ಕಾವೇರಿ ನೀರು: ಅರ್ಜಿ ಸಲ್ಲಿಸಲು ಅವಕಾಶ

7

ಕಾವೇರಿ ನೀರು: ಅರ್ಜಿ ಸಲ್ಲಿಸಲು ಅವಕಾಶ

Published:
Updated:
ಕಾವೇರಿ ನೀರು: ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಬಿಬಿಎಂಪಿಗೆ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ 15 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು ಜಲಮಂಡಳಿಯು ಸಜ್ಜಾಗಿದೆ. ಈ ಹಳ್ಳಿಗಳ ನಿವಾಸಿಗಳು ಮಂಡಳಿಯ ಎಂಜಿನಿಯರ್‌ಗಳ ಕಚೇರಿಯಲ್ಲಿ ಅಥವಾ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ನೀರಿನ ಸಂಪರ್ಕ ಪಡೆಯಬಹುದು.

’ಆನ್‌ಲೈನ್‌ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತುಂಬಾ ಸರಳ. ಅರ್ಜಿದಾರರು ಮನೆಯ ಮಾಲೀಕತ್ವದ ದಾಖಲೆಗಾಗಿ ಆಸ್ತಿ ತೆರಿಗೆ ಪಾವತಿಸಿದ ರಸೀದಿಯನ್ನು ನೀಡಬೇಕು. ಆಸ್ತಿಗೆ ಸಂಬಂಧಿಸಿದ ಬೇರೆ ದಾಖಲೆಯನ್ನೂ ಒದಗಿಸಬಹುದು’ ಎಂದು ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಪಿ.ಮಂಜುನಾಥ್‌ ತಿಳಿಸಿದರು.

ಫಲಾನುಭವಿಯ ವಂತಿಗೆ ಮೊತ್ತವನ್ನು (ಬಿಸಿಸಿ) ಡಿಮಾಂಡ್‌ ಡ್ರಾಫ್ಟ್‌ (ಡಿ.ಡಿ) ಮೂಲಕವೇ ಸಲ್ಲಿಸಬೇಕು. ಕಟ್ಟಡದ ವಿಸ್ತೀರ್ಣವನ್ನು ಆಧರಿಸಿ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಅಪಾರ್ಟ್‌ಮೆಂಟ್ ಸಮುಚ್ಚಯಗಳಿಗೆ ಹಾಗೂ ವಾಣಿಜ್ಯ ಸಂಪರ್ಕಕ್ಕೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ. 1,200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿರುವ ಡ್ಯೂಪ್ಲೆಕ್ಸ್‌ ಮನೆಗೆ ಸಂಪರ್ಕ ಪಡೆಯಲು ಮಾಲೀಕರು ₹ 11 ಸಾವಿರವನ್ನು ವಂತಿಗೆ ಮೊತ್ತವಾಗಿ ಪಾವತಿಸಬೇಕಾಗುತ್ತದೆ ಎಂದರು.

110 ಹಳ್ಳಿಗಳ ಅನೇಕ ನಿವಾಸಿಗಳು ಈಗಾಗಲೇ ವಂತಿಗೆ ಮೊತ್ತವನ್ನು ಪಾವತಿಸಿದ್ದಾರೆ. ಅವರು ಅರ್ಜಿಯ ಜೊತೆಗೆ ಪಾವತಿಯ ರಸೀದಿಯನ್ನು ಸಲ್ಲಿಸಿದರೆ ಸಾಕು.  ಶುಲ್ಕ ಪಾವತಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿದ ಬಳಿಕ ನೀರಿನ ಸಂಪರ್ಕ ಕಲ್ಪಿಸಲು ಒಂದು ವಾರ ಕಾಲಾವಕಾಶ ಬೇಕಾಗುತ್ತದೆ. ಅರ್ಜಿದಾರರ ಮನೆಗೆ ಜಲಮಂಡಳಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ಅವರಿಗೆ ಕಂದಾಯ ನೋಂದಣಿ (ಆರ್‌.ಆರ್‌) ಸಂಖ್ಯೆ ನೀಡಿ, ನೀರಿನ ಮಾಪಕವನ್ನು ಅಳವಡಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಕೊಳವೆ ಅಳವಡಿಕೆ ಶೇ 35ರಷ್ಟು ಪೂರ್ಣ

110 ಹಳ್ಳಿಗೆಳಿಗೆ ಕುಡಿಯುವ ನೀರು ಪೂರೈಸಲು ಕೊಳವೆ ಅಳವಡಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ಹಂತ ಹಂತವಾಗಿ ಈ ಹಳ್ಳಿಗಳಿಗೆ ನೀರು ‍ಪೂರೈಸಲಾಗುತ್ತದೆ. ಕೊಳವೆ ಅಳವಡಿಸುವ ಕಾಮಗಾರಿ ಶೇ 35ರಷ್ಟು ಪೂರ್ಣಗೊಂಡಿದೆ ಎಂದು ಜಲಮಂಡಳಿ ತಿಳಿಸಿದೆ.

ನೀರಿನ ಸಂಪರ್ಕ ಪಡೆಯುವ ಹಳ್ಳಿಗಳು

ಹೇರೋಹಳ್ಳಿ, ವಲ್ಲಭನಗರ, ಸೊನ್ನೇನಹಳ್ಳಿ, ಹೊರಮಾವು, ಸಿದ್ದಾಪುರ (ಆಯ್ದ ಪ್ರದೇಶಗಳು), ದಾಸರಹಳ್ಳಿ, ಚಳ್ಳಕೆರೆ, ಕೂಡ್ಲು, ನಾಗನಾಥಪುರ, ಪರಪ್ಪನ ಅಗ್ರಹಾರ, ಗಣಕಲ್ಲು, ಉತ್ತರಹಳ್ಳಿ (ಆಯ್ದ ಪ್ರದೇಶಗಳು), ತೂಬರಹಳ್ಳಿ, ಬೇಗೂರು, ಅರಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry