ಗೋವಾ, ಮಹಾರಾಷ್ಟ್ರಕ್ಕೆ ಎಸ್‌ಐಟಿ ತಂಡ

7

ಗೋವಾ, ಮಹಾರಾಷ್ಟ್ರಕ್ಕೆ ಎಸ್‌ಐಟಿ ತಂಡ

Published:
Updated:
ಗೋವಾ, ಮಹಾರಾಷ್ಟ್ರಕ್ಕೆ ಎಸ್‌ಐಟಿ ತಂಡ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಶಕ್ಕೆ ಪಡೆದಿರುವ ಮದ್ದೂರಿನ ‘ಹಿಂದೂ ಯುವಸೇನೆ’ ಮುಖಂಡ ಕೆ.ಟಿ.ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ನೀಡಿರುವ ಮಾಹಿತಿ ಆಧರಿಸಿ ಎಸ್‌ಐಟಿಯ ಎರಡು ವಿಶೇಷ ತಂಡಗಳು, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ತೆರಳಿವೆ.

‘ವಿಶೇಷ ತಂಡದ ಅಧಿಕಾರಿಗಳು ಎರಡೂ ರಾಜ್ಯಗಳಲ್ಲಿ ಕೆಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅವರಿಗೂ ಹತ್ಯೆಗೂ ಏನಾದರೂ ಸಂಬಂಧವಿದೆಯಾ? ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಗೋವಾದ ಆಶ್ರಮವೊಂದರಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ನವೀನ್‌ ಪಾಲ್ಗೊಳ್ಳುತ್ತಿದ್ದ ಎಂಬುದಕ್ಕೆ ಪುರಾವೆಗಳು ಸಿಕ್ಕಿದ್ದವು. ಆ ನಂತರ, ಆತನ ಮೇಲೆ ಕಣ್ಣಿಟ್ಟಿದ್ದೆವು. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಮಾಹಿತಿ ತಿಳಿಯುತ್ತಿದ್ದಂತೆ, ಅದರ ಅವಶ್ಯಕತೆ ಆತನಿಗೆ ಏನಿದೆ ಎಂಬುದನ್ನು ತಿಳಿದುಕೊಂಡೆವು. ಆತನ ಮೇಲೆ ಬಲವಾದ ಅನುಮಾನ ಇದ್ದಿದ್ದರಿಂದಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ.’ 

‘ಸನಾತನ ಸಂಸ್ಥಾದ ಜಯಂತ್‌ ಅಠಾವಳೆಯವರ ‘ಜೀವನ ದರ್ಶನ’ ಪುಸ್ತಕ ಹಾಗೂ ಅವರ ಭಾವಚಿತ್ರ ನವೀನ್‌ ಮನೆಯಲ್ಲಿ ಸಿಕ್ಕಿವೆ. ಅವುಗಳನ್ನು ಗೋವಾದಲ್ಲಿ ಖರೀದಿಸಿರುವುದಾಗಿ ಹೇಳುತ್ತಿದ್ದಾನೆ. ಆತನ ಮನೆಯಲ್ಲಿ ಎರಡು ಸಿಮ್‌ ಕಾರ್ಡ್‌ಗಳು ಸಿಕ್ಕಿವೆ. ಅವುಗಳನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಧೀಶರ ಬಳಿ ನವೀನ್ ಅಳಲು: ನವೀನ್‌ನ ಹೇಳಿಕೆಯನ್ನು ಹಾಗೂ ಪ್ರಕರಣದ ಮಾಹಿತಿಯುಳ್ಳ ನಾಲ್ಕು ಸಿ.ಡಿಗಳನ್ನು ಎಸ್‌ಐಟಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ವಿಚಾರಣೆ ವೇಳೆ ನ್ಯಾಯಾಧೀಶರ ಬಳಿ ನವೀನ್‌, ‘ನಾನು ಯಾವುದೇ ಹೇಳಿಕೆ ನೀಡಿಲ್ಲ. ಅಧಿಕಾರಿಗಳೇ ತಮಗೆ ತೋಚಿದ್ದನ್ನು ಬರೆದುಕೊಂಡಿದ್ದಾರೆ. ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ. ಯಾವುದೇ ಹೇಳಿಕೆಗೂ ನಾನು ಸಹಿ ಮಾಡಿಲ್ಲ’ ಅಳಲು ತೋಡಿಕೊಂಡಿದ್ದ.

’ವಕೀಲರನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದ್ದ. ನ್ಯಾಯಾಧೀಶರು, ‘ಕಿರುಕುಳ ನೀಡುವಂತಿಲ್ಲ’ ಎಂದು ಎಸ್‌ಐಟಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ನವೀನ್‌ ಪರ ವಕೀಲ ವೇದಮೂರ್ತಿ, ‘ನನ್ನ ಕಕ್ಷಿದಾರರ ವಿರುದ್ಧ ಇದುವರೆಗೂ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಅನುಮಾನ ಬಂದಿದೆ ಎಂದಷ್ಟೇ ಹೇಳಿ ಎಸ್‌ಐಟಿ ಕಸ್ಟಡಿಗೆ ಪಡೆದಿದೆ’ ಎಂದರು.

‘ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಉಪ್ಪಾರಪೇಟೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಏನು ಸಿಗಲಿಲ್ಲವೆಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಸ್‌ಐಟಿಗೂ ಅದೇ ಆಗಲಿದೆ’ ಎಂದರು.

*

ಈ ಪ್ರಕರಣದಲ್ಲಿ ನವೀನ್‌ ಆರೋಪಿ ಎಂದು ಹೇಳಲಾಗದು. ಕಸ್ಟಡಿಗೆ ಪಡೆದಿದ್ದೇವೆ. ವಿಚಾರಣೆ ನಡೆಸುತ್ತಿದ್ದೇವೆ.

– ಬಿ.ಕೆ.ಸಿಂಗ್‌, ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹಾಗೂ ಎಸ್‌ಐಟಿ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry