₹1.57 ಲಕ್ಷ ಮೊತ್ತದ ಖೋಟಾ ನೋಟು ಜಪ್ತಿ

ಮಂಗಳವಾರ, ಮಾರ್ಚ್ 19, 2019
20 °C

₹1.57 ಲಕ್ಷ ಮೊತ್ತದ ಖೋಟಾ ನೋಟು ಜಪ್ತಿ

Published:
Updated:
₹1.57 ಲಕ್ಷ ಮೊತ್ತದ ಖೋಟಾ ನೋಟು ಜಪ್ತಿ

ಬೆಂಗಳೂರು: ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ₹1.57 ಲಕ್ಷ ಮೊತ್ತದ ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಚೋಳನಪಾಳ್ಯದ ಟಿ.ಚೇತನ್‌ (34) ಹಾಗೂ ವಿಜಯನಗರದ ಉದಯ್‌ಕುಮಾರ್ (38) ಬಂಧಿತರು. ₹500 ಹಾಗೂ ₹200 ಮುಖಬೆಲೆಯ 440 ಖೋಟಾ ನೋಟುಗಳು, ಕಲರ್ ಪ್ರಿಂಟರ್‌, ಪೇಪರ್‌ ಕಟರ್‌ ಮತ್ತು ಮೂರು ಮೊಬೈಲ್‌ಗಳು ಆರೋಪಿಗಳ ಬಳಿ ಸಿಕ್ಕಿವೆ. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಳಸಿದ ಕಾರು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು, ವಿಜಯನಗರದ 5ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಅಲ್ಲಿಯೇ ಕಲರ್‌ ಪ್ರಿಂಟರ್‌ ಇಟ್ಟುಕೊಂಡು ನೋಟುಗಳನ್ನು ಮುದ್ರಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆವು’ ಎಂದು ಪೊಲೀಸರು ತಿಳಿಸಿದರು.‌

‘ನಗರದ ಕೆಲ ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಅವರಿಂದ ಕಮಿಷನ್‌ ಪಡೆದು ₹3 ಸಾವಿರದಿಂದ ₹10 ಸಾವಿರದವರೆಗೂ ನೋಟುಗಳನ್ನು ಕೊಡುತ್ತಿದ್ದರು. ಕೆಲ ವ್ಯಾಪಾರಿಗಳು ಹೆಚ್ಚಿನ ನೋಟುಗಳಿಗೆ ಬೇಡಿಕೆ ಇಟ್ಟಾಗಲೂ ಆರೋಪಿಗಳು ಪೂರೈಕೆ ಮಾಡಿದ್ದಾರೆ. ಅಂಥ ವ್ಯಾಪಾರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ. ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ.’

‘ತಿಳಿ ಹಳದಿ ಕಾಗದದಲ್ಲಿ ₹200 ಹಾಗೂ ಬಿಳಿ ಕಾಗದದಲ್ಲಿ ₹500 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು. ಅವುಗಳನ್ನು ಪಾಲಿಶ್‌ ಮಾಡುತ್ತಿದ್ದರು. ಅದರಿಂದಾಗಿ ಆ ನೋಟುಗಳು ಖೋಟಾ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಗರದ ಹಲವೆಡೆ ಇಂಥ ನೋಟುಗಳನ್ನು ಆರೋಪಿಗಳು ಚಲಾವಣೆ ಮಾಡಿದ್ದಾರೆ.’

‘ಹಣ ಸಂಪಾದಿಸುವ ಸಲುವಾಗಿ ನೋಟುಗಳನ್ನು ಮುದ್ರಿಸುತ್ತಿದ್ದೆವು ಎಂದು ಅವರು ಹೇಳಿಕೊಂಡಿದ್ದಾರೆ. ಆರು ತಿಂಗಳಿನಿಂದ ಅವರು ಈ ಕೃತ್ಯವೆಸಗುತ್ತಿದ್ದರು ಎಂಬುದು ಗೊತ್ತಾಗಿದೆ. ಈ ವಿಷಯ ಮನೆಯ ಮಾಲೀಕರಿಗೂ ತಿಳಿದಿರಲಿಲ್ಲ. ಕಲರ್‌ ಪ್ರಿಂಟರ್‌ ಎಲ್ಲಿ ಖರೀದಿಸಿದ್ದು ಹಾಗೂ ಆರೋಪಿಗಳ ಹಿಂದೆ ಬೇರೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry