ಪಕ್ಷಗಳ ‍ಪ್ರತಿನಿಧಿಗಳಿಂದ ಪ್ರಾಯೋಗಿಕ ಮತದಾನ

7

ಪಕ್ಷಗಳ ‍ಪ್ರತಿನಿಧಿಗಳಿಂದ ಪ್ರಾಯೋಗಿಕ ಮತದಾನ

Published:
Updated:
ಪಕ್ಷಗಳ ‍ಪ್ರತಿನಿಧಿಗಳಿಂದ ಪ್ರಾಯೋಗಿಕ ಮತದಾನ

ಮಂಗಳೂರು: ವಿಧಾನಸಭಾ ಚುನಾವಣೆಗೆ ಬಳಸಲಿರುವ ಪ್ರತಿಯೊಂದು ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆ ಭರದಿಂದ ಸಾಗಿದೆ. ಪ್ರತಿ ಯಂತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ 96 ಮತಗಳನ್ನು ಪ್ರಾಯೋಗಿಕವಾಗಿ ಚಲಾಯಿಸಿ, ವಿವಿ ಪ್ಯಾಟ್‌ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ 1,790 ಮತಗಟ್ಟೆಗಳಲ್ಲಿ ಅಳವಡಿಸಲಿರುವ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ವಿವಿಪ್ಯಾಟ್‌ ಯಂತ್ರಗಳ ತಾಂತ್ರಿಕ ಪರಿಶೀಲನೆಗೆ ಭಾರತ್‌ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ನ (ಬಿಇಎಲ್‌) 16 ಎಂಜಿನಿಯರುಗಳು ಬಂದಿದ್ದಾರೆ. ಈ ತಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಲವು ದಿನಗಳಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರಿನಲ್ಲೇ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ಪರಿಶೀಲನೆ ಮಾಡುತ್ತಿದೆ.

ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ 3,061 ಬ್ಯಾಲೆಟ್‌ ಯೂನಿಟ್‌, 2,238 ಕಂಟ್ರೋಲ್‌ ಯೂನಿಟ್‌ ಮತ್ತು 2,506 ವಿವಿಪ್ಯಾಟ್ ಯಂತ್ರಗಳು ಬೇಕಿವೆ. ಗುಜರಾತ್‌ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಬಳಕೆ ಮಾಡಿದ್ದ 2,690 ಬ್ಯಾಲೆಟ್‌ ಯೂನಿಟ್‌, 2,290 ಕಂಟ್ರೋಲ್‌ ಯೂನಿಟ್‌ ತರಲಾಗಿದೆ. ಬಿಇಎಲ್‌ ಸಿದ್ಧಪಡಿಸಿರುವ 2,330 ವಿವಿಪ್ಯಾಟ್‌ ಯಂತ್ರಗಳನ್ನುತರಲಾಗಿದೆ.

96 ಮತ ಚಲಾವಣೆ: ‘ಮತಯಂತ್ರಗಳ ಮೊದಲ ಹಂತದ ಪರಿಶೀಲನೆಯಲ್ಲಿ ಭಾಗವಹಿಸುವಂತೆ ಎಲ್ಲ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಲಾಗಿತ್ತು. ಹಲವು ಪಕ್ಷಗಳ ಪ್ರತಿನಿಧಿಗಳು ನಿತ್ಯವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿ ಮತಯಂತ್ರದಲ್ಲಿ ಆರು ಕಲ್ಪಿತ ಅಭ್ಯರ್ಥಿಗಳ ಹೆಸರಿಗೆ ತಲಾ 16ರಂತೆ 96 ಮತಗಳನ್ನು ಚಲಾವಣೆ ಮಾಡಿ, ಪರಿಶೀಲಿಸಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಮತ ಚಲಾಯಿಸುತ್ತಾರೆ. ಒಮ್ಮೆ ಚಲಾಯಿಸಿದ ಮತದ ವಿವರ ವಿವಿಪ್ಯಾಟ್‌ ಯಂತ್ರದಲ್ಲಿ ಮುದ್ರಣವಾಗಿ ಅದರ ವಿವರ ಏಳು ಸೆಕೆಂಡ್‌ಗಳ ಕಾಲ ಕಾಣಿಸುತ್ತದೆ. ನಂತರ ಅದು ಕತ್ತರಿಸಿ ಯಂತ್ರದ ಒಳಕ್ಕೆ ಶೇಖರಣೆಯಾಗುತ್ತದೆ. ಪ್ರಾಯೋಗಿಕವಾಗಿ ಚಲಾಯಿಸಿದ 96 ಮತಗಳಿಗೆ ಸಂಬಂಧಿಸಿದ ಚೀಟಿಗಳನ್ನು ಹೊರ ತೆಗೆದು, ಪರಿಶೀಲಿಸಿದ ಬಳಿಕ ಮೊಹರು ಮಾಡಿ ಯಂತ್ರದೊಂದಿಗೆ ಇರಿಸಲಾಗುತ್ತದೆ ಎಂದು ವಿವರ ನೀಡಿದರು.

‘ತಾಂತ್ರಿಕ ದೋಷ ಕಂಡುಬಂದ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವುದಿಲ್ಲ. ಪ್ರತಿದಿನ ಸುಮಾರು 20ರಿಂದ 25 ಯಂತ್ರಗಳ ಪರಿಶೀಲನೆ ನಡೆಯುತ್ತಿದೆ. ಈವರೆಗೆ ಹೆಚ್ಚಿನ ಸಂಖ್ಯೆಯ ಮತ ಯಂತ್ರಗಳಲ್ಲಿ ಅಂತಹ ದೋಷ ಕಂಡುಬಂದಿಲ್ಲ. ಒಬ್ಬರಿಗೆ ಚಲಾಯಿಸಿದ ಮತ ಬೇರೊಬ್ಬರಿಗೆ ಬಿದ್ದ ಯಾವುದೇ ಉದಾಹರಣೆಯೂ ಕಂಡುಬಂದಿಲ್ಲ’ ಎಂದು ಅವರು ಹೇಳಿದರು.

ಇನ್ನು ಹತ್ತು ದಿನಗಳಲ್ಲಿ ಮತಯಂತ್ರಗಳ ಮೊದಲ ಹಂತದ ಪರಿಶೀಲನೆ ಪೂರ್ಣಗೊಳ್ಳಲಿದೆ. ತಾಂತ್ರಿಕ ದೋಷಗಳಿಂದ ತಿರಸ್ಕೃತವಾಗುವ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳ ಸಂಖ್ಯೆಯನ್ನು ಆಧರಿಸಿ ಹೆಚ್ಚಿನ ಯಂತ್ರಗಳನ್ನು ತರಿಸಿಕೊಳ್ಳಲಾಗುವುದು. ಎಲ್ಲ ಯಂತ್ರಗಳ ಪರಿಶೀಲನೆ ಮುಗಿದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry