಕಚೇರಿ ಎದುರು 10 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಪತ್ರ ಚಳವಳಿ, ಸರದಿ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದಿದ್ದವು.

ಕಳೆದ ನವೆಂಬರ್‌ 26ರಂದು ಎಂ.ಪಿ.ರವೀಂದ್ರ ಚುನಾವಣಾ ಕಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿ ತಾಲ್ಲೂಕಿನ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿದ್ದರು. ಬಳಿಕ ಮುಖ್ಯಮಂತ್ರಿಯೇ ಖುದ್ದು ಅವರ ಮನವೊಲಿಸಿದ್ದರು. ಡಿಸೆಂಬರ್‌ 26ರಂದು ಹರಪನಹಳ್ಳಿಯಲ್ಲಿ ನಡೆದ ‘ಸಾಧನಾ ಸಮಾವೇಶ’ದಲ್ಲಿ ಸಿದ್ದರಾಮಯ್ಯ ಅವರು, ‘ತಾಲ್ಲೂಕಿಗೆ ಹೈದರಾಬಾದ್ ಕರ್ನಾಟಕ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ಭರವಸೆ ನೀಡಿದ್ದರು.

ಹರಪನಹಳ್ಳಿ ದಾವಣಗೆರೆ ಜಿಲ್ಲೆಯಲ್ಲಿದ್ದರೂ ಬಳ್ಳಾರಿ ಜಿಲ್ಲೆಯವರಾದ ಕರುಣಾಕರ ರೆಡ್ಡಿ, ಎಂ.ಪಿ.ರವೀಂದ್ರ ಇಲ್ಲಿಂದ ಆಯ್ಕೆಯಾಗಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರೂ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳ್ಳಾರಿ ಜಿಲ್ಲೆಗೆ ಪುನಃ ಸೇರುವುದರಿಂದ ಹೈದರಾಬಾದ್ ಕರ್ನಾಟಕ ಸೌಲಭ್ಯ ಸಿಗಬಹುದಾದರೂ, ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಲು 130 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ.

- ಪ್ರಹ್ಲಾದಗೌಡ ಗೊಲ್ಲಗೌಡರ

ಮಿಶ್ರ ಪ್ರತಿಕ್ರಿಯೆ

ನಾನು ಶಾಸಕನಾಗುವುದಕ್ಕಿಂತ ಮೊದನಿಂದಲೂ ಈ ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ, ಉದ್ಯೋಗ, ಅಭಿವೃದ್ಧಿ, ಅನುದಾನದಲ್ಲಿ ಸಿಂಹಪಾಲು ಪಡೆಯಲು ಹರಪನಹಳ್ಳಿ ಕೂಡ ಅರ್ಹವಾಗಿದೆ. ಇದಕ್ಕೆ ಕಾರಣೀಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೂ ಧನ್ಯವಾದಗಳು. ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದ ವಿವಿಧ ಸಂಘಟನಗೆಳು, ಸ್ವಾಮೀಜಿಗಳು, ಹೋರಾಟಗಾರಿಗೆ ಕೃತಜ್ಞತೆಗಳು.

-ಎಂ.ಪಿ.ರವೀಂದ್ರ, ಶಾಸಕ

**

ಹರಪನಹಳ್ಳಿಯನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿರುವುದು ಸರಿಯಲ್ಲ. ಬಳ್ಳಾರಿ ಜಿಲ್ಲೆಗೆ ಹೋದ ತಕ್ಷಣ ‘371ಜೆ’ ಸೌಲಭ್ಯ ಸಿಗುವ ಸೂಚನೆಗಳಿಲ್ಲ. ಕೇಂದ್ರ ಸರ್ಕಾರ 371ಜೆ ಕಲಂಗೆ ತಿದ್ದುಪಡಿ ತಂದು ಹರಪನಹಳ್ಳಿಯನ್ನೂ ಸೇರಿಸಬೇಕಾಗಿದೆ. ರಾಜ್ಯ ಸರ್ಕಾರ ತಾಲ್ಲೂಕಿನ ಜನರನ್ನು ಸಮಾಧಾನ ಮಾಡಲು ಬಳ್ಳಾರಿ ಜಿಲ್ಲೆಗೆ ಸೇರಿಸುತ್ತಿದೆ.

-ಚನ್ನಬಸವ ಶಿವಯೋಗಿ ಸ್ವಾಮೀಜಿ, ಗುಡ್ಡದ ವಿರಕ್ತ ಮಠ ನೀಲಗುಂದ

ಸೇರ್ಪಡೆ ಪ್ರಕ್ರಿಯೆ ಸುಲಭವಲ್ಲ‌

ಹರಪನಹಳ್ಳಿ ತಾಲ್ಲೂಕಿಗೆ ವಿಶೇಷ ಸ್ಥಾನಮಾನ ಸಿಗುವ ಹಾದಿ ಸುಲಭವೇನಲ್ಲ. ಮೊದಲಿಗೆ ಈ ನಿರ್ಣಯವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬೇಕು. ನಂತರ ಅದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಸಂಪುಟ ಸಭೆಯಲ್ಲಿ ಸರ್ಕಾರ ಮತ್ತೆ ಈ  ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ರಾಜ್ಯಪಾಲರ ಅಂಕಿತದ ನಂತರ ಸರ್ಕಾರ ಅಧಿಕೃತ ಆದೇಶ ಹೊರಬೀಳುತ್ತದೆ. ಆದರೆ ಈಗ ಚುನಾವಣೆ ಹತ್ತಿರವಿರುವುದರಿಂದ ಇದೆಲ್ಲ ಅಷ್ಟರೊಳಗೆ ಆದೀತೇ ಎನ್ನುವ ಪ್ರಶ್ನೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry