ಯೋಗಿ ಬಿರುಸಿನ ಪ್ರಚಾರಕ್ಕೆ ಸಿದ್ಧತೆ

7
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ

ಯೋಗಿ ಬಿರುಸಿನ ಪ್ರಚಾರಕ್ಕೆ ಸಿದ್ಧತೆ

Published:
Updated:
ಯೋಗಿ ಬಿರುಸಿನ ಪ್ರಚಾರಕ್ಕೆ ಸಿದ್ಧತೆ

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ವ್ಯಾಪಕ ಪ್ರಚಾರ ನಡೆಸಲಿದ್ದಾರೆ.

ಯೋಗಿ ಅವರು ಪಕ್ಷದ ತಾರಾ ಪ್ರಚಾರಕರಲ್ಲಿ ಒಬ್ಬರಾಗಲಿದ್ದಾರೆ. ಕರ್ನಾಟಕದಲ್ಲಿ ಅವರು ಮಂಗಳವಾರದಿಂದ ಪ್ರಚಾರ ಕೈಗೊಳ್ಳಲಿದ್ದಾರೆ. ಮೂರು ಚುನಾವಣಾ ರ್‍ಯಾಲಿಗಳಲ್ಲಿ ಅವರು ಮಾತನಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಯೋಗಿ ಬಹಳ ಉಪಯುಕ್ತ ಎನಿಸಲಿದ್ದಾರೆ. ಹಿಂದೂ ಮುಖಂಡರನ್ನು ಬಿಜೆಪಿ ಪರವಾಗಿ ಒಟ್ಟಾಗಿಸುವಲ್ಲಿ ಯೋಗಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಯೋಗಿ ಅವರು ರೋಡ್‌ಷೋ ನಡೆಸಲಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಕೆಲವು ದಿನ ಯೋಗಿ ಕರ್ನಾಟಕದಲ್ಲಿಯೇ ತಂಗಲಿದ್ದಾರೆ.

ಈಶಾನ್ಯದ ತ್ರಿಪುರಾದಲ್ಲಿ ಯೋಗಿ ಅವರು ಪ್ರಚಾರ ನಡೆಸಿದ್ದರು. ನಾಥ ಪಂಥದ ಅನುಯಾಯಿಗಳನ್ನು ಬಿಜೆಪಿ ಕಡೆಗೆ ಅವರು ಆಕರ್ಷಿಸಿದ್ದಾರೆ. ನಾಥ ಪಂಥದ ಕೇಂದ್ರ ಸ್ಥಾನ ಗೋರಖಪುರದ ಗೋರಖನಾಥ ದೇವಾಲಯ. ಈ ದೇವಾಲಯಕ್ಕೆ ಯೋಗಿ ಮುಖ್ಯಸ್ಥರಾಗಿದ್ದಾರೆ.

ಕಳೆದ ವರ್ಷ ಗುಜರಾತ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಯೂ ಯೋಗಿ ಪ್ರಚಾರ ಮಾಡಿದ್ದರು. ಕೇರಳದಲ್ಲಿಯೂ ರೋಡ್‌ಷೋ ನಡೆಸಿದ್ದರು.

(ಪಿಟಿಐ ವರದಿ): ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ‘ಐತಿಹಾಸಿಕ’ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಆಧರಿತ ನೀತಿಗಳು ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರ ಸಂಘಟನಾ ಕೌಶಲ ಕಾರಣ ಎಂದು ಯೋಗಿ ಆದಿತ್ಯನಾಥ ಬಣ್ಣಿಸಿದ್ದಾರೆ.

ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿಯೂ ಮುಂದಿನ ದಿನಗಳಲ್ಲಿ ತಾವರೆ ಅರಳಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಿಜೆಪಿ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರಾಹುಲ್‌ ಗಾಂಧಿ ಅಧ್ಯಕ್ಷರಾದ ಬಳಿಕ ಆ ಪಕ್ಷ ಐದು ರಾಜ್ಯಗಳಲ್ಲಿ ಸೋತಿದೆ. ಮುಂದೆ ಇದು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಬಿಜೆಪಿಯ ಉತ್ತಮ ಸಾಧನೆಗೆ ಸಂಬಂಧಿಸಿ ಯೋಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಸಂಭ್ರಮ ಹಂಚಿಕೊಂಡರು.

‘ಶ್ರೀ ಶ್ರೀ ಭೇಟಿ ರಾಜಕೀಯವಲ್ಲ’

ಅಯೋಧ್ಯೆಯ ಬಾಬರಿ ಮಸೀದಿ–ರಾಮಮಂದಿರ ನಿವೇಶನ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿರುವ ಆರ್ಟ್‌ ಆಫ್‌ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಅವರನ್ನು ಭೇಟಿಯಾಗಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.

‘ಅಧ್ಯಾತ್ಮಿಕ ಗುರು ಶ್ರೀ ಶ್ರೀ ಜತೆಗೆ ಬಹಳ ವರ್ಷಗಳಿಂದ ನಂಟು ಇದೆ. ಅವರು ಲಖನೌಗೆ ಬಂದಾಗಲೆಲ್ಲ ಭೇಟಿಯಾಗುತ್ತೇನೆ’ ಎಂದು ಯೋಗಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಶ್ರೀ ಶ್ರೀ ಅವರು ಅಯೋಧ್ಯೆ, ಬೆಂಗಳೂರು, ಲಖನೌ, ದೆಹಲಿ, ಹೈದರಾಬಾದ್‌ ಮತ್ತು ಚೆನ್ನೈಯಲ್ಲಿ ಮುಖತಃ ಮತ್ತು ವಿಡಿಯೊ ಕಾನ್ಫರೆನ್ಸ್‌ ಮೂಲಕ 500ಕ್ಕೂ ಹೆಚ್ಚು ಮುಖಂಡರನ್ನು ಭೇಟಿಯಾಗಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಉಚ್ಚಾಟಿತರಾದ ಸಲ್ಮಾನ್‌ ನದ್ವಿ ಅವರನ್ನು ಶ್ರೀ ಶ್ರೀ ಇತ್ತೀಚೆಗೆ ಭೇಟಿಯಾಗಿದ್ದರು. ಇದೇ 28ರಂದು ಅವರು ಲಖನೌನಲ್ಲಿ ಮುಸ್ಲಿಂ ಧರ್ಮ

ಗುರುಗಳನ್ನು ಭೇಟಿಯಾಗುವ ಕಾರ್ಯಕ್ರಮವೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry