ಮಂಗಳವಾರ, ಫೆಬ್ರವರಿ 25, 2020
19 °C
ಲಂಚದ ಆರೋಪ ನಿರಾಕರಿಸಿದ ಕಾಂಗ್ರೆಸ್‌ ಮುಖಂಡ ಚಿದಂಬರಂ ಮಗ

ಜೈಲಿನಲ್ಲಿ ಕಾರ್ತಿ–ಇಂದ್ರಾಣಿ ಮುಖಾಮುಖಿ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಲಿನಲ್ಲಿ ಕಾರ್ತಿ–ಇಂದ್ರಾಣಿ ಮುಖಾಮುಖಿ

ಮುಂಬೈ/ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾಕ್ಕೆ ವಿದೇಶಿ ಹೂಡಿಕೆ ಅನುಮತಿ ನೀಡುವುದಕ್ಕಾಗಿ ಲಂಚ ಪಡೆಯಲಾಗಿದೆ ಎಂಬ ಆರೋಪದ ತನಿಖೆ ಮುಂದುವರಿದಿದೆ. ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರನ್ನು ಐಎನ್‌ಎಕ್ಸ್ ಮೀಡಿಯಾದ ಪ್ರವರ್ತಕಿಯಾಗಿದ್ದ ಇಂದ್ರಾಣಿ ಮುಖರ್ಜಿ ಅವರೊಂದಿಗೆ ಮುಖಾಮುಖಿಯಾಗಿಸಲಾಗಿದೆ.

ವಿದೇಶಿ ಹೂಡಿಕೆ ಅನುಮತಿ ಪಡೆಯುವುದಕ್ಕಾಗಿ ₹6.5 ಕೋಟಿ ನೀಡುವಂತೆ ಕಾರ್ತಿ ಕೇಳಿದ್ದರು ಎಂದು ಇಂದ್ರಾಣಿ ಆರೋಪಿಸಿದ್ದರು. ಹಾಗಾಗಿ ಇವರಿಬ್ಬರ ನಡುವೆ ಮುಂಬೈನ ಸೆರೆಮನೆಯಲ್ಲಿ ಮುಖಾಮುಖಿ ನಡೆಯಿತು.

ಗುರುವಾರದಿಂದ ಸಿಬಿಐ ಕಸ್ಟಡಿಯಲ್ಲಿರುವ ಕಾರ್ತಿಯನ್ನು ಆರು ಅಧಿಕಾರಿಗಳ ತಂಡ ದೆಹಲಿಯಿಂದ ಮುಂಬೈನ ಭಾಯ್‌ಖಲಾ ಸೆರೆಮನೆಗೆ ಕರೆದು ತಂದಿತು. ಇಂದ್ರಾಣಿ ಅವರ ಮಗಳು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಇಂದ್ರಾಣಿ ಮತ್ತು ಅವರ ಗಂಡ ಪೀಟರ್‌ ಮುಖರ್ಜಿ ಅವರು
ಜೈಲಿನಲ್ಲಿದ್ದಾರೆ.

ಜೈಲಿನ ಕೋಣೆಯೊಂದರಲ್ಲಿ ಮುಖಾಮುಖಿ ನಡೆಯಿತು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಹಣ ಪಡೆದುಕೊಂಡಿದ್ದಾರೆ ಎಂಬ ಇಂದ್ರಾಣಿ ಆರೋಪವನ್ನು ಕಾರ್ತಿ ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ.

ಚಿದಂಬರಂ ಅವರನ್ನು ಭೇಟಿಯಾದಾಗ ಮಗನ ವ್ಯಾಪಾರಕ್ಕೆ ನೆರವಾಗುವಂತೆ ಅವರು ಹೇಳಿದ್ದರು ಮತ್ತು ಬಳಿಕ ಕಾರ್ತಿ ಅವರನ್ನು ಭೇಟಿಯಾದಾಗ ಅವರು ಸುಮಾರು ₹6.5 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮ್ಯಾಜಿಸ್ಟ್ರೇಟ್‌ ಮುಂದೆ ಇಂದ್ರಾಣಿ ಹೇಳಿಕೆ ನೀಡಿದ್ದರು.

ಚೆಸ್‌ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌ ಪ್ರೈ.ಲಿ. ಜತೆಗೆ ಐಎನ್‌ಎಕ್ಸ್‌ ಮೀಡಿಯಾ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ ಅಡ್ವಾಂಟೇಜ್‌ ಸ್ಟ್ರಾಟೆಜಿಕ್‌ ಕನ್ಸಲ್ಟೆನ್ಸಿ ಪ್ರೈ.ಲಿ.ಗೆ (ಎಸ್‌ಸಿಪಿಎಲ್‌) ಹಣ ನೀಡಲಾಗಿದೆ ಎಂಬುದು ಇಂದ್ರಾಣಿ ಆರೋಪ. ಎಎಸ್‌ಪಿಎಲ್‌ ಕಚೇರಿಯಿಂದ ವಶಪಡಿಸಿಕೊಂಡ ರಶೀತಿಗಳನ್ನು ಕಾರ್ತಿ ಮುಂದೆ ಇರಿಸಲಾಗಿದೆ. ಈ ಸಂಸ್ಥೆಯ ಜತೆಗೆ ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಕಾರ್ತಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಎಎಸ್‌ಸಿಪಿಎಲ್‌ನಿಂದ ₹9.96 ಲಕ್ಷದ ಬಿಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ವೃತ್ತಿಪರ ಸಲಹೆಗಾಗಿ ಪಡೆದುಕೊಂಡ ಶುಲ್ಕ ಎಂದು ಈ ಕಂಪನಿ ಹೇಳಿಕೊಂಡಿದೆ. ಆದರೆ, ವಿದೇಶಿ ನೇರ ಹೂಡಿಕೆ ಅನುಮತಿ ಕೊಡಿಸಿದ್ದಕ್ಕೆ ಈ ಹಣ ನೀಡಲಾಗಿದೆ ಎಂದು ಐಎನ್‌ಎಕ್ಸ್‌ ಮೀಡಿಯಾ ಲೆಕ್ಕದ ಪುಸ್ತಕದಲ್ಲಿ ನಮೂದಿಸಲಾಗಿದೆ ಎಂದು ಸಿಬಿಐ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)